ಝೈದ್ ಖಾನ್ ಮತ್ತು ಸೋನಲ್ ಮೊಂತೆರೋ ಕಾಂಬಿನೇಷನ್‌ನಲ್ಲಿ ಮೂಡಿ ಬಂದಿರುವ ಬನಾರಸ್ ಸಿನಿಮಾ ದೇಶಾದ್ಯಂತ ಅದ್ಧೂರಿ ಓಪನಿಂಗ್ ಕಂಡಿದೆ. ಜಯತೀರ್ಥ ನಿರ್ದೇಶನ ಮಾಡಿರುವ ಸಿನಿಮಾ ಹೇಗಿದೆ?
ರಾಜೇಶ್ ಶೆಟ್ಟಿ
ಸಾವು ಮತ್ತು ಬದುಕು, ವೈರಾಗ್ಯ ಮತ್ತು ಪ್ರೇಮ, ಅಧ್ಯಾತ್ಮ ಮತ್ತು ಲೌಕಿಕತೆ ಈ ಎಲ್ಲವೂ ಒಂದಕ್ಕೊಂದು ಬೆರೆತುಕೊಂಡು ಮಾಯಕದ ಜಗತ್ತಿನಂತೆ ಭಾಸವಾಗುವ ವಾರಾಣಸಿಯ ಅಂಗಳದಲ್ಲಿ ನಡೆಯುವ ಕತೆ ಇದು.
ಈ ಕತೆ ನಿಂತಿರುವುದು ಪ್ರೇಮದ ಸೂತ್ರದಲ್ಲಿ. ಅದರ ಮಧ್ಯೆ ಟೈಮ್ ಟ್ರಾವೆಲ್, ಟೈಮ್ ಲೂಪ್ ಇತ್ಯಾದಿ ವಿಶಿಷ್ಟವಿಚಿತ್ರ ಸಂಗತಿಗಳೆಲ್ಲಾ ಜರುಗಿಹೋಗುತ್ತವೆ. ಒಬ್ಬ ಹುಡುಗಾಟಿಕೆಯ ನಾಯಕ ಮುಗ್ಧ ಹುಡುಗಿಯ ತಿಳಿಯಾದ ಕೊಳದಂಥ ಬದುಕಲ್ಲಿ ರಾಡಿ ಎಬ್ಬಿಸುವ ಕ್ಷಣದಿಂದ ಕತೆ ಆರಂಭವಾಗುತ್ತದೆ. ಅಲ್ಲಿಂದ ಅವನ ಮತ್ತು ಅವಳ ಬದುಕು ಒಂದಕ್ಕೊಂದು ಸೇರಿಕೊಂಡು ಮುಂದೆ ಸಾಗುತ್ತದೆ. ಮೊದಲಾರ್ಧದಲ್ಲಿ ಇದೊಂದು ಬರಿಯ ಪ್ರೇಮಕತೆ. ದ್ವಿತೀಯಾರ್ಧದಲ್ಲಿ ಕೊಂಚ ಸೈಂಟಿಫಿಕ್ ಥ್ರಿಲ್ಲರ್, ರಿವೆಂಜ್ ಡ್ರಾಮಾ. ಶುರುವಲ್ಲಿರುವ ನವಿರುತನವೇ ಕೊಂಚ ನಿಧಾನ. ಆಮೇಲಿನ ವೇಗ ಪ್ರೇಕ್ಷಕನನ್ನು ರಭಸದಿಂದ ಕರೆದೊಯ್ಯುತ್ತದೆ. ಆ ವೇಗದ ನಡಿಗೆ ಥಟ್ ಅಂತ ನಿಂತುಹೋಗುವಾಗ ಖಾಲಿತನ ಆವರಿಸುತ್ತದೆ. ಅಲ್ಲಿಂದಾಚೆಗೆ ಒಂಚೂರು ಫಿಲಾಸಫಿ. ಮತ್ತೊಂಚೂರು ಪ್ರೇಮಪಾಠ. ವಾರಾಣಸಿಯಲ್ಲಿ ಬರೀ ಹೆಣದ ಫೋಟೋ ತೆಗೆಯುವ ವೈರಾಗ್ಯಭರಿತ ಫೋಟೋಗ್ರಾಫರ್ ಒಬ್ಬ ಕಟ್ಟಕಡೆಯಲ್ಲಿ ಬದುಕಿರುವ ಜೀವಗಳ ಫೋಟೋ ತೆಗೆಯುವಷ್ಟುಜೀವಂತಿಕೆ ಪಡೆಯುತ್ತಾನೆ ಅನ್ನುವುದೇ ಬನಾರಸ್ ಸಿನಿಮಾದ ಸಾರ್ಥಕತೆ.
ಚಿತ್ರಕತೆಗಾರನಿಗೆ ಇಲ್ಲಿ ಎಲ್ಲವೂ ಹೇಳಬೇಕು ಅನ್ನುವ ತುಡಿತ. ಪ್ರೇಮ, ಸೈನ್ಸು, ದ್ವೇಷ, ಕೆಮಿಸ್ಟ್ರಿ, ಬಯಾಲಜಿ, ಫಿಲಾಸಫಿ ಎಲ್ಲವನ್ನೂ ಸೇರಿಸಿ ಒಂದು ಕಾಕ್‌ಟೇಲ್ ಅಥವಾ ಮಿಕ್ಷ$್ಚರ್ ಮಾಡುವ ಹಂಬಲ. ಅವರ ಉದ್ದೇಶ ನೆರವೇರಿದೆ. ಆದರೆ ಎಲ್ಲವೂ ಚದುರಿದ ಚಿತ್ರಗಳಂತೆ ಭಾಸವಾಗುತ್ತದೆ. ಅದನ್ನೆಲ್ಲಾ ಕೂಡಿಸಿ ಒಂದೇ ಚಿತ್ರವನ್ನಾಗಿಸುವ ಸಂಯಮ ಒದಗುವ ಕಾಲ ಇದಲ್ಲ.
ನಿರ್ದೇಶನ: ಜಯತೀರ್ಥ
ತಾರಾಗಣ: ಝೈದ್ ಖಾನ್, ಸೋನಲ್ ಮೊಂತೆರೋ, ಸುಜಯ್ ಶಾಸ್ತ್ರಿ, ಅಚ್ಯುತ್ ಕುಮಾರ್, ದೇವರಾಜ್
ರೇಟಿಂಗ್- 3
GANDHADA GUDI REVIEW: ಮುಗ್ಧನಂತೆ, ಸಂತನಂತೆ; ಬೆರಗಾಗಿ, ಬಯಲಾಗಿ..
ಈ ಸಿನಿಮಾದ ನಾಯಕ ಝೈದ್ ಖಾನ್ ಮೆಚ್ಚುಗೆಗೆ ಅರ್ಹ. ಹೆಚ್ಚೆಂದರೆ ಎರಡು ಫೈಟ್ ಇರಬಹುದಾದ ಸಿನಿಮಾ. ಪಕ್ಕಾ ಕಮರ್ಷಿಯಲ್ ಎಂದು ಅನ್ನಿಸದ ಸಿನಿಮಾ. ಅದನ್ನು ಒಪ್ಪಿಕೊಂಡು, ಅಪ್ಪಿಕೊಂಡು, ಜೀವತುಂಬಿ ಪಾತ್ರವೇ ತಾನಾಗಿ ನಟಿಸುವ ಧೈರ್ಯ ತೋರಿದ್ದು ಶ್ಲಾಘನೀಯ. ಆರಂಭದಿಂದ ಕೊನೆಯವರೆಗೂ ಸ್ಕ್ರೀನಲ್ಲಿ ಕಾಣಿಸುವ ಝೈದ್ ಖಾನ್ ಸ್ಟೈಲಿಶ್ ಆಗಿ ಕಾಣಿಸುತ್ತಾರೆ ಮತ್ತು ಭರವಸೆ ಹುಟ್ಟಿಸುತ್ತಾರೆ. ಚಿತ್ರದ ಛಾಯಾಗ್ರಾಹಕ ಅದ್ವೈತ್ ಗುರುಮೂರ್ತಿ ತೋರಿಸುವ ವಾರಾಣಸಿಯ ಚಿತ್ರಗಳು ಕಾಡುವಷ್ಟುಮನಮೋಹಕವಾಗಿವೆ. ಭಂಗಿ ಸೇದುವ ಸಾಧು, ರುದ್ರಾಕ್ಷಿ ಮಾಲೆ ಧರಿಸಿದ ಸಾದ್ವಿನಿ, ಹೆಣ ಸುಡುವ ನಿರ್ಭಾವುಕ ಗಳಿಗೆ, ಗಂಗೆಯ ಮೇಲೆ ಹಾರಿ ಹೋಗುವ ಹಕ್ಕಿಯ ಚಿತ್ರಗಳು ಹಾಗ್ಹಾಗೇ ಮನಸ್ಸಲ್ಲಿ ಉಳಿದುಹೋಗುತ್ತವೆ.
ವಿಭಿನ್ನ ಜಗತ್ತನ್ನು ತೋರಿಸುವ ಬಣ್ಣದ ಕತೆ ಇದು. ವಾರಾಣಸಿಯ ಅಂಗಳದಲ್ಲಿ ಓಡಾಡಿಕೊಂಡು ಬಂದ ಭಾವ ಈ ಸಿನಿಮಾ ನೋಡಿ ಬಂದ ಮೇಲೂ ಉಳಿಯುತ್ತದೆ ಅನ್ನುವುದೇ ಬನಾರಸ್ ಹೆಚ್ಚುಗಾರಿಕೆ.