ಪ್ರೀತಿಯ ಅಪ್ಪ, ಮದುವೆಯಾದ್ಮೇಲೆ ಅನಾಥೆ ಅನಿಸ್ತಿದೆ! : ಮದುಮಗಳ ಪತ್ರ

By Suvarna NewsFirst Published Jun 5, 2023, 2:19 PM IST
Highlights

ಲೈಫಲ್ಲಿ ಇಂಥಾ ಒಂಟಿತನ ಹಿಂದೆಂದೂ ಕಾಡಿರಲಿಲ್ಲ' ಹೀಗೆಂದು ಹೊಸದಾಗಿ ಮದುವೆಯಾದ ಹೆಣ್ಣುಮಗಳು ಅಪ್ಪನಿಗೆ ಪತ್ರ ಬರೆದಿದ್ದಾಳೆ. ಅಷ್ಟಕ್ಕೂ ಅವಳ ಆ ಭಾವನೆಗೆ ಕಾರಣ ಏನು? ಆ ಪತ್ರದಲ್ಲಿ ಏನಿದೆ?

ಆಗಷ್ಟೇ ಮದುವೆಯಾದ ಹುಡುಗಿಯೊಬ್ಬಳು ತನ್ನ ಅಪ್ಪನಿಗೆ ಪತ್ರ ಬರೆದಿದ್ದಾಳೆ. ಇದು ಯಾವುದೋ ಕಲ್ಪನೆಯಲ್ಲಿ ಬರೆದ ಪತ್ರ ಅಲ್ಲ. ನಿಜಕ್ಕೂ ಸೂಕ್ಷ್ಮ ಮನಸ್ಸಿನ ಹೆಣ್ಣು ಮಕ್ಕಳು ಅನುಭವಿಸೋದು. ಮದುವೆಯಾದ ಮೇಲೆ ಮನೆಯವರೆಲ್ಲ ಇದ್ದೂ ತಾನು ಒಂಟಿ, ಅನಾಥೆ ಅಂತ ಅನಿಸ್ತಿದೆ ಅಂತ ಆ ಮಗಳಿಗೆ ಅನಿಸಿದ್ದಾದರೂ ಯಾಕೆ ಅನ್ನೋದಕ್ಕೆ ಉತ್ತರ ಈ ಪತ್ರದಲ್ಲಿದೆ.

ಪ್ರೀತಿಯ ಅಪ್ಪ,

ಮದುವೆಯಾಗಿ ಗಂಡನ ಮನೆಗೆ ಹೊರಟಾಗ ನಿನ್ನ ಕಣ್ಣಲ್ಲಿ ನೋವು ಮತ್ತು ಆನಂದ ಎರಡನ್ನೂ ಕಂಡೆ. ನನ್ನ ಕನಸಿನ ಹುಡುಗನ ಕೈ ಹಿಡಿದ ಖುಷಿಯಲ್ಲಿ ನಾನೂ ಇದ್ದೆ. ಹೊಸ ಪೋಷಕರು, ಸಹೋದರ ಸಹೋದರಿಯರು ಈ ಮೂಲಕ ನನಗೆ ಸಿಕ್ಕರು. ನಾನು ಈ ಮನೆಯ ಮಗಳಾಗಿರಲು ಬೇಕಾದ ವ್ಯವಸ್ಥೆ ಎಲ್ಲ ಇದೆ. ಆದರೂ ನಾನಿಲ್ಲಿ ಮಗಳಲ್ಲ, ಸೊಸೆ. ಎಷ್ಟೇ ನನ್ನ ಮನೆ ಅಂದರೂ ನಿನ್ನ ಬಳಿ ಸಿಗುತ್ತಿದ್ದ ಆ ವೈಬ್ ಇಲ್ಲಿ ಸಿಕ್ತಿಲ್ಲ.

ಮದುವೆಯಾದ ಹೊಸತು. ಚೆಂದಕೆ ಡ್ರೆಸ್‌ ಮಾಡಬೇಕು. ಎಲ್ಲರ ಜೊತೆ ಮೃದುವಾಗಿ ಮಾತನಾಡಬೇಕು. ನನ್ನ ಬಗ್ಗೆ ಎಲ್ಲರಲ್ಲೂ ಮೂಟೆಗಟ್ಟಲೆ ನಿರೀಕ್ಷೆಗಳು. ನಾನು ಯಾವೆಲ್ಲ ರೀತಿಯಲ್ಲಿ ಪರ್ಫೆಕ್ಟ್ ಸೊಸೆ ಅನ್ನೋದನ್ನು ಕ್ಯಾಲ್ಕ್ಯುಲೇಟ್‌ ಮಾಡುವ ಮಂದಿ. ಈ ಥರದ ಲೆಕ್ಕಾಚಾರವನ್ನು ನಿನ್ನ ಜೊತೆಗಿದ್ದಾಗ ಎಂದೂ ಅನುಭವಿಸಿರಲಿಲ್ಲ. ಅಲ್ಲಿ ನಾನು ಪರ್ಫೆಕ್ಟ್ ಮಗಳಾಗಬೇಕು ಅಂತ ಯಾವತ್ತೂ ನೀನು ಎದುರು ನೋಡಿರಲಿಲ್ಲ. ಸೊಸೈಟಿ ಹೀಗನ್ನುತ್ತೆ, ಹಾಗನ್ನುತ್ತೆ ಅನ್ನುವ ಗೊಡವೆಗಳಿಲ್ಲದೇ ಸ್ವಚ್ಛಂದವಾಗಿ ಉಸಿರಾಡುತ್ತಿದ್ದೆ. ಆದರೆ ಇಲ್ಲಿ ಮಾತ್ರ ಉಸಿರುಗಟ್ಟುವ ವಾತಾವರಣ.

Relationship Tips: ನಿಮ್ಮ& ಅವರ ಕೆಮಿಸ್ಟ್ರಿ ಚೆನ್ನಾಗಿದ್ಯಾ? ತಿಳ್ಕೊಳೋದು ಹೇಗೆ?

ದೊಡ್ಡವರು ಇಲ್ಲಿ ನಾನು ಸೀರೆಯನ್ನೇ ಉಡಬೇಕು ಅಂತ ಹೇಳ್ತಾರೆ. ಅದರಲ್ಲಿ ನಾನು ಕಂಫರ್ಟೇಬಲ್ ಆಗಿದ್ದೀನಾ, ಇಲ್ವಾ ಅನ್ನೋದೆಲ್ಲ ಅವರಿಗೆ ಬೇಕಿಲ್ಲ. ಅದರಲ್ಲೂ ಪ್ರಯಾಣಿಸುವಾಗ ಸೀರೆ ಉಡಲೇಬೇಕು. ಯಾಕೆಂದರೆ ಜಗತ್ತಿಗೆಲ್ಲ ನಾನೊಬ್ಬಳು ಪರ್ಫೆಕ್ಟ್ ಸೊಸೆ ಅನ್ನೋದನ್ನು ಮನದಟ್ಟು ಮಾಡಬೇಕು. ನೀನು ಕಳೆದ ವರ್ಷ ತಂದುಕೊಟ್ಟ ಆ ನೀಲಿ ಬಣ್ಣದ ಕಾಟನ್ ಪೈಜಾಮವನ್ನು ನಾನು ಮಿಸ್ ಮಾಡ್ತಿದ್ದೇನೆ.

ಲಾಂಗ್ ಜರ್ನಿ ಮುಗಿಸಿ ಬಂದರೆ ನನ್ನ ರೂಮಿನ ತುಂಬ ಸಂಬಂಧಿಕರು ತುಂಬಿಕೊಂಡಿದ್ದಾರೆ. ಅಷ್ಟು ದೂರ ಹೋಗಿ ಬಂದ ಆಯಾಸಕ್ಕೆ ದೇಹ ಸಣ್ಣ ನಿದ್ದೆ ಬೇಕು ಅಂತಿದೆ. ಆದರೆ ಇಡೀ ದಿನ ಒಂದರೆ ಗಳಿಗೆ ಕಣ್ಣು ಮುಚ್ಚಲೂ ಆಗುತ್ತಿಲ್ಲ. ನನ್ನ ಎಂಟು ಗಂಟೆ ನಿದ್ದೆ ಕಂಪ್ಲೀಟ್ ಆಗಬೇಕು ಅಂತ ನೀನು ಯಾವತ್ತೂ ನಂಗೆ ಬೈತಿದ್ದದ್ದು ಈಗ ನೆನಪಾಗ್ತಿದೆ.

ಮದುವೆಯಾದ ಆರಂಭದ ಕೆಲವು ದಿನಗಳು ನಂಗೆ ಎಕ್ಸಾಂ ಹಾಲ್‌ನಲ್ಲಿರುವ ಹಾಗೆ ಭಾಸವಾಗ್ತಿತ್ತು. ನನ್ನ ಮಾತು, ನನ್ನ ನಡಿಗೆ, ನಾನು ತಿನ್ನುತ್ತಿದ್ದದ್ದು, ನಾನು ಕೂರುತ್ತಿದ್ದ ರೀತಿ, ನಾನು ನಕ್ಕಾಗ, ನಗದೇ ಇದ್ದಾಗ.. ಪ್ರತೀ ಕ್ಷಣದ ಭಾವ ಭಂಗಿಗಳೂ ಜಡ್ಜ್‌ಮೆಂಟ್‌ಗೆ ಒಳಗಾಗುತ್ತಿದ್ದವು. ದಿನದ ನಾರ್ಮಲ್ ಚಟುವಟಿಕೆಗಳ ಮೂಲಕವೂ ಅವರು ನನ್ನನ್ನು ಜಡ್ಜ್ ಮಾಡುತ್ತಿದ್ದರು. ನೀನು ಯಾವತ್ತಂದರೆ ಯಾವತ್ತೂ ನನ್ನ ಹೀಗೆ ನೋಡಿದ್ದು ನೆನಪಿಲ್ಲ ನನಗೆ.

ಮದುವೆಯಾದ ನವದಂಪತಿಗೆ ಮೊದಲ ರಾತ್ರಿಗೂ ಮೊದಲೇ ಹೃದಯಾಘಾತ, ಸಂಭ್ರಮದ ಮನೆಯಲ್ಲಿ ಆಕ್ರಂದನ!

ಮೊದಲ ಸಲ ಟೀ ಮಾಡಿದೆ. ಕೆಲವರು ಸಕ್ಕರೆ ಕಮ್ಮಿಯಾಯ್ತು ಅಂದರು, ಇನ್ನೂ ಕೆಲವರು ಸಕ್ಕರೆ (suger) ಜಾಸ್ತಿ ಆಯ್ತು ಅಂದರು. ಕೆಲವರಿಗೆ ಟೀಗೆ ಶುಂಠಿ ಸೇರಿಸಬೇಕಿತ್ತು. ಮತ್ತೆ ಕೆಲವರಿಗೆ ಶುಂಠಿ ಬೇಡವಿತ್ತು. ನಿಮ್ಮೆಲ್ಲರಿಗೆ ಬೇಕಾದ ರೀತಿಯಲ್ಲಿ ಟೀ ಮಾಡಲು ಕಲಿಯುವೆ ಅಂತ ಹೇಳಿದೆ. ನಿಜಕ್ಕೂ ಎಲ್ಲರಿಗೂ ಇಷ್ಟವಾಗೋ ಟೀಯನ್ನು ಅದ್ಹೇಗೆ ಮಾಡೋದೂ ನಿಜಕ್ಕೂ ಗೊತ್ತಿಲ್ಲ ಅಪ್ಪಾ.

ಡೈನಿಂಗ್ ಟೇಬಲ್ ಮುಂದೆ ಕೂತಿದ್ದಾಗ ಒಬ್ಬರು ನನ್ನನ್ನು ಸೋಮಾರಿ ಅಂತ ಕರೆದರು. ಕಿಚನ್‌ನಲ್ಲಿ ಒಂದು ಪ್ಲೇಟ್ ತೊಳೆಯುತ್ತಿದ್ದ ಮಾವನನ್ನು ತೋರಿಸಿದರು. ನಾನು ಅವರ ಕೈಯಿಂದ ಪ್ಲೇಟ್ ಇಸ್ಕೊಂಡು ನೀವು ತೊಳೀಬೇಡಿ ನಾನು ಪ್ಲೇಟ್ ತೊಳೆದಿಡ್ತೇನೆ ಅಂದರೆ ಮಾತ್ರ ಅವರ ದೃಷ್ಟಿಯಲ್ಲಿ ನಾನು ಒಳ್ಳೆ ಸೊಸೆ (Perfect daughter in law). ಕೆಲವರು ನನ್ನ ಅಡುಗೆ ಬಗ್ಗೆ ವ್ಯಂಗ್ಯವಾಗಿ ಮಾತನಾಡಿದರು.

ಅಪ್ಪಾ, ನಿನ್ನ ಜೊತೆಗಿದ್ದಾಗ ಅದು ನನ್ನ ಮನೆಯಾಗಿತ್ತು. ಈಗಿರುವುದು ನಮ್ಮ ಮನೆ (Home). ಅಲ್ಲಿ ನನ್ನ ರೆಕ್ಕೆಗಳನ್ನ ಕಟ್ಟಿ ಹಾಕಿ ಎಂದೂ ಬಂಧಿಸಿಟ್ಟಿರಲಿಲ್ಲ. ನಾನು ನಾನಾಗಿಯೇ ಇರುವಂತೆ ನೋಡಿಕೊಂಡ ನಿನಗೆ ಥ್ಯಾಂಕ್ಯೂ.

click me!