
ತಮಗೂ ಒಂದು ದಿನ ವಯಸ್ಸಾಗತ್ತೆ ಎನ್ನೋದನ್ನೇ ಎಷ್ಟೋ ಮಂದಿ ಮರೆತಂತೆ ಕಾಣಿಸುತ್ತದೆ. Karma Returns ಎನ್ನುವ ಮಾತನ್ನು ಅವರು ಆ ಕ್ಷಣದಲ್ಲಿ ಮರೆಯಬಹುದು. ಆದರೆ ನಮಗೆ ವಯಸ್ಸಾದ ಮೇಲೆ ನಾವು ಮಾಡಿದ ಕರ್ಮವೇ ನಮಗೂ ಬರುತ್ತದೆ ಎನ್ನುವುದು ಕೂಡ ಸುಳ್ಳಲ್ಲ. ಆದರೆ ವಯಸ್ಸಿದ್ದಾಗ, ಅದರ ಮುಂದೆ ಎಲ್ಲವೂ ಗೌಣವಾಗಿ ಬಿಡುತ್ತದೆ. ಹುಟ್ಟಿಸಿದ ಅಪ್ಪ-ಅಮ್ಮನೇ ಬೇಡವಾಗುವ ಸ್ಥಿತಿ ಬಂದು ಬಿಡುತ್ತದೆ. ತಮ್ಮನ್ನು ಇಷ್ಟು ದೊಡ್ಡದಾಗಿ ಮಾಡುವ ಹಿಂದೆ ಅವರು ಪಟ್ಟ ಶ್ರಮ ಎಲ್ಲವೂ ವಯಸ್ಸಿನ ಉನ್ಮಾದದಲ್ಲಿ ಮರೆಯಾಗಿಬಿಡುತ್ತದೆ. ನಾವೇನು ನಮ್ಮನ್ನು ಹುಟ್ಟಿಸಿ ಎಂದು ಕೇಳಿದ್ವಾ ಎನ್ನುವ ಡೈಲಾಗ್ಗಳೂ ಸರ್ವೇ ಸಾಮಾನ್ಯವಾಗಿಬಿಟ್ಟಿದೆ. ವಯಸ್ಸಾದ ನಂತರ ದೇವರೇ ನಮ್ಮನ್ನು ಕರೆಸಿಕೊಂಡು ಬಿಡಪ್ಪಾ ಎನ್ನುವ ಆರ್ತನಾದ ಇಂಥ ಮಕ್ಕಳಿಂದಲೇ ಬರುವುದು ಉಂಟು.
ಇಷ್ಟೆಲ್ಲಾ ಹೇಳಲು ಕಾರಣ, ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಶಾಕಿಂಗ್ ವಿಡಿಯೋ. ಇದರಲ್ಲಿ ಓರ್ವ ವೃದ್ಧ ಮಹಿಳೆಯನ್ನು ಗಂಡ-ಹೆಂಡತಿ ಒಂದು ಬೆಡ್ಷೀಟ್ನಲ್ಲಿ ತಂದು ನಡುರಾತ್ರಿಯಲ್ಲಿ ರಸ್ತೆಯ ಬದಿ ಬಿಟ್ಟು ಹೋಗಿದ್ದಾರೆ. ಆ ವೃದ್ಧೆ ಸಹಾಯಕ್ಕಾಗಿ ಅಂಗಲಾಚುವುದನ್ನು, ತನಗೆ ಹೀಗೆ ಮಾಡಬೇಡಿ ಎಂದು ಹೇಳುವುದನ್ನು ನೋಡಬಹುದಾಗಿದೆ. ಈ ವಿಡಿಯೋ ಎಲ್ಲಿಯದ್ದು ಏನು ಎನ್ನುವುದು ತಿಳಿದಿಲ್ಲ. ಆದರೆ ಮಗಳು-ಅಳಿಯನೋ, ಮಗ- ಸೊಸೆಯೇ ಇಂಥ ನೀಚ ಕೃತ್ಯ ಮಾಡಿದ್ದಾರೆ ಎನ್ನುವುದು ತಿಳಿಯುತ್ತದೆ. ಆದರೆ ಮುಂದೊಂದು ದಿನ ತಮಗೂ ಇದೇ ಸ್ಥಿತಿ ಬರಬಹುದು, ತಮ್ಮಮಕ್ಕಳೂ ತಮ್ಮನ್ನು ಇದೇ ಸ್ಥಿತಿಯಲ್ಲಿ ಬಿಟ್ಟು ಹೋದರೆ ಹೇಗೆ ಎನ್ನುವ ಯೋಚನೆ ಅರೆ ಕ್ಷಣವೂ ಬರುವುದೇ ಇಲ್ಲವೆ, ಹೆತ್ತ ಅಮ್ಮನನ್ನೇ ಇಷ್ಟು ನಿಷ್ಕರುಣೆಯಿಂದ ನೋಡುವ ರಕ್ಕಸರ ಮನಸ್ಥಿತಿ ಹೇಗಿರಬೇಡ ಎಂದು ನೆನೆಸಿಕೊಂಡರೆ ಅಚ್ಚರಿಯಾಗುವ ರೀತಿಯಲ್ಲಿ ಈ ವಿಡಿಯೋ ತೋರುತ್ತದೆ.
ಇದನ್ನೂ ಓದಿ: ಕೇರ್ಟೇಕರ್ ಮೊಮ್ಮಗಳಿಗೆ ಆಸ್ತಿ ಬರೆದಿಟ್ಟು ಕೊನೆಯುಸಿರೆಳೆದ ವೃದ್ಧ: ಯಾವ ಜನ್ಮದ ಋಣಾನುಬಂಧವೊ?
ಗಂಡು ಮಕ್ಕಳೇ ಬೇಕು ಎಂದು ಇದ್ದ ಬಿದ್ದ ದೇವರಿಗೆ ಹರಕೆ ಹೊತ್ತು ಗಂಡನ್ನು ಹೆರುವ ಅಮ್ಮಂದಿರೂ ಸಾಕಷ್ಟು ಸಂಖ್ಯೆಯಲ್ಲಿ ಇದ್ದಾರೆ. ಇದಕ್ಕೆ ಕಾರಣ ಕೇಳಿದರೆ, ನಾವು ಸತ್ತಾಗ ಬಾಯಿಗೆ ತುಳಸಿ ನೀರು ಬಿಡಲು ಗಂಡು ಮಗ ಬೇಕು ಎನ್ನುವ ಮಾತು. ಹೆಣ್ಣು ಮಕ್ಕಳಾದರೆ, ಗಂಡನ ಮನೆಗೆ ಹೋಗಿಬಿಡುತ್ತಾರೆ, ಕೊಟ್ಟವಳು ಕುಲದಿಂದ ಹೊರಕ್ಕೆ... ಅದಕ್ಕಾಗಿ ಕೊನೆಗಾಲದಲ್ಲಿ ನಮ್ಮನ್ನು ನೋಡಿಕೊಳ್ಳಲು ಕುಲವನ್ನು ಉದ್ಧಾರ ಮಾಡಲು ಕುಲಪುತ್ರ ಬೇಕು ಎನ್ನುವ ಮಾತು ಅದೆಷ್ಟು ಮನೆಗಳಲ್ಲಿ ಕೇಳಿಬರುವುದಿಲ್ಲ ಹೇಳಿ. ಆದರೆ ಕೆಲ ವರ್ಷಗಳಿಂದ ಇಂಥ ಚಿತ್ರಣಗಳು ಸರ್ವೇ ಸಾಮಾನ್ಯ ಆಗಿ ಹೋಗಿದೆ. ಅದೇ ಕುಲಪುತ್ರನೇ ಹೀಗೆ ನಡುರಸ್ತೆಯಲ್ಲಿ ಬಿಟ್ಟು ಹೋಗುವ ಘಟನೆಗಳು ನಡೆಯುತ್ತಲೇ ಇವೆ.
ಮಕ್ಕಳು ಈ ರೀತಿ ಆಗುತ್ತಿರುವುದಕ್ಕಾಗಿಯೇ ಇಂದು ಕಂಡಕಂಡಲ್ಲಿ ವೃದ್ಧಾಶ್ರಮಗಳು ತಲೆ ಎತ್ತಿವೆ. ವೃದ್ಧಾಶ್ರಮಗಳಿಗೆ ಹೋಗಿ ಅಲ್ಲಿ ಮಾತನಾಡಿದರೆ ಒಬ್ಬೊಬ್ಬರದ್ದು ಒಂದೊಂದು ಕಣ್ಣೀರಿನ ಕಥೆ. ಅವರ ಪೈಕಿ ಹೆಚ್ಚಿನವರು ಬಯಸಿ ಬಯಸಿ ಗಂಡು ಮಗನನ್ನು ಪಡೆದಿದ್ದೆ ಎಂದು ಹೇಳುವವರೇ. ಆದರೆ ಈ ರೀತಿ ರಸ್ತೆಯಲ್ಲಿ ಅನಾಥ ಶವ ಮಾಡಿ ಹೋಗುವ ಬದಲು ಕೊನೆಯ ಪಕ್ಷ ವೃದ್ಧಾಶ್ರಮಕ್ಕಾದರೂ ಬಿಡಬಾರದೆ ಎನ್ನಿಸುವುದು ಉಂಟು. ಆದರೆ ವೃದ್ಧಾಶ್ರಮಕ್ಕೆ ಸೇರಿಸಿದರೆ ತಿಂಗಳಿಗೆ ಇಂತಿಷ್ಟು ದುಡ್ಡು ಕೊಡಬೇಕಲ್ಲಾ, ಅದು ಈ ಕುಲಪುತ್ರರಿಗೆ ತುಂಬಾ ಕಷ್ಟವಾಗುವ ಮಾತು. ಅದೇ ಕಾರಣಕ್ಕೆ ಯಾರಿಗೂ ತಿಳಿಯದಂತೆ ಈ ನೀಚಾತಿನೀಚ ಕೆಲಸ ಮಾಡುತ್ತಾರೆ. ಕೆಲವು ಮಾತ್ರ ಸಿಸಿಟಿವಿಯಲ್ಲಿ ಸೆರೆಯಾಗುತ್ತದೆ. ಇನ್ನು ಅದೆಷ್ಟು ವೃದ್ಧ ಅಪ್ಪ-ಅಮ್ಮ ಅನಾಥ ಶವವಾಗಿ, ಬೀದಿ ಹೆಣವಾಗುತ್ತಿದ್ದಾರೋ?
ಇದನ್ನೂ ಓದಿ: ವಧುವಿನ ಗೌನ್ ಒಳಗೆ ಮುಖ ಹಾಕಿ... ಛೇ... ಇದೆಂಥ ಮದ್ವೆ ಸಂಪ್ರದಾಯನಪ್ಪಾ! ವಿಡಿಯೋ ನೋಡಿ ನೆಟ್ಟಿಗರು ಶಾಕ್...
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.