ರಮೇಶ್ ಅರವಿಂದ್, ಬೇಬಿ ಆರಾಧ್ಯ, ಪೂರ್ಣಚಂದ್ರ ಮೈಸೂರು, ರಾಧಿಕಾ ನಾರಾಯಣ್ ಸಿನಿಮಾ ರಾಜ್ಯಾದ್ಯಂತ ಬಿಡುಗಡೆಯಾಗಿದೆ. ಸಿನಿಮಾ ಹೇಗಿದೆ?
ಪ್ರಿಯಾ ಕೆರ್ವಾಶೆ
ಉತ್ತರ ಕನ್ನಡದ ದಟ್ಟಕಾಡು. ನಾಪತ್ತೆಯಾದ ಹುಡುಗಿಯೊಬ್ಬಳ ಜಾಡು ಹಿಡಿದು ಅಲ್ಲಿಗೆ ಬರುವ ಶಿವಾಜಿಗೆ ಒಂದು ಜಾತಿಯ ಇರುವೆಗಳ ಸಾಲು ಗೋಚರಿಸುತ್ತದೆ. ಆ ಸಾಲೇ ತಾನು ಹುಡುಕುತ್ತಿರುವ ಹುಡುಗಿಯ ಪತ್ತೆಗೆ ಮಹತ್ವದ ಹಿಂಟ್ ನೀಡುತ್ತದೆ. ಇಂಥಾ ಸೂಕ್ಷ್ಮ ವಿವರಗಳ ಜೊತೆ ಸಂಬಂಧದ ಆಳ ಅಗಲದತ್ತಲೂ ದೃಷ್ಟಿಹರಿಸುವ ಚಿತ್ರ ಶಿವಾಜಿ ಸುರತ್ಕಲ್. 2020ರಲ್ಲಿ ಬಂದ ಈ ಸಿನಿಮಾದ ಮೊದಲ ಭಾಗ ನೋಡಿದ್ದರೆ ಈ ಕಥೆ ಕನೆಕ್ಟ್ ಆಗಬಹುದು. ಬರೀ ಈ ಭಾಗವನ್ನೇ ನೋಡಿದರೆ ಕನೆಕ್ಟ್ ಆದರೂ ಅಲ್ಲಲ್ಲಿ ಪ್ರಶ್ನೆ, ಗೊಂದಲ ಕಾಡಬಹುದು.
ತಾರಾಗಣ: ರಮೇಶ್ ಅರವಿಂದ್, ಬೇಬಿ ಆರಾಧ್ಯ, ಪೂರ್ಣಚಂದ್ರ ಮೈಸೂರು, ರಾಧಿಕಾ ನಾರಾಯಣ್
ನಿರ್ದೇಶನ: ಆಕಾಶ್ ಶ್ರೀವತ್ಸ
ರೇಟಿಂಗ್: 3
ಸಂಬಂಧಗಳನ್ನು ಸಂಭ್ರಮಿಸುವ ಸಿನಿಮಾ ಶಿವಾಜಿ ಸುರತ್ಕಲ್ 2: ರಮೇಶ್ ಅರವಿಂದ್ ಸಂದರ್ಶನ
ಹಿಂದಿನ ಭಾಗದಲ್ಲಿ ಶಿವಾಜಿಯ ಬದುಕಿಂದ ದೂರವಾದ ಗರ್ಭಿಣಿ ಪತ್ನಿ ಜನನಿ (ರಾಧಿಕಾ ನಾರಾಯಣ್) ಈಗ ಭ್ರಮೆಯಾಗಿ ಬರುತ್ತಾಳೆ. ಆಗ ಶಿವಾಜಿ ಮಾತ್ರೆ ತಗೊಳ್ಳಬೇಕು. ಇನ್ನೊಂದೆಡೆ ದತ್ತು ಮಗಳು ಸಿರಿ ಸುರತ್ಕಲ್(ಆರಾಧ್ಯ) ಇದ್ದಾಳೆ. ತಂದೆ ನಿವೃತ್ತ ಐಜಿ ವಿಜಯೇಂದ್ರ ಸುರತ್ಕಲ್(ನಾಸರ್) ಮಗನಿಂದ ದೂರವಾಗಿ ಮಂಗಳೂರಿನಲ್ಲಿದ್ದಾರೆ. ಇವಿಷ್ಟುಪಾತ್ರಗಳ ಜೊತೆಗಿನ ಶಿವಾಜಿಯ ಕಪ್ಪು ಬಿಳಿಪಿನ ಒಡನಾಟ ಒಂದು ಕಡೆಯಾದರೆ, ಶಿವಾಜಿಗೆ ಕನೆಕ್ಟ್ ಆಗಿಕೊಂಡೇ ಒಂದಾದ ಮೇಲೊಂದರಂತೆ ನಡೆಯುವ ಪೈಶಾಚಿಕ ಕೊಲೆಗಳು ಇನ್ನೊಂದೆಡೆ. ಮಾನಸಿಕ ಸಮಸ್ಯೆ, ಮಗಳ ಆರೈಕೆ ನಡುವೆಯೂ ಈ ಕೇಸನ್ನ ಶಿವಾಜಿ ಬಗೆಹರಿಸ್ತಾರ, ಆ ಕೇಸ್‌ನ ಹಿನ್ನೆಲೆ ಏನು ಅನ್ನೋದು ಕಥೆ.
ಶೆರ್ಲಾಕ್ ಹೋಮ್ಸ್ ಅನ್ನೋದು ಶಿವಾಜಿಗಿರೋ ಇನ್ನೊಂದು ಹೆಸರು. ಇಡೀ ಸಿನಿಮಾ ಶೆರ್ಲಾಕ್ ಹೋಮ್ಸ್ ಕಥೆಯಂತೇ ಈ ಕಾಲಕ್ಕೆ ಕೊಂಚ ಹೆಚ್ಚೇ ಸಮಾಧಾನವಾಗಿ ಸಾಗುತ್ತೆ. ಇನ್ನೊಂಚೂರು ವೇಗ ಇದ್ದರೆ ಬೆಸ್ಟಿತ್ತು. ನಿರ್ದೇಶಕ ಆಕಾಶ್ ಶ್ರೀವತ್ಸ ಅವರಿಗೆ ಶಿವಾಜಿ ಮಾನಸಿಕ ಕ್ಷೋಭೆಯನ್ನು ತೋರಿಸೋದರಲ್ಲಿ ಇರೋ ಉತ್ಸಾಹ ಕೇಸ್ ತನಿಖೆ ಬಗ್ಗೆ ಇದ್ದಂತಿಲ್ಲ. ಇದರಿಂದ ಕೇಸ್ ಮೇಲಿರಬೇಕಿದ್ದ ತೀವ್ರ ಫೋಕಸ್ ಮಿಸ್ ಆದ ಫೀಲು ಬರಬಹುದು. ಸಂಭಾಷಣೆಯಲ್ಲಿ ಚುರುಕುತನ ಬೇಕಿತ್ತು. ನಿರೂಪಣೆಯಲ್ಲಿ ಹೊಸತನ ತರುವ ಸಾಧ್ಯತೆ ಇತ್ತು. ಇಂಥಾ ಸಣ್ಣಪುಟ್ಟಕೊರತೆ ನಡುವೆಯೂ ಸಿನಿಮಾ ಪರಿಣಾಮಕಾರಿಯೇ ಇದೆ.
ತಮಿಳು- ತೆಲುಗು ಸಿನಿಮಾ ಮಾಡಿದ್ರೆ ಬ್ಯಾಂಕ್ ಬ್ಯಾಲೆನ್ಸ್ ಹೆಚ್ಚಿರುತ್ತಿತ್ತು: ನಟ ರಮೇಶ್ ಅರವಿಂದ್ ಶಾಕಿಂಗ್ ಹೇಳಿಕೆ
ಶಿವಾಜಿಯ ಮಾನಸಿಕ ಸಮಸ್ಯೆ, ಜಾಣ್ಮೆ, ಬೇಗುದಿಯನ್ನು ರಮೇಶ್ ಅರವಿಂದ್ ಜೀವಿಸಿದ್ದಾರೆ. ಪುಟಾಣಿ ಆರಾಧ್ಯಳದ್ದು ವಯಸ್ಸಿಗೂ ಮೀರಿದ ಅಭಿನಯ. ಇನ್ನೊಂದು ತೀವ್ರವಾಗಿ ಕಾಡುವ ಪಾತ್ರವನ್ನು ಪೂರ್ಣಚಂದ್ರ ಅದ್ಭುತವಾಗಿ ಅಭಿನಯಿಸಿದ್ದಾರೆ. ಏಕಕಾಲಕ್ಕೆ ರಾಕ್ಷಸಿ ಗುಣವನ್ನೂ, ಅಪ್ಪನ ಅಪಾರ ಪ್ರೇಮವನ್ನೂ ಅವರು ಅಭಿವ್ಯಕ್ತಿಸಿದ ರೀತಿ ಬಹಳ ತೀವ್ರ. ಉಳಿದಂತೆ ಎಲ್ಲರ ನಟನೆಯೂ ಚೆನ್ನಾಗಿದೆ. ಬ್ಯಾಗ್ರೌಂಡ್ ಸ್ಕೋರ್ ಪರಿಣಾಮಕಾರಿ.
ಸಿನಿಮಾ ಮುಗಿದ ಮೇಲೆ ಒಂದು ವಿಚಿತ್ರ ಮೌನ ಆವರಿಸುತ್ತೆ. ಚಿತ್ರ ಪರಿಣಾಮಕಾರಿ ಅನ್ನೋದನ್ನು ಹೇಳೋದಕ್ಕೆ ಇದು ಸಾಕು. ಎಲ್ಲ ಮರೆತು ಕಳೆದುಹೋಗಲು ಒಂದೊಳ್ಳೆ ಸಿನಿಮಾ ಶಿವಾಜಿ ಸುರತ್ಕಲ್ ಅನ್ನಬಹುದು.