
ಜಾತಿ, ಧರ್ಮ, ಭಾಷೆ ಎಲ್ಲವನ್ನೂ ಮೀರಿದ ಆಡಂಬರ ರಹಿತ ವಿಶ್ವಮಾನವ ವಿವಾಹ ಪದ್ಧತಿ ಎಂದರೆ ಅದು ಕುವೆಂಪು ಮಂತ್ರ ಮಾಂಗಲ್ಯ. ರಾಷ್ಟ್ರಕವಿ ಕುವೆಂಪು ರೂಪಿಸಿದ ಈ ಸರಳ ವಿವಾಹದ ಮೊಟ್ಟ ಮೊದಲ ಮದುವೆಗೆ ಸಾಕ್ಷಿಯಾಗಿ ಇಂದು ಅರ್ಥಾತ್ ನವೆಂಬರ್ 27 ಬರೋಬ್ಬರಿ 60 ವರ್ಷ ತುಂಬಿದೆ. ನವೆಂಬರ್ 27, 1966 ರಂದು ಕುವೆಂಪು ಮತ್ತು ಹೇಮಾವತಿ ಅವರ ಪುತ್ರ ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಮತ್ತು ರಾಜೇಶ್ವರಿ ಅವರ ನಡುವೆ ಕುವೆಂಪು ಮಂತ್ರ ಮಾಂಗಲ್ಯ ಮೊಟ್ಟ ಮೊದಲನೆಯದ್ದಾಗಿದೆ. ಸರಳ, ವೈಚಾರಿಕ ಮತ್ತು ಸಮಾನತೆಯ ವಿವಾಹ ಪದ್ಧತಿ ಎನ್ನುವ ಕಲ್ಪನೆಯಿಂದ ಹುಟ್ಟಿದ್ದು ಈ ಮಂತ್ರ ಮಾಂಗಲ್ಯ. ಆಡಂಬರ, ಜಾತಿ-ಧರ್ಮದ ಕಟ್ಟುಪಾಡುಗಳು ಮತ್ತು ಮೂಢನಂಬಿಕೆಗಳನ್ನು ಬಿಟ್ಟು, ಪ್ರೀತಿ ಮತ್ತು ಗೌರವದ ಆಧಾರದ ಮೇಲೆ ದಾಂಪತ್ಯ ಜೀವನ ನಡೆಸುವುದು ಇದರ ಮೂಲ ಆಶಯವಾಗಿದೆ. ಪುರೋಹಿತರು, ಜಾತಕ, ಮುಹೂರ್ತ, ಉಡುಗೊರೆ ಮತ್ತು ವಾದ್ಯಗಳ ಆಡಂಬರ ಇಲ್ಲದ ಮದುವೆ ಇದಾಗಿದೆ.
ಆದರೆ, ಇದಾದ ಬಳಿಕ ಎಷ್ಟೋ ಜೋಡಿ ಮಂತ್ರ ಮಾಂಗಲ್ಯದ ಮೂಲಕ ಮದುವೆಯಾಗಿದ್ದು ಇದೆ. ಇಂದಿಗೂ ಸರಳವಾಗಿ ಇದೇ ಪದ್ಧತಿ ಅಡಿಯಲ್ಲಿ ಮದುವೆಯನ್ನೂ ಆಗುತ್ತಿದ್ದಾರೆ. ಆದರೆ, ವಿಡಂಬನೆ ಎಂದರೆ, ಕೆಲವರು ಪ್ರಚಾರಕ್ಕಾಗಿ ಮಂತ್ರ ಮಾಂಗಲ್ಯ ಪದ್ಧತಿಯಂತೆ ಮದುವೆಯಾಗಿ ಹೇಳಿ, ಕೊನೆಗೆ ಅದ್ಧೂರಿಯಾಗಿ ರಿಸೆಪ್ಷನ್ ಮಾಡಿಕೊಂಡು, ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಬೀಗರೂಟ ಹಾಕುವುದೂ ಇದೆ. ಆದರೆ, ಮಂತ್ರ ಮಾಂಗಲ್ಯದ ಆಶಯ ಅದಲ್ಲ. ಇದು ಸಿಂಪಲ್ ಆಗಿರುವ ಮದುವೆ. ಮಂತ್ರಗಳ ಬದಲು ಪರಸ್ಪರ ಪ್ರೀತಿ, ವಿಶ್ವಾಸ ಮತ್ತು ಸಮಾನತೆಯ ಪ್ರತಿಜ್ಞಾವಿಧಿಗಳನ್ನು ಸ್ವೀಕರಿಸಲಾಗುತ್ತದೆ.
1976 ರಲ್ಲಿ ಅರ್ಥಾತ್ ತಮ್ಮ ಮಗನ ಮದುವೆಯ 10 ವರ್ಷಗಳ ಬಳಿಕ, ಕುವೆಂಪು ಅವರು ವಿವಾಹ ಸಮಾರಂಭದಲ್ಲಿ ಓದಲು 'ವಿವಾಹ ಸಂಹಿತೆ'ಯನ್ನು ರೂಪಿಸಿದರು. ಅಷ್ಟಕ್ಕೂ ಇಂಥದ್ದೊಂದು ಕಲ್ಪನೆ ಬರುವುದಕ್ಕೆ ಇರುವ ಘಟನೆಯೂ ಅಷ್ಟೇ ಕುತೂಹಲವಾಗಿದೆ. ತೇಜಸ್ವಿ ಅವರು ಹುಡುಗಿಯೊಬ್ಬಳನ್ನು ಪ್ರೀತಿಸಿದ್ದರು. ಆಕೆಯ ಜೊತೆ ಮದುವೆಯಾಗುವುದಕ್ಕೆ ಮನೆಯವರ ಒಪ್ಪಿಗೆಯೂ ಇತ್ತು. ಅವರಿಗೆ ಧೂಂ ಧಾಂ ಮದುವೆ ಇಷ್ಟವಿರಲಿಲ್ಲ. ಏಕೆಂದರೆ, ಅವರ ಬದುಕು ಆದರ್ಶಮಯವಾಗಿತ್ತು. ಆದರೆ ಸಿಂಪಲ್ ಆಗಿ ಮದುವೆಯಾಗುವುದು ಹೇಗೆ ಎನ್ನುವ ಯೋಚನೆ ಇತ್ತಂತೆ. ಅಷ್ಟೇ ಅಲ್ಲದೇ, ಕುವೆಂಪು ಕೂಡ ಆಡಂಬರ ಬಯಸಿದವರಲ್ಲ. ಆದ್ದರಿಂದ ಸಾಂಪ್ರದಾಯಿಕವಾಗಿ ಆಗುವ ಮದುವೆಗೆ ಅಪ್ಪ-ಮಗ ಇಬ್ಬರ ವಿರೋಧವೂ ಇತ್ತು.
ಆಗ ತೇಜಸ್ವಿ ಅವರ ನೆರವಿಗೆ ಬಂದದ್ದು ಸ್ನೇಹಿತರಾದ ಎನ್.ಡಿ.ಸುಂದರೇಶ್. ಸಂಪ್ರದಾಯ ರಹಿತ ಮದುವೆಯ ಬಗ್ಗೆ ಅಪ್ಪನ ಬಳಿ ಮಾತನಾಡುವಂತೆ ಸ್ನೇಹಿತನನ್ನು ಕೇಳಿದ್ದರು ತೇಜಸ್ವಿ. ಅದರಂತೆ ಸುಂದರೇಶ್ ಅವರು, ಸರಳ ಮದುವೆಗೆ ಸಿದ್ಧತೆಮಾಡಿಕೊಂಡಿದ್ದರು. ನಂತರ ತೇಜಸ್ವಿ ಮತ್ತು ರಾಜೇಶ್ವರಿ ಅವರ ಮದುವೆಯನ್ನು ಅತ್ಯಂತ ಸರಳವಾಗಿ ಕುವೆಂಪು ಅವರೇ ಮಂತ್ರಗಳನ್ನು ಓದುವುದರ ಮೂಲಕ ಮಾಡಿಸುತ್ತಾರೆ. ಇದು ಮಂತ್ರ ಮಾಂಗಲ್ಯ ಎಂಬ ಸರಳ ಮದುವೆ ಪದ್ಧತಿ ಹುಟ್ಟಿಕೊಂಡ ದಾರಿ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.