ಸೌತ್ ಇಂಡಿಯನ್ ಹೀರೋ ಚಲನಚಿತ್ರ ಫೆ.24ರಂದು ರಾಜ್ಯಾದ್ಯಂತ 100 ಚಿತ್ರ ಮಂದಿರದಲ್ಲಿ ಬಿಡುಗಡೆಯಾಗಲಿದೆ ಎಂದು ಚಿತ್ರದ ನಿರ್ದೇಶಕ ಹೆಚ್.ಎನ್ ನರೇಶ್ ಕುಮಾರ್ ಮಾಹಿತಿ ನೀಡಿದರು
ವರದಿ: ವರದರಾಜ್, ಏಷ್ಯಾನೆಟ್ ಸುವರ್ಣ ನ್ಯೂಸ್, ದಾವಣಗೆರೆ
ದಾವಣಗೆರೆ (ಫೆ.10): ಸೌತ್ ಇಂಡಿಯನ್ ಹೀರೋ ಚಲನಚಿತ್ರ ಫೆ.24ರಂದು ರಾಜ್ಯಾದ್ಯಂತ 100 ಚಿತ್ರ ಮಂದಿರದಲ್ಲಿ ಬಿಡುಗಡೆಯಾಗಲಿದೆ ಎಂದು ಚಿತ್ರದ ನಿರ್ದೇಶಕ ಹೆಚ್.ಎನ್ ನರೇಶ್ ಕುಮಾರ್ ಮಾಹಿತಿ ನೀಡಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಈ ಮೊದಲು ಫಸ್ಟ್ ರ್ಯಾಂಕ್ ರಾಜು ಚಿತ್ರ ನಿರ್ದೇಶನ ಮಾಡಿದ್ದೇನೆ. ಆ ಚಿತ್ರಕ್ಕೆ ಪ್ರೇಕ್ಷಕರು ಸ್ಪಂದನೆ ನೀಡಿದ್ದರು.
ಅದೇ ರೀತಿ ಸೌತ್ ಇಂಡಿಯನ್ ಹೀರೋ ಚಿತ್ರ ನಿರ್ದೇಶನ ಮಾಡಿದ್ದೇನೆ ಎಂದರು. ಹಂಪಿಯ ಒಂದು ಸಣ್ಣ ಊರಿನಲ್ಲಿ ಭೌತಶಾಸ್ತ್ರದ ಪ್ರಾಧ್ಯಾಪಕನಾಗಿರುವ ನಾಯಕ ಹೇಗೆ ಚಲನಚಿತ್ರೋದ್ಯಮದಲ್ಲಿ ಸೂಪರ್ ಸ್ಟಾರ್ ಆಗುತ್ತಾನೆ ಎಂಬುದರ ಕುರಿತಾದ ಚಲನಚಿತ್ರವಾಗಿದೆ. ಅದರ ನಂತರ ಒಬ್ಬ ಸೂಪರ್ ಸ್ಟಾರ್ ಅವರಿಂದ ನಿಭಾಯಿಸಲಾಗದ ಸ್ಟಾರ್ ಡಮ್‌ನಿಂದ ತುಂಬಿದ ಜೀವನದಲ್ಲಿ ಬೀಳುತ್ತಾನೆ, ಮುಂದೆ ಏನಾಗುತ್ತದೆ ಎಂಬುದು ಕಥೆಯ ತಿರುಳು.
ಖ್ಯಾತಿ ಮತ್ತು ಗ್ಲಾಮರ್ ಹೇಗೆ ಅವನ ಮುಗ್ಧ ಮನಸ್ಸು ಮತ್ತು ಜೀವನ ಶೈಲಿಯನ್ನು ಕತ್ತು ಹಿಸುಕುತ್ತದೆ ಮತ್ತು ಅವನು ತನ್ನ ಪ್ರೀತಿ, ಕುಟುಂಬ ಮತ್ತು ಆತ್ಮೀಯರನ್ನು ಹೇಗೆ ಕಳೆದುಕೊಳ್ಳುವಂತೆ ಮಾಡುತ್ತದೆ ಮತ್ತು ಅವರನ್ನು ಮತ್ತೆ ತನ್ನ ಜೀವನಕ್ಕೆ ಮರಳಿ ಪಡೆಯುವ ಅವನ ಅನ್ನೇಷಣೆಯು ಉಳಿದ ಕಥೆಯನ್ನು ರೂಪಿಸುತ್ತದೆ ಎಂದರು. ಚಿತ್ರಕ್ಕೆ ಹರ್ಷವರ್ಧನ್ ರಾಜ್ ,ಅನಿಲ್ ಸಿ.ಜೆ ಸಂಗೀತ ನೀಡಿದ್ದಾರೆ. ವಿ.ಆರ್.ನಾಗೇಂದ್ರ ಪ್ರಸಾದ್, ಜಗದೀಶ್ ನಡಹಳ್ಳಿ, ಶಾಮ್ ರಾವ್, ವಿಜಯ್ ಈಶ್ವರ್ ಸಾಹಿತ್ಯ ನೀಡಿದ್ದಾರೆ.
ಶಿವರಾಜ್ ಕುಮಾರ್ ಹೃದಯ ವಿದ್ರಾವಕ ಸೇಡಿನ ಸಿನಿಮಾ; ಫೆಬ್ರವರಿ 10ರಿಂದ ZEE5 ಗ್ಲೋಬಲ್‌ನಲ್ಲಿ ಸ್ಟ್ರೀಮಿಂಗ್
ನಾಯಕ ನಟ ಸಾರ್ಥಕ್ ಮಾತನಾಡಿ ಧಾರಾವಾಹಿಯಲ್ಲಿ ನಟಿಸಿದ್ದೇನೆ. ಇದೀಗ ಮೊದಲ ಬಾರಿಗೆ ಬೆಳ್ಳಿತೆರೆಗೆ ಪ್ರವೇಶಿಸಿದ್ದೇನೆ. ಹೊಸಬರಿಗೆ ಚಿತ್ರದಲ್ಲಿ ನಿರ್ದೇಶಕರು ಅವಕಾಶ ಕಲ್ಪಿಸಿದ್ದಾರೆ. ಹಂಪೆ ಸುತ್ತಮುತ್ತ ಚಿತ್ರೀಕರಣ ಮಾಡಲಾಗಿದೆ ಎಂದರು. ನಾಯಕಿ ಕಾಶಿಮಾ ಮಾತನಾಡಿ ಚಿತ್ರದಲ್ಲಿ ಗ್ರಾಮೀಣ ಭಾಗದ ಶಿಕ್ಷಕಿಯಾಗಿ ಪಾತ್ರ ಮಾಡಿದ್ದೇನೆ. ನನ್ನ ಪಾತ್ರ ಉತ್ತರ ಕರ್ನಾಟಕ ಶೈಲಿಯ ಭಾಷೆಯಲ್ಲಿ ಮೂಡಿಬಂದಿದೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ನಟ ಅಮಿತ್ ಹಾಗೂ ತಂಡದವರು ಉಪಸ್ಥಿತರಿದ್ದರು.