ವಿನಯ್ ರಾಜ್‌ಕುಮಾರ್, ಸ್ವಾತಿಷ್ಠಾ ಕೃಷ್ಣನ್, ಮಲ್ಲಿಕಾ ಸಿಂಗ್, ರಾಜೇಶ್ ನಟರಂಗ ನಟನೆಯ ಒಂದು ಸರಳ ಪ್ರೇಮ ಕಥೆ ಸಿನಿಮಾ ರಿಲೀಸ್ ಆಗಿದೆ. ಸಿನಿಮಾ ಹೇಗಿದೆ?
ರಾಜೇಶ್ ಶೆಟ್ಟಿ
ಲವಲವಿಕೆಯ ನಿರೂಪಣೆಯಲ್ಲಿ ಸಿಂಪಲ್ ಸುನಿ ಎತ್ತಿದ ಕೈ. ಪ್ರೇಮ ಕತೆಗಳ ವಿಚಾರದಲ್ಲೂ ಅವರು ಅನುಭವಸ್ಥರು. ನಗಿಸುವುದು, ಮೌನಿಯಾಗಿಸುವುದು, ಅಚ್ಚರಿಗೊಳಿಸುವುದು, ಮರುಳಾಗಿಸುವುದು ಅವರ ಬರವಣಿಗೆ ಬತ್ತಳಿಕೆಯಲ್ಲಿನ ಬಾಣಗಳು. ಇದು ಅವೆಲ್ಲವೂ ಸೇರಿಕೊಂಡು ರಚನೆಯಾದ ಮನಮೋಹಕ ಪ್ರೇಮಕತೆ.
ಒಂದು ಸಂಜೆ ತನ್ನನ್ನು ಕಾಡಿದ, ಕಲಕಿದ ಧ್ವನಿಯನ್ನು ಹುಡುಕಿಕೊಂಡು ಹೋಗುವ ಒಬ್ಬ ಸಂಗೀತ ಪ್ರೇಮಿ ತರುಣ. ಅವನ ಹುಡುಕಾಟದಲ್ಲಿ ಸಿಗುವ ಚಂದ ಧ್ವನಿಯ ಹುಡುಗಿ. ಅವನ ಜೊತೆಗೇ ಸ್ನೇಹಿತೆಯಾಗಿ, ಶತ್ರುವಾಗಿ ಟಾಮ್ ಆ್ಯಂಡ್ ಜೆರ್ರಿಯಂತೆ ಇರುವ ಮತ್ತೊಬ್ಬ ತರುಣಿ. ಈ ಮೂವರ ಪ್ರೇಮ, ಬದುಕಿನ ಹುಡುಕಾಟವೇ ಈ ಪ್ರೇಮಕತೆ.
MAAYE AND COMPANY REVIEW ಸಾಮಾಜಿಕ ಜಾಲತಾಣಗಳ ದುಷ್ಪರಿಣಾಮದ ಅರಿವು ಮೂಡಿಸುವ ಚಿತ್ರ
ನಿರ್ದೇಶನ: ಸಿಂಪಲ್ ಸುನಿ
ತಾರಾಗಣ: ವಿನಯ್ ರಾಜ್‌ಕುಮಾರ್, ಸ್ವಾತಿಷ್ಠಾ ಕೃಷ್ಣನ್, ಮಲ್ಲಿಕಾ ಸಿಂಗ್, ರಾಜೇಶ್ ನಟರಂಗ
ರೇಟಿಂಗ್: 3
ಈ ಕತೆಯಲ್ಲಿ ನವಿರು ಪ್ರೇಮದ ಸಂತೋಷವಿದೆ, ದಾರಿಗೆ ಅಡ್ಡಿ ಪಡಿಸುವ ವಿಧಿಯ ಕೈವಾಡ ಇದೆ, ಬೇಕಾಗಿದ್ದು ಎದುರಿಗೇ ಇದ್ದರೂ ಗೋಚರಿಸದಿರುವ ದುರಂತವಿದೆ, ಬದುಕಿನ ವಿಷಾದವಿದೆ, ಜೊತೆಗೆ ಬದುಕು ನೀಡುವ ಅಪರೂಪದ ಅಚ್ಚರಿಯೂ ಸೇರಿಕೊಂಡಿದೆ. ಹಾಗಾಗಿಯೇ ಇದೊಂದು ವಿಶಿಷ್ಟ ಕತೆಯಾಗಿ ರೂಪುಗೊಂಡಿದೆ.
Bachelor Party Review ದ್ರೋಹವೂ ಇಲ್ಲಿ ತಮಾಷೆಯ ಬೆನ್ನೇರಿದೆ!
ವಿನಯ್ ರಾಜ್‌ಕುಮಾರ್ ಎಂದಿನಂತೆ ಸಹಜವಾಗಿ ಕಾಣಿಸಿಕೊಂಡಿದ್ದಾರೆ. ಮಲ್ಲಿಕಾ ಸಿಂಗ್ ಚಂದ ಕಾಣಿಸುತ್ತಾರೆ. ಈ ಸಿನಿಮಾದ ನಿಜವಾದ ಅಚ್ಚರಿ ಎಂದರೆ ಸ್ವಾತಿಷ್ಠಾ ಕೃಷ್ಣನ್. ನಟನೆ, ಕಣ್ಣೋಟ, ಭಾವಗಳನ್ನು ದಾಟಿಸುವ ಶೈಲಿಯಿಂದಾಗಿ ಅವರು ಬೆರಗುಗೊಳಿಸುತ್ತಾರೆ ಮತ್ತು ಮಿರುಗುತ್ತಾರೆ. ವೀರ್ ಸಮರ್ಥ್ ಕಾಡುವಂಥ ಸಂಗೀತ ನೀಡಿದ್ದಾರೆ.
ಪ್ರಥಮಾರ್ಧ ಪ್ರಯಾಣದಲ್ಲಿ ಲೈವ್ಲೀನೆಸ್ ಇದ್ದರೆ, ದ್ವಿತೀಯಾರ್ಧದಲ್ಲಿ ಹಲವು ತಿರುವುಗಳಿವೆ. ಅಂತಿಮವಾಗಿ ಈ ಸಿನಿಮಾ ಆಹ್ಲಾದಕರ ಭಾವವೊಂದನ್ನು ಉಳಿಸಿಹೋಗುತ್ತದೆ. ಅಷ್ಟರ ಮಟ್ಟಿಗೆ ಇದೊಂದು ಹಗುರಗೊಳಿಸುವ, ತಿಳಿಗೊಳಿಸುವ, ಪ್ರೀತಿಗೆ ಶರಣಾಗಿಸುವ ಪ್ರೇಮ ಕಥೆ.