ಗಂಡನನ್ನೇ ಕೊಲೆ ಮಾಡಿದ ಮತ್ತೊಬ್ಬ ಹೆಂಡತಿ; ಚನ್ನಗಿರಿ ಅಡಿಕೆ ವ್ಯಾಪಾರಿ ಕೊಲೆ ರಹಸ್ಯ ರಿವೀಲ್!

Published : Jul 28, 2025, 04:22 PM IST
Wife murder Husband

ಸಾರಾಂಶ

ಪ್ರಿಯಕರನಿಂದ ಗರ್ಭಿಣಿಯಾಗಿದ್ದ ಪತ್ನಿಯ ಹೊಟ್ಟೆಗೆ ಗಂಡನೇ ಒದ್ದಿದ್ದರಿಂದ ಮಗು ಗರ್ಭಪಾತವಾಗಿತ್ತು. ಇದರಿಂದ ಸೇಡಿಗಾಗಿ ಪತ್ನಿ ಮತ್ತು ಆಕೆಯ ಪ್ರಿಯಕರ ಸೇರಿ ಗಂಡನನ್ನು ಕೊಲೆ ಮಾಡಿದ್ದಾರೆ. ಗಂಡನ ಕೊಲೆ ಬಳಿಕ ಕೇರಳಕ್ಕೆ ಹೋಗಿ ನೆಲೆಸಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸಿ, ಜೈಲಿಗಟ್ಟಿದ್ದಾರೆ.

ದಾವಣಗೆರೆ (ಜು.28): ಕಳೆದ ಒಂದು ವರ್ಷದ ಹಿಂದೆ ನಾಪತ್ತೆಯಾಗಿದ್ದ ವ್ಯಕ್ತಿಯ ಕೊಲೆ ರಹಸ್ಯ ಇದೀಗ ಬಯಲಾಗಿದೆ. ಪ್ರಿಯಕರನಿಂದ ಗರ್ಭಿಣಿಯಾಗಿದ್ದ ಹೆಂಡತಿಯ ಹೊಟ್ಟೆಗೆ ಗಂಡನೇ ಒದ್ದಿದ್ದರಿಂದ ಆಕೆಯ ಹೊಟ್ಟೆಯಲ್ಲಿದ್ದ ಮಗು ಗರ್ಭಪಾತವಾಗಿ ಸತ್ತು ಹೋಗಿತ್ತು. ಇದರಿಂದ ಗಂಡನ ಮೇಲೆ ಸೇಡಿಗಾಗಿ ಕಾದಿದ್ದ ಹೆಂಡತಿ ಮತ್ತು ಆಕೆಯ ಗೆಳೆಯ ಸೇರಿಕೊಂಡು ಗಂಡನಿಗೆ ಚಟ್ಟ ಕಟ್ಟಿದ್ದಾರೆ. ಇದೀಗ ಒಂದು ವರ್ಷದ ಹಿಂದೆಯೇ ನನ್ನ ಮಗ ನಾಪತ್ತೆ ಆಗಿದ್ದಾನೆ ಎಂದು ದೂರು ನೀಡಿದ್ದ ತಾಯಿಗೆ, ತನ್ನ ಮಗ ಸತ್ತು ಒಂದು ವರ್ಷವಾಗಿದೆ ಎಂಬ ವಿಚಾರ ಇದೀಗ ಗೊತ್ತಾಗಿದೆ.

ಅಣ್ಣಾಪುರ ನಿವಾಸಿ ನಿಂಗಪ್ಪ(32) ಕೊಲೆಯಾದ ನತದೃಷ್ಟ ಪತಿ ಆಗಿದ್ದಾನೆ. ನಿಂಗಪ್ಪ ಪತ್ನಿ ಲಕ್ಷ್ಮೀ ಹಾಗೂ ಆಕೆಯ ಪ್ರಿಯಕರ ತಿಪ್ಪೇಶ ನಾಯ್ಕ್ ಮತ್ತವನ ಸ್ನೇಹಿತ ಸಂತೋಷ ಸೇರಿ ಮೂವರನ್ನು ದಾವಣಗೆರೆ ಜಿಲ್ಲೆ ಚನ್ನಗಿರಿ ಪೊಲೀಸರು ಬಂಧಿಸಿದ್ದಾರೆ. ಕೊಲೆಯಾದ ನಿಂಗಪ್ಪ ಮತ್ತು ಲಕ್ಷ್ಮೀ ದಂಪತಿಗೆ ಮದುವೆಯಾಗಿ 8 ವರ್ಷವಾದರೂ ಮಕ್ಕಳಾಗಿರಲಿಲ್ಲ. ಅಡಿಕೆ ವ್ಯಾಪಾರ ಮಾಡಿ ಜೀವನ ಸಾಗಿಸುತ್ತಿದ್ದ ನಿಂಗಪ್ಪನ ಜೊತೆಗೆ ತಿಪ್ಪೇಶ ನಾಯ್ಕ್ ಹಾಗೂ ಸಂತೋಷ ಇಬ್ಬರೂ ಅಡಿಕೆ ವ್ಯವಹಾರ ಮಾಡುತ್ತಿದ್ದರು. ಹೀಗೆ,

ಅಡಿಕೆ ವ್ಯಾಪಾರಿ ನಿಂಗಪ್ಪನನ್ನು ಆಗಾಗ ಭೇಟಿ ಮಾಡಲು ಬರುತ್ತಿದ್ದ ತಿಪ್ಪೇಶ ನಾಯ್ಕನೊಂದಿಗೆ ನಿಂಗಪ್ಪನ ಹೆಂಡತಿ ಲಕ್ಷ್ಮೀಗೆ ಸಲುಗೆ ಬೆಳೆದಿದೆ. ಇದು ಕೆಲವೇ ದಿನಗಳಲ್ಲಿ ಅನೈತಿಕ ಸಂಬಂಧದ ಹಂತಕ್ಕೆ ಹೋಗಿದೆ. ನಿಂಗಪ್ಪ 8 ವರ್ಷ ಸಂಸಾರ ಮಾಡಿದರೂ ಮಕ್ಕಳಾಗದ ಕಾರಣ ತನಗೆ ಮಕ್ಕಳಾಗುವುದಿಲ್ಲ ಎಂಬ ಖಚಿತ ಮಾಹಿತಿ ತಿಳಿಸಿದ್ದನು. ಹೀಗಿರುವಾಗ, ತಿಪ್ಪೇಶನಾಯ್ಕನ ಸಂಬಂಧ ಹೊಂದಿದ್ದ ಲಕ್ಷ್ಮೀ ಗರ್ಭಿಣಿ ಆಗುತ್ತಿದ್ದಂತೆ, ನಿಂಗಪ್ಪನಿಗೆ ಅನುಮಾನ ಬಂದಿದೆ. ಲಕ್ಷ್ಮೀಗೆ 6 ತಿಂಗಳಾದಾಗ ಜಗಳ ತೆಗೆದ ನಿಂಗಪ್ಪ ಇದು ತನ್ನ ಮಗುವಲ್ಲ ಎಂದು ಗರ್ಭಿಣಿ ಹೆಂಡತಿಯ ಹೊಟ್ಟೆಗೆ ಒದ್ದಿದ್ದನು. ಆಗ ತೀವ್ರ ನೋವು ಅನುಭವಿಸಿದ್ದ ಲಕ್ಷ್ಮಿಯನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಮಗು ತೀವ್ರ ಪೆಟ್ಟು ಬಿದ್ದು ಸತ್ತಿದ್ದರಿಂದ ಗರ್ಭಪಾತ ಆಗಿತ್ತು.

ಸುಮಾರು 8 ವರ್ಷಗಳ ಕಾಲ ಬಂಜೆ ಎನ್ನುವ ಹಣೆಪಟ್ಟಿ ಹೊತ್ತಿದ್ದ ಲಕ್ಷ್ಮೀ, ತಿಪ್ಪೇಶನ ಸಂಬಂಧದಿಂದ ಮಗು ಆಗುತ್ತಿದೆ ಎಂಬ ಖುಷಿ ಇತ್ತು. ಎಲ್ಲ ಹೆಣ್ಣು ಮಕ್ಕಳಂತೆ ತಾನೂ ತಾಯಿ ಆಗಿ, ಮಗುವನ್ನು ಪೋಷಣೆ ಮಾಡಿವ ಕನಸು ಕಂಡಿದ್ದ ಲಕ್ಷ್ಮೀಗೆ, ತಾಯಿ ಭಾಗ್ಯವನ್ನು ತಪ್ಪಿಸಿದ ಗಂಡನ ಮೇಲೆ ಭಾರೀ ಸಿಟ್ಟು ಇತ್ತು. ಇದರಿಂದಾಗಿ, ತನ್ನ ಹೊಟ್ಟೆಯಲ್ಲಿದ್ದ ಮಗು ಸಾಯಿಸಿದ ಗಂಡ ನಿಂಗಪ್ಪನೂ ಬದುಕಿರಬಾರದು ಎಂದು ಹತ್ಯೆ ಮಾಡುವುದಕ್ಕೆ ತೀರ್ಮಾನಿಸಿದ್ದಾಳೆ. ಅದರಂತೆ, ಪ್ರಿಯಕರ ತಿಪ್ಪೇಶ ಹಾಗೂ ಆತ‌ನ ಸ್ನೇಹಿತ ಸಂತೋಷನ ಜೊತೆಗೂಡಿ ಕೊಲೆ ಮಾಡುವುದಕ್ಕೆ ಸ್ಕೆಚ್ ಹಾಕಿದ್ದಾರೆ. ತಿಪ್ಪೇಶನಾಯ್ಕ ಹಾಗೂ ಸಂತೋಷ ಇಬ್ಬರೂ ಸೇರಿ ನಿಂಗಪ್ಪನನ್ನು ಪಾರ್ಟಿಗೆ ಕರೆದೊಯ್ದು ಕೊಲೆ ಮಾಡಿದ್ದಾರೆ. ನಂತರ ಆತನ ಶವವನ್ನು ಬಸವಾಪುರ ಬಳಿ ಭದ್ರಾ ನಾಲೆಗೆ ಎಸೆದಿದ್ದರು.

ಹಿಂದಿನ ಘಟನೆಯ ಸಂಪೂರ್ಣ ವಿವರ:

ಅಡಿಕೆ ವ್ಯಾಪಾರಿ ನಿಂಗಪ್ಪ 2024ರ ಜನವರಿ 18ರಂದು ಮನೆಯಿಂದ ನಾಪತ್ತೆಯಾಗಿದ್ದನು. 2024ರ ಜನವರಿ 22ರಂದು ನಿಂಗಪ್ಪನ ತಾಯಿ ನನ್ನ ಮಗ ನಾಪತ್ತೆಯಾಗಿದ್ದಾನೆ ಎಂದು ಪೊಲೀಸ್ ಠಾಣೆಗೆ ದೂರು ನೀಡಿದ್ದಳು. ಇತ್ತ ಸೊಸೆ ಗಂಡ ಮನೆ ಬಿಟ್ಟು ಹೋಗಿದ್ದಾನೆ ಎಂದು ಬೇಸತ್ತವಳಂತೆ ತವರು ಮನೆಗೆ ಹೋಗಿದ್ದ, ಸೊಸೆ ಲಕ್ಷ್ಮೀ ಸಹ ನಾಪತ್ತೆ ಆಗಿದ್ದಳು. ಇದರಿಂದ ನಿಂಗಪ್ಪನ ತಾಯಿ ಚಿಂತೆಗೀಡಾಗಿದ್ದರು. ಪೊಲೀಸರು ಈ ಬಗ್ಗೆ ನಿರಂತರ ಶೋಧ ಕಾರ್ಯ ಮುಂದುವರೆಸಿದ್ದರು. ಇದೀಗ ನಿಂಗಪ್ಪನ ಹೆಂಡತಿ ಲಕ್ಷ್ಮಿ ಹಾಗೂ ಆತನ ಸ್ನೇಹಿತ ತಿಪ್ಪೇಶ ನಾಯ್ಕ ಇಬ್ಬರೂ ಕೇರಳದಲ್ಲಿ ವಾಸವಾಗಿದ್ದರ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಕ್ಕಿದೆ. ಆದರೆ, ಮತ್ತೊಬ್ಬ ಆರೋಪಿ ಸಂತೋಷ್ ಊರಿನಲ್ಲಿಯೇ ಇದ್ದನು.

ಪೊಲೀಸರು ನಿಂಗಪ್ಪನ ನಾಪತ್ತೆ ತನಿಖೆಗೆ ಸಂಬಂಧಿಸಿದಂತೆ ಸಂತೋಷ್‌ನನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ ಕೊಲೆ ರಹಸ್ಯ ಬಯಲಾಗಿದೆ. ನಂತರ, ಕೇರಳದಲ್ಲಿ ವಾಸವಿದ್ದ ಆರೋಪಿ ಲಕ್ಷ್ಮೀ, ತಿಪ್ಪೇಶ ನಾಯ್ಕ ಇಬ್ಬರನ್ನೂ ಪೊಲೀಸರು ಬಂಧಿಸಿ ಕರೆತಂದು ಜೈಲಿಗಟ್ಟಿದ್ದಾರೆ. ಈ ಸಂಬಂಧ ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಆಗಿತ್ತು.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಈ ಸುಂದರ ದೇಶದಲ್ಲಿ ಬಾಡಿಗೆಗೆ ಸಿಗ್ತಾನೆ ಗಂಡ, ಗಂಟೆಗೆ ಇಷ್ಟಿದೆ ಸಂಬಳ!
ಮದುವೆ ಮುಂದೂಡಿಕೆ ಆದ 12 ದಿನಗಳ ಬಳಿಕ ಸೋಶಿಯಲ್‌ ಮೀಡಿಯಾದಲ್ಲಿ ಮೊದಲ ಪೋಸ್ಟ್‌ ಮಾಡಿದ ಸ್ಮೃತಿ, ಕೈಯಲ್ಲಿದ್ದ ರಿಂಗ್‌ ಮಾಯ!