
ಮುಂಬೈ: ಭಾರತೀಯ ಚಲನಚಿತ್ರ ರಂಗದ ದಂತಕಥೆಗಳಾದ ದೇವ್ ಆನಂದ್ ಮತ್ತು ಕಲ್ಪನಾ ಕಾರ್ತಿಕ್ ದಂಪತಿಯ ಪುತ್ರ, ನಟ ಹಾಗೂ ನಿರ್ದೇಶಕ ಸುನೀಲ್ ಆನಂದ್ (70) ಅವರು ಲಂಡನ್‌ನಲ್ಲಿ ಹೃದಯಾಘಾತದಿಂದ ವಿಧಿವಶರಾಗಿದ್ದಾರೆ. ಜುಲೈ 26, 2026 ರಂದು ಅಮೆರಿಕದಿಂದ ಲಂಡನ್‌ಗೆ ಪ್ರಯಾಣಿಸುತ್ತಿದ್ದಾಗ ತೀವ್ರ ಅಸ್ವಸ್ಥಗೊಂಡಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವೇಳೆಯಲ್ಲೇ ಎರಡನೇ ಬಾರಿಗೆ ಸಂಭವಿಸಿದ ತೀವ್ರ ಹೃದಯಾಘಾತದಿಂದಾಗಿ ಅವರು ಕೊನೆಯುಸಿರೆಳೆದಿದ್ದಾರೆ. ಅವರ ಅಂತ್ಯಕ್ರಿಯೆಯನ್ನು ಇಂದು (ಆಗಸ್ಟ್ 4, 2026) ಯುಕೆ ಕಾಲಮಾನ ಮಧ್ಯಾಹ್ನ 1:30 ಕ್ಕೆ ಲಂಡನ್‌ನ 'ಪುಟ್ನಿ ವೇಲ್' (Putney Vale) ಸ್ಮಶಾನದಲ್ಲಿ ನೆರವೇರಿಸಲು ನಿರ್ಧರಿಸಲಾಗಿದೆ. 2011 ರಲ್ಲಿ ಅವರ ತಂದೆ ದೇವ್ ಆನಂದ್ ಅವರ ಅಂತ್ಯಕ್ರಿಯೆಯೂ ಇದೇ ಸ್ಥಳದಲ್ಲಿ ನಡೆದಿತ್ತು ಎಂಬುದು ವಿಶೇಷ.
ಸುನೀಲ್ ಆನಂದ್ ಅವರ ತಾಯಿ, 1950ರ ದಶಕದ ಖ್ಯಾತ ನಟಿ ಕಲ್ಪನಾ ಕಾರ್ತಿಕ್ ಅವರಿಗೆ ಪ್ರಸ್ತುತ 94 ವರ್ಷ ವಯಸ್ಸಾಗಿದ್ದು, ತೀವ್ರ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದಾರೆ. ಪ್ರಸ್ತುತ ಮಗಳು ದೇವಿನಾ ಅವರ ಆರೈಕೆಯಲ್ಲಿದ್ದು, ಲಂಡನ್‌ಗೆ ಪ್ರಯಾಣಿಸಿ ಮಗನಿಗೆ ಅಂತಿಮ ವಿದಾಯ ಹೇಳಲು ಸಾಧ್ಯವಾಗಿಲ್ಲ. ಮೂಲಗಳ ಪ್ರಕಾರ, ಸುನೀಲ್ ಅವರ ಸೋದರ ಸೊಸೆ ಗಿನಾ ನಾರಂಗ್ ಹಾಗೂ ಅವರ ಪತಿ ಲಂಡನ್‌ನಲ್ಲಿ ಅಂತಿಮ ಸಂಸ್ಕಾರದ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ.
ಸಂತಾಪ ಸೂಚಿಸಿ ಹೇಳಿಕೆ ಬಿಡುಗಡೆ ಮಾಡಿರುವ ಗಿನಾ ನಾರಂಗ್, "ನಮ್ಮ ಕುಟುಂಬಕ್ಕೆ ಹರಿದುಬರುತ್ತಿರುವ ಪ್ರೀತಿ, ಪ್ರಾರ್ಥನೆ ಮತ್ತು ಸಾಂತ್ವನದ ಮಾತುಗಳಿಗೆ ನಾವು ಕೃತಜ್ಞರಾಗಿದ್ದೇವೆ. ದುಃಖದ ಈ ಕಠಿಣ ಸಮಯದಲ್ಲಿ ನಮ್ಮ ಕುಟುಂಬದ ಗೌಪ್ಯತೆಯನ್ನು ಗೌರವಿಸಬೇಕಾಗಿ ವಿನಂತಿಸುತ್ತೇವೆ" ಎಂದಿದ್ದಾರೆ.
1980ರ ದಶಕದಲ್ಲಿ ಕುಮಾರ್ ಗೌರವ್, ಸನ್ನಿ ಡಿಯೋಲ್ ಹಾಗೂ ಸಂಜಯ್ ದತ್ ಅವರಂತಹ ಸ್ಟಾರ್ ಪುತ್ರರ ಆಗಮನದ ಅಲೆಯಲ್ಲಿ ಸುನೀಲ್ ಆನಂದ್ ಕೂಡ ಬಾಲಿವುಡ್‌ಗೆ ವಿಜೃಂಭಣೆಯಿಂದ ಪಾದಾರ್ಪಣೆ ಮಾಡಿದ್ದರು. ಹಾಂಗ್ ಕಾಂಗ್‌ನಲ್ಲಿ ಕುಂಗ್-ಫು ಸಮರ ಕಲೆ ತರಬೇತಿ ಪಡೆದಿದ್ದ ಅವರು, 1984 ರಲ್ಲಿ ತಂದೆ ದೇವ್ ಆನಂದ್ ನಿರ್ದೇಶನದ 'ಆನಂದ್ ಔರ್ ಆನಂದ್' ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟರು. ಆರ್‌ಡಿ ಬರ್ಮನ್ ಅವರ ಸಂಗೀತ ಸಂಯೋಜನೆಯ ಈ ಚಿತ್ರದ ಹಾಡುಗಳು ಸಿಬಿಎಸ್ ರೆಕಾರ್ಡ್ಸ್‌ನ ಆಗಿನ ಮುಖ್ಯಸ್ಥ ರತನ್ ಟಾಟಾ ಅವರ ತೀವ್ರ ಆಸಕ್ತಿಯಿಂದಾಗಿ ಪ್ರಸಿದ್ಧಿ ಪಡೆದಿದ್ದವು. ಆದರೆ, ಚಿತ್ರವು ಗಲ್ಲಾಪೆಟ್ಟಿಗೆಯಲ್ಲಿ ನಿರೀಕ್ಷಿತ ಯಶಸ್ಸು ಕಾಣಲಿಲ್ಲ.
ತದನಂತರ ವಿಜೇತಾ ಪಂಡಿತ್ ಅವರೊಂದಿಗೆ 'ಕಾರ್ ಥೀಫ್' (1986) ಮತ್ತು ತಮ್ಮ ಚಿಕ್ಕಪ್ಪ ವಿಜಯ್ ಆನಂದ್ ನಿರ್ದೇಶನದ 'ಮೈನ್ ತೇರೆ ಲಿಯೇ' (1988) ಚಿತ್ರಗಳಲ್ಲಿ ಅಭಿನಯಿಸಿದರು. ಸಮರ ಕಲೆಯ ಮೇಲಿನ ಪ್ರೀತಿಯಿಂದಾಗಿ 2001 ರಲ್ಲಿ ಹಾಂಗ್ ಕಾಂಗ್‌ನ ಫೈಟ್ ಮಾಸ್ಟರ್‌ಗಳನ್ನು ಬಳಸಿ 'ಮಾಸ್ಟರ್' ಎಂಬ ಚಿತ್ರವನ್ನು ನಿರ್ದೇಶಿಸಿದರು. ಕಳೆದ ಕೆಲವು ವರ್ಷಗಳಿಂದ ಅವರು 'ವ್ಯಾಗೇಟರ್ ಮಿಕ್ಸರ್' ಎಂಬ ಹೊಸ ಚಿತ್ರದ ಕೆಲಸದಲ್ಲಿ ನಿರತರಾಗಿದ್ದರು.
ಸುನೀಲ್ ಅವರೊಂದಿಗೆ ನಿಕಟವಾಗಿ ಕೆಲಸ ಮಾಡಿದ್ದ ಹಿರಿಯ ನಟ ರಾಜ್ ಬಬ್ಬರ್ ತಮ್ಮ ನೆನಪುಗಳನ್ನು ಹಂಚಿಕೊಳ್ಳುತ್ತಾ, "ಸುನೀಲ್ ಅವರಿಗೆ ನಟನೆಯಲ್ಲಿ ದೊಡ್ಡ ಮಹತ್ವಾಕಾಂಕ್ಷೆ ಇದ್ದಂತೆ ಕಾಣುತ್ತಿರಲಿಲ್ಲ. ಆದರೆ, ವಹಿಸಿಕೊಂಡ ಕೆಲಸದ ಬಗ್ಗೆ ಅತ್ಯಂತ ಪ್ರಾಮಾಣಿಕತೆ ಹೊಂದಿದ್ದರು. ಹಿರಿಯ ನಟರೆಂದರೆ ಅವರಿಗೆ ಅಪಾರ ಗೌರವವಿತ್ತು. ಅವರ ತಾಯಿಯವರಿಗೆ ನನ್ನ ಆಳವಾದ ಸಂತಾಪಗಳು" ಎಂದು ಕಂಬನಿ ಮಿಡಿದಿದ್ದಾರೆ.
ಶಿಕ್ಷಣದಲ್ಲಿ ಅಪಾರ ಆಸಕ್ತಿ ಹೊಂದಿದ್ದ ಸುನೀಲ್, ಅಮೆರಿಕದ ವಾಷಿಂಗ್ಟನ್ ಡಿಸಿಯಲ್ಲಿರುವ 'ಅಮೇರಿಕನ್ ಯೂನಿವರ್ಸಿಟಿ'ಯಿಂದ ಬಿಸಿನೆಸ್ ಅಡ್ಮಿನಿಸ್ಟ್ರೇಷನ್‌ನಲ್ಲಿ (MBA) ಪದವಿ ಪಡೆದಿದ್ದರು.
ದೇವ್ ಆನಂದ್ ತಮ್ಮ 'ರೊಮ್ಯಾನ್ಸಿಂಗ್ ವಿತ್ ಲೈಫ್' ಎಂಬ ಆತ್ಮಚರಿತ್ರೆಯಲ್ಲಿ ಮಗ ಸುನೀಲ್‌ನ ಜನನ ಹಾಗೂ ಆತನೊಂದಿಗಿನ ಸುಂದರ ಕ್ಷಣಗಳನ್ನು ಭಾವನಾತ್ಮಕವಾಗಿ ದಾಖಲಿಸಿದ್ದಾರೆ.
ಜ್ಯೂರಿಚ್‌ನ ನರ್ಸಿಂಗ್ ಹೋಂನಲ್ಲಿ ಮಗ ಹುಟ್ಟಿದ ಸುದ್ದಿ ತಿಳಿದಾಗ ದೇವ್ ಆನಂದ್ 'ಪೇಯಿಂಗ್ ಗೆಸ್ಟ್' ಚಿತ್ರದ ಶೂಟಿಂಗ್‌ನಲ್ಲಿದ್ದರು. ಕುಡಿದ ಅಮಲಿನಲ್ಲಿ ಅಭಿನಯಿಸಬೇಕಾಗಿದ್ದ ದೃಶ್ಯದಲ್ಲಿದ್ದ ಅವರು, ಮಗ ಹುಟ್ಟಿದ ಸಂತಸದ ಭರದಲ್ಲಿ ತಮ್ಮ ವೃತ್ತಿಜೀವನದ ಅತ್ಯುತ್ತಮ ಶಾಟ್ ನೀಡಿದ್ದಾಗಿ ಬರೆದುಕೊಂಡಿದ್ದಾರೆ.
ಸುನೀಲ್ ಹುಟ್ಟಿದ ಕೇವಲ ಎರಡು ವಾರಗಳಲ್ಲೇ ಜೆಕೊಸ್ಲೊವಾಕಿಯಾದ 'ಕಾರ್ಲೋವಿ ವೇರಿ' ಚಲನಚಿತ್ರೋತ್ಸವದಲ್ಲಿ ಪಾಲ್ಗೊಂಡಿದ್ದಾಗ, 86 ವರ್ಷದ ಹಿರಿಯ ಪ್ರತಿನಿಧಿ ಹಾಗೂ 2 ವಾರಗಳ ಮಗು ಸುನೀಲ್ ಅವರ ಫೋಟೋವನ್ನು ಸ್ಥಳೀಯ ಪತ್ರಿಕೆಗಳು "ಅತ್ಯಂತ ಹಿರಿಯ ಮತ್ತು ಕಿರಿಯ ಪ್ರತಿನಿಧಿಗಳು" ಎಂದು ಮುಖಪುಟದಲ್ಲಿ ಪ್ರಕಟಿಸಿದ್ದವು.
ಸುನೀಲ್ ಅಮೆರಿಕದಲ್ಲಿ ಓದುತ್ತಿದ್ದಾಗ, ತಮ್ಮ ಬ್ಯುಸಿ ಶೂಟಿಂಗ್ ವೇಳಾಪಟ್ಟಿಯಿಂದ ಬಿಡುವು ಮಾಡಿಕೊಂಡು ವಾಷಿಂಗ್ಟನ್‌ಗೆ ಹಾರಿದ್ದ ದೇವ್ ಆನಂದ್, ಮಗನನ್ನು ಅಪ್ಪಿ ಆತನೊಂದಿಗೆ ಕಾರಿನಲ್ಲಿ ಅಮೆರಿಕದ ರಾಜಧಾನಿ ಸುತ್ತಿದ್ದು, ಸನ್‌ಗ್ಲಾಸ್ ಕೊಡಿಸಿದ್ದು ತಮ್ಮ ಜೀವನದ ಅತ್ಯಂತ ಮೌಲ್ಯಯುತ ಕ್ಷಣಗಳೆಂದು ಬರೆದಿದ್ದಾರೆ.
ಸುನೀಲ್ ಆನಂದ್ ಅವರ ಅಗಲಿಕೆಯೊಂದಿಗೆ ಹಿಂದಿ ಚಲನಚಿತ್ರರಂಗದ ಸುವರ್ಣ ಯುಗದ ಅತ್ಯಂತ ಪ್ರಸಿದ್ದ ಚಿತ್ರಕುಟುಂಬದ ಮತ್ತೊಂದು ಪ್ರಮುಖ ಅಧ್ಯಾಯಕ್ಕೆ ತೆರೆಬಿದ್ದಂತಾಗಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.