
ಪ್ರೀತಿಗೆ ವಯಸ್ಸಿನ ಹಂಗಿಲ್ಲ ಎಂಬುದನ್ನು ಎಲ್ಲರೂ ಒಪ್ಪಬಹುದು. ಹಾಗಂತ 103 ವರ್ಷದ ಹಣ್ಣು ಹಣ್ಣು ಮುದುಕ, 49ರ ಮಹಿಳೆಯನ್ನು ವಿವಾಹವಾಗುವುದು ಎಂದರೆ ವಿಚಿತ್ರವೆಂದೆನಿಸದೆ ಇರದು.
103ರ ವಯಸ್ಸಲ್ಲಿ ತಮ್ಮ ದೇಹ ತಮ್ಮ ನಿಯಂತ್ರಣದಲ್ಲಿದ್ದರೆ ಅದೇ ದೊಡ್ಡ ವರ. ಅಂಥದರಲ್ಲಿ ಈ ಅಜ್ಜ ತಾನೇ 'ವರ'ನಾಗಿ 49 ವರ್ಷದ ಮಹಿಳೆಯನ್ನು ಮೂರನೇ ವಿವಾಹವಾಗಿದ್ದಾನೆ.
ಸ್ವಾತಂತ್ರ್ಯ ಹೋರಾಟಗಾರ ಮತ್ತು ಭೋಪಾಲ್‌ನ ಇಟ್ವಾರದ ನಿವಾಸಿ, 103 ವರ್ಷದ ಹಬೀಬ್ ನಜರ್ 49 ವರ್ಷದ ಮಹಿಳೆ ಪ್ರೀತಿ ಫಿರೋಜ್ ಜಹಾನ್ ಜೊತೆ ನಿಖಾ ಮಾಡಿಕೊಂಡಿದ್ದಾರೆ. ಜೊತೆಗೆ, ತಮ್ಮನ್ನು ಅಭಿನಂದಿಸುವವರ ಬಳಿ ಸಂತೋಷ ವ್ಯಕ್ತಪಡಿಸಿದ್ದಾರೆ. ಶನಿವಾರ ನಡೆದ ಸಮಾರಂಭದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ನಂತರ ಮದುವೆಯ ವಿಚಾರ ಬೆಳಕಿಗೆ ಬಂದಿದೆ. ಆದರೆ, ವಿಷಯ ತಾಜಾ ಅಲ್ಲ. ಈ ಘಟನೆ ಸುಮಾರು ಒಂದೂವರೆ ವರ್ಷಗಳ ಹಿಂದೆ ನಡೆದಿದೆ.
103 ವರ್ಷದ ಹಬೀಬ್ ಮಿಯಾನ್ ಅವರು 49 ವರ್ಷದ ಫಿರೋಜ್ ಜಹಾನ್ ಅವರನ್ನು ವಿವಾಹವಾಗಿ ಮದುವೆಯ ದಾಖಲೆಗಳನ್ನು ಪೂರೈಸಿದ್ದಾರೆ. ಜೊತೆಗೆ ಹೊಸ ಪತ್ನಿಯೊಂದಿಗೆ ಸಂತೋಷ ಮತ್ತು ಉತ್ಸಾಹದಿಂದ ಕಾಣುತ್ತಿದ್ದರು. ಹಬೀಬ್ ಮಿಯಾನ್, ಮದುವೆಯನ್ನು ವಯಸ್ಸಿನೊಂದಿಗೆ ಜೋಡಿಸದೆ, ಇದು ಹೃದಯದ ವಿಷಯ, ಹೃದಯದಲ್ಲಿ ಸ್ಕೋಪ್ ಇರಬೇಕು, ಉಳಿದೆಲ್ಲವೂ ಸುಲಭ ಎಂದಿದ್ದಾರೆ.
ಏಕೆ ಈಗ ಚರ್ಚೆಯಲ್ಲಿದೆ?
2022 ಅಥವಾ 2023ರಲ್ಲಿ ನಡೆದ ಈ ವಿಶಿಷ್ಟ ಮದುವೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇದರಲ್ಲಿ ಮುಫ್ತಿ-ಎ-ಶಹರ್ ಮೊಹಮ್ಮದ್ ಅಬುಲ್ ಕಲಾಂ ಖಾನ್ ಖಾಸ್ಮಿ ವಧು-ವರರನ್ನು ಅಭಿನಂದಿಸುತ್ತಿರುವುದನ್ನು ಕಾಣಬಹುದು. ಈ ವೀಡಿಯೋದಲ್ಲಿ ಮುತವಲ್ಲಿ ಸಮಿತಿಯ ನೌಕರ ಮತ್ತು ಖಾಜಿ ಕ್ಯಾಂಪ್ ಪ್ರದೇಶದ ನಿಖಾಖ್ವಾಹ ಮೌಲಾನಾ ಯಾಕೂಬ್ ಸಾಹೇಬ್ ಅವರ ಅಭಿನಂದನಾ ಧ್ವನಿ ಕೇಳಿಸುತ್ತದೆ. ಇತ್ತೀಚೆಗಷ್ಟೇ ಮಸೀದಿ ಸಮಿತಿಯು ಐತಿಹಾಸಿಕ ನಿರ್ಧಾರ ಕೈಗೊಂಡು ಮುಫ್ತಿ ಮೊಹಮ್ಮದ್ ಅಬುಲ್ ಕಲಾಂ ಖಾಸ್ಮಿ ಅವರನ್ನು ಹುದ್ದೆಯಿಂದ ವಜಾಗೊಳಿಸಿದೆ. ರಾಜಕೀಯ ಚಟುವಟಿಕೆಗಳಲ್ಲಿ ಸಕ್ರಿಯರಾಗಿರುವ ಅವರು ಸರ್ಕಾರದ ವಿರುದ್ಧ ಹೇಳಿಕೆ ನೀಡುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಬಹುಶಃ ಈ ವಿಡಿಯೋದಲ್ಲಿ ಮುಫ್ತಿ ಕಲಾಂ ಸಾಹೇಬ್ ಅವರ ಉಪಸ್ಥಿತಿಯನ್ನು ತೋರಿಸಲು, ಈ ಹಳೆಯ ವೀಡಿಯೊವನ್ನು ಸಾಮಾಜಿಕ ಮಾಧ್ಯಮ ವೇದಿಕೆಯಲ್ಲಿ ವೈರಲ್ ಮಾಡಲಾಗಿದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.