
ಪೋಷಕರು ಮಾಡಿದ ಸಾಲವನ್ನು ಮಕ್ಕಳು ತೀರಿಸುವಂತಹ ಸ್ಥಿತಿ ಬರುತ್ತದೆ. ಕೆಲವು ಪೋಷಕರು ಮಕ್ಕಳಿಗೆ ಕೋಟ್ಯಾಂತರ ರೂ ಆಸ್ತಿ ಮಾಡಿದ್ದರೆ ಇನ್ನೂ ಅನೇಕ ಪೋಷಕರು ಬರೀ ಸಾಲವನ್ನಷ್ಟೇ ಮಕ್ಕಳಿಗೆ ಬಿಟ್ಟು ಹೋಗಿರುತ್ತಾರೆ. ಮಕ್ಕಳು ಈ ಸಾಲದಿಂದ ಹೊರಗೆ ಬರುವುದಕ್ಕೆ ಬಹಳ ಕಷ್ಟಪಡುತ್ತಾರೆ. ಮಕ್ಕಳು ಮಾಡಿದ ಸಾಲಗಳನ್ನು ಪೋಷಕರು ತೀರಿಸುವುದೂ ಇದೆ ಇಲ್ಲ ಎಂದೆಲ್ಲಾ. ಆದರೆ ಹದಿಹರೆಯದ ಮಕ್ಕಳು ಪೋಷಕರ ಸಾಲ ತೀರಿಸುವುದು ಅಂದರೆ ಅದು ನಿಜಕ್ಕೂ ಅಚ್ಚರಿಯ ವಿಚಾರ. 16-17ರ ಹದಿಹರೆಯದ ವಯಸ್ಸು ಎಂದರೆ ಬಹುತೇಕ ಓದುತ್ತಿರುವ ಜವಾಬ್ದಾರಿಯ ಅರಿವು ಇಲ್ಲದ ವಯಸ್ಸು, ಆದರೆ ಇಲ್ಲೊಬ್ಬ 17ರ ತರುಣ ತನ್ನ ತಾಯಿ ಮಾಡಿದ ಸುಮಾರು 12 ಲಕ್ಷ ರೂಪಾಯಿಗಳ ಸಾಲವನ್ನು ತೀರಿಸಿದ್ದಾನೆ.
ತನ್ನ ತಾಯಿ ಮಾಡಿದ 10,000 ಪೌಂಡ್ ಎಂದರೆ 12 ಲಕ್ಷ ರೂಪಾಯಿ ಸಾಲವನ್ನು ಆತ ತೀರಿಸಿದ್ದು, ತಾಯಿಗೆ ಬಾಲಕ ಅಚ್ಚರಿ ನೀಡಿದ್ದಾನೆ. ಆತನ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ. ಅಮನ್ ದುಗ್ಗಲ್ ಎಂಬುವವರು ಈ ವೀಡಿಯೋವನ್ನು ಹಂಚಿಕೊಂಡಿದ್ದಾರೆ. ವೀಡಿಯೋದಲ್ಲಿ ಹದಿಹರೆಯದ ತರುಣ ತನ್ನ ತಾಯಿಯ ಜೊತೆ ಮಾತನಾಡುತ್ತಾ ತಾನು, ಸಾಲವನ್ನು ತೀರಿಸಿದ್ದಾಗಿ ಹೇಳುತ್ತಾನೆ. ಅಲ್ಲದೇ ನೀನೆಂದರೆ ನನಗೆ ಎಷ್ಟು ಅಮೂಲ್ಯ ಎಂಬ ವಿಚಾರವನ್ನು ಆತ ತಾಯಿಗೆ ಹೇಳುತ್ತಾ ಆಕೆಯ ನಿರಂತರ ಬೆಂಬಲ ಹಾಗೂ ತ್ಯಾಗಕ್ಕೆ ಕೃತಜ್ಞತೆ ಸಲ್ಲಿಸಿದ್ದಾರೆ.
ಸಾಮಾನ್ಯವಾಗಿ ಮಕ್ಕಳಿಗಾಗಿ ಪೋಷಕರು ಏನೇನೋ ಮಾಡುತ್ತಾರೆ. ಆದರೆ ಕೆಲವು ಮಕ್ಕಳಿಗೆ ಕನಿಷ್ಠ ಕೃತಜ್ಞತೆಯೂ ಇರುವುದಿಲ್ಲ. ಆದರೆ ಇಲ್ಲಿ ಮಗ ತನ್ನ ತಾಯಿಯನ್ನು ತನ್ನ ಬದುಕಿನ ತುಂಬಾ ವಿಶೇಷವಾದ ವ್ಯಕ್ತಿ ಎಂದು ಹೇಳುತ್ತಾನೆ. ಪ್ರತಿ ಪದದಲ್ಲಿ ನಾನು ಅದನ್ನು ವ್ಯಕ್ತಪಡಿಸದೇ ಹೋದರೂ ಆಕೆ ಎಂದರೆ ನನಗೆ ಪ್ರಪಂಚ ಎಂದು ಆತ ಹೇಳುತ್ತಾನೆ.
ಮಗನ ಈ ಭಾವುಕ ಮಾತುಗಳಿಗೆ ತಾಯಿಯೂ ಭಾವುಕರಾಗಿ ಕಣ್ಣೀರಿಟ್ಟಿದ್ದಾರೆ. ಐ ಲವ್ ಯೂ ಆದರೆ ನಾನು ಏಕೆ ಅಳುತ್ತಿದ್ದೇನೆ ಎಂಬುದು ನನಗೆ ಗೊತ್ತಿಲ್ಲ ಎಂದು ತಾಯಿ ಹೇಳುತ್ತಾಳೆ. ಈ ವೇಳೆ ಅಮನ್ ಆಕೆಯನ್ನು ಕಣ್ಣು ತೆರೆಯುವಂತೆ ಹೇಳುತ್ತಾನೆ ಹಾಗೂ ಆಕೆಯ ಕೈಯಲ್ಲಿ ಹಣವನ್ನು ಇಡುತ್ತಾನೆ. ಬಳಿಕ ಇದು ನಿನ್ನ ಸಾಲವನ್ನು ತೀರಿಸುವುದಕ್ಕೆ ನೀಡುತ್ತಿರುವ ಹಣ. ಈಗಿನಿಂದ ಮುಂದೆ ನಾನು ನಿನ್ನ ಎಲ್ಲಾ ವೆಚ್ಚಗಳನ್ನು ಪೂರೈಸುತ್ತೇನೆ ನಾನು ನಿನಗೆ ಭರವಸೆ ನೀಡುತ್ತೇನೆ ಎಂದು ಆ ಹುಡುಗ ಹೇಳುತ್ತಾನೆ. ಈ ವೇಳೆ ಅಳುತ್ತಾ ತಾಯಿ ಮಗನನ್ನು ಗಟ್ಟಿಯಾಗಿ ತಬ್ಬಿಕೊಳ್ಳುತ್ತಾಳೆ.
ವೀಡಿಯೊವನ್ನು ಹಂಚಿಕೊಳ್ಳುವಾಗ, ಅಮನ್ ಶೀರ್ಷಿಕೆಯಲ್ಲಿ ಆ ಕ್ಷಣವನ್ನು ನೆನಪಿಸಿಕೊಂಡರು, ನನ್ನ ಅಮ್ಮ ನನಗಾಗಿ ತಮ್ಮಿಂದ ಸಾಧ್ಯವಾದ ಎಲ್ಲವನ್ನೂ ನೀಡಿದ್ದಾರೆ ಮತ್ತು ನಾನು ಅಂತಿಮವಾಗಿ ಅವಳನ್ನು ನೋಡಿಕೊಳ್ಳಲು ಸಾಧ್ಯವಾಗಿದ್ದಕ್ಕೆ ನನಗೆ ತುಂಬಾ ಸಂತೋಷ ಮತ್ತು ಹೆಮ್ಮೆ ಇದೆ. ಈ ಭಾವನೆಯನ್ನು ಪದಗಳಿಂದ ವಿವರಿಸಲು ಸಾಧ್ಯವಿಲ್ಲ, ನಾನು ಈ ಕ್ಷಣವನ್ನು ಹಲವು ಬಾರಿ ಕಲ್ಪಿಸಿಕೊಂಡಿದ್ದೆ. ಆದರೆ ಅದು ಅಂತಿಮವಾಗಿ ಪ್ರಾರಂಭವಾದ ಒಂದು ವರ್ಷದ ನಂತರ ಸಂಭವಿಸಿತು. ನಾನು ದೇವರಿಗೆ ಹಾಗೂ ಅಮ್ಮನಿಗೆ ನಂಬಲಾಗದಷ್ಟು ಕೃತಜ್ಞನಾಗಿದ್ದೇನೆ ಎಂದು ಹೇಳಿದ್ದಾರೆ.
ಈ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ವೈರಲ್ ಆಗಿದ್ದು, ನೋಡುಗರು ಹದಿಹರೆಯದ ಹುಡುಗನ ಪ್ರಬುದ್ಧತೆ, ಪ್ರೀತಿ ಮತ್ತು ಜವಾಬ್ದಾರಿಯ ಪ್ರಜ್ಞೆಗೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಒಬ್ಬ ಬಳಕೆದಾರರು, ನಿಮಗೆ ನನ್ನ ಗೌರವ ಸಹೋದರ, ನಾನು ಕೇವಲ 7 ವರ್ಷದವನಿದ್ದಾಗ ನನ್ನ ತಾಯಿಯನ್ನು ಕಳೆದುಕೊಂಡೆ. ಇಂತಹದ್ದನ್ನು ಮಾಡಲು ನಾನು ಏನು ಬೇಕಾದರೂ ಮಾಡುತ್ತೇನೆ ಎಂದು ಕಾಮೆಂಟ್ ಮಾಡಿದ್ದಾರೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.