Darshan Kaatera Review: ಕತೆಯೆಂಬ ಬೆಂಕಿಯಲ್ಲಿ ಕಾದು ಮಿರುಗುವ ಕಾಟೇರ

By Kannadaprabha NewsFirst Published Dec 30, 2023, 10:03 PM IST
Highlights

ಇದೊಂದು ಹಳ್ಳಿಯ ಕತೆ. ರೈತರ ಕತೆ. ಅನ್ಯಾಯದ ಕತೆ. ಸ್ವಾಭಿಮಾನದ ಕತೆ. ಹಳ್ಳಿಯೊಂದರಲ್ಲಿ ಗೇಣಿಗೆ ದುಡಿಯುತ್ತಿರುವ ರೈತರು ತಮ್ಮ ಬದುಕನ್ನು ಜಮೀನ್ದಾರನಿಗೆ ಸಮರ್ಪಿಸಿಕೊಂಡಿರುತ್ತಾರೆ. ಅವರಿಗಾಗುವ ಅನ್ಯಾಯಕ್ಕೆ ದೇವರು ಮುಕ್ತಿ ಕೊಡುತ್ತಾರೆ ಎಂದು ಭಾವಿಸಿರುತ್ತಾರೆ. 

ರಾಜೇಶ್ ಶೆಟ್ಟಿ

ದರ್ಶನ್ ವೃತ್ತಿ ಬದುಕಿನ ಒಂದು ವಿಶಿಷ್ಟ ಸಿನಿಮಾ ಇದು. ಅದಕ್ಕೆ ಕಾರಣವಾಗಿರುವುದು ಈ ಸಿನಿಮಾದ ಹಿನ್ನೆಲೆ ಮತ್ತು ಸಿನಿಮಾವನ್ನು ಕಟ್ಟಿಕೊಟ್ಟಿರುವ ರೀತಿ. ಒಬ್ಬ ಮಾಸ್‌ ಕಮರ್ಷಿಯಲ್‌ ಹೀರೋ ಇರುವಾಗ ಆ ಹೆಸರಿಗೆ ತಕ್ಕಂತೆ ಮತ್ತು ಕಥೆಗೂ ನ್ಯಾಯ ಸಿಗುವಂತೆ ಮಾಡುವುದು ಒಬ್ಬ ನಿರ್ದೇಶಕನ ದೊಡ್ಡ ಸವಾಲು. ಅದನ್ನು ಸಮರ್ಥವಾಗಿ ನಿಭಾಯಿಸಿ ದರ್ಶನ್‌ರನ್ನು ಹೊಸತಾಗಿ ತೋರಿಸಿರುವ ಮೆಚ್ಚುಗೆ ಸಲ್ಲಬೇಕಿರುವುದು ನಿರ್ದೇಶಕ ತರುಣ್‌ ಸುಧೀರ್‌ರಿಗೆ.

ಇದೊಂದು ಹಳ್ಳಿಯ ಕತೆ. ರೈತರ ಕತೆ. ಅನ್ಯಾಯದ ಕತೆ. ಸ್ವಾಭಿಮಾನದ ಕತೆ. ಹಳ್ಳಿಯೊಂದರಲ್ಲಿ ಗೇಣಿಗೆ ದುಡಿಯುತ್ತಿರುವ ರೈತರು ತಮ್ಮ ಬದುಕನ್ನು ಜಮೀನ್ದಾರನಿಗೆ ಸಮರ್ಪಿಸಿಕೊಂಡಿರುತ್ತಾರೆ. ಅವರಿಗಾಗುವ ಅನ್ಯಾಯಕ್ಕೆ ದೇವರು ಮುಕ್ತಿ ಕೊಡುತ್ತಾರೆ ಎಂದು ಭಾವಿಸಿರುತ್ತಾರೆ. ಅಂಥಾ ಒಂದು ಊರಿನ ಕುಲುಮೆಯಲ್ಲಿ ಕೆಲಸ ಮಾಡಿಕೊಂಡು ರಟ್ಟೆಯನ್ನು ಕಬ್ಬಿಣ ಮಾಡಿಕೊಂಡಿರುವ ಅತಿ ಸಾಮಾನ್ಯ ಕಾರುಣ್ಯಮೂರ್ತಿ ತರುಣನ ಪಾತ್ರ ದರ್ಶನ್‌ ಅವರದು. ಆ ಸಾಮಾನ್ಯನೊಬ್ಬ ಅಸಾಮಾನ್ಯನಾಗುವ ಕತೆಯೇ ‘ಕಾಟೇರ’.

ಚಿತ್ರ: ಕಾಟೇರ
ನಿರ್ದೇಶನ: ತರುಣ್ ಸುಧೀರ್
ತಾರಾಗಣ: ದರ್ಶನ್, ಆರಾಧನಾ, ಜಗಪತಿ ಬಾಬು, ಕುಮಾರ್ ಗೋವಿಂದ್, ಶ್ರುತಿ, ವಿನೋದ್ ಆಳ್ವ, ವೈಜನಾಥ್ ಬಿರಾದಾರ್
ರೇಟಿಂಗ್: 4

ಮೆಚ್ಚಬಲ್ಲ ಕತೆಗಾರ ಜಡೇಶ್‌ ಕುಮಾರ್‌ ಹಂಪಿ ಮತ್ತು ಕೆಲಸ ಬಲ್ಲ ನಿರ್ದೇಶಕ ತರುಣ್‌ ಸುಧೀರ್‌ ಸೇರಿಕೊಂಡು ಕತೆಯನ್ನು ಉಳುವವನೇ ಹೊಲದೊಡೆಯ ಕಾಯ್ದೆ ಬಂದಾಗಿನ ಸಂದರ್ಭಕ್ಕೆ ಸೊಗಸಾಗಿ ಕೂರಿಸಿದ್ದಾರೆ. ಸಾಮಾನ್ಯ ಅನ್ನಿಸಬಹುದಾಗಿದ್ದ ಕತೆಯನ್ನು ಅವರು ಎಷ್ಟು ಚೆಂದ ಮಾಡಿ ಕಾಲಕ್ಕೆ ತಕ್ಕಂತೆ ಹೊಲಿದಿದ್ದಾರೆ ಎಂದರೆ ಅಷ್ಟರ ಮಟ್ಟಿಗೆ ಕತೆ ಕನೆಕ್ಟ್‌ ಆಗುತ್ತದೆ. ಆ ಕಾಯ್ದೆ ಬಂದ ಕಾಲ, ಜಾತಿ ಪದ್ಧತಿ, ಮರ್ಯಾದಾ ಹತ್ಯೆ, ಅನ್ಯಾಯ ಎಲ್ಲವನ್ನೂ ಚಿತ್ರಕತೆಯಲ್ಲಿ ತಂದಿದ್ದಾರೆ. ಹಾಗಾಗಿ ಈ ಚಿತ್ರಕತೆಗೊಂದು ದೃಢತೆ ಮತ್ತು ಘನತೆ ಎರಡೂ ಬಂದಿದೆ. ಗ್ರಾಮೀಣ ಹಿನ್ನೆಲೆ, ಗ್ರಾಮ್ಯ ಭಾಷೆ ಎರಡೂ ಜೊತೆಯಾಗಿ ಕಳ‍ೆ ಕಟ್ಟಿದೆ.

ದರ್ಶನ್‌ರನ್ನು ಮೆಚ್ಚುವವರಿಗೆಂದೇ ಎರಡು ಮನಮೋಹಕ ಫೈಟ್‌ ಸೀಕ್ವೆನ್ಸ್‌ ಇದೆ. ಒಂದೆರಡು ಡ್ಯೂಯೆಟ್ಟು, ಅರೆ ಪಾವು ಶೋಕಗೀತೆಯೂ ಇದೆ. ಅಚ್ಚರಿ ಎಂದರೆ ಅನವಶ್ಯಕವಾಗಿ ಒಂದೂ ಐಟಂ ಡ್ಯಾನ್ಸ್‌ ಇಟ್ಟಿಲ್ಲ. ಜೊತೆಗೆ ಕ್ಲೈಮ್ಯಾಕ್ಸ್‌ ಅನ್ನು ವಿಶಿಷ್ಟ ರೀತಿಯಲ್ಲಿ ರೂಪಿಸಲಾಗಿದೆ. ಹಾಗಾಗಿ ಇದು ದರ್ಶನ್‌ ಸಿನಿಮಾಗಳಲ್ಲಿ ವಿಭಿನ್ನವಾಗಿ ನಿಲ್ಲುತ್ತದೆ. ದರ್ಶನ್‌ ಇಲ್ಲಿ ಪಾತ್ರವಾಗಿಯೇ ಕಾಣಿಸುತ್ತಾರೆ. ಅ‍ವರ ನಿಜ ಜೀವನದ ರೆಫರೆನ್ಸ್ ಒಂದು ಕಡೆ ಮನಮುಟ್ಟುವಂತೆ ಬರುತ್ತದೆ ಅನ್ನುವುದು ಬಿಟ್ಟರೆ ಅವರಿಲ್ಲಿ ಪೂರ್ತಿ ಪಾತ್ರವನ್ನು ಆವಾಹಿಸಿದ್ದಾರೆ. ಅನ್ಯಾಯದ ವಿರುದ್ಧದ ಸಿಟ್ಟು, ತನ್ನವರ ಮೇಲಿನ ಮಮತೆ, ಬದುಕು ಕಳೆದುಕೊಳ್ಳುವ ವಿಷಾದ, ಎಲ್ಲವೂ ಮುಗಿದಾಗಿನ ನಿರ್ಲಿಪ್ತತೆಯನ್ನು ಕಾಡುವಂತೆ ದಾಟಿಸಿದ್ದಾರೆ. ನಾಯಕಿ ಆರಾಧನಾ ಮೊದಲ ಸಿನಿಮಾದಲ್ಲಿಯೇ ಗಮನ ಸೆಳೆಯುವಂತೆ ಕಾಣಿಸಿಕೊಂಡಿದ್ದಾರೆ. ಅವರ ಲವಲವಿಕೆ ಸಿನಿಮಾದ ಚಂದ ಹೆಚ್ಚಿಸಿದೆ.

300 ಚಿತ್ರಮಂದಿರಗಳಲ್ಲಿ ಕಾಟೇರ ಬಿಡುಗಡೆ: ಅಡ್ವಾನ್ಸ್ ಟಿಕೆಟ್ ಬುಕ್ಕಿಂಗ್‌ನಲ್ಲಿ 1 ಕೋಟಿ ಬಾಚಿದ ದರ್ಶನ್ ಸಿನಿಮಾ!

ಸುಧಾಕರ್‌ ಛಾಯಾಗ್ರಹಣ ಸೊಗಸಾಗಿದೆ. ಅವರ ಕೆಲವೊಂದು ಫ್ರೇಮ್‌ಗಳು ಸುಂದರ ಛಾಯಾಚಿತ್ರದಂತೆ ಭಾಸವಾಗುತ್ತದೆ. ಮಾಸ್ತಿ ಸಂಭಾಷಣೆಯ ಮೂಲಕ, ಹರಿಕೃಷ್ಣ ಹಿನ್ನೆಲೆ ಸಂಗೀತದ ಮೂಲಕ ಕತೆಗೆ ಶಕ್ತಿ ತುಂಬಿದ್ದಾರೆ. ಸಿನಿಮಾ 3 ಗಂಟೆ ಅವಧಿಯದು. ಹಾಗಾಗಿ ಆರಂಭ ನಿಧಾನ ಅನ್ನಿಸಬಹುದು. ಜೊತೆಗೆ ಅಂತಿಮ ಹಂತದಲ್ಲಿ ಕೆಲವು ಪಾತ್ರಗಳ ಅವಸರದ ಮನಪರಿವರ್ತನೆ ಅನ್ನಿಸಬಹುದು. ಆದರೆ ದರ್ಶನ್ ತನ್ನ ನಿಲುವಿನಿಂದ ಎಲ್ಲವನ್ನೂ ಸಮಗಟ್ಟುತ್ತಾರೆ, ಸರಿಗೊಳಿಸುತ್ತಾರೆ ಮತ್ತು ಹಗುರಗೊಳಿಸುತ್ತಾರೆ. ಕತೆ ಮತ್ತು ದರ್ಶನ್‌ ಒಂದಕ್ಕೊಂದು ಪೂರಕವಾಗಿ ನಿಂತಿದ್ದರಿಂದಲೇ ಈ ಸಿನಿಮಾ ವಿಶಿಷ್ಟವಾಗಿದೆ.

click me!