5 ಲಕ್ಷ ಗೆಸ್ಟ್‌, 150 ಬಗೆಯ ಖಾದ್ಯ, ಕುದುರೆ ರೇಸ್ ಗೆದ್ದವರಿಗೆ ಮಹೀಂದ್ರಾ ಥಾರ್ ಗಿಫ್ಟ್‌!: ಬಿಹಾರ ಶಾಸಕ ಅನಂತ್ ಸಿಂಗ್ ಮಗಳ ರಾಜವೈಭವದ ಮದುವೆ

Published : Nov 24, 2026, 08:15 AM IST
Bihar MLA Daughter

ಸಾರಾಂಶ

ಬಿಹಾರದ ಶಾಸಕ ಅನಂತ್ ಸಿಂಗ್ ಅವರ ಪುತ್ರಿಯ ವಿವಾಹ ಮಹೋತ್ಸವ ಅತ್ಯಂತ ವೈಭವದಿಂದ ನಡೆಯುತ್ತಿದೆ. ವರನಿಗೆ ₹3 ಕೋಟಿ ಮೌಲ್ಯದ ಲ್ಯಾಂಡ್ ರೋವರ್ ಡಿಫೆಂಡರ್ ಕಾರು, ಕುದುರೆ ರೇಸ್ ವಿಜೇತರಿಗೆ ಮಹೀಂದ್ರಾ ಥಾರ್ ಬಹುಮಾನ ಮತ್ತು 5 ಲಕ್ಷ ಅತಿಥಿಗಳಿಗೆ 150 ಬಗೆಯ ಭಕ್ಷ್ಯಗಳನ್ನು ಸಿದ್ಧಪಡಿಸಲಾಗಿದೆ.

ಪಾಟ್ನಾ (ನ.24): ವರನಿಗೆ ಬರೋಬ್ಬರಿ ₹3 ಕೋಟಿ ಮೌಲ್ಯದ ಲ್ಯಾಂಡ್ ರೋವರ್ ಡಿಫೆಂಡರ್ ಕಾರು ಉಡುಗೊರೆ, ಕುದುರೆ ರೇಸ್ ಗೆದ್ದವರಿಗೆ ಹೊಚ್ಚ ಹೊಸ ಮಹೀಂದ್ರಾ ಥಾರ್ ಬಹುಮಾನ, 5 ಲಕ್ಷ ಅತಿಥಿಗಳಿಗೆ 150 ಬಗೆಯ ಭಕ್ಷ್ಯಭೋಜನ ಹಾಗೂ ಹಗಲು-ರಾತ್ರಿ ಸಿಹಿತಿಂಡಿ ತಯಾರಿಸುತ್ತಿರುವ ನೂರಾರು ಕಾರ್ಮಿಕರು. ಇದು ಬಿಹಾರದ ಶಾಸಕ ಅನಂತ್ ಸಿಂಗ್ ('ಛೋಟೆ ಸರ್ಕಾರ್') ಅವರ ಕಿರಿಯ ಪುತ್ರಿ ಶಿವಾಂಗಿ ಸಿಂಗ್ ಅವರ ರಾಜವೈಭವದ ಮದುವೆಯ ದೃಶ್ಯ. ನವೆಂಬರ್ 25ರಂದು ನಡೆಯಲಿರುವ ಈ ಅದ್ಧೂರಿ ವಿವಾಹ ಮಹೋತ್ಸವದಲ್ಲಿ ಉಡುಗೊರೆಗಳು ಕೇವಲ ವಧು-ವರರಿಗೆ ಮಾತ್ರ ಸೀಮಿತವಾಗಿಲ್ಲ, ಕುದುರೆ ರೇಸ್ ಪ್ರೇಮಿಗಳಿಗೂ ಭರ್ಜರಿ ಜಾಕ್‌ಪಾಟ್ ಕಾದಿದೆ.

ಅನಂತ್ ಸಿಂಗ್ ಅವರ ಪುತ್ರಿ ಶಿವಾಂಗಿ ಸಿಂಗ್ ಅವರು ನವೆಂಬರ್ 25ರಂದು ರಿಷಿಕೇಶ್ ಕುಮಾರ್ (ಅಂಕಿತ್‌) ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಈ ವಿವಾಹದ ಸಿದ್ಧತೆಗಳು ಅನಂತ್ ಸಿಂಗ್ ಅವರ ಪೂರ್ವಿಕರ ಗ್ರಾಮವನ್ನು ಬೃಹತ್ ಸಂಭ್ರಮದ ನಗರಿಯನ್ನಾಗಿ ಮಾರ್ಪಡಿಸಿದ್ದು, ಬೃಹತ್ ಪೆಂಡಾಲ್‌ಗಳು, ಜೈಪುರ ಶೈಲಿಯ ಅರಮನೆ ಮಂಟಪ ಮತ್ತು ಕುದುರೆ ರೇಸ್‌ಗಾಗಿ 12 ಬಿಘಾ ವಿಸ್ತೀರ್ಣದ ಮೈದಾನ ಸಜ್ಜಾಗಿದೆ. ಸದ್ಯ ಈ ಸಂಭ್ರಮಕ್ಕೆ ಅಡ್ಡಿಯಾಗಿರುವ ಏಕೈಕ 'ಆಹ್ವಾನವಿಲ್ಲದ ಅತಿಥಿ' ಎಂದರೆ ಅದು ಮಳೆ.

'ರಂಗ್‌ಬಾಜ್ ರಾಜಾ' ಹಾಡಿಗೆ ಡ್ಯಾನ್ಸ್ & ₹3 ಕೋಟಿಯ ಡಿಫೆಂಡರ್ ಉಡುಗೊರೆ

ಸಾಂಪ್ರದಾಯಿಕ ಕೌಟುಂಬಿಕ ವಿಧಿವಿಧಾನಗಳೊಂದಿಗೆ ಮದುವೆ ಸಂಭ್ರಮ ಆರಂಭವಾಗಿದ್ದು, ಅರಿಶಿನ ಶಾಸ್ತ್ರದಲ್ಲಿ (Haldi) 'ಛೋಟೆ ಸರ್ಕಾರ್' ಖ್ಯಾತಿಯ ಅನಂತ್ ಸಿಂಗ್ ಅವರ ನೃತ್ಯ ಮೊದಲ ವೈರಲ್ ಕ್ಷಣವನ್ನು ಸೃಷ್ಟಿಸಿತು. ಹಿನ್ನೆಲೆಯಲ್ಲಿ 'ರಂಗ್‌ಬಾಜ್ ರಾಜಾ' ಹಾಡು ಮೊಳಗುತ್ತಿದ್ದಂತೆ, ಅನಂತ್ ಸಿಂಗ್ ತಮ್ಮದೇ ವಿಶಿಷ್ಟ ಶೈಲಿಯಲ್ಲಿ ಮೀಸೆ ತಿರುವುತ್ತಾ ಭರ್ಜರಿ ಹೆಜ್ಜೆ ಹಾಕಿ ಮಗಳ ಮದುವೆಯ ಸಂಭ್ರಮವನ್ನು ಆನಂದಿಸಿದರು.

ಗ್ರಾಮದಲ್ಲಿ ಸಾಂಪ್ರದಾಯಿಕ ಪೂಜೆ ನೆರವೇರಿಸಿದ ಬಳಿಕ, ಕುಟುಂಬವು ಸುಮಾರು 100 ವಾಹನಗಳ ಬೃಹತ್ ಬೆಂಗಾವಲು ಪಡೆಯೊಂದಿಗೆ (Convoy) ಪಾಟ್ನಾದ ದಾನಾಪುರದ ರೆಸಾರ್ಟ್‌ನಲ್ಲಿ ನಡೆದ ತಿಲಕ (Tilak) ಮತ್ತು ಫಲ್ದಾನ್ ಸಮಾರಂಭಕ್ಕೆ ತೆರಳಿತು. ಅಲ್ಲಿ ವರ ರಿಷಿಕೇಶ್ ಕುಮಾರ್ ಅವರು ಹೂಗುಚ್ಛ ನೀಡಿ ಅನಂತ್ ಸಿಂಗ್ ಕುಟುಂಬವನ್ನು ಸ್ವಾಗತಿಸಿದರು.

ತಿಲಕ ಸಮಾರಂಭದಲ್ಲಿ ಭಾವಿ ಅಳಿಯನಿಗೆ ಸುಮಾರು ₹3 ಕೋಟಿ ಮೌಲ್ಯದ ಬಿಳಿ ಬಣ್ಣದ ಲ್ಯಾಂಡ್ ರೋವರ್ ಡಿಫೆಂಡರ್ (Land Rover Defender) ಐಷಾರಾಮಿ ಎಸ್‌ಯುವಿ ಕಾರನ್ನು ಉಡುಗೊರೆಯಾಗಿ ನೀಡಲಾಗಿದೆ. ಇದರ ಜೊತೆಗೆ ವರನಿಗೆ 100 ಗ್ರಾಂ ಚಿನ್ನದ ಸರ, 80 ಗ್ರಾಂ ಚಿನ್ನದ ಬ್ರೇಸ್‌ಲೆಟ್, ಬೆಳ್ಳಿ ಪಾತ್ರೆಗಳು ಹಾಗೂ ಇತರ ದುಬಾರಿ ಉಡುಗೊರೆಗಳನ್ನು ನೀಡಲಾಗಿದೆ.

ಕುದುರೆ ರೇಸ್ ಸ್ಪರ್ಧೆ: ಗೆದ್ದವರಿಗೆ ಮಹೀಂದ್ರಾ ಥಾರ್, 2ನೇ ಬಹುಮಾನ ಬೈಕ್!

ವರನಿಗೆ ಐಷಾರಾಮಿ ಡಿಫೆಂಡರ್ ಕಾರು ನೀಡಿದ ಬೆನ್ನಲ್ಲೇ, ಕುದುರೆ ರೇಸ್ ಪ್ರೇಮಿಗಳಿಗೂ ತಮ್ಮದೇ ಆದ ವಾಹನ ಗೆಲ್ಲುವ ಸುವರ್ಣಾವಕಾಶವನ್ನು ಅನಂತ್ ಸಿಂಗ್ ಕಲ್ಪಿಸಿದ್ದಾರೆ. ಸುಮಾರು 12 ಬಿಘಾ ಪ್ರದೇಶದಲ್ಲಿ ನಡೆಯಲಿರುವ ಕುದುರೆ ರೇಸ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆಯುವ ವಿಜೇತರಿಗೆ ಹೊಚ್ಚ ಹೊಸ ಮಹೀಂದ್ರಾ ಥಾರ್ (Mahindra Thar), ದ್ವಿತೀಯ ಸ್ಥಾನ ಪಡೆದವರಿಗೆ ಮೋಟಾರ್ ಸೈಕಲ್ (ಬೈಕ್) ಮತ್ತು ತೃತೀಯ ಸ್ಥಾನ ಪಡೆದವರಿಗೆ ಸ್ಕೂಟರ್ ಬಹುಮಾನವಾಗಿ ಸಿಗಲಿದೆ.

ನವೆಂಬರ್ 25ರಂದು ಮಧ್ಯಾಹ್ನ 2 ಗಂಟೆಯಿಂದ 4 ಗಂಟೆಯವರೆಗೆ ಈ ರೇಸ್ ನಡೆಯಲಿದ್ದು, ಬಿಹಾರ, ಉತ್ತರ ಪ್ರದೇಶ, ಜಾರ್ಖಂಡ್, ರಾಜಸ್ಥಾನ ಮತ್ತು ದೇಶದ ವಿವಿಧ ಭಾಗಗಳಿಂದ ಕುದುರೆ ಮಾಲೀಕರು ಮತ್ತು ಸವಾರರು ಆಗಮಿಸುತ್ತಿದ್ದಾರೆ. ನವೆಂಬರ್ 22ರ ವೇಳೆಗೆ 50ಕ್ಕೂ ಹೆಚ್ಚು ಕುದುರೆಗಳು ಗ್ರಾಮಕ್ಕೆ ತಲುಪಿದ್ದು, ಅವುಗಳಲ್ಲಿ 'ಲಾಲ್ ಬಾದ್‌ಶಾ', 'ಖಗಾರಿಯಾ ಎಕ್ಸ್‌ಪ್ರೆಸ್', 'ಬಾಬರ್', 'ರಾಕೆಟ್' ಮತ್ತು 'ಸಿಕಂದರ್' ಹೆಸರಿನ ಕುದುರೆಗಳು ಭಾರಿ ಕುತೂಹಲ ಮೂಡಿಸಿವೆ. ಕುದುರೆಗಳಿಗಾಗಿ ತಾತ್ಕಾಲಿಕ ಲಾಯಗಳನ್ನು (Stables) ನಿರ್ಮಿಸಿ ಮೇವು, ನೀರು ಮತ್ತು ಆರೈಕೆಯ ವ್ಯವಸ್ಥೆ ಮಾಡಲಾಗಿದೆ.

5 ಲಕ್ಷ ಅತಿಥಿಗಳು, 150 ಖಾದ್ಯಗಳು & ಟ್ಯಾಂಕರ್‌ಗಳಲ್ಲಿ ಹಾಲು ಪೂರೈಕೆ

ಕುದುರೆ ರೇಸ್ ಒಂದು ಕಡೆಯಾದರೆ, ಮದುವೆಯ ಭೋಜನದ ವ್ಯವಸ್ಥೆಯೇ ಒಂದು ಅದ್ಭುತ ದೃಶ್ಯವಾಗಿದೆ. ಮದುವೆಗೆ ಸುಮಾರು 5 ಲಕ್ಷ ಜನರು ಆಗಮಿಸುವ ನಿರೀಕ್ಷೆಯಿದ್ದು, 150ಕ್ಕೂ ಹೆಚ್ಚು ಬಗೆಯ ಖಾದ್ಯಗಳನ್ನು ತಯಾರಿಸಲಾಗುತ್ತಿದೆ. ಇದಕ್ಕಾಗಿ 500ಕ್ಕೂ ಹೆಚ್ಚು ಬಾಣಸಿಗರು ಹಾಗೂ ನೂರಾರು ಸಹಾಯಕ ಕಾರ್ಮಿಕರು ಹಗಲು-ರಾತ್ರಿ ಶ್ರಮಿಸುತ್ತಿದ್ದಾರೆ.

ಅಡುಗೆ ಮತ್ತು ಸಿಹಿತಿಂಡಿ ತಯಾರಿಕೆಗಾಗಿ ನಾಲ್ಕೈದು ಬೃಹತ್ ಪೆಂಡಾಲ್‌ಗಳನ್ನು ನಿರ್ಮಿಸಲಾಗಿದ್ದು, ಅಡುಗೆ ಮನೆಯ ಅಗತ್ಯಗಳನ್ನು ಪೂರೈಸಲು ಟ್ಯಾಂಕರ್‌ಗಳಲ್ಲಿ ಹಾಲನ್ನು ತರಿಸಲಾಗುತ್ತಿದೆ. ಈ ಹಿಂದಿನ ತಿಲಕ ಸಮಾರಂಭದಲ್ಲಿ ಅತಿಥಿಗಳಿಗೆ ಶುದ್ಧ ದೇಸಿ ತುಪ್ಪದ ಲಡ್ಡು, ವಿವಿಧ ಸಿಹಿತಿಂಡಿಗಳು, ಹಣ್ಣುಗಳು ಮತ್ತು ಸಾಂಪ್ರದಾಯಿಕ ಭಕ್ಷ್ಯಗಳನ್ನು ಬಡಿಸಲಾಗಿತ್ತು.

10ರಿಂದ 12 ಬಿಘಾ ಪ್ರದೇಶದಲ್ಲಿ ಹರಡಿರುವ ಮದುವೆ ಮಂಟಪವನ್ನು ಜೈಪುರದ ಅರಮನೆಗಳ ಶೈಲಿಯಲ್ಲಿ ವಿನ್ಯಾಸಗೊಳಿಸಲಾಗಿದ್ದು, ಜಯಮಾಲಾ ಕಾರ್ಯಕ್ರಮಕ್ಕೆ ಬೃಹತ್ ವೇದಿಕೆ ಸಿದ್ಧವಾಗುತ್ತಿದೆ. ವಿಐಪಿ (VIP) ಅತಿಥಿಗಳಿಗಾಗಿ ಪ್ರತ್ಯೇಕ ಹೆಲಿಪ್ಯಾಡ್ ಕೂಡ ನಿರ್ಮಿಸಲಾಗಿದೆ.

ಮಳೆಯ ಅಡ್ಡಿ ನಡುವೆಯೂ JCB ಬಳಸಿ ಸಮರೋಪಾದಿಯಲ್ಲಿ ಸಿದ್ಧತೆ & ಮುಕ್ತ ಆಹ್ವಾನ

ಮದುವೆಗೂ ಮುನ್ನ ಸುರಿದ ಮಳೆಯಿಂದಾಗಿ ಪೆಂಡಾಲ್ ಸ್ಥಳ, ಕುದುರೆ ರೇಸ್ ಟ್ರ್ಯಾಕ್ ಮತ್ತು ವಿಐಪಿ ಹೆಲಿಪ್ಯಾಡ್‌ನಲ್ಲಿ ನೀರು ನಿಂತು ಕೆಸರುಮಯವಾಗಿತ್ತು. ಖುದ್ದು ಅನಂತ್ ಸಿಂಗ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ನೀರು ಮತ್ತು ಕೆಸರು ತೆರವುಗೊಳಿಸಲು ಜೆಸಿಬಿ (JCB) ಯಂತ್ರಗಳನ್ನು ಕರೆಸಿ ಹೆಚ್ಚುವರಿ ಮಣ್ಣು ಸುರಿದು ಮೈದಾನವನ್ನು ಸಮತಟ್ಟು ಮಾಡಿಸಲಾಗುತ್ತಿದೆ. ನೆಲ ಒದ್ದೆಯಾಗಿರುವುದರಿಂದ ಕಬ್ಬಿಣದ ರಾಡ್‌ಗಳನ್ನು ಬಳಸಿ ಪೆಂಡಾಲ್ ಮತ್ತು ವೇದಿಕೆಗಳನ್ನು ಎತ್ತರಿಸಲಾಗುತ್ತಿದೆ.

ಈ ಮದುವೆಗೆ ಪ್ರಮುಖ ರಾಜಕೀಯ, ಸಾಮಾಜಿಕ ಗಣ್ಯರಲ್ಲದೆ ಭೋಜ್‌ಪುರಿ ಸಿನಿಮಾ ತಾರೆಯರಾದ ಪವನ್ ಸಿಂಗ್, ಅಕ್ಷರಾ ಸಿಂಗ್ ಮತ್ತು ಗುಂಜನ್ ಸಿಂಗ್ ಮೊದಲಾದವರು ಆಗಮಿಸುವ ನಿರೀಕ್ಷೆಯಿದೆ. ವಿಶೇಷವೆಂದರೆ, ಆಮಂತ್ರಣ ಪತ್ರಿಕೆ ತಲುಪದಿದ್ದರೂ ಯಾರು ಬೇಕಾದರೂ ಮದುವೆಗೆ ಬಂದು ಊಟ ಮಾಡಿ ಆಶೀರ್ವದಿಸಬಹುದು ಎಂದು ಅನಂತ್ ಸಿಂಗ್ ಮುಕ್ತ ಆಹ್ವಾನ (Open invitation) ನೀಡಿದ್ದಾರೆ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಮದುಮಕ್ಕಳ ಕೊರಳಿಗೆ 100 ಅಡಿ ಉದ್ದದ 1 ಕೋಟಿ ರೂ. ನೋಟಿನ ಮಾಲೆ! ಭಾರ ಎತ್ತಲು ಹತ್ತಾರು ಸಹಾಯಕರು
ಸನ್ಯಾಸಿ ಆದ ನಂತರ ಹುಟ್ಟೂರಿಗೆ ತೆರಳಿದ್ದಾಗ ಮನೆ ಎದುರೇ ಭಿಕ್ಷೆ ಕೇಳಿದ್ದೆ, ಮನೆಯಲ್ಲಿ ಯಾವುದಕ್ಕೆ ಕಡಿಮೆ ಇತ್ತು ಅಂತಾ ಕೇಳಿದ್ಲು ನನ್ನಮ್ಮ!