ಶ್ವಾನವೊಂದು ತನ್ನ ಮಾಲೀಕನಿಗೆ ಮಧ್ಯಾಹ್ನದ ಊಟವನ್ನು ತೆಗೆದುಕೊಂಡು ಹೋಗುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.
ನಾಯಿಗಳು ಮನುಷ್ಯರ ಉತ್ತಮ ಸ್ನೇಹಿತರು, ಇತ್ತೀಚೆಗೆ ಇನ್ಸ್ಟಾಗ್ರಾಮ್(Instagram) ನಲ್ಲಿ ವೈರಲ್ ಆಗುತ್ತಿರುವ ವೀಡಿಯೊವೊಂದು ಈ ಮಾತಿಗೆ ಮತ್ತೊಮ್ಮೆ ಸಾಕ್ಷಿ ನೀಡಿದೆ. ಶ್ವಾನಗಳ ಜಾಣ್ಮೆ ಬುದ್ಧಿವಂತಿಕೆ, ತುಂಟಾಟದ ಮುದ್ದಾದ ದೃಶ್ಯಗಳು, ಶ್ವಾನಗಳು ನ್ಯೂಸ್ ಪೇಪರ್, ದಿನಸಿ ಸಾಮಾನುಗಳನ್ನು ತರುವ ವಿಡಿಯೋಗಳನ್ನು ನೀವು ಈಗಾಗಲೇ ನೋಡಿರಬಹುದು. ಈಗ ಜರ್ಮನ್ ಶೆಫರ್ಡ್ ಶ್ವಾನವೊಂದು ತನ್ನ ಮಾಲೀಕನಿರುವ ಕಚೇರಿಗೆ 2 ಕಿಮೀ ನಡೆದುಕೊಂಡು ಹೋಗಿ ಮಧ್ಯಾಹ್ನದ ಊಟವನ್ನು ನೀಡುವ ವಿಡಿಯೋವೊಂದು ವೈರಲ್ ಆಗಿದೆ.
ವಿಡಿಯೋದಲ್ಲಿ ಕಾಣಿಸುವಂತೆ ಜರ್ಮನ್ ಶೆಫರ್ಡ್ ಶ್ವಾನ ತನ್ನ ಮಾಲೀಕನಿಗೆ ಊಟವನ್ನು ತೆಗೆದುಕೊಂಡು ಹೋಗುತ್ತಿದೆ. ಬಾಯಿಯಲ್ಲಿ ಬುತ್ತಿಯನ್ನು ಗಟ್ಟಿಯಾಗಿ ಕಚ್ಚಿ ಹಿಡಿದಿರುವ ಶ್ವಾನ ರಸ್ತೆಬದಿಯಲ್ಲಿ ನಿಧಾನವಾಗಿ ಸಾಗುತ್ತಿದೆ. ದೊಡ್ಡ ದೊಡ್ಡ ವಾಹನಗಳು ಬರುತ್ತಿದ್ದಂತೆ ರಸ್ತೆ ಪಕ್ಕದಿಂದ ಬದಿಗೆ ಸರಿಯುವ ಶ್ವಾನ ವಾಹನ ಮುಂದೆ ಸಾಗಿದ ನಂತರ ಮತ್ತೆ ರಸ್ತೆ ಪಕ್ಕಕ್ಕೆ ಬಂದು ಬುತ್ತಿ ಹಿಡಿದು ಸಾಗುತ್ತದೆ.
ಈ ಶ್ವಾನದ ಹೆಸರು ಶೇರು ತನ್ನ ಮಾಲೀಕನಿಗೆ ಮಧ್ಯಾಹ್ನದ ಊಟವನ್ನು ತಲುಪಿಸಲು ಶೇರು ಪ್ರತಿದಿನ ಬೆಳಗ್ಗೆ ಎರಡು ಕಿಲೋಮೀಟರ್ ದೂರ ಪ್ರಯಾಣಿಸುತ್ತಾನೆ ಎಂದು ಈ ವಿಡಿಯೋಗೆ ನೀಡಿದ ಶೀರ್ಷಿಕೆಯಿಂದ ತಿಳಿದು ಬಂದಿದೆ. @timssyvats ಎಂಬ ಹೆಸರಿನ Instagram ಬ್ಲಾಗರ್ ಈ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ. ಈ ಕೆಲಸಕ್ಕೆ ಜರ್ಮನ್ ಶೆಫರ್ಡ್ ಶ್ವಾನ ಚೆನ್ನಾಗಿ ತರಬೇತಿ ಪಡೆದಿದೆ.
ಶ್ವಾನದೊಂದಿಗೆ ಮಗುವಿನ ಆಟ: ಆಡುತ್ತಾ ಆಡುತ್ತಾ ಮುತ್ತಿಟ್ಟ ಪುಟ್ಟ
ಈ ವಿಡಿಯೋ ಬಗ್ಗೆ ಪ್ರತಿಕ್ರಿಯಿಸಿದ ಬ್ಲಾಗರ್, ಇಲ್ಲಿ ಹಿಮಾಚಲ ಪ್ರದೇಶದಲ್ಲಿ, ನಾಯಿಗಳನ್ನು ಮನೆಯೊಳಗೆ ಅಥವಾ ಗೂಡಿನೊಳಗೆ ಇರಿಸುವುದಿಲ್ಲ. ಸಾಧ್ಯವಾದಷ್ಟು ಹೊರಗೆ ಇರುವಂತೆ ಪ್ರೋತ್ಸಾಹಿಸಲಾಗುತ್ತದೆ. ಈ ಶ್ವಾನ ಶೇರು (Sheru) ಬಾಲ್ಯದಿಂದಲೂ ತರಬೇತಿ ಪಡೆದಿದ್ದು, ಪ್ರತಿದಿನ ಅದರ ಮಾಲೀಕನಿಗೆ ಮಧ್ಯಾಹ್ನದ ಊಟವನ್ನು ಒಯ್ಯುತ್ತದೆ ಆದರೆ ಈ ಶ್ವಾನದ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಶೇರು ಜೊತೆ ಯಾರಾದರೊಬ್ಬರು ಕುಟುಂಬದ ಸದಸ್ಯರಿರುತ್ತಾರೆ ಎಂದು ಹೇಳಿದರು.
ಶ್ವಾನದ ಈ ವೀಡಿಯೊವನ್ನು ಏಳು ದಿನಗಳ ಹಿಂದೆ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಲಾಗಿದ್ದು, ಇದುವರೆಗೆ ಎಂಟು ಲಕ್ಷಕ್ಕೂ ಹೆಚ್ಚು ಮಂದಿ ಈ ವಿಡಿಯೋವನ್ನು ವೀಕ್ಷಿಸಿದ್ದಾರೆ. ಈ ವಿಡಿಯೋ ನೋಡಿದ ಇನ್ಸ್ಟಾಗ್ರಾಮ್ ಬಳಕೆದಾರರು ಈ ಶ್ವಾನ ತುಂಬಾ ಮುದ್ದಾಗಿದೆ ಅದಕ್ಕೆ ರಸ್ತೆ ಸುರಕ್ಷತೆಯ ಬಗ್ಗೆಯೂ ತಿಳಿದಿದೆ. ದೇವರು ಯಾವಾಗಲೂ ಶೇರುವನ್ನು ಆಶೀರ್ವದಿಸುತ್ತಾನೆ ಎಂದು ಕಾಮೆಂಟ್ ಮಾಡಿದ್ದಾರೆ.
ಈಜು ಕಲಿತ ಗೋಲ್ಡನ್ ರಿಟ್ರೈವರ್: ಶ್ವಾನದ ಮುದ್ದಾದ ವಿಡಿಯೋ
ಶ್ವಾನ ಮನುಷ್ಯರ ಆಪ್ತ ಮಿತ್ರ. ನಾಯಿ ಸಾಕುವ ಅನೇಕರು ಅವುಗಳನ್ನು ಬಿಟ್ಟಿರಲಾರದಷ್ಟು ಅವುಗಳೊಂದಿಗೆ ಆಪ್ತತೆ ಹೊಂದಿರುತ್ತಾರೆ. ಮಾಲೀಕ ಏನೇ ಮಾಡಿದರು ಮತ್ತೆ ಆತನ ಹಿಂದೆಯೇ ಬರುವ ಶ್ವಾನದ ಸ್ವಾಮಿನಿಷ್ಠೆ ಅನೇಕ ಬಾರಿ ಸಾಬೀತಾಗಿದೆ. ಹಾಗೆಯೇ ತನ್ನ ಶ್ವಾನದೊಂದಿಗೆ ಭಾರಿ ಪ್ರೀತಿ ಹೊಂದಿದ್ದ ಯುವಕನೋರ್ವ ತನ್ನ ಸಾಕು ನಾಯಿಯನ್ನು ಕೇದಾರನಾಥ ದೇಗುಲಕ್ಕೆ ಕರೆದೊಯ್ದಿದ್ದು, ಇದು ಭಾರಿ ಸುದ್ದಿಯಾಗಿತ್ತು.
ವ್ಲಾಗರ್ ಆಗಿರುವ ನೋಯ್ಡಾದ ನಿವಾಸಿ 33 ವರ್ಷದ ವಿಕಾಶ್ ತ್ಯಾಗಿ ಎಂಬಾತ ಶ್ವಾನವನ್ನು ಕರೆದೊಯ್ದವರು. ದಿ ಫೆಡರಲ್ ವರದಿಯ ಪ್ರಕಾರ ವಿಕಾಶ್ ತ್ಯಾಗಿ ಅವರು ತಮ್ಮ ಚಾರ್ ಧಾಮ್ ಯಾತ್ರೆಯ ಸಮಯದಲ್ಲಿ ತನ್ನ ನವಾಬ್ ಎಂಬ ಹೆಸರಿನ ನಾಲ್ಕೂವರೆ ವರ್ಷದ ಮುದ್ದಿನ ಹಸ್ಕಿಯನ್ನು ಪವಿತ್ರ ದೇಗುಲಕ್ಕೆ ಕರೆದೊಯ್ದಿದ್ದರು. ದೇವಸ್ಥಾನದಲ್ಲಿ ಕೈ ಮಗಿದು ಪ್ರಾರ್ಥನೆ ಸಲ್ಲಿಸಿದ ಅವರು ಶ್ವಾನವನ್ನು ಎತ್ತಿಕೊಂಡು ಅದೂ ಕೈ ಮಗಿಯುವಂತೆ ಮಾಡಿದ್ದಾರೆ. ಅದರ ಎರಡು ಕೈಗಳನ್ನು ಎತ್ತಿ ದೇಗುಲದ ಮುಂದಿರುವ ನಂದಿ ವಿಗ್ರಹದ ಮುಂದೆ ಅದು ಪ್ರಾರ್ಥನೆ ಮಾಡುವಂತೆ ಮಾಡುತ್ತಾರೆ. ಅಲ್ಲದೇ ಅಲ್ಲಿದ್ದವರೊಬ್ಬರು ಅದರ ಹಣೆಗೂ ತಿಲಕ ವಿಡುತ್ತಾರೆ. ಇದರ ವಿಡಿಯೋ ವೈರಲ್ ಆಗಿತ್ತು.