
ಬೆಂಗಳೂರು (ಅ.7): ‘ಬಿಗ್‌ಬಾಸ್’ ಖ್ಯಾತಿಯ ನಟಿ ಸ್ಪಂದನಾ ಸೋಮಣ್ಣ (Spandana Somanna) ತಮ್ಮ ಮದುವೆಯ ಕುರಿತು ಎದ್ದಿದ್ದ ಎಲ್ಲಾ ಊಹಾಪೋಹಗಳಿಗೆ ಮತ್ತು ಸಸ್ಪೆನ್ಸ್‌ಗಳಿಗೆ ತೆರೆ ಎಳೆದಿದ್ದಾರೆ. ಇತ್ತೀಚೆಗಷ್ಟೇ ಪ್ಯಾರೀಸ್‌ನ ಐಫೆಲ್ ಟವರ್ ಹಿನ್ನೆಲೆಯಲ್ಲಿ ಹಿಂಬದಿಯಿಂದ ಹುಡುಗನೊಬ್ಬನ ಕೈಹಿಡಿದು ನಡೆಯುತ್ತಿರುವ ಫೋಟೋ ಶೇರ್ ಮಾಡಿ ಪ್ರೇಕ್ಷಕರಲ್ಲಿ ಭಾರಿ ಕುತೂಹಲ ಮೂಡಿಸಿದ್ದ ಸ್ಪಂದನಾ, ಇದೀಗ ತಮ್ಮ ಭಾವಿ ಪತಿ ವರುಣ್‌ರನ್ನು ಅಧಿಕೃತವಾಗಿ ಸೋಶಿಯಲ್ ಮೀಡಿಯಾ ಮೂಲಕ ಪರಿಚಯಿಸಿದ್ದಾರೆ.
ಅಷ್ಟಕ್ಕೂ ಆ ಫೋಟೋದಲ್ಲಿದ್ದ ಹುಡುಗ ಬಿಗ್‌ಬಾಸ್ ಖ್ಯಾತಿಯ ಸೂರಜ್ ಸಿಂಗ್ ಇರಬಹುದು ಎಂದು ಅಭಿಮಾನಿಗಳು ಮತ್ತು ನೆಟ್ಟಿಗರು ಊಹಿಸಿದ್ದರು. ಆದರೆ ಈ ಬಗ್ಗೆ ಇತ್ತೀಚೆಗಷ್ಟೇ ಸ್ಪಷ್ಟನೆ ನೀಡಿದ್ದ ಸ್ಪಂದನಾ, "ಫೋಟೋದಲ್ಲಿ ಇರೋರು ಸೂರಜ್ ಸಿಂಗ್ ಅಲ್ಲ, ಪಾಪ ಸೂರಜ್ ಅವರನ್ನು ಅನಗತ್ಯವಾಗಿ ಎಳೆತಂದು ಏನೇನೋ ಹೇಳ್ತಿದ್ದಾರೆ. ಶೀಘ್ರದಲ್ಲೇ ನಾನೇ ನನ್ನ ಭಾವಿ ಪತಿಯ ವಿವರಗಳನ್ನು ಹಂಚಿಕೊಳ್ಳುತ್ತೇನೆ" ಎಂದು ಹೇಳಿದ್ದರು.
ಹೇಳಿದಂತೆಯೇ ನಟಿ ಸ್ಪಂದನಾ ಸೋಮಣ್ಣ ತಮ್ಮ ಭಾವಿ ಪತಿಯ ಜೊತೆಗಿನ ಉಂಗುರ ಬದಲಾಯಿಸಿಕೊಂಡ (Engagement) ಸುಂದರ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ಸರ್ಪ್ರೈಸ್ ನೀಡಿದ್ದಾರೆ. ವರುಣ್ ಮುನಿರಾಜು (@varun_muniraju) ಎಂಬುವವರನ್ನೇ ಸ್ಪಂದನಾ ಶೀಘ್ರದಲ್ಲೇ ಮದುವೆಯಾಗುತ್ತಿದ್ದು, ಇಬ್ಬರೂ ಆರು ವರ್ಷಗಳಿಂದ ಪ್ರೀತಿಸುತ್ತಿದ್ದರು ಎಂಬುದನ್ನು ಬಹಿರಂಗಪಡಿಸಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ವರುಣ್ ಜೊತೆಗಿನ ರೋಮ್ಯಾಂಟಿಕ್ ಫೋಟೋಗಳನ್ನು ಶೇರ್ ಮಾಡಿರುವ ಸ್ಪಂದನಾ, ತಮಗಿಬ್ಬರ ನಡುವಿನ 6 ವರ್ಷಗಳ ಸುದೀರ್ಘ ಕಷ್ಟ-ಸುಖಗಳ ಪ್ರೇಮ ಪಯಣವನ್ನು ಕಣ್ಣಿಗೆ ಕಟ್ಟುವಂತೆ ಬರೆದುಕೊಂಡಿದ್ದಾರೆ.
ವರುಣ್ ಅವರನ್ನು ಟ್ಯಾಗ್ ಮಾಡಿ ಪ್ರೀತಿಯ ಸಾಲುಗಳನ್ನು ಬರೆದುಕೊಂಡಿರುವ ಸ್ಪಂದನಾ, 'ನಾವು ಕೊನೆಗೂ ಮದುವೆಯಾಗುತ್ತಿದ್ದೇವೆ' ಎಂದು ಸಂಭ್ರಮಿಸಿದ್ದಾರೆ. 'ನಮ್ಮಿಬ್ಬರ ಬಳಿಯೂ ಯಾವುದೇ ಕೆಲಸವಿಲ್ಲದೆ, ಕೈಯಲ್ಲಿ ಹಣವಿಲ್ಲದೆ, ಭವಿಷ್ಯ ಎಲ್ಲಿ ಕರೆದುಕೊಂಡು ಹೋಗುತ್ತದೆ ಎಂಬುದರ ಅರಿವಿಲ್ಲದೆ ಜೀವನದ ದಾರಿ ಹುಡುಕುತ್ತಿದ್ದ ಆರಂಭಿಕ ದಿನಗಳಲ್ಲೇ ನಾವು ಸಿಕ್ಕಿದ್ದು ನನಗೆ ಇಂದಿಗೂ ನೆನಪಿದೆ. ಆದರೂ ನಾವಿಬ್ಬರೂ ಒಬ್ಬರಿಗೊಬ್ಬರು ಸಾಥ್ ನೀಡಿದೆವು. ನಾನು ನನ್ನ ಮೇಲೆಯೇ ಭರವಸೆ ಕಳೆದುಕೊಂಡಾಗಲೂ ನೀನು ನನ್ನAudition ಗಳಿಗೆ ಜೊತೆಯಾಗಿ ಬಂದು, ಹೊಸ ಪ್ರಯತ್ನಗಳನ್ನು ಮಾಡಲು ಪ್ರೋತ್ಸಾಹಿಸಿ, ಪ್ರತಿಯೊಂದು ಹೆಜ್ಜೆಯಲ್ಲೂ ನನ್ನನ್ನು ನಂಬಿದೆ. ಇಷ್ಟು ವರ್ಷಗಳಲ್ಲಿ ನೀನೇ ನನ್ನ ಶಕ್ತಿ ಮತ್ತು ಅತಿ ದೊಡ್ಡ ಬೆಂಬಲಿಗನಾಗಿ ನಿಂತೆ' ಎಂದು ಬರೆದಿದ್ದಾರೆ.
"ನಾವು ಹಂಚಿಕೊಂಡ ಅನುಭವಗಳು ಹಾಗೂ ಬೆಳೆದು ಬಂದ ಹಾದಿಯ ನಂತರ, ನಿನ್ನನ್ನು ನನ್ನ 'ಗಂಡ' ಹಾಗೂ ನೀನು ನನ್ನನ್ನು 'ಹೆಂಡತಿ' ಎಂದು ಕರೆಯುವ ಕ್ಷಣ ಬರುತ್ತಿರುವುದಕ್ಕೆ ನನಗೆ ಅಪಾರ ಸಂತೋಷವಾಗುತ್ತಿದೆ. ನನ್ನ ಜೀವನದಲ್ಲಿ ನಾನು ಹೇಳಿದ ಅತ್ಯಂತ ಸುಲಭವಾದ 'YES' ಇದು. ನನಗಾಗಿ ಸದಾ ಜೊತೆಯಾಗಿ ನಿಂತಿದ್ದಕ್ಕೆ, ನನ್ನನ್ನು ನಂಬಿದ್ದಕ್ಕೆ ಹಾಗೂ ನನ್ನನ್ನೇ ಆಯ್ಕೆ ಮಾಡಿಕೊಂಡಿದ್ದಕ್ಕೆ ಧನ್ಯವಾದಗಳು. ನಮ್ಮ ಮುಂದಿನ ಹೊಸ ಅಧ್ಯಾಯಕ್ಕೆ ಹಾಗೂ ಎಂದೆಂದಿಗೂ ಜೊತೆಯಾಗಿರುವುದಕ್ಕೆ ಚೀರ್ಸ್! ಐ ಲವ್ ಯೂ! ❤️ ನಿನ್ನನ್ನು 'ಗಂಡ' ಎಂದು ಕರೆಯಲು ಕಾಯುತ್ತಿದ್ದೇನೆ" ಎಂದು ಬರೆದುಕೊಂಡಿದ್ದಾರೆ.
ಇತ್ತೀಚೆಗಷ್ಟೇ ಮದುಮಗಳಂತೆ ಕಂಗೊಳಿಸುತ್ತಾ ಸುಂದರ ಫೋಟೋಶೂಟ್ ಮಾಡಿಸಿಕೊಂಡಿದ್ದ ಸ್ಪಂದನಾ, ಪ್ಯಾರೀಸ್ ಪ್ರವಾಸದ ನಂತರ ಅಭಿಮಾನಿಗಳಿಂದ ಸಿಗುತ್ತಿರುವ ಅಪಾರ ಪ್ರೀತಿಗೆ ಧನ್ಯವಾದ ತಿಳಿಸಿದ್ದರು. ಆರು ವರ್ಷಗಳ ಹಿಂದೆಯೇ ಈ ವಿಷಯ ಬಹಿರಂಗಪಡಿಸಬೇಕಿತ್ತು ಎನಿಸಿತ್ತು, ಆದರೆ ಈಗ ಸರಿಯಾದ ಸಮಯ ಬಂದಿದೆ ಎಂದು ಹೇಳಿದ್ದ ನಟಿ, ಸದ್ಯದಲ್ಲೇ ಮದುವೆ ದಿನಾಂಕ ಹಾಗೂ ಇತರೆ ಸಂಪೂರ್ಣ ವಿವರಗಳನ್ನು ಹಂಚಿಕೊಳ್ಳುವುದಾಗಿ ತಿಳಿಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಸ್ಪಂದನಾ ಸೋಮಣ್ಣ ಮತ್ತು ವರುಣ್ ಮುನಿರಾಜು ಜೋಡಿಗೆ ಅಭಿಮಾನಿಗಳು, ಕಿರುತೆರೆ ಹಾಗೂ ಸ್ಯಾಂಡಲ್‌ವುಡ್ ತಾರೆಯರು ಅಭಿನಂದನೆಗಳ ಮಹಾಪೂರವನ್ನೇ ಹರಿಸುತ್ತಿದ್ದಾರೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.