Salaar Review ಹಿಂಸೆ ತುಂಬಿದ ಜಗತ್ತಿನ ಸ್ನೇಹ ಬಾಂಧವ್ಯದ ಕಥನ

By Kannadaprabha News  |  First Published Dec 23, 2023, 9:19 AM IST

ಪ್ರಭಾಸ್‌, ಪೃಥ್ವಿರಾಜ್‌ ಸುಕುಮಾರನ್‌, ಈಶ್ವರಿ ರಾವ್‌, ಶ್ರುತಿ ಹಾಸನ್‌ ನಟನೆಯ ಸಲಾರ್ ಸಿನಿಮಾ ರಿಲೀಸ್ ಆಗಿದೆ. ನೆಗೆಟಿವ್ ಕಾಮೆಂಟ್‌ಗಳ ನಡುವೆಯೂ ಸಿನಿಮಾ ಹೇಗಿದೆ ಗೊತ್ತಾ?


ಪ್ರಿಯಾ ಕೆರ್ವಾಶೆ

ಪರ್ಷಿಯನ್ ದೊರೆಯೊಬ್ಬನಿಗೆ ಯಾವುದೇ ಪ್ರಮುಖ ನಿರ್ಧಾರ ತೆಗೆದುಕೊಳ್ಳುವಾಗ ತನ್ನ ಮಂತ್ರಿಗಳಲ್ಲಾಗಲೀ, ಸೇನಾ ಪ್ರಮುಖರಲ್ಲಾಗಲೀ ಕೇಳುವ ಅಭ್ಯಾಸ ಇರಲಿಲ್ಲ. ಆತ ಕೇಳುತ್ತಿದ್ದ ಏಕೈಕ ವ್ಯಕ್ತಿಯೇ ಸಲಾರ್‌!

Tap to resize

Latest Videos

‘ಸಲಾರ್‌’ ಬಗ್ಗೆ ಸಿನಿಮಾದಲ್ಲಿ ಪ್ರಶಾಂತ್ ನೀಲ್ ಕೊಡುವ ಉತ್ತರ ಇದು. ಇಲ್ಲಿ ಪರ್ಶಿಯನ್ ದೊರೆ ಬದಲಿಗೆ ವರದ ಮನ್ನಾರ್ ಇದ್ದಾನೆ. ಸಲಾರ್‌ ಜಾಗದಲ್ಲಿ ದೇವವ್ರತ ಇದ್ದಾನೆ. ಇವರಿಬ್ಬರ ಗೆಳೆತನದ ದೂರ, ಸಾಮೀಪ್ಯದ ಕಥೆಯೇ ಸಲಾರ್‌ ಸಿನಿಮಾ. ನೀಲ್‌ ಅವರಿಗೆ ಮದರ್‌ ಸೆಂಟಿಮೆಂಟ್‌ ಬಿಡುವುದು ಇಷ್ಟವಿಲ್ಲದ ಕಾರಣ ಆ ಫ್ಯಾಕ್ಟರೂ ಇದೆ. ಕೆಜಿಎಫ್‌ನಲ್ಲಿ ಅಮ್ಮನಿಗಾಗಿ ಜಗತ್ತನ್ನೇ ಕೊಳ್ಳೆ ಹೊಡೆಯುವ ಮಗ ಇದ್ದರೆ ಇಲ್ಲಿರುವುದು ಗೆಳೆತನಕ್ಕಾಗಿ ತಾಯಿಯ ಮಾತನ್ನೂ ಮೀರುವ ಮಗ.

ತಾರಾಗಣ: ಪ್ರಭಾಸ್‌, ಪೃಥ್ವಿರಾಜ್‌ ಸುಕುಮಾರನ್‌, ಈಶ್ವರಿ ರಾವ್‌, ಶ್ರುತಿ ಹಾಸನ್‌

ನಿರ್ದೇಶನ : ಪ್ರಶಾಂತ್ ನೀಲ್‌

ರೇಟಿಂಗ್‌ : 3

ಆಗ ಒಂದು ಮನೆ ಮಾರಿದ್ದೆ, ಈಗ 10 ಮನೆ ಮಾಡಿದ್ದೀನಿ; ಕಷ್ಟದಲ್ಲಿ ಪ್ರಶಾಂತ್‌ ನೀಲ್ ಕೈ ಹಿಡಿದ ಡಿ-ಬಾಸ್

ಸಾಮಾನ್ಯ ಜನರ ಭಯವನ್ನೇ ಅಸ್ತ್ರ ಮಾಡಿಕೊಂಡು ಬದುಕುತ್ತಿರುವ ಬಲಿಷ್ಠ ಭೂಗತ ಲೋಕ. ಇವುಗಳಿಂದ ಬೇರೆ ಆಗಿ ಬದುಕುತ್ತಿರುವ ಮಹಾ ಮೃದು ವ್ಯಕ್ತಿತ್ವದ ದೇವವ್ರತ. ಒಂದು ಹಂತದಲ್ಲಿ ಕತೆಗೆ ತಿರುವು ಸಿಗುತ್ತದೆ. ಆತ ಗೆಳೆಯ ವರದ ಮನ್ನಾರ್‌ ಜೊತೆಗೂಡಿ ಅಬ್ಬರಿಸುವ ರೀತಿಯೇ ಮುಂದಿನ ಮುಕ್ಕಾಲು ಪಾಲು ಸಿನಿಮಾ. ಚಿತ್ರ ಕೊನೆಯಾದರೂ ಮುಂದಿನ ಭಾಗದ ‘ಶೌರ್ಯಾಂಗ ಪರ್ವ’ದ ಕಥೆಗೆ ಇಲ್ಲಿ ಆರಂಭ ಸಿಕ್ಕಿದೆ.

ಹೇಳಿಕೇಳಿ ಇದು ನೀಲ್ ಕಟ್ಟಿದ ಭಾವನೆಗಳ ಸರಹದ್ದು ಮೀರಿದ ರಕ್ತರಂಜಿತ ಜಗತ್ತು. ಹೆಸರು ಕಾನ್ಸಾರ್! ಇಲ್ಲಿ ಆಡುವ ಪ್ರತೀ ಮಾತೂ ಕತ್ತಿ ಅಲುಗಿನಂಥದ್ದು. ಮನುಷ್ಯರ ಘರ್ಜನೆಗಿಂತ ಗುಂಡಿನ ಮೊರೆತವೇ ನಿತ್ಯ ನಿರಂತರ. ಇವುಗಳ ನಡುವೆ ಕಥೆ, ಡ್ರಾಮಾ ಇಂಥವೆಲ್ಲ ಟ್ರಕ್‌ ಟಯರಿನಡಿ ಸಿಕ್ಕ ಧೂಳಿನ ಹುಡಿಯಂತೆ ಕಾಣುತ್ತವೆ! ಇಲ್ಲಿ ಎಲ್ಲಿ ನೋಡಿದರೂ ಬಣ್ಣ ಕಾಣದ ಜಗತ್ತು, ಎಷ್ಟು ನೋಡಿದರೂ ಮುಗಿಯದ ಹಿಂಸೆ, ಆ ಏಕತಾನತೆ ಕೊನೆ ಕೊನೆಗೆ ಪ್ರೇಕ್ಷಕನಿಗೂ ತಡೆಯಲಾಗದ ಹಿಂಸೆ ಕೊಡುತ್ತದೆ.

 

ಪ್ರಭಾಸ್‌ ಜೊತೆ ಕೆಲಸ ಮಾಡೋ ಪ್ರತಿಯೊಬ್ಬರೂ ಈ ಘಟನೆ ಎದುರಿಸಲೇ ಬೇಕು; ರಾಜಮೌಳಿ ಎದುರು ಸತ್ಯ ಬಿಚ್ಚಿಟ್ಟ ಪೃಥ್ವಿರಾಜ್

ಉಳಿದಂತೆ ತಮ್ಮ ಎಂದಿನ ಸ್ಟೈಲಿನಲ್ಲಿ ಈ ಜಗತ್ತನ್ನು ಅದ್ದೂರಿಯಾಗಿ ಕಟ್ಟಿದ್ದಾರೆ ನೀಲ್‌. ಛಾಯಾಗ್ರಾಹಕ ಭುವನ್‌ ಗೌಡ ನಸುಗತ್ತಲ ಜಗತ್ತಿನಲ್ಲಿ ಬಣ್ಣಗಳನ್ನು ಸೆರೆಹಿಡಿಯುವ ರೀತಿ ಚೆಂದ.

ಪ್ರಭಾಸ್‌ ಆ್ಯಕ್ಷನ್‌ ಮೈನವಿರೇಳಿಸುವಂತಿದೆ. ಸಾಹಸಕ್ಕೆ ಹೊಸ ಭಾಷ್ಯ ಬರೆಯುವ ರೀತಿ ನೀಲ್ ದೇವನ ಪಾತ್ರ ಸೃಷ್ಟಿಸಿದ್ದಾರೆ. ಪ್ರಭಾಸ್‌ ಮೈಕಟ್ಟು ಪಾತ್ರಕ್ಕೆ ಹೇಳಿ ಮಾಡಿಸಿದಂತಿದೆ. ಕನ್ನಡ ಕಲಾವಿದರಾದ ಪ್ರಮೋದ್, ನವೀನ್‌ ಶಂಕರ್‌ ನಟನೆ ಚೆನ್ನಾಗಿದೆ. ಕೆಲವೊಮ್ಮೆ ಗುಡುಗಿನಂತೆ, ಕೆಲವೊಮ್ಮೆ ತಂಗಾಳಿಯಂತೆ ಸಂಗೀತವಿದೆ. ಶ್ರುತಿ ಹಾಸನ್‌ ಪಾತ್ರ ಬಹುಶಃ ಮುಂದಿನ ಭಾಗದಲ್ಲಿ ಕಳೆಕಟ್ಟಬಹುದು.

ಈ ಚಿತ್ರ ಉಗ್ರಂನ ಮತ್ತೂ ಬಲಿಷ್ಠ ರೂಪ ಎಂಬ ಮಾತು ಥಿಯೇಟರ್‌ನಲ್ಲಿ ಪ್ರೇಕ್ಷಕರಿಂದ ಕೇಳಿಬರುತ್ತದೆ. ಇದನ್ನು ಹೇಗೆ ತೆಗೆದುಕೊಳ್ಳಬೇಕು ಎನ್ನುವುದು ಅವರವರಿಗೆ ಬಿಟ್ಟದ್ದು.

click me!