ನಮ್ಮ ಸುತ್ತಲಿರೋರನ್ನು ಸಂತೋಷವಾಗಿಡುವುದು ಹೀಗೆ!

By Suvarna News  |  First Published Dec 15, 2019, 1:17 PM IST

ನಮ್ಮ ಸುತ್ತಲಿರುವವರು ನಮ್ಮ ಕಾರಣದಿಂದಾಗಿ ಸಂತೋಷವಾಗಿದ್ದಾರೆ ಎಂದರೆ ಅದರಿಂದ ನಮ್ಮ ಸಂತೋಷ ದುಪ್ಪಟ್ಟು ಜಾಸ್ತಿಯಾಗುತ್ತದೆ. ಹಾಗಾಗಿಯೇ ನಮಗೆ ಸಂತೋಷ ಹರಡುವ ಶಕ್ತಿಯಿದೆ ಎಂಬುದನ್ನು ಯಾವಾಗಲೂ ಮನಸ್ಸಿನಲ್ಲಿಟ್ಟುಕೊಳ್ಳಬೇಕು. 


ಪ್ರತಿಯೊಬ್ಬ ವ್ಯಕ್ತಿ ಕೂಡಾ ಬದುಕಿನಲ್ಲಿ ನಿರಂತರ ಸಂತೋಷದ ಹುಡುಕಾಟದಲ್ಲಿರುತ್ತಾನೆ. ತಾನು ಮಾಡುವ, ಮಾಡದ ಪ್ರತಿಯೊಂದು ಕ್ರಿಯೆ, ಪ್ರತಿಕ್ರಿಯೆಗಳಲ್ಲೂ ಆತ ಸಂತೋಷವನ್ನರಸುತ್ತಾನೆ. ತೃಪ್ತಿ, ನೆಮ್ಮದಿ, ಗೆಲುವು, ಗಳಿಕೆ, ಸಂತೋಷ ಎಲ್ಲವೂ ಒಂದಕ್ಕೊಂದು ಬೆಸೆದುಕೊಂಡಂಥವು. 

ಆದರೂ ಈ ಸಂತೋಷ ಎಂಬುದು ಬಹಳ ಟ್ರಿಕ್ಕಿ. ಅದನ್ನರ್ಥ ಮಾಡಿಕೊಳ್ಳುವುದು ಸುಲಭವಲ್ಲ. ನಾವೇನೋ ದೊಡ್ಡದರ ಹುಡುಕಾಟದಲ್ಲಿರುತ್ತೇವೆ. ಆ ದೊಡ್ಡದು ನಮಗೆ ಸಿಕ್ಕರೆ ಈ ಜಗತ್ತಿನಲ್ಲೇ ನಮ್ಮಷ್ಟು ಸಂತೋಷದಿಂದಿರುವ ಮತ್ತೊಬ್ಬ ವ್ಯಕ್ತಿ ಇರುವುದಿಲ್ಲ ಎಂದುಕೊಳ್ಳುತ್ತೇವೆ. ಆದರೆ ಹಲವು ಬಾರಿ ಅದು ಸಿಕ್ಕಾಗ ಆಗುವುದಕ್ಕಿಂತ ಹೆಚ್ಚು ಖುಷಿ ಸಣ್ಣ ಪುಟ್ಟ ವಿಷಯಗಳಲ್ಲಿ ಸಿಗುತ್ತದೆ. ನಮ್ಮ ಪ್ರೀತಿಪಾತ್ರರಲ್ಲಿ ಯಾರೊಬ್ಬರು ದುಃಖದಲ್ಲಿದ್ದರೂ ನಮ್ಮ ಸಂತೋಷ ಕಡಿಮೆಯಾಗುತ್ತದೆ. ಅದೇ ಅವೆರೆಲ್ಲ ಖುಷಿಯಾಗಿದ್ದರೆ ಖಂಡಿತಾ ಸಂತೋಷ ಹೆಚ್ಚುತ್ತದೆ. ಅದೂ ಅವರು ನಮ್ಮ ಕಾರಣದಿಂದಾಗಿ ಸಂತೋಷವಾಗಿದ್ದರೆ ನಾವು ಬಹಳಷ್ಟು ಖುಷಿಯಾಗಿರಬಹುದು. ಹಾಗಾದರೆ ನಮ್ಮ ಸುತ್ತಲಿರುವವರನ್ನು ಸಂತೋಷವಾಗಿಡುವುದು ಹೇಗೆ ಎಂದು ನೋಡೋಣ...

Tap to resize

Latest Videos

ಅಮ್ಮನ ಪಾಸಿಟಿವ್ ಯೋಚನೆಯಿಂದ ಮಗುವಿನ ಹೃದಯ ಸಮಸ್ಯೆ ದೂರವಾಯ್ತು!

ಇತರರನ್ನು ಹೊಗಳುವುದು

ಕೆಲವೊಂದು ಬಾರಿ ನಮ್ಮ ಭಾವನೆಗಳನ್ನು ವ್ಯಕ್ತಪಡಿಸುವುದು ಬಹಳ ಒಳ್ಳೆಯದು. ಇತರರನ್ನು ಹೊಗಳುವುದರಿಂದ ಅವರಲ್ಲಿ ಒಂದು ಪಾಸಿಟಿವ್ ಫೀಲಿಂಗ್ ಹುಟ್ಟು ಹಾಕಿದಂತಾಗುತ್ತದೆ. ಹಾಗಂಥ ಸುಖಾಸುಮ್ಮನೆ ಹೊಗಳಿ ಎಂದಲ್ಲ. ಇತರರ ಒಳ್ಳೆಯತನ, ಅವರು ಮಾಡಿದ ಒಳ್ಳೆಯ ಕೆಲಸಕ್ಕೊಂದು ಮೆಚ್ಚುಗೆ, ಅವರು ತೋರಿದ ಪ್ರೀತಿಗೆ ಸಂತೋಷ ವ್ಯಕ್ತಪಡಿಸುವುದು ದೊಡ್ಡ ಗುಣ. ಹೊಗಳಿಕೆ ಅರ್ಥಪೂರ್ಣ ಹಾಗೂ ಪ್ರಾಮಾಣಿಕತೆಯಿಂದ ಕೂಡಿದ್ದಾಗ ಅದಕ್ಕೊಂದು ಅರ್ಥ ಬರುತ್ತದೆ. 

ಭಾವನಾತ್ಮಕ ಬೆಂಬಲ

ತಮ್ಮ ಯಶಸ್ಸನ್ನು, ಸಂತೋಷವನ್ನು ಬಯಸುವವರನ್ನು ಕಂಡರೆ ಯಾರಿಗೆ ತಾನೇ ಇಷ್ಟವಾಗುವುದಿಲ್ಲ? ಯಾವಾಗಲೂ ನಿಮ್ಮ ಗೆಳೆಯರು ಹಾಗೂ ಸುತ್ತಲಿರುವವರಿಗೆ ಅವರ ಕನಸುಗಳನ್ನು ಫಾಲೋ ಮಾಡುವಂತೆ ಹುರಿದುಂಬಿಸಿ. ಅವರಲ್ಲಿಆ ಸಾಮರ್ಥ್ಯವಿದೆ ಎಂಬುದನ್ನು ಮನದಟ್ಟು ಮಾಡಿಸಿ. ಭಾವನಾತ್ಮಕ ಬೆಂಬಲ ನೀಡಲು ನೀವು ಹಣ ಖರ್ಚು ಮಾಡಬೇಕಿಲ್ಲ. ನಿಮ್ಮ ಈ ನಡೆ ಅವರನ್ನು ಬಹು ದೂರ ಕೊಂಡೊಯ್ಯಬಲ್ಲದು.

ಬರೀ ನಕಾರಾತ್ಮಕ ಯೋಚನೆಗಳೇ ಬರುತ್ತಾ? ಅವುಗಳನ್ನು ದೂರ ಇಡೋಕೆ ಹೀಗ್ ಮಾಡಿ

ಇನ್ನೊಬ್ಬರನ್ನು ನಗಿಸಿ

ಮತ್ತೊಬ್ಬರನ್ನು ನಗಿಸುವುದು ಒಂದು ಕಲೆ. ಎಲ್ಲರಿಗೂ ಬರುವಂಥದಲ್ಲ. ಅಂಥ ಕಲೆಯನ್ನು ನೀವು ಸಿದ್ದಿಸಿಕೊಂಡಿದ್ದೇ ಆದರೆ, ಅವರು ನಿಮ್ಮನ್ನು ಖಂಡಿತಾ ಮರೆಯುವುದಿಲ್ಲ. ಇನ್ನೊಬ್ಬರನ್ನು ನಗಿಸುವ ಮೂಲಕ ಅವರ ಸ್ಟ್ರೆಸ್ ದೂರ ಮಾಡಬಹುದು. ಮತ್ತೊಬ್ಬರ ಮೂಡನ್ನು ತಿಳಿಗೊಳಿಸಿ ಅವರ ನಗುವಿಗೆ ಕಾರಣರಾಗಿ. 

ಯೋಚಿಸಿ

ನೀವು ಇನ್ನೊಬ್ಬರೊಂದಿಗಿರುವಾಗ ಅವರ ಅಗತ್ಯಗಳೇನು ಎಂಬುದನ್ನು ಯೋಚಿಸಿ. ಆ ಬಗ್ಗೆ ಅವರಿಗೆ ಆದಷ್ಟು ಸಹಾಯ ಮಾಡಿ. ಇನ್ಯಾರಾದರೂ ದುಃಖಿತರಾಗಿದ್ದಾರೆ, ಬೇಜಾರಿನಲ್ಲಿದ್ದಾರೆ ಎಂದರೆ ಆ ಕ್ಷಣಕ್ಕೆ ಅವರೊಂದಿಗಿದ್ದು ಸಮಾಧಾನ ಮಾಡಲು ಪ್ರಯತ್ನಿಸಿ.

ಖುಷಿಖುಷಿಯಾಗಿರಿ

ಇನ್ನೊಬ್ಬರನ್ನು ಖುಷಿಯಾಗಿಡಬೇಕೆಂದರೆ ಮೊದಲು ಆ ಖುಷಿ ನಿಮ್ಮಲ್ಲಿರಬೇಕು. ಹಾಗಾಗಿ ನೀವು ಪೂರ್ತಿ ಪಾಸಿಟಿವ್ ವೈಬ್ಸ್‌ನಲ್ಲಿರುವಂತೆ ನೋಡಿಕೊಳ್ಳಿ. ಪಾಸಿಟಿವ್ ವ್ಯಕ್ತಿಯ ಪಾಸಿಟಿವ್ ಯೋಚನೆಗಳು ಇತರರಿಗೂ ಹಬ್ಬಿ ಅವರನ್ನು ಖುಷಿಯಾಗಿಡುತ್ತವೆ. 

ಪಾಸಿಟಿವ್ ಆಗಿ ಮಾತಾಡಿ

ಎಂಥದೇ ಸಂದರ್ಭದಲ್ಲೂ ಮತ್ತೊಬ್ಬರ ಬಗ್ಗೆ ಪಾಸಿಟಿವ್ ಆಗಿ ಮಾತನಾಡುವುದು, ಯಾರ ಬಗ್ಗೆ ಕೆಟ್ಟದಾಗಿ ಮಾತನಾಡದಿರುವುದು, ಇನ್ನೊಬ್ಬರು ಕೀಳರಿಮೆಯಿಂದ ಬಳಲುವಾಗ ಅವರ ಶಕ್ತಿಗಳನ್ನು ಅವರಿಗೆ ಅರಿವು ಮಾಡಿಸುವುದು, ಎಲ್ಲರಿಗೂ ಅವರ ಅಸ್ಥಿತ್ವ ಬಹಳ ಮುಖ್ಯವೆನಿಸುವಂತೆ ಮಾಡುವುದು ಮುಂತಾದ ಗುಣಗಳು ಎಲ್ಲರಿಗೂ ಖುಷಿ ನೀಡುತ್ತವೆ. 

ಕೇಳುವುದು

ತಮ್ಮ ಮಾತುಗಳನ್ನು ಕೇಳುವವರಿದ್ದಾರೆ, ಮನಸ್ಸಿನ ಭಾವನೆಗಳನ್ನು ಕೇಳಿಸಿಕೊಳ್ಳುವವರಿದ್ದಾರೆ ಎಂಬುದು ಎಲ್ಲರಿಗೂ ಸಂತೋಷ ಕೊಡುತ್ತದೆ. ಹಾಗಾಗಿ, ಇನ್ನೊಬ್ಬರು ಏನಾದರೂ ಹೇಳಿಕೊಳ್ಳುವಾಗ ಗಮನವಿಟ್ಟು ಕೇಳಿ. ಕೆಲವೊಮ್ಮೆ ಕೆಲವರ ದುಃಖ, ಬೇಜಾರುಗಳನ್ನು ಕೇವಲ ಕೇಳುವುದರಿಂದಲೇ ಅವರ ಮನಸ್ಸಿಗೆ ನೆಮ್ಮದಿ ಸಿಗುತ್ತದೆ. 

ಪ್ಲ್ಯಾನರ್ ಆಗಿ

ಒಳ್ಳೆಯದೊಂದು ಕಡೆ ಟ್ರಿಪ್ ಪ್ಲ್ಯಾನ್ ಮಾಡಿ ಸ್ನೇಹಿತರನ್ನು ಕರೆದುಕೊಂಡು ಹೋಗುವುದು, ಸಿನಿಮಾ, ನಾಟಕ, ಸಂಗೀತ ಕಾರ್ಯಕ್ರಮಗಳಿಗೆ ಎಲ್ಲರನ್ನೂ ಹುರಿದುಂಬಿಸಿ ಕರೆದುಕೊಂಡು ಹೋಗುವುದು, ಒಳ್ಳೆಯ ಹೋಟೆಲ್‌ನಲ್ಲಂದು ಗೆಟ್ ಟುಗೆದರ್ ಪ್ಲ್ಯಾನ್ ಮಾಡುವುದು- ಇವೆಲ್ಲವೂ ಎಲ್ಲರನ್ನೂ ಹತ್ತಿರವಾಗಿಸುತ್ತದಲ್ಲದೆ ನಿಮ್ಮ ಪ್ಲ್ಯಾನಿಂಗ್ ಸಾಮರ್ಥ್ಯ ಹೆಚ್ಚಿಸುತ್ತದೆ. ಇದೆಲ್ಲಕ್ಕಾಗಿ ನೀವು ಖರ್ಚು ಮಾಡಬೇಕಿಲ್ಲ. ಮಾಡಬೇಕಿರುವುದು ಪ್ಲ್ಯಾನ್ ಅಷ್ಟೇ. ಎಲ್ಲರನ್ನೂ ಒಗ್ಗೂಡಿಸಬೇಕಷ್ಟೇ. 

click me!