
ದುರ್ಯೋಧನನ ಬಗ್ಗೆ ಚಾಣಕ್ಯರು ಹೇಳಿದ್ದೇನು?
ಭಾರತದಲ್ಲಿ ಆಚಾರ್ಯ ಚಾಣಕ್ಯನ (Chanakya) ಹೆಸರು ಕೇಳದಿರುವವರು ತುಂಬಾ ವಿರಳ. (ಕೌಟಿಲ್ಯ ಎಂಬ ಹೆಸರಿನಿಂದಲೂ ಇವರು ಖ್ಯಾತಿ ಪಡೆದಿದ್ದಾರೆ. ಆದರೆ, ಇವರ ಮೂಲ ಹೆಸರು ವಿಷ್ಣುಗುಪ್ತ. ಚಾಣಕ್ಯರು ಪ್ರಾಚೀನ ಭಾರತದ ಶ್ರೇಷ್ಠ ಅರ್ಥಶಾಸ್ತ್ರಜ್ಞ, ರಾಜತಾಂತ್ರಿಕ ಮತ್ತು ಮೌರ್ಯ ಸಾಮ್ರಾಜ್ಯದ ಸ್ಥಾಪಕ ಚಂದ್ರಗುಪ್ತ ಮೌರ್ಯನ ಗುರು. ತಕ್ಷಶಿಲೆ ಎನ್ನುವಲ್ಲಿ ಶಿಕ್ಷಣ ಪಡೆದ ಇವರು, 'ಅರ್ಥಶಾಸ್ತ್ರ' ಮತ್ತು 'ಚಾಣಕ್ಯ ನೀತಿ' ಗ್ರಂಥಗಳ ಮೂಲಕ ರಾಜಕೀಯ, ಯುದ್ಧ ತಂತ್ರ ಮತ್ತು ಜೀವನದ ಮೌಲ್ಯಗಳನ್ನು ಬೋಧಿಸಿದರು.
ಅಂದಿನ ಕಾಲದಲ್ಲಿ ನಂದ ವಂಶವನ್ನು ನಾಶಮಾಡಿ, ಅಖಂಡ ಭಾರತದ ಕಲ್ಪನೆಯನ್ನು ಸಾಕಾರಗೊಳಿಸಿದ ದಾರ್ಶನಿಕರು ಈ ಚಾಣಕ್ಯ. ಇಂಥ ಚಾಣಕ್ಯರನ್ನು 'ಆಚಾರ್ಯ' ಚಾಣಕ್ಯ ಎಂದೇ ಕರೆಯುತ್ತಾರೆ. ಕೆಲವರು ಇವರನ್ನು ವಾತ್ಸಾಯನ ಎಂದೂ ಕರೆಯುತ್ತಾರೆ. ಶತ್ರುವಿನ ಮೇಲೆ ಜಯ ಸಾಧಿಸಲು ಕಠಿಣ ಪರಿಶ್ರಮ, ಸಮಯ ನಿರ್ವಹಣೆ ಮತ್ತು ಸರಿಯಾದ ಕಾರ್ಯತಂತ್ರ ಅಗತ್ಯವೆಂದು ಪ್ರತಿಪಾದಿಸಿದರು.
ಚಾಣಕ್ಯರು ತಂದೆಯ ಸಾವಿನ ಸೇಡಿಗಾಗಿ ಶಪಥಗೈದು, ಅನಾಥನಾಗಿದ್ದರೂ ತನ್ನ ಬುದ್ಧಿವಂತಿಕೆಯಿಂದ ಇಡೀ ಭಾರತವನ್ನು ಪರೋಕ್ಷವಾಗಿ ಆಳಿದವರು.
ಚಾಣಕ್ಯನ ತಂತ್ರಗಳು ಮತ್ತು ನೀತಿಗಳು ಇಂದಿಗೂ ಯಶಸ್ವಿ ಜೀವನ ಮತ್ತು ಆಡಳಿತಕ್ಕೆ ಮಾರ್ಗದರ್ಶಿಯಾಗಿವೆ. ಇಂಥ ಚಾಣಕ್ಯರು ಮಹಾಭಾರತದ ಕೌರವರ ಧಿಪತಿ ಧುರ್ಯೋಧನನ ಬಗ್ಗೆ ಒಂದು ಮಾತು ಹೇಳಿದ್ದಾರೆ. ಅದೇನು ಗೊತ್ತಾ? ಈ ಸ್ಟೋರಿ ನೋಡಿ..
ಆಚಾರ್ಯ ಚಾಣಕ್ಯರು 'ದುರ್ಯೋಧನನು ಪ್ರತಿ ಸಲಹೆಯನ್ನು ಪಿತೂರಿ ಎಂದು ಭಾವಿಸುತ್ತಿದ್ದನು. ಏಕೆಂದರೆ ಅಹಂಕಾರವು ಪ್ರಶ್ನೆಗಳನ್ನು ಕೇಳಿಕೊಳ್ಳಲಾರದು. ಯಾರು ತಮ್ಮನ್ನು ತಾವು ಯಾವಾಗಲೂ ಸರಿ ಎಂದು ಭಾವಿಸುತ್ತಾರೋ, ಅವರ ಅಂತ್ಯವು ಹೆಚ್ಚಾಗಿ ಒಂಟಿಯಾಗಿರುತ್ತದೆ' ಎಂದಿದ್ದಾರೆ.
ಹೌದು, ಆಚಾರ್ಯ ಚಾಣಕ್ಯರ ಮಾತಿನಲ್ಲಿ ಬಹಳಷ್ಟು ಅರ್ಥವಿದೆ. ಹಸ್ತಿನಾಪುರದ ರಾಜ, ಕೌರವೇಶ್ವರ ದುರ್ಯೋಧನನು ಅಂಹಕಾರದಿಂದ ಮೆರೆಯುತ್ತಿದ್ದ. ಅವನ ಜೀವನದಲ್ಲಿ ಎಲ್ಲ ತಪ್ಪುಗಳೂ ಕೂಡ ಕೇವಲ ಅಹಂಕಾರದ ಮದದಿಂದಲೇ ನಡೆದುಹೋದವು ಎನ್ನಬಹುದು. ತನ್ನನ್ನು ಬಿಟ್ಟರೆ ಇನ್ನೊಬ್ಬರಿಲ್ಲ ಎನ್ನುವ ಅಹಂಕಾರದಿಂದ ದುರ್ಯೋಧನ ತನ್ನ ಸರ್ವಸ್ವವನ್ನೂ ಕಳೆದುಕೊಂಡ. ಬಹುಶಃ ದುರ್ಯೊಧನನು ಅಹಂಕಾರವನ್ನು ಬಿಟ್ಟಿದ್ದರೆ ಸುಯೋಧನನೇ ಆಗಿ ಇರುತ್ತಿದ್ದನೋ ಏನೋ.
ಈಗ ಮಾಡೋದೇನೂ ಇಲ್ಲ. ಏಕೆಂದರೆ, ಮಹಾಭಾರತದ ಕಾಲ ಯಾವತ್ತೋ ಮುಗಿದಿದೆ. ಆ ಇತಿಹಾಸವನ್ನು ಮತ್ತೆ ತಿದ್ದಿ ಬರೆಯಲು ಸಾಧ್ಯವಿಲ್ಲ. ಆದರೆ, ಅಹಂಕಾರ ಇದ್ದರೆ ಎಲ್ಲವೂ ಮಣ್ಣುಪಾಲು, 'ಅಹಂಕಾರ ಮಿತಿಯಲ್ಲಿದ್ದರೆ ಸಕಲವೂ ನಮ್ಮ ಪಾಲು' ಎಂಬುದನ್ನು ಎಲ್ಲರೂ ಅರ್ಥಮಾಡಿಕೊಂಡರೆ 'ಜೀವನ ಪಾವನ' ಎನ್ನಬಹುದು. ಏನಂತೀರಿ?
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.