
ಈಗ ಸಂಬಂಧ (Relationship)ಕ್ಕಿಂತ ಹಣವೇ ಮುಖ್ಯವಾಗಿದೆ. ಗಂಡ ಇರ್ಲಿ, ಅಪ್ಪ - ಅಮ್ಮ ಇರ್ಲಿ. ಹಣದ ಮುಂದೆ ಇದ್ಯಾವ ಸಂಬಂಧವೂ ಲೆಕ್ಕಕ್ಕೆ ಬರೋದಿಲ್ಲ. ಎರಡು ದಿನಗಳ ಹಿಂದೆ ಡಿವೋರ್ಸ್ ಕೇಸ್ ನಲ್ಲಿ ಮಹಿಳೆ ಡಿಮ್ಯಾಂಡ್ ಕೇಳಿ ಸುಪ್ರೀಂ ಕೋರ್ಟ್ (Supreme Court) ದಂಗಾಗಿತ್ತು. ಮದುವೆಯಾಗಿ 18 ತಿಂಗಳಾಗಿಲ್ಲ,ಆಗ್ಲೇ ವಿಚ್ಛೇದನಕ್ಕೆ ಅರ್ಜಿ ಸಲ್ಲಿದ್ದ ಮಹಿಳೆ ಮುಂಬೈನಲ್ಲಿ ಮನೆ, 12 ಕೋಟಿ ರೂಪಾಯಿ ಹಾಗೂ ಬಿಎಂಡಬ್ಲ್ಯೂ ಕಾರ್ ಗೆ ಬೇಡಿಕೆ ಇಟ್ಟಿದ್ದಳು. ಸದ್ಯ ಕೇಸ್ ವಿಚಾರಣೆ ಹಂತದಲ್ಲೇ ಇದೆ. ಈಗ ಇಂಥಹದ್ದೇ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ. 12 ವರ್ಷದ ಬಾಲಕಿ ಇಟ್ಟ ಬೇಡಿಕೆ ಕೇಳಿ ಇಡೀ ಕೋರ್ಟ್ ಶಾಕ್ ಗೆ ಒಳಗಾಗಿದೆ. ಚಿಕ್ಕ ಹುಡುಗಿ, ತಂದೆ ಜೊತೆ ಇರಬೇಕು ಅಂದ್ರೆ 1 ಕೋಟಿ ನೀಡ್ಬೇಕು ಅಂತ ಡಿಮ್ಯಾಂಡ್ ಮಾಡಿದ್ದಾಳೆ. ಇದನ್ನು ಕೇಳಿದ ಸುಪ್ರೀಂ ಕೋರ್ಟ್, ಮಗುವಿನ ತಾಯಿಯನ್ನು ತರಾಟೆಗೆ ತೆಗೆದುಕೊಂಡಿದೆ.
ಏನು ಪ್ರಕರಣ? : ಗಂಡ - ಹೆಂಡತಿ ಮಧ್ಯೆ ವೈವಾಹಿಕ ವಿವಾದವಿತ್ತು. ಮಗಳನ್ನು ಸ್ಥಳೀಯ ಕೋರ್ಟ್ ತಂದೆಯ ಕಸ್ಟಡಿಗೆ ನೀಡಿತ್ತು. ಆದ್ರೆ ಮಗುವಿನ ತಾಯಿ ಇದಕ್ಕೆ ಒಪ್ಪಿಗೆ ನೀಡಲಿಲ್ಲ. ತೀರ್ಪು ಪ್ರಶ್ನಿಸಿ ಪತ್ನಿ ಹೈಕೋರ್ಟ್ ಮೆಟ್ಟಿಲೇರಿದ್ದಳು. ಈಗ ಸುಪ್ರೀಂ ಕೋರ್ಟ್ ನಲ್ಲಿ ಇದ್ರ ವಿಚಾರಣೆ ನಡೆಯುತ್ತಿದೆ. ಕಳೆದ ವರ್ಷ ಸೆಪ್ಟೆಂಬರ್ನಲ್ಲಿ ಸುಪ್ರೀಂ ಕೋರ್ಟ್ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ, ಹುಡುಗಿಯನ್ನು ಭೇಟಿಯಾಗಲು ತಂದೆಗೆ ಅವಕಾಶ ಸಿಗ್ತಿದ್ಯಾ ಎಂಬುದನ್ನು ಪರಿಶೀಲಿಸಲು ಸ್ವಯಂ ಸೇವಕರನ್ನು ನೇಮಕ ಮಾಡುವಂತೆ ಸೂಚನೆ ನೀಡಿತ್ತು. ತಂದೆ ಪರ ವಕೀಲರ ಪ್ರಕಾರ, ಹುಡುಗಿ, ತಂದೆಗೆ ಕೋಲಿನಿಂದ ಹೊಡೆದಿದ್ದಾಳೆ. ತಂದೆ ಜೊತೆ ಹೋಗಲು ನಿರಾಕರಿಸಿದ್ದಾಳೆ. ತಂದೆ, ತಾಯಿಗೆ ಹಿಂಸೆ ನೀಡಿದ್ದಾನೆ, ಕೇಸ್ ದಾಖಲಿಸಿದ್ದಾನೆ ಎಂದು ಹುಡುಗಿ ಆರೋಪ ಮಾಡಿದ್ದಲ್ಲದೆ, ಒಂದು ಕೋಟಿ ರೂಪಾಯಿ ನೀಡಿದ್ರೆ ನಿನ್ನ ಜೊತೆ ಬರ್ತೇನೆ ಅಂತ ತಂದೆಗೆ ಹೇಳಿದ್ದಾಳೆ.
12 ವರ್ಷದ ಬಾಲಕಿ ಶಾಲೆ ದಾಖಲೆಯಲ್ಲೂ ತಂದೆ ಹೆಸರಿಲ್ಲ. ತಾಯಿ ತನ್ನ ಪತಿ ಹೆಸರನ್ನು ದಾಖಲೆಯಿಂದ ಕಿತ್ತೆಸೆದಿದ್ದಾಳೆ. ಕೋರ್ಟ್ ನಲ್ಲಿ 1 ಕೋಟಿ ಕೇಳ್ತಿದ್ದಂತೆ ದಂಗಾದ ಸಿಜೆಐ ಬಿ.ಆರ್. ಗವಾಯಿ, ತಾಯಿಗೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದ್ದಾರೆ. ತಾಯಿ ತನ್ನ ಮಗಳ ಮನಸ್ಥಿತಿಯನ್ನು ಹಾಳು ಮಾಡುತ್ತಿದ್ದಾಳೆ. ತಾಯಿ ತನ್ನ ಮಗಳನ್ನು ತಪ್ಪು ದಾರಿಗೆ ಕೊಂಡೊಯ್ಯುತ್ತಿದ್ದಾಳೆ. ಹುಡುಗಿಯ ಮನಸ್ಸಿನಲ್ಲಿ ತಪ್ಪು ವಿಷಯಗಳನ್ನು ತುಂಬುತ್ತಿದ್ದಾಳೆ ಎಂದು ಕೋರ್ಟ್ ಎಚ್ಚರಿಸಿದೆ. ಹುಡುಗಿ ಸರಿಯಾದ ರೀತಿಯಲ್ಲಿ ಯೋಚಿಸಿ ಅರ್ಥಮಾಡಿಕೊಳ್ಳಬೇಕು. ಹುಡುಗಿ ಹಣಕ್ಕಾಗಿ ತನ್ನ ತಂದೆಯ ಮೇಲೆ ಒತ್ತಡ ಹೇರಬಾರದು ಎಂದು ನ್ಯಾಯಾಲಯ ಹೇಳಿದೆ.
ಕೇಸ್ ಎಲ್ಲಿಗೆ ಬಂತು? : ಹುಡುಗಿಯ ತಾಯಿ ಪರ ವಕೀಲರಾದ ಅನುಭಾ ಅಗರ್ವಾಲ್, ಸುಪ್ರೀಂ ಕೋರ್ಟ್ನಲ್ಲಿ ಮಧ್ಯಸ್ಥಿಕೆಗೆ ಸಿದ್ಧ ಎಂದು ವಾದಿಸಿದ್ದಾರೆ. ನಂತ್ರ ಮುಖ್ಯ ನ್ಯಾಯಮೂರ್ತಿ ಗವಾಯಿ,ಇದು ದಂಪತಿ ಗಲಾಟೆ. ಇಲ್ಲಿ ಮಗುವನ್ನು ಅನಗತ್ಯವಾಗಿ ಎಳೆಯಲಾಗ್ತಿದೆ. ಇದ್ರಿಂದ ಮಗಳ ಬದುಕು ಹಾಳಾಗ್ತಿದೆ ಎಂದಿದ್ದಾರೆ. ಎಲ್ಲದೆ ಎರಡೂ ಪಕ್ಷಗಳ ಒಪ್ಪಿಗೆಯ ನಂತ್ರ ಕೋರ್ಟ್, ಈ ವಿವಾದವನ್ನು ವೈವಾಹಿಕ ವಿವಾದ ಎಂದು ಪರಿಗಣಿಸಿ ಮಧ್ಯವರ್ತಿಗೆ ಆದೇಶ ನೀಡಿದೆ. ಉತ್ತರಾಖಂಡ ಹೈಕೋರ್ಟ್ನ ಮಾಜಿ ಮುಖ್ಯ ನ್ಯಾಯಮೂರ್ತಿ ರಿತು ಬಹ್ರಿ ಅವರನ್ನು ಮಧ್ಯವರ್ತಿಯಾಗಿ ನೇಮಿಸಲಾಗಿದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.