ಸಾಮಾಜಿಕ ಜಾಲತಾಣಗಳ ಕಾಲವಾಗಿರುವ ಇಂದಿನ ದಿನಗಳಲ್ಲಿ ಪತಿ-ಪತ್ನಿ, ಡೇಟಿಂಗ್‌ನಲ್ಲಿರುವ ಗೆಳೆಯ-ಗೆಳತಿಗೆ ತಮ್ಮ ಸಂಬಂಧವನ್ನು ದೀರ್ಘಕಾಲ ಗಟ್ಟಿಯಾಗಿ ಕಾಯ್ದುಕೊಳ್ಳುವುದು ಅಷ್ಟುಸುಲಭವಲ್ಲ. ಸೆಕ್ಸ್, ರೊಮ್ಯಾನ್ಸ್ ಮಾತ್ರ ನಿಮ್ಮ ಸಂಬಂಧ ಗಟ್ಟಿಯಾಗಿ ಹಿಡಿದಿಟ್ಟುಕೊಳ್ಳುತ್ತೆ ಅನ್ನುವುದು ಮೂರ್ಖತನ. ಅದೊಂದು ಮಾರ್ಗ ಅಷ್ಟೇ.
- ಮಂಜು ಮಳಗುಳಿ
ನಿಮ್ಮ ಸಂಬಂಧಕ್ಕೆ ನೀವೇ ಹುಳಿ ಹಿಂಡಿಕೊಳ್ಳುವ ಘಟನೆಗಳು ಆಗಾಗ ಎದುರಾಗುತ್ತಲೇ ಇರುತ್ತವೆ. ಹೀಗಾಗಿ ಇಂತಹ ದುರಂತಗಳನ್ನೇಲ್ಲ ಮೀರಿ ಪರಸ್ಪರ ಸಂಬಂಧವನ್ನು ಉತ್ತಮವಾಗಿ ಇಟ್ಟುಕೊಳ್ಳಬೇಕು ಅಂದರೆ ಕೆಲವು ನಿಯಮಗಳನ್ನು ಪಾಲಿಸಲೇಬೇಕು. ಅಂತಹ ಏಳು ನಿಯಮಗಳನ್ನು ಇಲ್ಲಿ ನೀಡಲಾಗಿದ್ದು, ಅವುಗಳನ್ನು ಪಾಲಿಸಿದರೆ, ನಿಮ್ಮ ಸಂಬಂಧವೂ ಗಟ್ಟಿ, ಜೀವನವೂ ಸುಖಮಯ!
undefined
1. ಸಂಗಾತಿ ಇಷ್ಟಪಡುವ ವಸ್ತು ಪ್ರಶಂಸಿಸಿ
ನಿಮ್ಮ ಪತಿ/ಪತ್ನಿ ಅಥವಾ ಪ್ರಿಯತಮೆ/ಪ್ರಿಯತಮ ಯಾವ ವಸ್ತುವನ್ನು ಇಷ್ಟಪಡುತಾರೋ ಅವುಗಳ ಬಗ್ಗೆ ಪರಸ್ಪರ ಪ್ರಶಂಸೆ ವ್ಯಕ್ತಪಡಿಸುವ ಗುಣ ಬೆಳೆಸಿಕೊಳ್ಳಿ. ಒಮ್ಮೆ ನಿಮ್ಮ ಪತ್ನಿ ಕೆಂಪು ಬಣ್ಣದ ಸ್ಯಾರಿಯನ್ನು ಇಷ್ಟುಪಟ್ಟು ತೆಗೆದುಕೊಂಡಿದ್ದಾಳೆ ಎಂದರೆ, ಅದಕ್ಕೆ ನೀವು ಒಂದೆರಡು ರೊಮ್ಯಾಂಟಿಕ್ ಪದಗಳಿಂದ ವರ್ಣನೆ ಮಾಡಿ, ಹಾಗೆ ಮಾಡುವುದರಿಂದ ನೀವು ಕಳೆದುಕೊಳ್ಳುವುದು ಏನೂ ಇಲ್ಲ. ಒಮ್ಮೆ ಅವರಿಗೆ ಆ ಸ್ಯಾರಿ ಮ್ಯಾಚ್ ಆಗದಿದ್ದರೇ ನಯವಾಗಿ, ಅವರಿಗೆ ಬೇಸರವಾಗದ ರೀತಿಯಲ್ಲಿ ಹೇಳುವುದನ್ನು ರೂಢಿಸಿಕೊಳ್ಳಿ. ತುಂಬಾ ಕೆಟ್ಟದಾಗಿ ಅವರಿಗೆ ಅವಮಾನವಾಗುವ ರೀತಿಯಲ್ಲಿ ಮಾತನಾಡಲು ಹೋಗಲೇ ಬೇಡಿ.
ಪ್ರೀತಿ ಮಾತಲ್ಲೇ ಖೆಡ್ಡಾಕ್ಕೆ ಕೆಡವೋ ಲವ್ ಬಾಂಬಿಂಗ್, ಏನಿದು?
2. ಸ್ಪರ್ಶದಲ್ಲಿ ಮ್ಯಾಜಿಕ್ ಇದೆ
ಸಂಬಂಧ ಗಟ್ಟಿಮಾಡಿಕೊಳ್ಳಲು ಇದೊಂದು ಮಹತ್ವದ ಅಂಶ. ನೀವಿಬ್ಬರೇ ಇದ್ದಾಗ ಸಂಗಾತಿಯ ಮೂಡ್ ನೋಡಿಕೊಂಡು ಆಗಾಗ ಸ್ಪರ್ಶಿಸುತ್ತಾ ಇರಿ. ಇದರಿಂದ ಇಬ್ಬರ ಮನಸ್ಸಿನಲ್ಲಿಯೂ ಉಲ್ಲಾಸ ಮೂಡುತ್ತದೆ. ಇದಕ್ಕೆ ಸಮಯ ಸಂದರ್ಭವೂ ಮುಖ್ಯ. ಯಾರಾದರೂ ಇದ್ದಾಗ ಪತ್ನಿಯನ್ನು ಸ್ಪರ್ಶಿಸಲು ಹೋದರೆ ಆಕೆ ಮುನಿಸಿಕೊಳ್ಳುವ ಸಾಧ್ಯತೆ ಇರುತ್ತೆ ಹುಷಾರು! ನೀವು ಕಾಮನ್‌ಸೆನ್ಸ್ ಇಲ್ಲದವರು ಎನ್ನುವುದು ಪಕ್ಕಾ ಆಗಿ ಬಿಡುತ್ತದೆ. ಕೆಲವು ಪನ್ನಿ ಸಂದರ್ಭಗಳನ್ನು ನೋಡಿಕೊಂಡು ಕೀಟಲೆ ಮಾಡುತ್ತಾ ಇರಿ. ಸದಾ ನಿಮ್ಮ ಮುಖದಲ್ಲಿ ಮುಗುಳು ನಗೆ ಹೊರಬರುತ್ತಾ ಇರಲಿ. ಇದಕ್ಕೂ ಮುನ್ನ ಮೊದಲು ನೀವು ಗಂಟುಮುಖ ಹಾಕಿಕೊಳ್ಳುವುದನ್ನು ಇಂದೇ ಕೊನೆಗಾಣಿಸಿಬಿಡಿ.
3. ಎಲ್ಲಾ ತಪ್ಪಿಗೂ ದೂಷಿಸುವುದನ್ನು ನಿಲ್ಲಿಸಿ
ಕೋಪ, ಹತಾಶೆ, ಬೇಸರ, ಒತ್ತಡ ಇರುವಂತಹ ಸಂದರ್ಭದಲ್ಲಿ ಸಂಗಾತಿಯನ್ನು ದೂಷಿಸುವ ಚಟ ಬಹಳಷ್ಟುಜನರಲ್ಲಿ ಇದೆ. ಇದು ನಿಮ್ಮ ಸಂಬಂಧದಲ್ಲಿ ಹುಳಿಹಿಂಡಿ ನೆಮ್ಮದಿಯನ್ನೇ ಬ್ಲಾಸ್ಟ್ ಮಾಡಿಬಿಡುತ್ತೆ. ಹೀಗಾಗಿ ಎಷ್ಟೇ ಒತ್ತಡ, ನಿರಾಸೆ, ಬೇಸರ ಇದ್ದರೂ ಸಂಗಾತಿಯನ್ನು ದೂಷಿಸಲು ಹೋಗಬೇಡಿ. ಅಂತಹ ಸಂದರ್ಭದಲ್ಲಿ ನಾನು ಸ್ವಲ್ಪ ಒತ್ತಡದಲ್ಲಿದ್ದೇನೆ ಸ್ವಲ್ಪ ಸಮಯ ಏಕಾಂಗಿಯಾಗಿ ಇರುತ್ತೇನೆ ಎಂದು ಹೇಳಿ. ಅದು ಬಿಟ್ಟು ಚಿಕ್ಕಪುಟ್ಟದ್ದಕ್ಕೆಲ್ಲ ರೇಗಾಡುವುದು ಸಮಂಜಸವಲ್ಲ. ಸಂಗಾತಿಯೂ ಅಷ್ಟೇ ಪತಿಯ ಮೂಡ್ ಅನ್ನು ಗುರುತಿಸುವ ಕಲೆಯನ್ನು ಕರಗತ ಮಾಡಿಕೊಳ್ಳಬೇಕು.
ಮುನಿಸಿಕೊಂಡ ಯಜಮಾನ್ರ ಮನಸ್ಸು ಗೆಲ್ಲೋದು ಹೇಗೆ?
4. ವಿಶ್ರಾಂತಿಯಿಂದ ಸಂಬಂಧ ಸುಧಾರಣೆ
ಬೆಳಗ್ಗೆ ಎದ್ದ ತಕ್ಷಣ ಸ್ವಲ್ಪ ಸಮಯ ಯೋಗ, ಧ್ಯಾನ, ಜಿಮ್ ಅಥವಾ ವಾಕಿಂಗ್ ಹೋಗುವುದನ್ನು ರೂಢಿಸಿಕೊಳ್ಳಿ. ಇದು ನಿಮ್ಮ ಮನಸ್ಸಿಗೆ ಆನಂದವನ್ನು ನೀಡುತ್ತದೆ. ದಿನದ ಆರಂಭವನ್ನು ನೀವು ಖುಷಿ ಖುಷಿಯಾಗಿ ಆರಂಭಿಸಿದರೆ ಮುಂದಿನ ಕೆಲಸ ಮಾಡಲು ಅನುಕೂಲವಾಗುತ್ತೆ. ಇದರಿಂದ ನಿಮ್ಮ ದೇಹಕ್ಕೆ ವಿಶ್ರಾಂತಿ ಸಿಗುತ್ತದೆ. ಒತ್ತಡದಿಂದ ಮುಕ್ತಿಗೆ ಅಗತ್ಯ ಇರುವಾಗ ಕೆಲಸಕ್ಕೆ ರಜೆ ಹಾಕಿ ಸಂಗಾತಿ ಜೊತೆ ಕಾಲಕಳೆಯಿರಿ. ಇದರಿಂದ ನಿಮ್ಮ ಸಂಗಾತಿಯೂ ಖುಷಿಗೊಳ್ಳುತ್ತಾಳೆ. ಇದೆಲ್ಲದ್ದಕೂ ಮುಖ್ಯವಾಗಿ ಮನಸ್ಸನ್ನು ಶುದ್ಧೀಕರಿಸಿಕೊಳ್ಳಿ. ಒಳ್ಳೆಯ ಯೂಚನೆಯನ್ನು ರೂಢಿಸಿಕೊಳ್ಳಿ.
5. ಆರೋಗ್ಯಕರ ಫೈಟಿಂಗ್ ಇರಲಿ
ಜೋಡಿಗಳ ನಡುವೆ ಸಂಘರ್ಷ ಸಹಜವಾದದ್ದು. ಆದರೆ, ಅದನ್ನು ನೀವು ಯಾವ ರೀತಿ ನಿಭಾಯಿಸುತ್ತೀರಿ ಎನ್ನುವುದರ ಮೇಲೆ ನಿಮ್ಮ ಜೋಡಿಯ ಆಯಸ್ಸು ನಿಂತಿದೆ. ಆಗಾಗ ಎದುರಾಗುವ ಸಂಘರ್ಷಗಳು ನಿಮ್ಮ ಸಂಬಂಧವನ್ನು ಇನ್ನಷ್ಟುಗಟ್ಟಿಗೊಳಿಸುತ್ತವೆ. ಇದು ಕೆಲವು ಅಂತಾರಾಷ್ಟ್ರೀಯ ಸಂಸ್ಥೆಗಳು ನಡೆಸಿದ ಸಂಶೋಧನೆಯಲ್ಲಿಯೂ ಋುಜುವಾಗಿದೆ. ಆದರೆ, ಅದು ಅತಿರೇಕಕ್ಕೆ ಹೋಗದಂತೆ ನೋಡಿಕೊಳ್ಳಬೇಕು. ಸಂಘರ್ಷದ ನಂತರ ತಪ್ಪಿನ ಅರಿವಾದಾಗ ಸಂಗಾತಿ ಜೊತೆ ಕ್ಷಮೆ ಕೇಳಿ. ಅದರಿಂದ ನೀವು ಕಳೆದುಕೊಳ್ಳುವುದು ಏನೂ ಇಲ್ಲ. ಕೆಟ್ಟಪದಗಳು, ಹೀಯಾಳಿಸುವ ಪದಗಳು ಕಿತ್ತಾಟದ ಸಂದರ್ಭದಲ್ಲಿ ಬರದಿರಲಿ.
6. ಸಮಯ ನೋಡಿ ಗಂಭೀರ ವಿಷಯ ಮಾತಾಡಿ
ಆಯಾಸ, ಹಸಿವು ಆಗಿರುವಾಗ ಕೆಲವೊಂದು ಗಂಭೀರ ಸಮಸ್ಯೆಗಳನ್ನು ಸಂಗಾತಿ ಅಥವಾ ಗೆಳತಿ ಜೊತೆ ಚರ್ಚಿಸಲು ಹೋಗಲೇ ಬೇಡಿ. ಯಾಕೆಂದರೆ ಆ ಸಂದರ್ಭದಲ್ಲಿ ಮಾತಿಗೆ ಮಾತು ಬೆಳೆದು ವಾದಗಳು ವಿಕೋಪಕ್ಕೆ ಹೋಗುವ ಸಾಧ್ಯತೆ ಹೆಚ್ಚು. ಹಸಿವು, ಆಯಾಸ ನಿಮ್ಮ ಸಿಟ್ಟನ್ನು ಹೆಚ್ಚಿಸುತ್ತದೆ. ಆದರಲ್ಲೂ ಕೌಟುಂಬಿಕ ಭಿನ್ನಾಭಿಪ್ರಾಯಗಳನ್ನು ಪ್ರಸ್ತಾಪಿಸಲು ಸೂಕ್ತ ಸಮಯವೇ ಅಲ್ಲ. ಸಮಯ ಸಂದರ್ಭ ನೋಡಿಕೊಂಡು ಪ್ರಸ್ತಾಪಮಾಡಿ ಆ ಸಂದರ್ಭದಲ್ಲಿ ಟೀವಿ ಆಫ್ ಮಾಡಿ, ಮೊಬೈಲ್, ಲ್ಯಾಪ್‌ಟಾಪ್ ಬದಿಗಿಡಿ. ತಾಳ್ಮೆ ಕಳೆದುಕೊಳ್ಳದೇ ವಿಷಯವನ್ನು ಚರ್ಚಿಸಿ. ಎಲ್ಲದ್ದಕ್ಕೂ ಪತ್ನಿಯನ್ನೇ ದೂರುವ ಅಭ್ಯಾಸ ಇಟ್ಟುಕೊಳ್ಳಬೇಡಿ.
7. ಕಡಿಮೆ ಮಾತಾಡಿ, ಹೆಚ್ಚು ಆಲಿಸಿ
ಸಂಬಂಧವನ್ನು ಗಟ್ಟಿಮಾಡಿಕೊಳ್ಳಲು ಇರುವ ಶಕ್ತಿಶಾಲಿ ಹೆಜ್ಜೆ ಎಂದರೆ ಕಡಿಮೆ ಮಾತನಾಡುವುದು, ಹೆಚ್ಚು ಆಲಿಸುವುದು. ಸಂಗಾತಿ ಮಾತನಾಡುವಾಗ ನೀವು ಸಂಪೂರ್ಣವಾಗಿ ಆಲಿಸಬೇಕು. ಸಂಗಾತಿಯ ಸಮಸ್ಯೆಗೆ ಪರಿಹಾರ ನೀಡಿ. ಒಮ್ಮೆ ಪರಿಹಾರ ಸಾಧ್ಯವಾಗದಿದ್ದರೇ ಧೈರ್ಯ ತುಂಬುವ ಮಾತನಾಡಿ. ಅವರ ಭಾವನೆಗಳನ್ನು ಗೌರವಿಸುವಾಗ ಮೃದುವಾಗಿ ಸಂಭಾಷಣೆ ನಡೆಸಿ. ಒಟ್ಟಿನಲ್ಲಿ ಚರ್ಚೆಗೆ ಒಂದು ಸುಂದರ ಅಂತ್ಯ ಕಾಣಿಸಿ. ಯಾವುದೇ ಕಾರಣಕ್ಕೂ ಅರ್ಧ ಆಲಿಸುವುದು, ವಿಷಯವನ್ನು ಬದಲಿಸಲು ಹೋಗಬೇಡಿ. ಇದು ನಿಮ್ಮಿಬ್ಬರ ನಡುವಿನ ಸಂಬಂಧವನ್ನು ಹಾಳುಮಾಡುತ್ತದೆ. ಬಹುಪಾಲು ಅಧ್ಯಯನಗಳಲ್ಲಿ ಕಂಡುಬಂದ ಸತ್ಯ ಇದು.