
ರಾಜೇಶ್
ಕರಾವಳಿ ಭಾಗದವರಿಗೆ ಚಂಡೆ ಸದ್ದು ಕೇಳಿಸಿದರೆ ಸಾಕು ಮನಸ್ಸು ಅತ್ತ ಹಾತೊರೆಯುತ್ತದೆ. ಅದಕ್ಕೆ ಕಾರಣ ಯಕ್ಷಗಾನ. ರಾತ್ರಿ ಹೊತ್ತು ಎಲ್ಲಾದರೂ ಚಂಡೆ ಸದ್ದು ಕೇಳಿದರೆ ಒಮ್ಮೆ ಹೋಗಿ ನೋಡಿ ಬರುವ ಎಂದು ಎದ್ದು ಹೋಗುವಷ್ಟು ಯಕ್ಷಗಾನ ಪ್ರೀತಿ. ರವಿ ಬಸ್ರೂರು ಅದೇ ಪ್ರೀತಿಯಿಂದ ಈ ಸಿನಿಮಾ ಮಾಡಿದ್ದಾರೆ. ಇದೊಂದು ಸಿನಿಮಾ ಅನ್ನುವುದಕ್ಕಿಂತ ಒಂದು ವಿಶಿಷ್ಟ ಪ್ರಯೋಗ ಅನ್ನುವುದು ಉತ್ತಮ. ತಂತ್ರಜ್ಞಾನವನ್ನು ಬಳಸಿಕೊಂಡು ಯಕ್ಷಗಾನದ ಶೈಲಿಯಲ್ಲಿ ಜೈಮಿನಿ ಭಾರತದಲ್ಲಿ ಬರುವ ಚಂದ್ರಹಾಸನ ಕತೆಯನ್ನು ಹೇಳಿದ್ದಾರೆ. ಇಲ್ಲಿ ಎಲ್ಲಾ ಪಾತ್ರಧಾರಿಗಳೂ ಯಕ್ಷಗಾನ ವೇಷದಲ್ಲಿದ್ದಾರೆ.
ರಂಗಸ್ಥಳದಲ್ಲಿ ಭಾಗವತರ ಹಾಡುಗಾರಿಕೆ ಮತ್ತು ಅರ್ಥಧಾರಿಗಳ ಮಾತುಕತೆ ಮೂಲಕವೇ ಕತೆ ಮತ್ತು ಪರಿಸರ ಅನಾವರಣಗೊಂಡರೆ ಈ ಸಿನಿಮಾದಲ್ಲಿ ವಾಸ್ತವ ಪರಿಸರದಲ್ಲಿ ಕತೆ ನಡೆಯುತ್ತದೆ. ತಂತ್ರಜ್ಞಾನ ಬಳಸಿಕೊಂಡು ಅರಮನೆ, ಕಾಡು, ದೇಗುಲ ಇತ್ಯಾದಿ ಸೃಷ್ಟಿಸಿದ್ದಾರೆ. ಜೊತೆಗೆ ವಿಭಿನ್ನ ಸೆಟ್‌ಗಳನ್ನು ಹಾಕಿ ಸಿನಿಮಾ ರೂಪಿಸಿದ್ದಾರೆ. ರವಿ ಬಸ್ರೂರು ಚಂಡೆ ಸದ್ದನ್ನು ಅದ್ದೂರಿಯಾಗಿ ಚಿತ್ರಮಂದಿರದಲ್ಲಿ ಮೊಳಗಿಸುತ್ತಾರೆ. ತಂದೆ, ತಾಯಿ ಕಳೆದುಕೊಂಡ ಹುಡುಗನೊಬ್ಬ ರಾಜನಾಗುವ ಸೊಗಸಾದ ಕತೆ ಇದು. ಆ ಕತೆಯನ್ನು ತಂತ್ರಜ್ಞಾನಕ್ಕೆ ಅತ್ಯುತ್ತಮವಾಗಿ ಅಳವಡಿಸಿಕೊಂಡಿದ್ದಾರೆ ಕೂಡ.
ಚಿತ್ರ: ವೀರ ಚಂದ್ರಹಾಸ
ನಿರ್ದೇಶನ: ರವಿ ಬಸ್ರೂರು
ತಾರಾಗಣ: ಶಿಥಿಲ್ ಶೆಟ್ಟಿ, ನಾಗಶ್ರೀ ಜಿಎಸ್, ಪ್ರಸನ್ನ ಶೆಟ್ಟಿಗಾರ್, ಉದಯ ಕಡಬಾಳ
ಯುದ್ಧಕಾಂಡ ಚಿತ್ರ ವಿಮರ್ಶೆ: ಸೂಕ್ಷ್ಮ ಪ್ರಶ್ನೆಯನ್ನೆತ್ತುವ ಕೋರ್ಟ್ ರೂಮ್ ಡ್ರಾಮಾ
ಯಕ್ಷಗಾನ ಗೊತ್ತಿರುವವರಿಗೆ ಥಟ್ ಅಂತ ಕನೆಕ್ಟ್ ಆಗುತ್ತದೆ. ಯಕ್ಷಗಾನ ಗೊತ್ತಿಲ್ಲದವರಿಗೆ ಕತೆ ಕೈ ಹಿಡಿಯಬಹುದು. ಆದರೆ ಯಕ್ಷಗಾನದ ಪರಿಚಯವೇ ಇಲ್ಲದವರಿಗೆ ಸ್ವಲ್ಪ ಸಂಯಮ ಬೇಕಾಗಬಹುದು. ರವಿ ಬಸ್ರೂರು ಈ ಸಿನಿಮಾ ಮೂಲಕ ಒಂದು ಕಲೆಯ ಚೌಕಟ್ಟು ಮೀರಿ ಆ ಕಲೆಯನ್ನು ಮತ್ತೊಂದು ಮಾಧ್ಯಮಕ್ಕೆ ಅಳವಡಿಸಲು ಯತ್ನಿಸಿ ಗೆದ್ದಿದ್ದಾರೆ. ಯಕ್ಷಗಾನವನ್ನು ಆಧುನಿಕ ರೀತಿಯಲ್ಲಿ ಮಕ್ಕಳಿಗೆ ಪರಿಚಯಿಸುವ ಆಸಕ್ತಿ ಇರುವವರು ಈ ಸಿನಿಮಾ ಆರಿಸಿಕೊಳ್ಳಬಹುದು. ಆ ನಂತರ ನಿಜವಾದ ಯಕ್ಷಗಾನ ನೋಡಿ ಮರುಳಾಗಬಹುದು. ರವಿ ಬಸ್ರೂರು ಉದ್ದೇಶವೂ ಉದ್ದೇಶವೂ ಅದೇ ಬಹುಶಃ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.