Hubballi Dhaba Review: ಹುಬ್ಬಳ್ಳಿ ಡಾಬಾದಲ್ಲಿ ಕ್ರೌರ್ಯ ಜಾಸ್ತಿ, ಕಲಾವಿದರೇ ಆಸ್ತಿ

By Kannadaprabha News  |  First Published Nov 12, 2022, 10:11 AM IST

ರವಿಶಂಕರ್‌, ನವೀನ್‌ ಚಂದ್ರ, ದಿವ್ಯ ಪಿಳ್ಳೈ, ಅನನ್ಯ, ಮಕರಂದ್‌ ದೇಶಪಾಂಡೆ, ಅಯ್ಯಪ್ಪ, ಪೂಜಾ ಗಾಂಧಿ ಅಭಿನಯಿಸಿರುವ ಹುಬ್ಬಳಿ ಡಾಬಾ ಸಿನಿಮಾ ರಿಲೀಸ್ ಆಗಿದೆ...


ರಾಜೇಶ್‌ ಶೆಟ್ಟಿ

ಪ್ರೇಮವಿದೆ. ಪ್ರಣಯವಿದೆ. ಅಪರಾಧವಿದೆ. ಹಳೇ ಲಾರಿಯಲ್ಲಿ ತುಂಬಿಸಿಟ್ಟಿರುವ ಡ್ರಗ್‌ ಇದೆ. ಯಾವುದೋ ಬಯಲಲ್ಲಿ ನಡೆಯುವ ಎನ್‌ಕೌಂಟರ್‌ ಇದೆ. ಪಾತ್ರ ಪಾತ್ರಗಳ ಮಧ್ಯೆ ಮೋಸ ಇದೆ. ಕರುಳು ಕೊರೆಯುವ ದ್ವೇಷವಿದೆ. ಕಡಿದು ಕೊಚ್ಚುವ ಕ್ರೌರ್ಯ ಇದೆ. ಬಗೆಹರಿಯದ ದುರಾಸೆ ಇದೆ. ಕಣ್ಣಗುಡ್ಡೆ ಕಿತ್ತು ಬರುತ್ತದೆ. ರಕ್ತ ಹರಿಯುತ್ತದೆ. ಇಲ್ಲಿ ಹರಿಯುವ ರಕ್ತವನ್ನು ಕಾಲುವೆ ಮಾಡಿ ಕೆರೆಗೆ ಹರಿಸಿದರೆ ಕೆರೆ ತುಂಬುವಷ್ಟಾಗುತ್ತದೆ. ಕಟ್ಟಕಡೆಗೆ ಎಲ್ಲವೂ ಶಾಂತವಾಗುತ್ತದೆ. ಅಷ್ಟುಹೊತ್ತಿಗೆ ಕತೆ ಮುಗಿದಿರುತ್ತದೆ.

Tap to resize

Latest Videos

ನಿರ್ದೇಶನ: ಶ್ರೀನಿವಾಸ್‌ ರಾಜು

ತಾರಾಗಣ: ರವಿಶಂಕರ್‌, ನವೀನ್‌ ಚಂದ್ರ, ದಿವ್ಯ ಪಿಳ್ಳೈ, ಅನನ್ಯ, ಮಕರಂದ್‌ ದೇಶಪಾಂಡೆ, ಅಯ್ಯಪ್ಪ, ಪೂಜಾ ಗಾಂಧಿ, ರವಿ ಕಾಳೆ, ಪೆಟ್ರೋಲ್‌ ಪ್ರಸನ್ನ, ಡ್ಯಾನಿ ಕುಟ್ಟಪ್ಪ

DIL PASAND REVIEW: ಯೇ ದಿಲ್‌ ಮಾಂಗೆ ಮೋರ್‌

ಇದೊಂದು ಎಲ್ಲವೂ ಇರುವ ಥ್ರಿಲ್ಲರ್‌. ಪೊಲೀಸ್‌ ರವಿಶಂಕರ್‌ ಇದ್ದಾರೆ. ಹೀರೋ ನವೀನ್‌ಚಂದ್ರ. ಅವನ ಹಳೇ ಗೆಳತಿ ಲಿಝಿ. ಮುದ್ದಿನ ಮಡದಿ ಗೌರಿ. ಕ್ರಿಮಿನಲ್‌ಗಳು. ಪೊಲೀಸು. ಕೆಲವರು ಹಾಗೆ ಬಂದು ಹೀಗೆ ಹೋದರೆ ಹಲವಾರು ಈ ಸಿನಿಮಾವನ್ನು ಹಿಡಿದುನಿಂತ ದಾರದಂತೆ ಕಾಣಿಸುತ್ತಾರೆ. ದಂಡುಪಾಳ್ಯ ಸಿನಿಮಾದ ಪಾತ್ರಧಾರಿಗಳು ಇಲ್ಲಿ ಹಾಗ್ಹಾಗೇ ಬರುತ್ತಾರೆ. ಅವರ ಕತೆಯನ್ನು ಎಲ್ಲರಿಗೂ ಗೊತ್ತಿದೆ ಎನ್ನುವಂತೆಯೇ ನಿರೂಪಿಸಿದ್ದಾರೆ ನಿರ್ದೇಶಕರು.

ಮೂರು ಕತೆ ಇದೆ. ಒಂದು ಡ್ರಗ್‌ ಮಾಫಿಯಾ ಹಿಡಿಯುವ ಪ್ರಯತ್ನ. ಇನ್ನೊಂದು ಪತಿ, ಪತ್ನಿ ಔರ್‌ ವೋ. ಮತ್ತೊಂದು ದಂಡುಪಾಳ್ಯ ವರ್ಸಸ್‌ ಪೊಲೀಸ್‌ ಅಧಿಕಾರಿ ಛಲಪತಿ. ಈ ಮೂರು ಎಳೆಯನ್ನು ಸೇರಿಸಿ ರೂಪಿತಗೊಂಡ ಸಿನಿಮಾ. ಕ್ಲೋಸಪ್‌ನಲ್ಲೇ ನಟಿಸಬಲ್ಲ ಅಸಾಧಾರಣ ಕಲಾವಿದರೆಲ್ಲಾ ಇಲ್ಲಿ ಒಟ್ಟು ಸೇರಿದ್ದಾರೆ. ಪ್ರತಿಯೊಬ್ಬರು ಅವರವರ ಪಾತ್ರಕ್ಕೆ ನ್ಯಾಯ ಸಲ್ಲಿಸಿದ್ದಾರೆ. ಕಡೆಯಲ್ಲಿ ಬರುವ ತಿರುವು ಕೂಡ ಥ್ರಿಲ್ಲರ್‌ ಸಿನಿಮಾಗೆ ತಕ್ಕ ಅಂತ್ಯವನ್ನು ಕೊಡುತ್ತದೆ.

O Review: ಚೀನಿ ಮಾಂತ್ರಿಕನ ಆತ್ಮ ಓ ಅಂದಾಗ

ಇಷ್ಟೆಲ್ಲಾ ಇದ್ದರೂ ಚಿತ್ರಕತೆಯಲ್ಲಿ ಅಂಥಾ ಬಿಗು ಕಾಣಿಸುವುದಿಲ್ಲ. ಮೊದಲಾರ್ಧದಲ್ಲಿ ವೇಗವಿಲ್ಲ. ಥ್ರಿಲ್ಲರ್‌ ಸಿನಿಮಾಗೆ ಕ್ರೌರ್ಯ ಹೊಸತೇನೂ ಅಲ್ಲ. ಆದರೆ ಅತಿಯಾದ ಕ್ರೌರ್ಯಕ್ಕೆ ಉದ್ದೇಶ ಇರುವುದಿಲ್ಲ. ಉದ್ದೇಶ ಇಲ್ಲದ ಕ್ರೌರ್ಯ ನೋಡುವಾಗ ಮನಸ್ಸು ಮುದುಡುತ್ತದೆ. ಇಲ್ಲಿನ ಕ್ರೌರ್ಯ ಅಳ್ಳೆದೆಯವರಿಗೆ ಹೇಳಿದ್ದಲ್ಲ. ಎಂಥಾ ಗಟ್ಟಿಮನಸ್ಸಿದ್ದರೂ ದ್ವಿತೀಯಾರ್ಧದ ರಕ್ತದೋಕುಳಿ ಕಣ್ಣಿಂದ ಮಾಸುವುದಿಲ್ಲ.

ಮರ್ಡರ್‌ ಮಿಸ್ಟ್ರಿಯಂತೆ ಶುರುವಾಗುವ ಸಿನಿಮಾದ ಒಂದು ಭಾಗ ಪಾತ್ರ ಮರ್ಡರ್‌ ಮಿಸ್ಟ್ರಿಯಾಗಿ ಉಳಿಯುವುದು ಈ ಸಿನಿಮಾದ ಕಡಿಮೆಯೋ ಹೆಚ್ಚುಗಾರಿಕೆಯೋ ಎನ್ನುವುದು ಅರ್ಥವಾಗುವ ಮೊದಲೇ ಸಿನಿಮಾ ಮುಗಿದುಹೋಗಿರುತ್ತದೆ. ಆಮೇಲೆ ಹೇಳಲೇನೂ ಉಳಿದಿರುವುದಿಲ್ಲ.

click me!