
ನವದೆಹಲಿ (ನ.14): ಕಾರ್ಡೋನ್ ವೆಂಚರ್ಸ್‌ನ ಸಹ-ಸಂಸ್ಥಾಪಕಿ ಮತ್ತು ಅಧ್ಯಕ್ಷೆ ನಟಾಲಿ ಡಾಸನ್, ವಿವಾಹೇತರ ಸಂಬಂಧ ಹೊಂದಿದ್ದಕ್ಕಾಗಿ ಇಬ್ಬರು ಉದ್ಯೋಗಿಗಳನ್ನು ಕೆಲಸದಿಂದ ವಜಾ ಮಾಡಿದ್ದಾಗಿ ಹೇಳಿಕೊಂಡಿದ್ದಾರೆ. ಅವರು ಹೇಳಿರುವ ಈ ಸಂಗತಿ ಆನ್‌ಲೈನ್‌ನಲ್ಲಿ ಭಾರ ಚರ್ಚೆಗೆ ಕಾರಣವಾಗಿದೆ. 'ದಿ ಡೈರಿ ಆಫ್ ಎ ಸಿಇಒ' ಪಾಡ್‌ಕ್ಯಾಸ್ಟ್‌ನಲ್ಲಿ ಭಾಗವಹಿಸಿದ್ದ ಡಾಸನ್, ತಮ್ಮ ನಿರ್ಧಾರವು ಸಹಜವಾದದ್ದು ಮತ್ತು ಅವರ ಮೌಲ್ಯಗಳಿಗೆ ಹೊಂದಿಕೆಯಾಯಿತು ಎಂದಿದ್ದಾರೆ. ಆನ್‌ಲೈನ್‌ನಲ್ಲಿ ತಮ್ಮ ನಿರ್ಧಾರಕ್ಕೆ ವಿರೋಧ ಪ್ರತಿಕ್ರಿಯೆಯ ಹೊರತಾಗಿಯೂ ಅವರು ತಮ್ಮ ನಿರ್ಧಾರಕ್ಕೆ ಬದ್ಧರಾಗಿದ್ದಾರೆ ಎಂದು ವಿವರಿಸಿದರು.
ಪಾಡ್‌ಕ್ಯಾಸ್ಟ್ ನಿರೂಪಕ ಸ್ಟೀವನ್ ಬಾರ್ಟ್ಲೆಟ್ ಅವರ ಪ್ರಶ್ನೆಗೆ ಉತ್ತರಿಸಿದ ಡಾಸನ್, ಇಬ್ಬರು ಸಿಬ್ಬಂದಿ ಒಂದು ಅನೈತಿಕ ಸಂಬಂಧದಲ್ಲಿ ಭಾಗಿಯಾಗಿದ್ದಾರೆಂದು ತಿಳಿದ ತಕ್ಷಣ, ಅವರು ಇನ್ನು ಮುಂದೆ ತಮ್ಮ ಸಂಸ್ಥೆಯಲ್ಲಿ ಉಳಿಯಲು ಸಾಧ್ಯವಿಲ್ಲ ಎಂದು ನಿರ್ಧಾರ ಮಾಡಿದೆ ಎಂದಿದ್ದಾರೆ. 'ಈ ಸಂಬಂಧದ ಬಗ್ಗೆ ನನ್ನ ಕಿವಿಗೆ ಬಿದ್ದ ತಕ್ಷಣ ನಾನು ಒಂದ ಕ್ಷಣದಲ್ಲಿ ನಿರ್ಧಾರ ತೆಗೆದುಕೊಂಡೆ. ಇದರಲ್ಲಿ ಗೊಂದಲಗಳು ಇದ್ದಿರಲಿಲ್ಲ. ನನ್ನ ಕಂಪನಿಯ ಪರಿಸರದಲ್ಲಿ ಇದಕ್ಕೆ ಅವಕಾಶ ಇಲ್ಲ' ಎಂದು ಹೇಳಿದ ಅವರು, "ಜನರು ನನ್ನನ್ನು ನಂಬುತ್ತಾರೆ ಮತ್ತು ಅವರ ಯಶಸ್ಸನ್ನು ಸುಲಭಗೊಳಿಸಲು ಯಾವುದೇ ನಾಯಕ ಸಹಾಯ ಮಾಡುತ್ತಾರೆ ಎಂದು ನಂಬಬೇಕು" ಎಂದಿದ್ದಾರೆ.
ಒಬ್ಬ ಉದ್ಯೋಗಿಯ ಖಾಸಗಿ ಜೀವನವು ಅವರ ವೃತ್ತಿಪರ ಸ್ಥಾನಮಾನದ ಮೇಲೆ ಪ್ರಭಾವ ಬೀರಬೇಕೇ ಎಂದು ಬಾರ್ಟ್ಲೆಟ್ ಪ್ರಶ್ನಿಸಿದಾಗ, ಡಾಸನ್ ವಿವರವಾಗಿ ಮಾತನಾಡಿದ್ದಾರೆ. 'ತಮ್ಮ ಜೀವನದುದ್ದಕ್ಕೂ ಯಾರೊಂದಿಗೆ ಕಳೆಯಬೇಕು ಎಂದು ನಿರ್ಧಾರ ಮಾಡಿದ್ದರೋ ಆ ವ್ಯಕ್ತಿಗೆ ಅವರು ಮೋಸ ಮಾಡುತ್ತಾರೆ ಎಂದಾದರೆ, ಅವರು ತಮ್ಮ ಕೆಲಸಕ್ಕೆ ಮೋಸ ಮಾಡೋದಿಲ್ಲ ಅನ್ನೋದಕ್ಕೆ ಏನಿದೆ ಗ್ಯಾರಂಟಿ' ಎಂದು ಪ್ರಶ್ನೆ ಮಾಡಿದ್ದಾರೆ.
ತಮ್ಮ ಸಂಗಾತಿಗೆ ಮೋಸ ಮಾಡಿದ ಯಾರನ್ನಾದರೂ ಕೆಲಸದಿಂದ ತೆಗೆದುಹಾಕುತ್ತಾರಾ ಎನ್ನುವ ಪ್ರಶ್ನೆಗೆ ಡಾಸನ್, "ಖಂಡಿತ. ಮೋಸಗಾರರು ನನ್ನೊಂದಿಗೆ ಇರಲು ಸಾಧ್ಯವಿಲ್ಲ' ಎಂದು ಹೇಳಿದರು.
ಪರ್ಸನಲ್ ಎಥಿಕ್ಸ್ ಮತ್ತು ವೃತ್ತಿಪರ ನಡವಳಿಕೆ ಬೇರ್ಪಡಿಸಲಾಗದವು ಎಂದು ಅವರು ಹೇಳಿದ್ದಾರೆ. "ಯಾರಾದರೂ ತಮ್ಮ ವೈಯಕ್ತಿಕ ಜೀವನದಲ್ಲಿ ಸಮಸ್ಯೆ ಹೊಂದಿದ್ದರೆ, ಕೆಲಸಕ್ಕೆ ಬರುವಾಗಲೂ ಅವರಿಗೆ ಅದೇ ಸ್ಥಿತಿ ಇರುತ್ತದೆ" ಎಂದು ಅವರು ಹೇಳಿದರು.
ಲಿಂಕ್ಡ್‌ಇನ್‌ನಲ್ಲಿ ಪಾಡ್‌ಕ್ಯಾಸ್ಟ್ ತುಣುಕನ್ನು ಹಂಚಿಕೊಂಡ ಡಾಸನ್, "ವಜಾ ಮಾಡುವುದು ಶಿಕ್ಷೆಯ ಬಗ್ಗೆ ಅಲ್ಲ. ಅದು ರಕ್ಷಣೆಯ ಬಗ್ಗೆ. ನಾಯಕರಾಗಿ, ಜನರು ಸರಿಯಾದ ದಿಕ್ಕಿನಲ್ಲಿ ಬೆಳೆಯಬಹುದಾದ ವಾತಾವರಣವನ್ನು ಸೃಷ್ಟಿಸುವುದು ನಮ್ಮ ಜವಾಬ್ದಾರಿಯಾಗಿದೆ. ಅಂದರೆ ಅನಾನುಕೂಲವಾಗಿದ್ದರೂ ಸಹ ಸಮಗ್ರತೆಯ ರೇಖೆಯನ್ನು ಹಿಡಿದಿಟ್ಟುಕೊಳ್ಳುವುದು." ಎಂದು ಹೇಳಿದರು.
'ವೈಯಕ್ತಿಕ ಜೀವನದಲ್ಲಿ ಯಾರಾದರೂ ಮೋಸ ಮಾಡುತ್ತಿದ್ದಾರೆ ಎಂದಿಟ್ಟುಕೊಳ್ಳಿ, ಕಚೇರಿಗೆ ಕಾಲಿಟ್ಟ ಬಳಿಕ ಅವರ ಈ ಮೋಸದ ವರ್ತನೆ ನಿಲ್ಲೋದಿಲ್ಲ. ಅವರ ವರ್ತನೆ ಯಾಗೆಯೇ ಇರುತ್ತದೆ. ಮತ್ತು ನಾನು ಒಂದು ಕ್ಷೇತ್ರದಲ್ಲಿ ಅಪ್ರಾಮಾಣಿಕತೆಯನ್ನು ಸಹಿಸಿಕೊಂಡರೆ, ನೋಡುತ್ತಿರುವ ಎಲ್ಲರಿಗೂ ನಾನು ಹೊಸ ಮಾನದಂಡವನ್ನು ಹೊಂದಿಸುತ್ತೇನೆ. ಕೆಲಸದಿಂದ ವಜಾ ಮಾಡುವುದು ದೊಡ್ಡ ವಿಚಾರವಲ್ಲ. ಅಂಥ ನಡವಳಿಕೆಗಳು ಇರಬಾರದು. ನೀವು ನಿರ್ಮಿಸುವ ಸಂಸ್ಕೃತಿಯು ನೀವು ಯಾವುದಕ್ಕೆ ಅನುಮತಿ ನೀಡಿದ್ದೀರಿ ಎನ್ನುವುದರ ಮೇಲೆ ಅವಲಂಬಿಸಿರುತ್ತದೆ" ಎಂದಿದ್ದಾರೆ.
ಡಾಸನ್ ಅವರ ಹೇಳಿಕೆಗಳು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗೆ ಕಾರಣವಾಗಿದೆ. ಕೆಲವರು ಅವರ ನಂಬಿಕೆಗೆ ಶ್ಲಾಘಿಸಿದರೆ, ಇನ್ನು ಕೆಲವರು ಅವರು ಉದ್ಯೋಗಿಗಳ ಖಾಸಗಿ ಜೀವನದ ಮೇಲೆ ನೈತಿಕ ತೀರ್ಪುಗಳನ್ನು ಹೇರುವ ಮೂಲಕ ಅತಿರೇಕಕ್ಕೆ ಹೋಗಿದ್ದಾರೆಂದು ಭಾವಿಸಿದ್ದಾರೆ.
'ಈಕೆ ಎಲ್ಲಿಂದ ಬಂದಿದ್ದಾಳೆ ಅನ್ನೋದೇ ನನಗೆ ಅರ್ಥವಾಗುತ್ತಿಲ್ಲ. ಸಮಗ್ರತೆ ಮುಖ್ಯ, ಮತ್ತು ಪ್ರಾಮಾಣಿಕತೆ ಅತ್ಯಗತ್ಯ. ಇಂಥ ವ್ಯಕ್ತಿಗಳನ್ನು ನಾನು ಕೆಲಸದಿಂದ ತೆಗೆದುಹಾಕುವಷ್ಟು ದೂರ ಹೋಗುತ್ತೇನೆಯೆ ಅನ್ನೋದು ಗೊತ್ತಿಲ್ಲ. ಆದರೆ, ಕೆಲಸ ನಡುವೆ ಈ ವಿಚಾರ ಅಡ್ಡ ಬರೋದನ್ನು ನಾನು ಪ್ರಶ್ನೆ ಮಾಡುತ್ತೇನೆ' ಎಂದಿದ್ದಾರೆ.
"ಪ್ರತಿಯೊಬ್ಬ ಸಿಇಒ ಹೀಗೆ ಮಾಡಿದರೆ ಅರ್ಧದಷ್ಟು ಕಂಪನಿಗಳು ಉದ್ಯೋಗಿಗಳು ಇಲ್ಲದೆ ಉಳಿಯುತ್ತವೆ" ಎಂದು ಹೇಳಿದರು. "ಅವಳು ಮೋಸ ಮಾಡಿದ್ದಾಳೆ ಮತ್ತು ಈಗ ಅದು ಕೇವಲ ವೈಯಕ್ತಿಕ ಸಮಸ್ಯೆಯಾಗಿರುವಾಗ ಅದು ಕಾರ್ಪೊರೇಟ್ ಸಮಸ್ಯೆಯಂತೆ ವರ್ತಿಸಲು ಪ್ರಯತ್ನಿಸುತ್ತಿದ್ದಾಳೆ ಎಂದು ನಾನು ಬೆಟ್ ಕಟ್ಟಲು ಸಿದ್ಧನಿದ್ದೇನೆ" ಎಂದು ಮತ್ತೊಬ್ಬರು ಬರೆದಿದ್ದಾರೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.