ನಿರಾಕರಣೆ; ಟೀಕಾಕಾರರ ಮೇಲೊಂದು ಟೀಕೆ ಟಿಪ್ಪಣಿ!
ಹಿರಣ್ಯಕಶಿಪು ತನಗೆ ಸಾವೇ ಬರಬಾರದು ಅಂತ ಆಶಿಸಿದ. ಹಾಗಂತ ವರ ಪಡೆದುಕೊಂಡ. ಆದರೆ ಅವನನ್ನು ಕೊಲ್ಲುವ ಶತ್ರು ಅವನಿಂದಲೇ ಜನ್ಮತಳೆದ. ತನ್ನ ಮಗನೇ ತನಗೆ ಶತ್ರುವಾಗುತ್ತಾನೆಂದು ಅವನು ಊಹಿಸಿಯೂ ಇರಲಿಕ್ಕಿಲ್ಲ.
ಜೋಗಿ
ಹಾಗೆಯೇ, ನಿನ್ನ ಶತ್ರು ನಿನ್ನೊಳಗೇ ಹುಟ್ಟುತ್ತಾನೆ. ನಿನಗೆ ಸರಿಯಾಗಿ ಐವತ್ತು ವರ್ಷ ತುಂಬುತ್ತಿದ್ದಂತೆ ಹುಟ್ಟುತ್ತಾನೆ. ಅವನು ಒಮ್ಮೆ ಹುಟ್ಟಿದ ಎಂದರೆ ನಿನ್ನ ಜೀವನದ ಕನಿಷ್ಠ ಇಪ್ಪತ್ತು ವರ್ಷಗಳನ್ನು ಸರ್ವನಾಶ ಮಾಡುತ್ತಾನೆ. ಹೀಗಾಗಿ ಆ ಶತ್ರು ಹುಟ್ಟದಂತೆ ನೋಡಿಕೋ. ಹುಟ್ಟುವ ಮೊದಲೇ ಕೊಂದುಬಿಡು!
ಆ ಶತ್ರು ಯಾರು?
ಟೀಕಾಕಾರ!
ಅನುಮಾನವೇ ಇಲ್ಲ. ಸಾಮಾನ್ಯವಾಗಿ ಐವತ್ತು ವರ್ಷ ತಲುಪುತ್ತಿದ್ದಂತೆ ಪ್ರತಿಯೊಬ್ಬನೊಳಗೂ ಒಬ್ಬ ಟೀಕಾಕಾರ, ವಿಮರ್ಶಕ ಹುಟ್ಟಿಕೊಳ್ಳುತ್ತಾನೆ. ಅವನು ಎಲ್ಲವನ್ನೂ ಟೀಕಿಸುತ್ತಾ ಹೋಗುತ್ತಾನೆ. ತಾನು ಕಂಡದ್ದನ್ನು, ಕಾಣದ್ದನ್ನು, ಅರ್ಥವಾದದ್ದನ್ನು, ಆಗದೇ ಇದ್ದದ್ದನ್ನು, ತನ್ನ ಗ್ರಹಿಕೆಗೆ ನಿಲುಕಿದ್ದು, ನಿಲುಕದ್ದು ಎಲ್ಲವನ್ನೂ ಟೀಕಿಸುವುದರಲ್ಲೇ ಸಂತೋಷ ಕಾಣುತ್ತಾನೆ. ಹಾಗೆ ಟೀಕಿಸುವುದಕ್ಕೆ ತನಗೆ ಅಧಿಕಾರವಿದೆ, ಅನುಭವವಿದೆ ಮತ್ತು ಟೀಕಿಸುವ ಅಗತ್ಯ ಇದೆ ಅಂತ ಆತ ಭಾವಿಸುತ್ತಾನೆ ಮತ್ತು ಅದರಂತೆ ನಡೆಯುತ್ತಾನೆ.
ಆ ಟೀಕಾಕಾರ ಮಾಡುವ ಮೊದಲ ಕೆಲಸವೆಂದರೆ ಎಲ್ಲವನ್ನೂ ನಿರಾಕರಿಸುವುದು. ಇಲ್ಲೊಂದು ಅದ್ಭುತವಿದೆ ನೋಡು ಅಂತ ಯಾರಾದರೂ ಹೇಳಿದಾಗ ಅವನು ಅದೇನು ಮಹಾ, ನಾನು ನೋಡದೇ ಇರುವುದು ಮತ್ತೇನಿರಲಿಕ್ಕೆ ಸಾಧ್ಯ, ಎಲ್ಲವೂ ಚರ್ವಿತ ಚರ್ವಣ ಎಂದು ಅದನ್ನು ತಳ್ಳಿಹಾಕುತ್ತಾನೆ. ಒಂದು ವೇಳೆ ನೋಡಿದರೆ ಅದನ್ನು ತೀರಾ ಕಳಪೆ ಎಂದು ವಾದಿಸಲು ಆರಂಭಿಸುತ್ತಾನೆ.
ಮಾಡರ್ನ್ ಲೈಫಲಿ ನಾವೇಕೆ ಒಂಟಿಯಾಗುತ್ತಿದ್ದೇವೆ ಗೊತ್ತೇ?
ಹೀಗೆ ತಿರಸ್ಕರಿಸುವುದಕ್ಕೆ ಆತ ತನ್ನೆಲ್ಲಾ ಪ್ರತಿಭೆಯನ್ನೂ ಬಳಸುತ್ತಾ ಹೋಗುತ್ತಾನೆ. ಅದಕ್ಕಾಗಿ ವಾದ ಹೂಡುತ್ತಾನೆ. ವಾದಕ್ಕೆ ಬೇಕಾದ ಸಮರ್ಥನೆಗಳಿಗಾಗಿ ಹುಡುಕಾಡುತ್ತಾನೆ. ತನ್ನ ಮಂಡನೆಯನ್ನು ಬೆಂಬಲಿಸಲು ಬೇಕಾದ ಸಾಕ್ಷ್ಯಗಳ ಹುಡುಕಾಟದಲ್ಲಿ ತೊಡಗುತ್ತಾನೆ. ತನ್ನ ದಿನಮಾನವನ್ನೆಲ್ಲ ಅದಕ್ಕಾಗಿಯೇ ಮೀಸಲಿಡುತ್ತಾನೆ.
ಅದರಿಂದೇನಾಗುತ್ತದೆ? ಆ ಟೀಕಾಕಾರ ಕೊನೆಗೆ ಖಾಲಿಯಾಗಿಯೇ ಉಳಿಯುತ್ತಾನೆ. ಟೀಕೆ ಯಾವ ಸೃಷ್ಟಿಯನ್ನೂ ನಾಶ ಮಾಡಲಾರದು. ಟೀಕೆಯೆಂಬುದು ಸೃಷ್ಟಿಯ ನಂತರ ಹುಟ್ಟುವಂಥ ಒಂದು ಅಭಿಪ್ರಾಯ ಮಾತ್ರ. ಅಭಿಪ್ರಾಯವೆಂಬುದು ಕೊನೆಗೂ ಅಭಿಪ್ರಾಯ ಅಷ್ಟೇ. ಅತ್ಯುತ್ತಮ ಪಾಶ್ಚಾತ್ಯ ಕೃತಿಗಳು ಅವು ಸೃಷ್ಟಿಯಾದ ಕಾಲದಲ್ಲಿ ಯಾವ ಮನ್ನಣೆಯನ್ನೂ ಗಳಿಸದೇ ಹೋಗಿವೆ. ಆದರೆ ಶತಮಾನಗಳ ನಂತರ ಅವು ಜನಮಾನಸದಲ್ಲಿ ಮರುಹುಟ್ಟು ಪಡೆದು ಮಹತ್ವದ ಕೃತಿಗಳು ಅನ್ನಿಸಿವೆ. ಆ ಕಾಲದಲ್ಲಿ ಅವುಗಳನ್ನು ಕಳಪೆ ಎಂದು ಷರಾ ಬರೆದವರ ಹೆಸರು ಕೂಡ ಚರಿತ್ರೆಗೆ ನೆನಪಿಲ್ಲ.
ಹಾಗಿದ್ದರೆ ನಾವು ಮಾಡಬೇಕಾದ್ದೇನು?
ನಮ್ಮೊಳಗಿನ ಟೀಕಾಕಾರನನ್ನು ಮೊದಲು ಕೊಲ್ಲಬೇಕು. ಯಾವ ಕಾಲಕ್ಕೂ ಒಳಗಿರುವ ಟೀಕಾಕಾರ ಅಪಾಯಕಾರಿ. ಮೊದಲು ಸ್ವೀಕಾರ ಮಾಡುವುದನ್ನು ಕಲಿಯಬೇಕು. ಸ್ವೀಕರಿಸುವುದು ಸಾಧ್ಯವಾದಾಗಲೇ ನಮ್ಮ ನಿರಾಕಾರಣ ಮಾನವೀಯವಾಗುವುದು.
ಕೆಲವು ವರ್ಷಗಳ ಹಿಂದೆ ನಾನೊಬ್ಬ ನಟ ಕಮ್ ನಿರ್ದೇಶಕರನ್ನು ಸಂದರ್ಶನ ಮಾಡಲು ಹೋಗಿದ್ದೆ. ನೀವು ಇತ್ತೀಚಿಗೆ ನೋಡಿರುವ ಸಿನಿಮಾ ಯಾವುದು ಎಂದು ಕೇಳಿದೆ. ಅದಕ್ಕವರು ತೀರಾ ತಿರಸ್ಕಾರದಿಂದ ಯಾವುದೂ ನೋಡಿಲ್ಲ, ನೋಡಲಿಕ್ಕೆ ಅರ್ಹವಾದ ಯಾವ ಸಿನಿಮಾಗಳೂ ಬಂದಿಲ್ಲ. ಏನೋ ಹುಡುಗಾಟದ ಸಿನಿಮಾ ಮಾಡುತ್ತಿರುತ್ತಾರೆ. ಅವುಗಳಲ್ಲಿ ಹೊಸತನ ಇಲ್ಲ ಅಂದುಬಿಟ್ಟಿದ್ದರು. ಅವರು ಹೆಸರಿಸಿದ ಸಿನಿಮಾಗಳೆಲ್ಲ ಪ್ರೇಕ್ಷಕ ಮೆಚ್ಚಿದ ಸಿನಿಮಾಗಳೇ ಆಗಿದ್ದವು. ಅವರಿಗೆ ಪ್ರೇಕ್ಷಕರ ಮೇಲೆಯೇ ನಂಬಿಕೆ ಹೊರಟು ಹೋಗಿತ್ತು. ಪ್ರೇಕ್ಷಕ ಒಳ್ಳೆಯ ಸಿನಿಮಾಗಳನ್ನು ನೋಡುತ್ತಿಲ್ಲ ಎಂದು ಅಲ್ಲೂ ಟೀಕಾಕಾರರಾಗಿದ್ದರು.
ಸೃಜನಶೀಲತೆ ಕುಗ್ಗುತ್ತಿದ್ದಂತೆ ಟೀಕಿಸುವ ಆಸೆ ಹೆಚ್ಚಾಗುತ್ತಾ ಹೋಗುತ್ತದೆ. ಟೀಕಿಸುವುದನ್ನೇ ನಾವು ಸೃಜನಶೀಲತೆ ಎಂದು ಭಾವಿಸುತ್ತಾ ಹೋಗುತ್ತೇವೆ. ನಿರಾಕರಿಸುವುದನ್ನೇ ನಮ್ಮ ಅತಿದೊಡ್ಡ ಶಕ್ತಿ ಎಂದು ಭಾವಿಸುತ್ತೇವೆ. ಆದರೆ ಟೀಕೆ ಎಂಬುದು ಸೃಜನಶೀಲತೆಗೆ ವಿರುದ್ಧ ಪದ. ನಿರಾಕರಣೆ ಎಂಬುದು ಬದುಕಿಗೆ ವಿರುದ್ಧ ಪದ.
ಕನ್ನಡದ ಮೊದಲ ವಿಡಿಯೋ ಬುಕ್; ಲೈಫ್ ಈಸ್ ಬ್ಯೂಟಿಫುಲ್
ಹಾಗಿದ್ದರೆ ದಾರಿ ಯಾವುದು?
ಸುಮ್ಮನೆ ಸೃಷ್ಟಿಸುತ್ತಾ ಹೋಗುವುದು. ನಮ್ಮ ಪಾಡಿಗೆ ನಾವು ತೆರೆದ ಬಾಗಿಲಂತೆ, ಸರ್ವಋುತು ಬಂದರಿನಂತೆ ಇದ್ದುಬಿಡುವುದು. ಹೊಸದಾಗಿ ನೆಟ್ಟಮರ ಬಿಟ್ಟಹೂವನ್ನೂ ತನ್ನದೇ ಸೃಷ್ಟಿಯೆಂಬಂತೆ ಸ್ವೀಕರಿಸುವ ಪ್ರಕೃತಿಯ ನಿರಂಬಳತೆಯನ್ನು ಮೈಗೂಡಿಸಿಕೊಳ್ಳುವುದು. ಮೊದಲ ಹೂವು ಕಾಯಿಯಾಗಿ, ಅದು ಒಡೆದು ನೆಲಕ್ಕೆ ಬಿದ್ದ ಬೀಜವನ್ನೂ ಮೊಳಕೆ ಒಡೆಯುವಂತೆ ಮಾಡುವ ಧರಣಿಯ ಪುಲಕವನ್ನು ಅನುಭವಿಸುವ ಮನಸ್ಥಿತಿಯನ್ನು ತುಂಬಿಕೊಳ್ಳುವುದು.
ಅನ್‌ಕ್ರಿಟಿಕಲ್ ಅಡ್ಮಿರೇಷನ್ ಎಂಬ ಮಾತೊಂದಿದೆ. ಪ್ರತಿಯೊಬ್ಬನೂ ಜಗತ್ತನ್ನು ಟೀಕಾತೀತ ಮೆಚ್ಚುಗೆಯಿಂದ ನೋಡುತ್ತಿದ್ದಷ್ಟೂದಿನವೂ ಸುಖವಾಗಿರುತ್ತಾನೆ. ಮಗುವಿನ ಮನಸ್ಸಿನಲ್ಲಿ ಎಲ್ಲವೂ ಅಚ್ಚಳಿಯದೇ ಅಚ್ಚಾಗುವುದಕ್ಕೆ ಅದೇ ಕಾರಣ. ಹದಿಹರೆಯಕ್ಕೆ ಕಾಲಿಡುವ ತನಕವೂ ನಮಗೆ ಈ ಜಗತ್ತಿನಲ್ಲಿ ನಿರಾಕರಣೆಯಿರುವುದಿಲ್ಲ, ಕೆಟ್ಟದ್ದು, ಒಳ್ಳೆಯದು, ಶ್ರೇಷ್ಠವಾದದ್ದು, ಕಳಪೆಯಾದದ್ದು ಎಂಬ ವ್ಯತ್ಯಾಸವೇ ಗೊತ್ತಿರುವುದಿಲ್ಲ. ಮನುಷ್ಯನ ಕ್ರಿಯೆಯಲ್ಲಿಯೇ ರಾಜಕೀಯವಿದೆ ಅನ್ನುವುದು ತಿಳಿದಿರುವುದಿಲ್ಲ. ಅಂಥ ಸ್ಥಿತಿಯನ್ನು ಮತ್ತೆ ಪಡೆಯದೇ ಹೋದರೆ ಕಷ್ಟ. ಅದಕ್ಕಿಂತ ಮುಖ್ಯವಾಗಿ ಕಳೆದುಕೊಳ್ಳದೇ ಇದ್ದರೆ ನಿರಾಳ.
ಐವತ್ತಕ್ಕೇ ಅದೇಕೆ ಬರುತ್ತದೆ.
ನಿಧಾನವಾಗಿ ನಮ್ಮ ಸೃಜನಶೀಲತೆಯ ಬಗ್ಗೆ ನಮಗೇ ಅನುಮಾನ ಶುರುವಾಗುತ್ತದೆ. ಬದುಕಿನ ಬೇರೆ ಜಂಜಡಗಳು ಕಾಡುತ್ತಾ ಹೋಗುತ್ತವೆ. ಅವುಗಳ ಮೇಲಿನ ಸಿಟ್ಟು ನಿರಾಕರಣೆಯಲ್ಲಿಯೋ ಟೀಕೆಯಲ್ಲಿಯೋ ಹೊರಬರುತ್ತವೆ.
ಅವೆಲ್ಲವನ್ನೂ ಬಿಟ್ಟು, ಸುಮ್ಮನೆ ಕಣ್ಮುಚ್ಚಿ ತನ್ನ ಕೆಲಸವನ್ನು ತಾನು ಮಾಡುತ್ತಾ ಹೋಗುವುದೇ ಸರಿಯಾದ ದಾರಿ. ಐವತ್ತರ ನಂತರ ಹಾಗೆ ತಮ್ಮ ಕಲೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡವರು ಮಹತ್ವದ್ದೇನನ್ನೋ ಸೃಷ್ಟಿಸಿದ್ದಾರೆ. ಒಂದು ಉದಾಹರಣೆ ಕೊಡುವುದಿದ್ದರೆ, ಕುವೆಂಪು ಮಲೆಗಳಲ್ಲಿ ಮದುಮಗಳು ಬರೆದಾಗ ಅವರಿಗೆ 63 ವರ್ಷ.