Vikrant Rona Movie Review: ಈ ಕಾರಣಕ್ಕೆ ನೀವು ತಪ್ಪದೆ ವಿಕ್ರಾಂತ್ ರೋಣ ಸಿನಿಮಾ ನೋಡ್ಬೇಕು!

By Kannadaprabha News  |  First Published Jul 29, 2022, 10:12 AM IST

ನಿರ್ದೇಶಕ ಅನೂಪ್‌ ಭಂಡಾರಿ ಅವರ ಕ್ಲಾಸಿಕ್‌ ಸ್ಟೈಲಿನ ಕತೆಗೆ ಸುದೀಪ್‌ ಅವರ ಮಾಸ್‌ ಅಪಿರೇನ್ಸ್‌ ಸೂಪರ್‌. ಹೇಗಿದೆ ಗೊತ್ತಾ ವಿಕ್ರಾಂತ್ ರೋಣ ಸಿನಿಮಾ?


ಆರ್‌ ಕೇಶವಮೂರ್ತಿ

ಸಸ್ಪೆನ್ಸ್‌ ಹಾಗೂ ಥ್ರಿಲ್ಲರ್‌ ದಾರಿಯಲ್ಲಿ ಹೊಸದೊಂದು ಲೋಕವನ್ನು ಸೃಷ್ಟಿಸಿ, ಆ ಲೋಕದೊಳಗೆ ಪ್ರೇಕ್ಷಕ ಕಳೆದು ಹೋಗುವಂತೆ ನೋಡಿಕೊಳ್ಳುವ ಪ್ರಯತ್ನದಲ್ಲಿ ‘ವಿಕ್ರಾಂತ್‌ ರೋಣ’ ಯಶಸ್ವಿಯಾಗಿದೆ. ಬಹು ನಿರೀಕ್ಷೆಯೊಂದಿಗೆ ಪ್ರೇಕ್ಷಕರ ಮುಂದೆ ಬಂದಿರುವ ಈ ಚಿತ್ರ, ನಿರೀಕ್ಷೆಗಳನ್ನು ಸುಳ್ಳು ಮಾಡಿಲ್ಲ. ಮಕ್ಕಳು, ಗುಮ್ಮ, ರಕ್ಕಮ್ಮ, ಭೂತದ ಕುಣಿತ ಮತ್ತು ಹಾಡು, ಕಣ್ಣಿಗೆ ಅದ್ಭುತ ಎನಿಸುವ ಪ್ರಕೃತಿ ಸೌಂದರ್ಯ... ಇವಿಷ್ಟುಅಂಶಗಳ ಮೂಲಕ ಅನೂಪ್‌ ಭಂಡಾರಿ ಅವರು ಭಿನ್ನವಾದ ಕತೆಯನ್ನು ತೆರೆ ಮೇಲೆ ತಂದಿದ್ದಾರೆ. ಕುತೂಹಲಕಾರಿಯಾದ ಭೂತಾರಾಧನೆಯ ಫ್ಲ್ಯಾಷ್‌ ಬ್ಯಾಕ್‌ಗೆ ಫ್ಯಾಂಟಸಿಯನ್ನು ಜತೆಗೂಡಿಸಿರುವುದು ನಿರ್ದೇಶಕರ ಕತೆ ಕಟ್ಟುವ ಜಾಣತನಕ್ಕೆ ಸಾಕ್ಷಿ.

Tap to resize

Latest Videos

ತಾರಾಗಣ: ಸುದೀಪ್‌, ನಿರೂಪ್‌ ಭಂಡಾರಿ, ನೀತಾ ಅಶೋಕ್‌, ಮಧುಸೂದನ್‌, ರವಿಶಂಕರ್‌, ಜಾಕ್ವೇಲಿನ್‌ಫರ್ನಾಡಿಸ್‌, ಮಿಲನ ನಾಗರಾಜ್‌

ನಿರ್ದೇಶನ: ಅನೂಪ್‌ ಭಂಡಾರಿ

ರೇಟಿಂಗ್‌: 4

ಕಮರೊಟ್ಟು ಎನ್ನುವ ಊರು. ಅಲ್ಲಿ ಇರುವ ಹಳೆಯ ಬಂಗಲೆ. ನಿಗೂಢವಾಗಿ ಸಾವು ಕಾಣುತ್ತಿರುವ ಮಕ್ಕಳು. ಆ ಕೊಲೆಗಳ ಹಿಂದೆ ಯಾರಿದ್ದಾರೆ ಎನ್ನುವ ಕಾನೂನಿನ ತನಿಖೆ ಒಂದು ಕಡೆಯಾದರೆ, ತಮ್ಮೂರಿನಲ್ಲಿ ಈ ಹಿಂದೆ ಸಂಭವಿಸಿದ ತಪ್ಪಿನಿಂದ ದೇವರು ಕೊಟ್ಟಶಿಕ್ಷೆ ಎನ್ನುವಂತೆ ವ್ಯಥೆ ಪಡುವ ಅಲ್ಲಿನ ಜತೆ. ಕೊನೆಗೆ ಇದರ ಆಳ-ಆಗಲ ಏನು ಎಂಬುದನ್ನು ತಿಳಿಯಲು ನೀವು ವಿಕ್ರಾಂತ್‌ ರೋಣ ಪಾತ್ರಧಾರಿ ಸುದೀಪ್‌ ಅವರ ಜತೆಗೆ ಪಯಣಿಸಬೇಕು. ಭಾವನೆಗಳು, ಫ್ಯಾಂಟಸಿ ಹಾಗೂ ನಂಬಿಕೆಗಳು ಮುಖಾಮುಖಿ ಆಗುತ್ತಲೇ ಕೊನೆಗೆ ಭಾವನೆಗಳಿಗೆ ಹೆಚ್ಚು ಶಕ್ತಿ ಇದೆ ಎನ್ನುವ ‘ವಿಕ್ರಾಂತ್‌ ರೋಣ’ ಭಾವಜೀವಿಗಳಿಗೂ ಆಪ್ತವಾಗುತ್ತದೆ. ಚಿತ್ರದ ಪ್ರತಿ ದೃಶ್ಯದಲ್ಲೂ ವಿಲಿಯಂ ಡೇವಿಡ್‌ ಅವರ ಕ್ಯಾಮೆರಾ ಕಣ್ಣು, ತನ್ನ ಕೆಲಸವನ್ನು ಅತ್ಯಂತ ಪ್ರಾಮಾಣಿಕವಾಗಿ ನಿಭಾಯಿಸಿದೆ.

ಸಿನಿಮಾ ನೋಡುತ್ತಾ ಹೋದಂತೆ ಅನೂಪ್‌ ಭಂಡಾರಿ ಅವರದ್ದೇ ‘ರಂಗಿತರಂಗ’ ಸಿನಿಮಾ ನೆನಪಾದರೂ ಅಚ್ಚರಿ ಇಲ್ಲ. ಯಾಕೆಂದರೆ ಇದು ಭಂಡಾರಿ ಬ್ರದರ್ಸ್‌ ಅವರ ಸಿಗ್ನೇಚರ್‌ ಸಿನಿಮಾ. ಪ್ರಕೃತಿ ಸೌಂದರ್ಯದ ಮಡಿಲಲ್ಲಿರುವ ಒಂದು ಊರು, ಅಲ್ಲೊಂದು ಪಾಳು ಬಿದ್ದ ಬಂಗಲೆ, ಯಕ್ಷಗಾನ ಹಾಗೂ ಭೂತಾರಾಧನೆಯ ಪರಂಪರೆ, ನಿಗೂಢವಾಗಿ ಮಾಯಾವಾಗುತ್ತಿರುವ ಮಕ್ಕಳು, ಪೊಲೀಸ್‌ ಅಧಿಕಾರಿಗಳ ಕೊಲೆ, ಅಲ್ಲಿಗೆ ಬರುವ ಖಡಕ್‌ ಅಫೀಸರ್‌. ಮುಂದೆ ಕೊಲೆ ಮತ್ತು ಪರಂಪರೆ ಜತೆಗೆ ದ್ವೇಷದ ಕತೆ ತೆರೆದುಕೊಂಡು ‘ಡೆನ್ನಾನ ಡೆನ್ನಾನ...’ ಎನ್ನುವಂತೆ ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸುತ್ತದೆ.

Movie Review: ವಿಕ್ರಾಂತ್ ರೋಣ 3ಡಿ ಚಿತ್ರ ಹೇಗಿದೆ? ರಕ್ಕಮ್ಮ ಎಂಟ್ರಿ ಮಜವೋ ಮಜಾ

ನಿರ್ದೇಶಕ ಅನೂಪ್‌ ಭಂಡಾರಿ ಅವರ ಕ್ಲಾಸಿಕ್‌ ಸ್ಟೈಲಿನ ಕತೆಗೆ ಸುದೀಪ್‌ ಅವರ ಮಾಸ್‌ ಅಪಿರೇನ್ಸ್‌ ಸೂಪರ್‌. ಅವರ ನಟನೆ, ಪಾತ್ರದ ಪೋಷಣೆ ಬಗ್ಗೆ ಹೆಚ್ಚು ಹೇಳುವ ಅಗತ್ಯವಿಲ್ಲ. ಜಾಕ್ವೇಲಿನ್‌ ಫರ್ನಾಡಿಸ್‌ ಅವರ ಗ್ಲಾಮರ್‌ ಪ್ರೇಕ್ಷಕನಿಗೆ ಬೋನಸ್‌. ಸ್ಟಾರ್‌ ನಟನನ್ನು ಇಟ್ಟುಕೊಂಡು ಸಸ್ಪೆನ್ಸ್‌ ಹಾಗೂ ಥ್ರಿಲ್ಲರ್‌ ಜಾನರ್‌ ಕತೆಗಳನ್ನು ಪ್ಯಾನ್‌ ಇಂಡಿಯಾ ಸಿನಿಮಾ ಆಗಿಸುವುದು ಬಹು ದೊಡ್ಡ ಸವಾಲು. ಆದರೆ, ನಿರ್ದೇಶಕರ ಈ ಸವಾಲಿಗೆ ನೆರವಾಗಿರುವುದು ಚಿತ್ರದ ತಾಂತ್ರಿಕ ವಿಭಾಗ. ಈ ಪೈಕಿ ಮೊದಲ ತಾಂತ್ರಿಕ ಹೀರೋ ಎಂದರೆ ಕಲಾ ನಿರ್ದೇಶಕ ಶಿವಕುಮಾರ್‌. ಇವರ ಕಲಾ ನೈಪುಣ್ಯವನ್ನು ಪ್ರೇಕ್ಷಕನಿಗೆ ಮತ್ತಷ್ಟುಹತ್ತಿರವಾಗಿಸುವ ವಿಎಫ್‌ಎಕ್ಸ್‌ ಹಾಗೂ 3ಡಿ ತಂತ್ರಜ್ಞಾನ.

‘ವಿಕ್ರಾಂತ್ ರೋಣ’ ವೇದಿಕೆಯಲ್ಲಿ ರಕ್ಕಮ್ಮ ಜಾಕ್ವೆಲಿನ್ ಜೊತೆ ಮಸ್ತ್ ಸ್ಟೆಪ್ಸ್ ಹಾಕಿದ ಕಿಚ್ಚ-ಸಲ್ಲು!

ಈ ಮೂರು ತಾಂತ್ರಿಕ ವಿಭಾಗಗಳು ಸೇರಿಕೊಂಡು ‘ವಿಕ್ರಾಂತ್‌ ರೋಣ’ ಜಾಗತಿಕ ಚಿತ್ರವನ್ನಾಗಿಸಲು ಸಾಕಷ್ಟುಶ್ರಮಿಸಿವೆ. ಜತೆಗೆ ಆಗಾಗ ಅಜನೀಶ್‌ ಲೋಕನಾಥ್‌ ಅವರು ಹಿನ್ನೆಲೆ ಸಂಗೀತದ ಮೂಲಕ ತಮ್ಮ ಇರುವಿಕೆಯನ್ನು ತೋರುತ್ತಾರೆ. ಅದರಲ್ಲೂ ಕ್ಲೈಮ್ಯಾಕ್ಸ್‌ನಲ್ಲಿ ಬರುವ ಹಾಡು ಚಿತ್ರದ ಪೋರ್ಸ್‌ಗೆ ಶಕ್ತಿ ತುಂಬುತ್ತದೆ. ನಿರ್ಮಾಪಕ ಜಾಕ್‌ ಮಂಜು ಅವರ ಖಜಾನೆ ಕೀ ಎಲ್ಲೂ ಮೊಡುತನ ತೋರದೆ ಸಾಕಷ್ಟುಉದಾರೀಕರಣ ನೀತಿ ಪಾಲಿಸಿದ್ದರಿಂದ ಚಿತ್ರದ ಮೇಕಿಂಗ್‌ ಅದ್ದೂರಿಯಾಗಿ ಮೂಡಿ ಬಂದಿದೆ. ಪಾತ್ರಧಾರಿಗಳ ನಟನೆ ವಿಚಾರಕ್ಕೆ ಬಂದರೆ ಎಲ್ಲರು ವಿಕ್ರಾಂತ್‌ ರೋಣನ ನೆರಳಿನಲ್ಲೇ ಗಮನ ಸೆಳೆಯುತ್ತಾರೆ.

click me!