ಕ್ರೇಜಿ ಸ್ಟಾರ್ ರವಿಚಂದ್ರನ್ ನಟನೆಯ ರವಿ ಬೋಪಣ್ಣ ಸಿನಿಮಾ ರಾಜ್ಯಾದ್ಯಂತ ಅದ್ಧೂರಿಯಾಗಿ ಬಿಡುಗಡೆಯಾಗಿದೆ. ಸಿನಿಮಾ ಹೇಗಿದೆ ನೋಡಿ....
ಆರ್ ಕೇಶವಮೂರ್ತಿ
ರವಿಚಂದ್ರನ್ ಅವರು ಅದ್ಭುತ ನಿರೂಪಕರು. ಅವರೊಳಗಿನ ನರೇಟರ್‌ಗೆ ಸಂಗೀತ, ಕ್ಯಾಮೆರಾ ಫ್ರೇಮುಗಳು ಜತೆಯಾಗಿ ಬಿಟ್ಟರೆ ನಿಜಕ್ಕೂ ಕ್ರೇಜಿಸ್ಟಾರ್ ಚಿತ್ರಗಳು ತೆರೆ ಮೇಲೆ ಮಾತ್ರವಲ್ಲ, ಅದರ ಮುಂದೆ ಕೂತ ಪ್ರೇಕ್ಷಕರಿಗೂ ಹಬ್ಬ ಎಂಬುದಕ್ಕೆ ‘ರವಿ ಬೋಪಣ್ಣ’ ಚಿತ್ರವೇ ಸಾಕ್ಷಿ. ನೆರಳು ಬೆಳಕು, ಬಣ್ಣ ಬಣ್ಣದ ಡಿಸೈನ್ ಗ್ಲಾಸ್ ಹಾಗೂ ಬಾಟಲಿಗಳು, ಅದರೊಳಗಿನ ಎಣ್ಣೆ, ಅದರ ಮುಂದಿನ ಹೆಣ್ಣು... ಎಲ್ಲವೂ ಕಿಕ್ ಕೊಡುತ್ತಾ ಹೋಗುತ್ತದೆ. ಇದನ್ನು ನೋಡುತ್ತಿರುವಾಗ ‘ರವಿಚಂದ್ರನ್ ಅವರು ಕೊಂಚ ಹಿರಿಯನಂತೆ ಯೋಚಿಸಬೇಕಿತ್ತು’ ಎಂದುಕೊಳ್ಳುವಷ್ಟರಲ್ಲಿ ಅವರೊಳಗೆ ಮತ್ತೊಬ್ಬ ರವಿಚಂದ್ರನ್ ಆಚೆ ಬರುತ್ತಾರೆ. ಆತನೇ ಕರ್ಮ. ನ್ಯಾಯ, ನೀತಿ, ತಪ್ಪು- ಒಪ್ಪು, ಪ್ರೀತಿ- ಪ್ರೇಮ, ಸಂಸಾರ, ಸಂಬಂಧಗಳು, ಪಶ್ಚಾತ್ತಾಪ ಹೀಗೆ ಒಂದಿಷ್ಟುವಿಷಯಗಳ ಸುತ್ತ ಮಾತನಾಡುತ್ತಾನೆ. ‘ಯಾಕೋ ಫಿಲಾಸಫಿ ಆಯಿತಲ್ಲ’ ಎಂದುಕೊಳ್ಳುವ ಮುನ್ನವೇ ಇಬ್ಬರು ನಾಯಕಿಯರು ಹಾಜರಾಗಿ ತಮ್ಮ ಇರುವಿಕೆಯನ್ನು ಸಾಧ್ಯವಾದಷ್ಟುಸಾದರಪಡಿಸುತ್ತಾರೆ. ಆಗ ಕಣ್ಣಿಗೂ ಮತ್ತು ಮನಸ್ಸಿಗೆ ತಪೋ, ತಂಪು.
ತಾರಾಗಣ: ರವಿಚಂದ್ರನ್, ಸುದೀಪ್, ರಾಧಿಕಾ ಕುಮಾರಸ್ವಾಮಿ, ಕಾವ್ಯ ಶೆಟ್ಟಿ, ಮೋಹನ್, ರಮೇಶ್ ಭಟ್, ಜೈ ಜಗದೀಶ್, ರವಿಶಂಕರ್ ಗೌಡ
ನಿರ್ದೇಶನ: ರವಿಚಂದ್ರನ್
ರೇಟಿಂಗ್: 3
ಪ್ರೇಮಲೋಕ, ರಣಧೀರ, ಆಗಾಗ ಮಲ್ಲ ಹೀಗೆ ಎಲ್ಲವೂ ಆಗುತ್ತಲೇ ‘ನೀವು ಅಂದುಕೊಂಡಂತೆ ನಾನವನಲ್ಲ’ ಎನ್ನುತ್ತ ಒಂದು ಸ್ಕಾ್ಯಮ್‌ನ ಬೆನ್ನು ಹತ್ತುವ ರವಿ ಬೋಪಣ್ಣ ನ್ಯಾಯವನ್ನು ಬದುಕಿಸಲು ತೆಗೆದುಕೊಳ್ಳುವ ನಿರ್ಧಾರ ‘ಅಮರ ತ್ಯಾಗ’ದ ಪಟ್ಟಕ್ಕೇರುತ್ತದೆ. ತನ್ನ ಬದುಕಿನ ಒಂದೊಂದು ಕಾಲಘಟ್ಟದ ಕತೆ ಹೇಳುತ್ತಲೇ ಆ ಕಾಲಕ್ಕೆ ತಕ್ಕ ಗೆಟಪ್‌ಗಳಲ್ಲೂ ಕಾಣಿಸಿಕೊಂಡು ನಾನ್ ಲೀನಿಯರ್‌ನಲ್ಲಿ ಕತೆ ನಿರೂಪಿಸಿರುವುದು ‘ರವಿ ಬೋಪಣ್ಣ’ನ ತಾಂತ್ರಿಕತೆಗೆ ಹಿಡಿದ ಹೊಸ ಕನ್ನಡಿ. ನಾಯಕ ನಿವೃತ್ತ ಪೊಲೀಸ್ ಅಧಿಕಾರಿ, ಮದುವೆ ಆಗಿದ್ದರೂ ಮತ್ತೊಬ್ಬಳನ್ನು ಪ್ರೀತಿಸುವ ವ್ಯಕ್ತಿ. ಎಲ್ಲವೂ ಹೇಗೋ ಸಾಗುತ್ತಿದೆ ಎಂದುಕೊಳ್ಳುವಾಗ ಎದುರಾಗುವ ಸಾವು, ಆ ಸಾವಿನ ಹಿಂದಿನ ಮೆಡಿಕಲ್ ಮಾಫಿಯಾ, ಅದಕ್ಕೊಂದು ಇತಿಶ್ರೀ ಹಾಕುವ ತಯಾರಿ, ಇದಕ್ಕೆ ಕಾನೂನಿನ ಹೋರಾಟಕ್ಕೆ ಸಾಥ್ ಕೊಡುವ ಸುದೀಪ್ ಅವರ ಲಾಯರ್ ಪಾತ್ರ... ಇದಿಷ್ಟುಕತೆಯ ಪ್ರಮುಖ ತಿರುವುಗಳು ಎಂದು ಹೇಳಿಬಿಟ್ಟರೆ ನೀವು ನಿಜವಾದ ರವಿಚಂದ್ರನ್ ಅವರನ್ನು ಮಿಸ್ ಮಾಡಿಕೊಳ್ಳುತ್ತೀರಿ. ಅವರ ಬಣ್ಣ ಬಣ್ಣ ಲೋಕದಲ್ಲಿ ಪಯಣಿಸುವ ಅವಕಾಶವನ್ನು ತಪ್ಪಿಸಿಕೊಳ್ಳುತ್ತೀರಿ. ಹೀಗಾಗಿ ಕತೆ ಏನೆಂದು ಕೇಳುವ ಬದಲು, ಕತೆಯನ್ನು ನೋಡಿದರೆ ಉತ್ತಮ.
Ravichandran Interview: ಕನಸು, ಮನಸು, ಜೀವನ, ಸಿನಿಮಾ.... ಬಗ್ಗೆ ಕ್ರೇಜಿಸ್ಟಾರ್ ಮಾತು
ಕತೆಯ ಮೊದಲ ಭಾಗ ಹೂವಿನ ಲೋಕ. ವಿರಾಮದ ನಂತರ ತನಿಖಾ ಲೋಕ. ಸಂಗೀತ, ಕತೆ, ರವಿ ಬೋಪಣ್ಣನ ಮಾತುಗಳು, ಬಣ್ಣಗಳು ಒಟ್ಟಿಗೆ ಸಾಗುವುದು ಚಿತ್ರದ ಮತ್ತೊಂದು ಹೈಲೈಟ್ ಕೊಲಾಜ್. ಸುದೀಪ್ ಅವರದ್ದು ಸಮತೂಕದ ಪಾತ್ರ. ಕೊನೆಯಲ್ಲಿ ಬಂದರೂ ಒಳ್ಳೆಯ ಮುಕ್ತಾಯ. ಇಬ್ಬರು ನಾಯಕಿಯರಾದ ರಾಧಿಕಾ ಕುಮಾರಸ್ವಾಮಿ ಹಾಗೂ ಕಾವ್ಯ ಶೆಟ್ಟಿಅವರ ಪೈಕಿ ಒಬ್ಬರು ‘ಮಲ್ಲ’ ಫ್ಲೇವರ್ ಉಣಬಡಿಸಿದರೆ, ಮತ್ತೊಬ್ಬರು ‘ಹೂ’ ಚಿತ್ರದ ಸೌಂದರ್ಯವನ್ನು ಹೊತ್ತು ತರುತ್ತಾರೆ. ಹೀಗಾಗಿ ಫಿಲಾಸಫಿಗಳ ಜತೆಗೆ ಹೂವು, ಮಳೆ, ಸೌಂದರ್ಯವನ್ನು ಎಷ್ಟುಬೇಕೋ ಅಷ್ಟುಸವಿಯುವ ಅಮೋಘವಾದ ಅವಕಾಶವನ್ನು ‘ರವಿ ಬೋಪಣ್ಣ’ ಒದಗಿಸಿದ್ದಾರೆ. ಈ ಚಿತ್ರದ ತಾಂತ್ರಿಕ ಪಿಲ್ಲರ್‌ಗಳಾದ ಛಾಯಾಗ್ರಾಹಕ ಜಿಎಸ್‌ವಿ ಸೀತಾರಾಮ್, ಕಲಾ ನಿರ್ದೇಶಕ ಹೊಸ್ಮನೆ ಮೂರ್ತಿ, ಸಂಭಾಷಣೆಗಾರ ಮೋಹನ್, ಸಂಗೀತದಲ್ಲಿ ನೆರವು ನೀಡಿರುವ ಗೌತಮ್ ಶ್ರೀವತ್ಸ ಅವರ ಕೆಲಸವನ್ನು ಮರೆಯುವಂತಿಲ್ಲ.