
ಬೆಂಗಳೂರು (ಮೇ.16): ಕಳೆದ ಕೆಲವು ದಿನಗಳಿಂದ '100 ಇಯರ್ಸ್ ಆಫ್ ಕ್ರಿಸೋಸ್ಟಮ್' ಡಾಕ್ಯುಮೆಂಟರಿ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡ್ತಿದೆ. ಮಮ್ಮೂಟಿ ಮತ್ತು ದಿವಂಗತ ಫಿಲಿಪೋಸ್ ಮಾರ್ ಕ್ರಿಸೋಸ್ಟಮ್ ನಡುವಿನ ಸಂಭಾಷಣೆ ಇದಾಗಿದೆ. ಇದರ ಕಿರು ತುಣುಕುಗಳು ವೈರಲ್ ಆಗಿವೆ. ಇದರಲ್ಲಿ ಮಮ್ಮೂಟಿ ದಾಂಪತ್ಯ ಮತ್ತು ಬಾಂಧವ್ಯಗಳ ಬಗ್ಗೆ ಹೇಳಿರುವ ಮಾತುಗಳು ಗಮನ ಸೆಳೆಯುತ್ತಿವೆ.
ವಿಚ್ಛೇದನ ಪಡೆಯಬಹುದಾದ ಏಕೈಕ ಬಾಂಧವ್ಯ ಗಂಡ-ಹೆಂಡತಿಯದ್ದು, ಆದರೆ ಅದರಿಂದಲೇ ದೊಡ್ಡ ಬಾಂಧವ್ಯಗಳು ಹುಟ್ಟುತ್ತವೆ ಅಂತ ಮಮ್ಮೂಟಿ ಹೇಳ್ತಾರೆ. ಹಾಗಾಗಿ ಗಂಡ-ಹೆಂಡತಿ ಬಾಂಧವ್ಯ ಅತ್ಯುತ್ತಮ, ಅದಕ್ಕೆ ಭದ್ರತೆ ಬೇಕು ಎಂದೂ ಹೇಳಿದ್ದಾರೆ.
“ಭೂಮಿಯಲ್ಲಿ ಗಡಿಗಳು, ಬಾಂಧವ್ಯಗಳು ಬಹಳ ಕಾಲದ ನಂತರ ರೂಪುಗೊಂಡಿರಬೇಕು. ನನಗೆ ಹಾಗನ್ನಿಸುತ್ತೆ. ಅದು ಸತ್ಯ ಆಗಿರಬೇಕು ಅಂತೇನಿಲ್ಲ. ಇಬ್ಬರು ರೈತರು. ನನ್ನ ಬೆಳೆ ನಾನು ಬೆಳೆಯುತ್ತೇನೆ. ಇನ್ನೊಬ್ಬರು ಬೆಳೆಯಲ್ಲ. ಇದು ನನ್ನ ಜಮೀನು, ಅದು ನಿನ್ನದು. ನೀನು ಅಲ್ಲಿ ಬೆಳೆ, ನಾನು ಅತ್ತ ಬರಲ್ಲ. ಹೀಗೆ ಗಡಿಗಳು ರೂಪುಗೊಳ್ಳುತ್ತವೆ. ಆ ಗಡಿಗಳು ದೊಡ್ಡದಾಗಿ ಗ್ರಾಮಗಳಾಗಿ, ಗ್ರಾಮಗಳು ದೊಡ್ಡದಾಗಿ ದೇಶಗಳಾಗುತ್ತವೆ. ಈಗ ದೇಶಗಳ ಗಡಿಗಳ ನಡುವೆ ಯುದ್ಧ ನಡೆಯುತ್ತಿದೆ. ಗಡಿಗಳೇ ನಮ್ಮಲ್ಲಿ ತಾರತಮ್ಯ ಉಂಟುಮಾಡುತ್ತವೆ” ಅಂತ ಮಮ್ಮೂಟಿ ಹೇಳಿದ್ದಾರೆ.
“ಮನುಷ್ಯನಿಗೆ ಹಲವು ಗಡಿಗಳಿವೆ. ಗಂಡು-ಹೆಣ್ಣಿನ ನಡುವೆ ಮೊದಲ ಗಡಿ ರೂಪುಗೊಳ್ಳುತ್ತದೆ. ಎರಡು ಲಿಂಗದವರು. ಮನುಷ್ಯರು ಹುಟ್ಟುವುದು ಗಂಡು-ಹೆಣ್ಣಿನ ಮಿಲನದಿಂದ. ನಾನು ಅದರ ಬಗ್ಗೆ ಬಹಳ ಯೋಚಿಸಿದ್ದೇನೆ. ಯಾವುದೇ ಬಾಂಧವ್ಯ ಇಲ್ಲದ ಇಬ್ಬರು ಸೇರಿದಾಗ ಹಲವು ಬಾಂಧವ್ಯಗಳು ಹುಟ್ಟುತ್ತವೆ. ಗಂಡ-ಹೆಣ್ಣಿನ ಬಾಂಧವ್ಯವನ್ನು ಬೇಕಾದರೆ ಮುರಿಯಬಹುದು. ಅಂದರೆ ವಿಚ್ಛೇದನ ಪಡೆಯಬಹುದಾದ ಏಕೈಕ ಬಾಂಧವ್ಯ ಗಂಡ-ಹೆಂಡತಿಯದ್ದು. ಅಪ್ಪ-ಮಗ, ಮಾವ-ಅಳಿಯ ಬೇರ್ಪಡುತ್ತಾರಾ? ಆದರೆ ಈ ಎಲ್ಲಾ ಬಾಂಧವ್ಯಗಳು ಹುಟ್ಟುವುದು ಮುರಿಯಬಹುದಾದ ಬಾಂಧವ್ಯದಿಂದ. ಅಮ್ಮ, ಅಪ್ಪ, ತಮ್ಮ, ಅಣ್ಣ, ಮಾವ, ಅತ್ತಿಗೆ ಹೀಗೆ ಬಾಂಧವ್ಯಗಳು ರೂಪುಗೊಳ್ಳುತ್ತವೆ. ಈ ಬಾಂಧವ್ಯಗಳು ಬದಲಾಗುವುದಿಲ್ಲ. ಆದರೆ ಗಂಡ-ಹೆಂಡತಿ ಬೇರ್ಪಡಬಹುದು. ಹಾಗಾಗಿ ಗಂಡ-ಹೆಂಡತಿ ಬಾಂಧವ್ಯ ಅತ್ಯುತ್ತಮ. ಅದಕ್ಕೆ ಭದ್ರತೆ ಬೇಕು. ಬೇರ್ಪಡದಂತೆ ಇರಬೇಕು” ಅಂತ ಮಮ್ಮೂಟಿ ಹೇಳಿದ್ದಾರೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.