ಭಾರತದಲ್ಲಿ ಪ್ರತಿಯೊಬ್ಬರು ಸಂಗೀತ ಕಲಿತಿದ್ದರೆ ದೇಶ ವಿಭಜನೆ ಆಗ್ತಿರಲಿಲ್ಲ: ಬಡೇ ಗುಲಾಂ ಅಲಿಖಾನ್‌

Published : May 01, 2025, 10:38 PM ISTUpdated : May 02, 2025, 09:55 AM IST
ಭಾರತದಲ್ಲಿ ಪ್ರತಿಯೊಬ್ಬರು ಸಂಗೀತ ಕಲಿತಿದ್ದರೆ ದೇಶ ವಿಭಜನೆ ಆಗ್ತಿರಲಿಲ್ಲ: ಬಡೇ ಗುಲಾಂ ಅಲಿಖಾನ್‌

ಸಾರಾಂಶ

"ಮುಘಲ್-ಎ-ಆಜಮ್" ಚಿತ್ರದ "ಪ್ರೇಮ್ ಜೋಗನ್ ಬನ್ನೆ" ಹಾಡನ್ನು ಬಡೇ ಗುಲಾಮ್ ಅಲಿ ಖಾನ್ ಹಾಡಿದರು. 25,000 ರೂ. ಸಂಭಾವನೆ ಪಡೆದ ಖಾನ್, ನಟರ ಲಿಪ್‌ಸಿಂಕ್ ಇರಬಾರದೆಂದು ಷರತ್ತು ವಿಧಿಸಿದ್ದರು. ನೌಷಾದ್ ಸಂಗೀತ ನಿರ್ದೇಶನದ ಈ ಹಾಡು ಕೋಟ್ಯಂತರ ಹೃದಯಗಳನ್ನು ತಟ್ಟಿತು. 15 ವರ್ಷಗಳ ಚಿತ್ರೀಕರಣದ ಈ ಚಿತ್ರ ಭಾರತೀಯತೆಯನ್ನು ಬೆಸೆಯಿತು.

"ಮುಘಲ್ ಎ ಆಜಮ್" ಚಿತ್ರದ "ಪ್ರೇಮ್ ಜೋಗನ್ ಬನ್ನೆ" ಹಾಡು ಕೇಳಿಯೇ ಇರುತ್ತೀರ.. ಕೋಟ್ಯಂತರ ಹೃದಯಗಳನ್ನು ತೇವಗೊಳಿಸುವ ಈ ಹಾಡಿನ ಆಲಾಪನೆ, ಅಕ್ಟ‌ರ್ ಎದುರಿಗೆ ತಲೆ ಎತ್ತಿ ನಿಲ್ಲುವುದೇ ಸಾಧ್ಯವಿಲ್ಲದಿದ್ದಾಗ ಬಾದ್ ಷಾ ಸೊಂಟದಿಂದ ಚಾಕು ತೆಗೆದು, ಕಣ್ಣಲ್ಲಿ ಕಣ್ಣಿಟ್ಟು, "ಜಬ್ ಪರ್ದಾ ನಹೀ ಕೋಯಿ ಖುದಾ ಸೆ, ಬಡೋಂಸೆ ಪರ್ದಾ ಕರ್ನಾ ಕ್ಯಾ" ಎಂದು ಹಾಡುತ್ತಲೇ ಪ್ರೀತಿಯ ಕುಲುಮೆಯಲ್ಲಿ ದ್ವೇಷವನ್ನು ಸುರಿಯುವ ಧೀಮಂತಿಕೆಗೆ ಸಾಕ್ಷಿಯಾದ ಹಾಡು...

ಪೃಥ್ವಿರಾಜ್ ಕಪೂರ್, ದಿಲೀಪ್‌ ಕುಮಾ‌ರ್, ಮಧುಬಾಲಾ, ನೌಷಾದ್, ಆಸಿಫ್ ತಮ್ಮನ್ನು ತಾವು ಇಡಿ ಇಡಿಯಾಗಿ ಬಸಿದುಕೊಂಡು ಕಲೆಯಲ್ಲಿ ಕೆತ್ತಿದ "ಮುಘಲ್ ಎ ಆಜಮ್ ಸಿನಿಮಾ  ನಿರ್ವಾಜ್ಯ ಪ್ರೇಮದ ಬೆಳಕಿನ ಕಂದೀಲು.
ಅಂಥ ಚಿತ್ರದ "ಪ್ರೇಮ್‌ ಜೋಗನ್‌ ಬನ್ನೇ" ಹಾಡು ಹಾಡಿದ್ದು ಭಾರತೀಯ ಶಾಸ್ತ್ರೀಯ ಸಂಗೀತ ಸಾಮ್ರಾಟ ಬಡೇ ಗುಲಾಮ್‌ ಅಲಿಖಾನ್‌. ದೇಶ ವಿಭಜನೆ ಹೊತ್ತಲ್ಲಿ ಪಾಕಿಸ್ತಾನ ಪಾಲಾಗಿದ್ದ ಬಡೇ ಗುಲಾಂ ಅಲಿ ಖಾನ್, ಪಾಕಿಸ್ತಾನದಲ್ಲಿ ಸಂಗೀತ ಕಚೇರಿ ನಡೆಸಲು ಇದ್ದ ನಿರ್ಬಂಧದಿಂದ ಬೇಸತ್ತು ಭಾರತಕ್ಕೆ ಮರಳಲು ಬಯಸಿದ್ದರು. ನೆಹರೂ, ಮೊರಾರ್ಜಿ ದೇಸಾಯಿ ನೆರವಿನಿಂದ  ಭಾರತೀಯ ಪ್ರಜೆಯಾಗುವ ಬಡೆ ಗುಲಾಮ್ ಅಲಿ ಖಾನ್, ಮೊಘಲ್ ಎ ಆಜಮ್  ಸಿನಿಮಾಗೆ ಹಾಡಿದ್ದೇ ರೋಚಕ ಕತೆ. ಸಿನಿಮಾದಿಂದ ದೂರವುಳಿದಿದ್ದ ಬಡೇ ಗುಲಾಂ ಅಲಿ ಖಾನರಿಗೆ, ಶಾಸ್ತ್ರೀಯ ಸಂಗೀತದ ಸಂಸ್ಕಾರವನ್ನು ಸಿನಿಮಾ ಲೋಕ ಹಾಳುಮಾಡಿದೆ ಎನ್ನುವ ಸಿಟ್ಟು. ಹೀಗಾಗಿ ಅಪ್ಪಿ ತಪ್ಪಿಯೂ ಸಿನಿಮಾ ಕಡೆ ತಲೆ ಹಾಕಿರಲಿಲ್ಲ. ಆದರೆ, ಪಾಕಿಸ್ತಾನ ತ್ಯಜಿಸಿ ಬಂದ ಅಲಿ ಖಾನ್ ಅವರಿಂದ "ಮುಘಲ್ ಎ ಆಜಮ್" ಸಿನಿಮಾಗೆ ಹಾಡಿಸಲೇ ಬೇಕು ಎಂಬುದು ಸಂಗೀತ ನಿರ್ದೇಶಕ ನೌಷಾದ್ ಕನಸು. ಚಿತ್ರ  ನಿರ್ದೇಶಕ ಆಸಿಫ್ ಸಹ ಒಪ್ಪುತ್ತಾರೆ. ಅಲ್ಲಿಂದ ಶುರುವಾಗುತ್ತದೆ, ಬಡೆ ಗುಲಾಮ್‌ ಅಲಿಖಾನ್‌ರನ್ನು ಒಪ್ಪಿಸುವ ಸಾಹಸ. ಸಂಗೀತ ನಿರ್ದೇಶಕ ನೌಷಾದ್‌ ಒತ್ತಾಯವನ್ನು ಬಡೆ ಗುಲಾಂ ಅಲಿ ಖಾನ್ ಅತ್ಯಂತ ನಿಷ್ಠುರವಾಗಿ ತಿರಸ್ಕರಿಸುತ್ತಾರೆ. ನೌಷಾದ್ ತಮ್ಮ ಹಠ ನಿಲ್ಲಿಸದೆ ಬೆನ್ನು ಬೀಳುತ್ತಾರೆ. ಗುಲಾಂ ಅಲಿಖಾನ್‌, ತಿಂಗಳುಗಟ್ಟಲೆ ಅವರಿಂದ ತಪ್ಪಿಸಿಕೊಂಡು ತಿರುಗುತ್ತಾರೆ. ಕೊನೆಗೆ ನೌಷಾದ್ ರಿಂದ ತಪ್ಪಿಸಿಕೊಳ್ಳಲು ಉಪಾಯ ಹೂಡುವ ಬಡೆ ಸಾಬ್,  ತಮ್ಮ ಹಾಡಿಗೆ 25 ಸಾವಿರ ಸಂಭಾವನೆ ಕೊಡಬೇಕೆಂಬ ಬೇಡಿಕೆ ಇಡುತ್ತಾರೆ. ಗುಲಾಂ ಅಲಿಖಾನ್‌ರ ಬೇಡಿಕೆ ಕೇಳಿ ನೌಷಾದ್‌ ಗಾಬರಿ ಬೀಳುತ್ತಾರೆ. 


ಯಾಕಂದ್ರೆ,  ಗುಲಾಂ ಅಲಿ ಖಾನ್ 25 ಸಾವಿರ ಸಂಭಾವನೆ ಕೇಳಿದ ಟೈಮಲ್ಲಿ ಲತಾ ಮಂಗೇಷ್ಕ‌ರ್, ಮೊಹಮದ್ ರಫಿ, ಕಿಶೋರ್ ಕುಮಾರ್ ಒಂದು ಹಾಡಿಗೆ ಪಡೆಯುತ್ತಿದ್ದ ಸಂಭಾವನೆ ಕೇವಲ 500 ರೂ.. ಆದರೆ, ಬಡೆ ಗುಲಾಮ್‌ ಅಲಿಖಾನ್‌ ಸಾಹೇಬರ ಹಾಡಿನ ಮೋಡಿ ಎದುರು ದುಡ್ಡು ಯಾವ ಲೆಕ್ಕ ಎಂದುಕೊಂಡು, 25 ಸಾವಿರ ಕೊಡಲು ಒಪ್ಪುತ್ತಾರೆ ನೌಷಾದ್‌.  ಅವರು ಅನಿವಾರ್ಯವಾಗಿ ಹಾಡಲು ಒಪ್ಪಿಕೊಳ್ಳುತ್ತಾರೆ. ಆದರೂ, ಪಟ್ಟು ಬಿಡದ ಬಡೇ ಖಾನ್‌, ತಮ್ಮ ಹಾಡಿಗೆ ಯಾವ ನಟರ Lip Sink ಇರಬಾರದು ಎನ್ನುವ ಷರತ್ತಿಡುತ್ತಾರೆ. ಇದಕ್ಕೂ ನೌಷಾದ್‌, ನಿರ್ದೇಶಕ ಆಸೀಫ್‌ ಒಪ್ಪುತ್ತಾರೆ. ಬಡೆ ಗುಲಾಂ ಅಲಿ ಖಾನ್  "ಪ್ರೇಮ್ ಜೋಗನ್ ಬನ್ನೆ" ಹಾಡುತ್ತಾರೆ,  ಕೋಟ್ಯಂತರ ಪ್ರೇಮಿಗಳ ಹೃದಯಗಳನ್ನು ಆರ್ದ್ರಗೊಳಿಸುತ್ತಾರೆ. ಆ ಹಾಡಿನ ಜೀವವೇ ಆಗಿಬಿಡುತ್ತಾರೆ.

ವಿಶ್ವ ಸಿನಿಮಾ ಜಗತ್ತಿನಲ್ಲಿ ಶಾಶ್ವತ ಸ್ಥಾನ ಪಡೆದ ಮುಘಲ್ ಎ ಆಜಮ್ ಸಿನಿಮಾದ ಚಿತ್ರೀಕರಣ ನಡೆದದ್ದು 15 ವರ್ಷ. ತೆರೆ ಕಂಡಿದ್ದು 1960ರಲ್ಲಿ. ಸಿನಿಮಾಗೆ ಖರ್ಚಾಗಿದ್ದು 1.5 ಕೋಟಿ ರೂ. ಮಾತ್ರ. ಬ್ರಿಟೀಷ್ ಸಾಮ್ರಾಜ್ಯಶಾಹಿಯನ್ನು ಬಗ್ಗು ಬಡಿದ ಸ್ವಾತಂತ್ರ್ಯ ಹೋರಾಟದ ಘನತೆ, ದೇಶ ವಿಭಜನೆಯ ದ್ವೇಷದ ಗಾಯಕ್ಕೆ ಮೊಹಬ್ಬತ್‌ ನ ಮುಲಾಮು, ಕಲೆ-ಸಂಗೀತ-ಸಿನಿಮಾದ ಮೂಲಕ ಭಾರತೀಯತೆಯನ್ನು ಬೆಸೆಯುವ ಸಾಂಸ್ಕೃತಿಕ ಸಾಹಸ ಹಾಗೂ ಅಪಾರ ಕಲಾ ಶ್ರೀಮಂತಿಕೆಗೆ ಸಾಕ್ಷಿಯಾದ "ಮುಘಲ್ ಎ ಆಜಮ್" ಕೇವಲ ಸಿನಿಮಾ ಅಲ್ಲ. ಭಾರತೀಯತೆಯ ಚರಿತ್ರೆ, ಭಾರತೀಯ ಬೆಸುಗೆ..! ಒಮ್ಮೆ ತುಳಸಿದಾಸ ಶರ್ಮಾರ ಜತೆ ಮಾತಿಗೆ ಕುಳಿತಿದ್ದ ಬಡೇ ಗುಲಾಂ ಅಲಿಖಾನ್ ರು, ಭಾರತದ ಪ್ರತಿಯೊಂದು ಕುಟುಂಬದ ಪ್ರತಿಯೊಬ್ಬರು,  ಸಂಗೀತ ಕಲಿತಿದ್ದರೆ, ಈ ದೇಶ‌ ವಿಭಜನೆಯೇ ಆಗುತ್ತಿರಲಿಲ್ಲ ಎಂದಿದ್ದರಂತೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

SM
About the Author

Shobha MC

ಮಂಡ್ಯ ಜಿಲ್ಲೆಯ ಮಳವಳ್ಳಿಯವರು. ಮಾನಸ ಗಂಗೋತ್ರಿಯಲ್ಲಿ ಪತ್ರಿಕೋದ್ಯಮ ಎಂಎ ಮುಗಿಸಿ, ಸೇರಿದ್ದು ವಿಜಯ ಕರ್ನಾಟಕ ಪತ್ರಿಕೆಗೆ. ಸೂರ್ಯೋದಯ ಸೇರಿ ಪತ್ರಿಕೆಗಳಲ್ಲಿ 7 ವರ್ಷಗಳ ಅನುಭವ. ನ್ಯೂಸ್ ಚಾನೆಲ್ಗಳಿನ್ನೂ ಸರಿಯಾಗಿ ಕಣ್ಬಿಡದ ಕಾಲದಲ್ಲೇ ದೃಶ್ಯ ಮಾಧ್ಯಮಕ್ಕೆ ಕಾಲಿಟ್ಟಿದ್ದು, ಟೆಲಿವಿಷನ್ ಪಟ್ಟುಗಳೆಲ್ಲ ಕರತಲಾಮಲಕ. ಉದಯ ಟಿವಿಯಲ್ಲಿ 2 ವರ್ಷ ಸೇವೆ. ಕಳೆದ 17 ವರ್ಷದಿಂದಲೂ ಸುವರ್ಣ ನ್ಯೂಸ್ ಇನ್ಪುಟ್, ಔಟ್ಪುಟ್ ಹೆಡ್ ಆಗಿ ಕಾರ್ಯ ನಿರ್ವಹಣೆ. ಪತ್ರಿಕೆ- ಟಿವಿ ಎರಡರ ಅಗಾಧ ಅನುಭವ ಇರುವ ಏಕೈಕ ಪತ್ರಕರ್ತೆ. ಪ್ರತಿಷ್ಠಿತ ಕರ್ನಾಟಕ ಮಾಧ್ಯಮ ಅಕಾಡೆಮಿ, ಕರ್ನಾಟಕ ಪತ್ರಕರ್ತರ ಸಂಘ, ಕೆಂಪೇಗೌಡ ಪ್ರಶಸ್ತಿ, ಪಬ್ಲಿಕ್ ರಿಲೇಷನ್ ಕೌನ್ಸಿಲ್ ಆಫ್ ಇಂಡಿಯಾ, ಪ್ರೆಸ್ಕ್ಲಬ್ ವಾರ್ಷಿಕ ಪ್ರಶಸ್ತಿಗಳು ಮುಡಿಗೇರಿವೆ. ಸದ್ಯ ಕರ್ನಾಟಕ ಮಾಧ್ಯಮ ಅಕಾಡೆಮಿ ಸದಸ್ಯೆ, ಮೈಸೂರು ವಿವಿ ಪತ್ರಿಕೋದ್ಯಮ ವಿಭಾಗದ ಸಿಲಬಸ್ ಕಮಿಟಿ ಸದಸ್ಯೆಯಾಗಿಯೂ ನೇಮಕ.Read More...
Read more Articles on
click me!

Recommended Stories

'ಬಂದವ್ರಿಗೆ ದಾರಿಕೊಡಿ, ಹೋಗೋರಿಗೆ ದಾರಿಬಿಡಿ..'ಜೀ ಕನ್ನಡ ವೇದಿಕೆಯಲ್ಲಿ ಹೇಳಿದ್ದ ಮಾತನ್ನೇ ಬಿಗ್‌ಬಾಸ್‌ನಲ್ಲಿ ಮರೆತ್ರಾ ಗಿಲ್ಲಿ ನಟ!
'ನನಗೆ ಡೈವೋರ್ಸ್‌ ಸಿಗೋದು ಪಕ್ಕಾ..' ನ್ಯಾಷನಲ್‌ ಕ್ರಶ್‌ ಗಿರಿಜಾ ಓಕ್‌ ಫೋಟೋಗೆ ಫ್ಯಾನ್ಸ್ ರಿಯಾಕ್ಷನ್‌