
ಗರ್ಭಾವಸ್ಥೆಯಲ್ಲಿ ಲೈಂಗಿಕ ಕ್ರಿಯೆ ಸುರಕ್ಷಿತವೇ ಎಂದು ಅನೇಕ ದಂಪತಿಗಳು ವೈದ್ಯರಲ್ಲಿ ಕೇಳುತ್ತಾರೆ. ವಿಶೇಷವಾಗಿ ಮೊದಲ ಮೂರು ತಿಂಗಳು ಮತ್ತು ಮೂರನೇ ತ್ರೈಮಾಸಿಕದಲ್ಲಿ. ಇದರಿಂದ ಮಗುವಿಗೆ ಹಾನಿಯಾಗಬಹುದಾ ಅಂತ ಹೆಚ್ಚಾಗಿ ಚಿಂತಿಸುತ್ತಾರೆ. ಆದರೆ ಎಲ್ಲ ವೈದ್ಯರೂ ಹೇಳುವುದು ಏನೆಂದರೆ, ನೀವು ಸಾಮಾನ್ಯ, ಆರೋಗ್ಯಕರ ಗರ್ಭಧಾರಣೆಯನ್ನು ಹೊಂದಿದ್ದರೆ, ಒಂಬತ್ತನೇ ತಿಂಗಳವರೆಗೂ ಮಿಲನ ಹೊಂದಲು ಏನೂ ತೊಂದರೆಯಿಲ್ಲ. ನೀವು ಸರಿಯಾದ ಮೂಡ್‌ನಲ್ಲಿದ್ದರೆ, ಸಂತೃಪ್ತ ಲೈಂಗಿಕತೆಯನ್ನು ಹೊಂದುವುದು ನಿಮ್ಮ ಸಂಬಂಧ ಮತ್ತು ನಿಮ್ಮ ದೇಹಕ್ಕೆ ಒಳ್ಳೆಯದು.
ಅನೇಕ ಮಹಿಳೆಯರು ಗರ್ಭಾವಸ್ಥೆಯಲ್ಲಿ (Pregnancy) ತಮ್ಮ ಲೈಂಗಿಕ ಬಯಕೆ ಬದಲಾಗುವುದನ್ನು ಕಂಡುಕೊಳ್ಳುತ್ತಾರೆ. ಗರ್ಭಿಣಿಯ ಲೈಂಗಿಕಾಸಕ್ತಿ ಕಡಿಮೆಯಿದ್ದರೆ ಪತಿಯೊಂದಿಗೆ ಮಾತನಾಡಿ ಅವರಿಗೆ ಅರ್ಥ ಮಾಡಿಕೊಳ್ಳಲು ಸಹಾಯ ಮಾಡಿ. ಕೆಲವೊಮ್ಮೆ ನಿಮ್ಮ ರೊಮ್ಯಾನ್ಸ್‌ಗೆ ಮಗು ಅಡ್ಡಿ ಬಂದಂತೆ, ಚಡಪಡಿಸಿದಂತೆ ಭಾಸವಾಗಬಹುದು. ಅದೇಕೆ ಹಾಗಾಗುತ್ತದೆ?
ಸಂಭೋಗದಿಂದ ನಿಮ್ಮ ಮಗುವಿಗೆ ನೋವಾಗುವುದಿಲ್ಲ. ಆದರೆ, ನೀವು ಏನು ಮಾಡುತ್ತಿದ್ದೀರಿ ಎಂದು ನಿಮ್ಮ ಚಿಕ್ಕ ಮಗುವಿಗೆ ತಿಳಿದಿರುವುದಿಲ್ಲ! ಮಗುವಿನ ಸುತ್ತ ಇರುವ ಆಮ್ನಿಯೋಟಿಕ್ ಚೀಲ ಮತ್ತು ನಿಮ್ಮ ಗರ್ಭಾಶಯದ ಬಲವಾದ ಸ್ನಾಯುಗಳು ನಿಮ್ಮ ಮಗುವನ್ನು ರಕ್ಷಿಸುತ್ತವೆ. ನಿಮ್ಮ ಗರ್ಭಕಂಠವನ್ನು ಮುಚ್ಚುವ ದಪ್ಪ ಲೋಳೆಯ ಪದರ ಅದನ್ನು ಸೋಂಕಿನಿಂದ ರಕ್ಷಿಸಲು ಸಹಾಯ ಮಾಡುತ್ತದೆ. ಆದರೆ ಸೆಕ್ಸ್‌ನ ಪರಾಕಾಷ್ಠೆ ಅಥವಾ ಆರ್ಗ್ಯಾಸಂ ಹೊಂದಿದಾಗ, ನಿಮ್ಮ ಮಗು ಹೊಟ್ಟೆಯೊಳಗೆ ಹೆಚ್ಚು ಚಲಿಸುತ್ತದೆ, ಕೊಂಚ ಚಡಪಡಿಸಬಹುದು. ಇದಕ್ಕೆ ಕಾರಣ, ಸೆಕ್ಸ್ ಸಂದರ್ಭದಲ್ಲಿ ನಿಮ್ಮ ಹೃದಯದ ಬಡಿತ ತೀವ್ರವಾಗುವುದು. ನಿಮ್ಮ ಹೃದಯ ಜೋರಾಗಿ ಬಡಿದುಕೊಂಡರೆ ಮಗುವಿಗೂ ಚಡಪಡಿಕೆ ಉಂಟಾಗುತ್ತದೆ.
ಗರ್ಭಾವಸ್ಥೆಯ ಕೊನೆಯ ತಿಂಗಳುಗಳಲ್ಲಿ ನೀವು ಮಿಲನದ ಪರಾಕಾಷ್ಠೆಯನ್ನು ಅನುಭವಿಸಿದರೆ, ನಿಮ್ಮ ಗರ್ಭದಲ್ಲಿ ಕೆಲವು ಸೌಮ್ಯವಾದ ನೋವುಗಳು ಕಂಡುಬರಬಹುದು. ಇದನ್ನು ಬ್ರಾಕ್‌ಸ್ಟನ್ ಹಿಕ್ಸ್ ಕಾಂಟ್ರಾಕ್ಷನ್ ಎನ್ನುತ್ತಾರೆ. ಇದೊಂದು ಕೃತಕ ಹೆರಿಗೆನೋವು. ಕೆಲವು ನಿಮಿಷಗಳ ಕಾಲ ವಿಶ್ರಾಂತಿ ಪಡೆದರೆ ಅದು ಹೊರಟುಹೋಗುತ್ತದೆ. ಸಂಕೋಚನ ಮುಂದುವರಿದರೆ, ಅಥವಾ ದ್ರವ ಸೋರುತ್ತಿದ್ದರೆ, ಅಥವಾ ಲೈಂಗಿಕತೆಯ ನಂತರ ರಕ್ತಸ್ರಾವವಾಗಿದ್ದರೆ, ಕೂಡಲೇ ವೈದ್ಯರನ್ನು ಕಾಣಬೇಕು.
ಗರ್ಭಿಣಿಯಾಗಿರುವಾಗ ಕೆಲವು ಮಹಿಳೆಯರಿಗೆ ಮಿಲನ ತುಂಬಾ ಒಳ್ಳೆಯದು, ಕೆಲವರಿಗೆ ಅಲ್ಲ. ಗರ್ಭಾವಸ್ಥೆಯಲ್ಲಿ ಆ ಕ್ರಿಯೆ ನಿಮ್ಮ ಜನನಾಂಗ ಪ್ರದೇಶಕ್ಕೆ ರಕ್ತದ ಹರಿವು ಹೆಚ್ಚಿಸಿ, ಲೈಂಗಿಕ ಸಂವೇದನೆಯನ್ನು ಹೆಚ್ಚಿಸಬಹುದು. ಅಥವಾ ಅನಾನುಕೂಲತೆಯನ್ನೂ ಅನುಭವಿಸಬಹುದು. ಕೆಲವು ಮಹಿಳೆಯರು ಹೊಟ್ಟೆಯಲ್ಲಿ ಮಗುವಿದ್ದಾಗ ಭಾವನಾತ್ಮಕವಾಗಿ ಇನ್‌ವಾಲ್ವ್ ಆಗಲಾರರು.
ಗರ್ಭಾವಸ್ಥೆಯಲ್ಲಿ ಹೆಚ್ಚಿನ ದಂಪತಿಗಳು ಸಂಭೋಗಕ್ಕಿಂತಲೂ ಮುನ್ನಲಿವು, ಮೌಖಿಕ ಸಂಭೋಗದಿಂದ ಹೆಚ್ಚು ಆನಂದವನ್ನು ಅನುಭವಿಸುತ್ತಾರೆ. ಇದರಿಂದ ಕಡಿಮೆ ತೃಪ್ತರಾಗುತ್ತಾರೆ ಎಂದರ್ಥವಲ್ಲ! ಗರ್ಭಾವಸ್ಥೆಯ ಉದ್ದಕ್ಕೂ ಗಂಡ ಹೆಂಡತಿ ಅನ್ಯೋನ್ಯತೆಯಿಂದ ಇರಬೇಕು. ಇದು ನಿಮ್ಮ ಸಂಬಂಧವನ್ನು ಆರೋಗ್ಯಕರವಾಗಿಡುತ್ತದೆ. ಮಗುವಿನ ಜನನದ ನಂತರ ನೀವು ಲೈಂಗಿಕ ಸಮಸ್ಯೆಗಳನ್ನು ಹೊಂದಿರುವುದಿಲ್ಲ.
ಕೆಲವರು ಗರ್ಭಿಣಿಯಾದಾಗಿನಿಂದ ಲೈಂಗಿಕತೆಯನ್ನು ಪೂರ್ತಿ ತೊರೆಯುತ್ತಾರೆ. ದೇಹ ಮತ್ತು ಜೀವನದಲ್ಲಿ ಆಗುವ ದೊಡ್ಡ ಬದಲಾವಣೆಗಳು ಲೈಂಗಿಕ ಜೀವನವನ್ನು ಬದಲಾಯಿಸುತ್ತವೆ. ಯಾಕೆಂದರೆ ಕೆಲವು ಮಹಿಳೆಯರು ವಿಶೇಷವಾಗಿ ಮೊದಲ ತ್ರೈಮಾಸಿಕದಲ್ಲಿ ಲೈಂಗಿಕತೆಯನ್ನು ಹೊಂದಲಾಗದಂತೆ ತುಂಬಾ ದಣಿದಿರುತ್ತಾರೆ, ತುಂಬಾ ವಾಕರಿಕೆ ಅನುಭವಿಸುತ್ತಾರೆ.
ಮೂಡ್ ಬದಲಾವಣೆಗಳು, ಮೈ ಜುಮ್ಮೆನಿಸುವಿಕೆ, ನೋಯುತ್ತಿರುವ ಸ್ತನಗಳು, ಬೆನ್ನುನೋವುಗಳು ಲೈಂಗಿಕತೆಯ ಆಸಕ್ತಿ ಕಡಿತಕ್ಕೆ ಇತರ ಕೆಲವು ಕಾರಣ. ಹಾರ್ಮೋನುಗಳ ಬದಲಾವಣೆ ಸಹ ಕಾಮಾಸಕ್ತಿಯ ನಷ್ಟಕ್ಕೆ ಕಾರಣವಾಗಬಹುದು. ಇದರಲ್ಲಿ ತಪ್ಪೇನಿಲ್ಲ. ಮನಸ್ಸಿನ ಸ್ಥಿತಿಯೂ ಮುಖ್ಯ. ಗರ್ಭಾವಸ್ಥೆಯು ಸಂಪೂರ್ಣ ಹೊಸ ಚಿಂತೆಗಳು ಮತ್ತು ಕಾಳಜಿಗಳನ್ನು ತರುತ್ತದೆ. ಒತ್ತಡದಲ್ಲಿರುವಾಗ ಆನಂದ ಅನುಭವಿಸುವುದು ಕಷ್ಟವೇ ಸರಿ. ನಿಮ್ಮ ದೇಹದಲ್ಲಿನ ಬದಲಾವಣೆಗಳ ಬಗ್ಗೆ ಧನಾತ್ಮಕವಾಗಿ ಭಾವಿಸಿದರೆ, ಹೆಚ್ಚು ಲೈಂಗಿಕತೆಯನ್ನು ಅನುಭವಿಸುವ ಸಾಧ್ಯತೆಯಿದೆ. ಆದರೆ ಗರ್ಭಾವಸ್ಥೆಯ ಅಸುರಕ್ಷಿತರಾಗಿದ್ದರೆ, ಅದು ಲೈಂಗಿಕತೆಯಿಂದ ದೂರವಿಡಬಹುದು.
ಗರ್ಭಾವಸ್ಥೆಯ ಮೊದಲ ಭಾಗದಲ್ಲಿ ಲೈಂಗಿಕತೆಯನ್ನು ಆನಂದಿಸಿದ್ದರೂ, ಹೆರಿಗೆ ಹತ್ತಿರವಾಗುತ್ತಿದ್ದಂತೆ ಲೈಂಗಿಕ ಬಯಕೆ ಕಡಿಮೆಯಾಗಬಹುದು. ಕೊನೆಯದಾಗಿ, ಪ್ರತಿಯೊಬ್ಬರೂ ಈ ವಿಷಯದಲ್ಲಿ ವಿಭಿನ್ನ ಆಸಕ್ತಿ ಹೊಂದಿರುತ್ತಾರೆ ಎನ್ನಬಹುದು. ಮುಕ್ತ ಮಾತುಕತೆಯು ಬಹಳಷ್ಟು ಒತ್ತಡವನ್ನು ಕಡಿಮೆ ಮಾಡುತ್ತದೆ. ಮತ್ತು ನೀವು ವಿಶ್ರಾಂತಿ ಪಡೆಯಲು, ಪರಸ್ಪರ ಆನಂದಿಸಲು ಮತ್ತು ಅನ್ಯೋನ್ಯವಾಗಿರಲು ಸಾಧ್ಯವಾಗುತ್ತದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.