
ಬೆಂಗಳೂರು (ಆ.1): ನಗರದ ಹೃದಯಭಾಗದಲ್ಲಿರುವ ಇತಿಹಾಸ ಪ್ರಸಿದ್ಧ ಕಬ್ಬನ್ ಪಾರ್ಕ್ ಈಗ ಡೇಟಿಂಗ್ ವೇದಿಕೆಯಾಗಿ ಪರಿವರ್ತನೆಯಾಗುತ್ತದಾ ಎಂಬ ಪ್ರಶ್ನೆ ನಗರದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಆ.2ರಿಂದ ಆ.31ರವರೆಗೆ ಕಬ್ಬನ್ ಪಾರ್ಕ್ ನಲ್ಲಿ 'ಬ್ಲೈಂಡ್ ಡೇಟ್' ಕಾರ್ಯಕ್ರಮ ಆಯೋಜನೆಯಾಗಿದೆ ಎಂಬ ಮಾಹಿತಿ ಬುಕ್ ಮೈ ಶೋ ವೆಬ್‌ಸೈಟ್‌ನಲ್ಲಿ ಪ್ರಕಟವಾಗಿದೆ. ಇದಕ್ಕೆ ಈಗ ಪರಿಸರವಾದಿಗಳು ಮತ್ತು ಸಾರ್ವಜನಿಕರಿಂದ ಭಾರೀ ವಿರೋಧ ವ್ಯಕ್ತವಾಗಿದೆ.
ಬುಕ್ ಮೈ ಶೋನಲ್ಲಿ ಟಿಕೆಟ್ ಬುಕ್ಕಿಂಗ್ ಆರಂಭ
ಬುಕ್ ಮೈ ಶೋ ವೆಬ್‌ಸೈಟ್‌ನ ಮಾಹಿತಿಯ ಪ್ರಕಾರ, 18 ವರ್ಷ ಮೇಲ್ಪಟ್ಟ ಯುವಕ-ಯುವತಿಯರಿಗೆ ಅವಕಾಶವಿದ್ದು, ₹199 ರೂ. ಟಿಕೆಟ್ ದರಕ್ಕೆ ಎರಡು ಗಂಟೆಗಳ ಕಾಲ 'ಬ್ಲೈಂಡ್ ಡೇಟ್'ನಲ್ಲಿ ಪಾಲ್ಗೊಳ್ಳಬಹುದಾಗಿದೆ. ಪರಿಚಯವಿಲ್ಲದ ಗೆಳೆಯ ಅಥವಾ ಗೆಳತಿಯರೊಂದಿಗೆ ಸ್ನೇಹ, ಪ್ರೇಮ ಹಾಗೂ ಸಂಭಾಷಣೆಯ ಅವಕಾಶ ನೀಡಲಾಗುತ್ತದೆ ಎಂಬ ವಿವರ ಸೈಟ್‌ನಲ್ಲಿ ನೀಡಲಾಗಿದೆ.
ಸರ್ಕಾರದ ಅನುಮತಿ ಇಲ್ಲ, ತೋಟಗಾರಿಕಾ ಇಲಾಖೆಯ ಸ್ಪಷ್ಟನೆ:
ಈ ಸುದ್ದಿಗೆ ಪ್ರತಿಕ್ರಿಯೆ ನೀಡಿರುವ ತೋಟಗಾರಿಕಾ ಇಲಾಖೆಯ ಜಂಟಿ ನಿರ್ದೇಶಕ ಡಾ. ಎಂ. ಜಗದೀಶ್ ಅವರು, 'ಈ ಡೇಟಿಂಗ್ ಕಾರ್ಯಕ್ರಮಕ್ಕೆ ತೋಟಗಾರಿಕಾ ಇಲಾಖೆ ಯಾವುದೇ ರೀತಿಯ ಅನುಮತಿ ನೀಡಿಲ್ಲ. ಕಬ್ಬನ್ ಪಾರ್ಕ್ ಘನತೆಗೆ ಮಸಿ ಬಳಿಯಬಾರದು ಎಂದು ಆಗ್ರಹಿಸಿದ್ದಾರೆ. ಈ ಡೇಟಿಂಗ್ ಹೆಸರಿನಲ್ಲಿ ಸಾರ್ವಜನಿಕ ಸೌಲಭ್ಯ ದುರುಪಯೋಗವಾಗುವುದಕ್ಕೆ ನಾವು ಅವಕಾಶ ನೀಡುವುದಿಲ್ಲ' ಎಂದು ಹೇಳಿದ್ದಾರೆ.
ಪರಿಸರವಾದಿಗಳ ಭಾರೀ ವಿರೋಧ
'ಕಬ್ಬನ್ ಪಾರ್ಕ್ ಎಂಬುದು ಕೇವಲ ನೈಸರ್ಗಿಕ ಸಂಪತ್ತು ಅಲ್ಲ; ಇದು ನಗರ ನಿವಾಸಿಗಳ ಉಸಿರಾಟದ ಮೂಲ' ಎಂದು ಹಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. 'ಡೇಟಿಂಗ್' ಕಾರ್ಯಕ್ರಮದಿಂದ ಪಾರ್ಕ್‌ದ ಪರಿಸರದ ಶಾಂತಿ ಹದಗೆಡುವ ಸಾಧ್ಯತೆ ಇದೆ. ಜೊತೆಗೆ ಯುವಜನತೆಯ ಅಕ್ರಮ ಚಟುವಟಿಕೆಗಳಿಗೆ ವೇದಿಕೆಯಾಗಿ ಪರಿವರ್ತನೆಯಾಗುವ ಆತಂಕವಿದೆ ಎಂದವರು ಹೇಳಿದ್ದಾರೆ. ಈ ವಿಚಾರವಾಗಿ ತೋಟಗಾರಿಕಾ ಇಲಾಖೆ ಅಧಿಕಾರಿಗಳು ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಗೆ ದೂರು ಸಲ್ಲಿಸಲು ಮುಂದಾಗಿದ್ದಾರೆ. 'ಇಡೀ ಯೋಜನೆ ಅಕ್ರಮವಾಗಿದ್ದು, ಸಾರ್ವಜನಿಕ ಸ್ಥಳದ ದುರಪಯೋಗಕ್ಕೆ ಇದು ಉದಾಹರಣೆ. ಇಂತಹ ಕಾರ್ಯಕ್ರಮಗಳನ್ನು ನಿಲ್ಲಿಸಲು ಕಾನೂನು ಕ್ರಮ ಕೈಗೊಳ್ಳಲಾಗುವುದು' ಎಂದು ಇಲಾಖೆ ಸ್ಪಷ್ಟಪಡಿಸಿದೆ.
ಸರಕಾರದ ಅನುಮತಿ ಇಲ್ಲದೆ ಸಾರ್ವಜನಿಕ ಉದ್ಯಾನವನದಲ್ಲಿ 'ಬ್ಲೈಂಡ್ ಡೇಟಿಂಗ್' ಎಂಬ ಹೆಸರಿನಲ್ಲಿ ನಡೆಯಲಿರುವ ಈ ಕಾರ್ಯಕ್ರಮ ಚರ್ಚೆಗೆ ಒಳಗಾಗಿದೆ. ಇದು ಕಾನೂನು ಮತ್ತು ನೈತಿಕ ಮೌಲ್ಯಗಳ ನಡುವಿನ ಸಂಘರ್ಷಕ್ಕೆ ಕಾರಣವಾಗುತ್ತಿದೆ. ಇದೀಗ ರಾಜ್ಯ ಸರ್ಕಾರ, ಪೊಲೀಸರು ಹಾಗೂ ನಾಗರಿಕ ಸಮಾಜ ಇದಕ್ಕೆ ಹೇಗೆ ಪ್ರತಿಕ್ರಿಯಿಸುತ್ತವೆ ಎಂಬುದರತ್ತ ಎಲ್ಲರ ಗಮನ ಸೆಳೆದಿದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.