ಧನಂಜಯ್, ಅಮೃತಾ ಅಯ್ಯಂಗಾರ್, ಅಚ್ಯುತ್ ಕುಮಾರ್, ನವೀನ್ ಶಂಕರ್, ಅವಿನಾಶ್ ಅಭಿನಯಿಸಿರುವ ಗುರುದೇವ್ ಹೊಯ್ಸಳ ಸಿನಿಮಾ ಅದ್ಧೂರಿ ಪ್ರದರ್ಶನ ಕಾಣುತ್ತಿದೆ. ಸಿನಿಮಾ ಹೇಗಿದೆ ಗೊತ್ತಾ?
ರಾಜೇಶ್ ಶೆಟ್ಟಿ
ಎಂಥಾ ದುಷ್ಟರಿಗೂ ಹೆದರದ, ಯಾವ ಸೀನಿಯರ್‌ಗೂ ಅಂಜದ, ರಾಜಕಾರಣಿಗಳಿಗೆ ತಲೆಬಾಗದ, ಎನ್‌ಕೌಂಟರ್ ಮಾಡಲು ಹಿಂದೆಮುಂದೆ ನೋಡದ, ಮಾತಲ್ಲಿ ಬಿರುಗಾಳಿ ಎಬ್ಬಿಸುವ, ಕಣ್ಣಲ್ಲಿ ಬೆಂಕಿಯುಗುಳುವ ಪೊಲೀಸ್ ಅಧಿಕಾರಿಯೊಬ್ಬನ ಜೈಜೈಕಾರದ ಕತೆ. ಅಪ್ಪಟ ಪೊಲೀಸ್ ಸ್ಟೋರಿ. ಮಧ್ಯದಲ್ಲೊಂದು ಎಲ್ಲರನ್ನೂ ಎಲ್ಲವನ್ನೂ ಜೊತೆಗೆ ಕರೆದೊಯ್ಯುವ ಭಾವನಾತ್ಮಕ ಎಳೆ. ಆ ಎಳೆಯೇ ಈ ಸಿನಿಮಾದ ಹೃದಯ. ರೋಷಾವೇಷ, ಆಕ್ರೋಶ ಅಬ್ಬರವೆಲ್ಲಾ ಹೃದಯ ಕಾಪಾಡಲು ಇರುವ ಅವಯವ.
ನಿರ್ದೇಶನ: ವಿಜಯ್ ಎನ್.
ತಾರಾಗಣ: ಧನಂಜಯ್, ಅಮೃತಾ ಅಯ್ಯಂಗಾರ್, ಅಚ್ಯುತ್ ಕುಮಾರ್, ನವೀನ್ ಶಂಕರ್, ಅವಿನಾಶ್
ರೇಟಿಂಗ್: 3
ಪೊಲೀಸ್ ಅಧಿಕಾರಿಯೊಬ್ಬ ಕಾಣೆಯಾಗುವ ಕೇಸ್ ವಿಚಾರಣೆಗೆ ಹೊಸ ಅಧಿಕಾರಿಯೊಬ್ಬ ಆ ಊರಿಗೆ ಬರುವ ಕ್ಷಣದಿಂದ ಸಿನಿಮಾ ಶುರು. ಅಲ್ಲಿನ ಕೇಡಿಗಳನ್ನೆಲ್ಲಾ ಮಟ್ಟಹಾಕುವ ವೇಳೆಯಲ್ಲಿ ಸಿಗುವ ಯುವಜೋಡಿ. ಅಲ್ಲಿಂದ ಕತೆಗೊಂದು ತಿರುವು. ಆ ಜೋಡಿ ಯಾರು, ಎಲ್ಲಿಂದ ಬಂತು, ಎಲ್ಲಿಗೆ ಹೋಯಿತು ಅನ್ನುವ ಹುಡುಕಾಟವೇ ಮೊದಲಾರ್ಧವನ್ನು ಕುತೂಹಲದಿಂದ ನಡೆಸುತ್ತದೆ. ಈ ಹಂತದಲ್ಲಿ ಕತೆಗಾರನಿಗಿರುವ ಗಟ್ಟಿಯಾದ ಹಿಡಿತ ದ್ವಿತೀಯಾರ್ಧದಲ್ಲಿ ಸ್ವಲ್ಪ ಸಡಿಲುಗೊಂಡಂತೆ ಅನ್ನಿಸುತ್ತದೆ.
ಸೂಕ್ಷ್ಮ ವಿಚಾರದ ಮೇಲೆ ಬೆಳಕು ಚೆಲ್ಲುವ ಹೊಯ್ಸಳ: ಎನ್. ವಿಜಯ್
ಮರ್ಯಾದೆ ಹತ್ಯೆ ವಿಚಾರ ಹೊಸದೂ ಅಲ್ಲ, ಹಳೆಯದೂ ಅಲ್ಲ. ಅದನ್ನು ಈ ಕಾಲಕ್ಕೆ, ಈ ಕ್ಷಣಕ್ಕೆ ಮನಸ್ಸು ಮುಟ್ಟುವಂತೆ ಕಟ್ಟಿಕೊಡುವ ಯತ್ನವನ್ನು ಬಹಳ ಸೊಗಸಾಗಿ ಮಾಡಿದ್ದಾರೆ ನಿರ್ದೇಶಕರು. ಯಾವುದೋ ಒಂದು ಹಳ್ಳಿ. ಅಲ್ಲಿ ಬೇರು ಬಿಟ್ಟಿರುವ ಜಾತಿ ವ್ಯವಸ್ಥೆ. ಭಯದಿಂದ ನಲುಗುತ್ತಿರುವ ಜನ. ಆ ವ್ಯವಸ್ಥೆಯನ್ನು ಮೀರಲೆಂಬಂತೆ ಹುಟ್ಟುವ ಪ್ರೀತಿ. ಆ ಪ್ರೀತಿ ಕಾಯಲೊಬ್ಬ ರಕ್ಷಕ. ಇವಿಷ್ಟನ್ನು ಇಟ್ಟುಕೊಂಡು ಚಂದದ ಸಿನಿಮಾ ರೂಪಿಸಿದ್ದಾರೆ. ಅತ್ಯಂತ ಸೂಕ್ಷ್ಮ ವಿಚಾರವೊಂದನ್ನು ಬಣ್ಣ ಬಣ್ಣದ ಫ್ಯಾಷನೇಬಲ್ ಹೊದಿಕೆ ಹಾಕಿ ಕೊಟ್ಟಿದ್ದಾರೆ. ಈ ಹಂತದಲ್ಲಿ ಆ ಹೊದಿಕೆಯೇ ಹೆಚ್ಚು ಆಕರ್ಷಕ ಕಾಣುತ್ತದೆ. ಆ ಅಬ್ಬರಕ್ಕೆ ವಿಚಾರ ಸ್ವಲ್ಪ ಹಿನ್ನೆಲೆಗೆ ಸರಿಯುತ್ತದೆ.
ಇದೊಂದು ಆ್ಯಕ್ಷನ್ ತುಂಬಿರುವ ಕಮರ್ಷಿಯಲ್ ಡ್ರಾಮಾ. ಶಕ್ತಿ ತುಂಬಲು ಏನೆಲ್ಲಾ ಬೇಕೋ ಅವೆಲ್ಲಾ ಇವೆ. ಹೆಚ್ಚಾಗಿ ಮಾತನ್ನು ಕಣ್ಣಲ್ಲೇ ದಾಟಿಸುವ ನಟ ಭಯಂಕರರಿದ್ದಾರೆ. ಆಕ್ರೋಶವನ್ನು, ಅಸಹಾಯಕತೆಯನ್ನು, ಕೋಪವನ್ನು, ನೋವನ್ನು ಸಮರ್ಥವಾಗಿ ನೋಡುಗನೆದೆಗೆ ತಾಕಿಸುವ ಧನಂಜಯ್ ಈ ಚಿತ್ರದ ಪವರ್ ಹೌಸ್. ಅಷ್ಟೇ ಅಂಕ ಗಿಟ್ಟಿಸಿಕೊಳ್ಳುವುದು ಖಳ ಪಾತ್ರಧಾರಿ ನವೀನ್ ಶಂಕರ್. ಅಂತರಾಳದಲ್ಲಿರುವ ನೋವನ್ನು, ಸಂಕಟವನ್ನು ಹೊರಹಾಕುವಂತೆ ತುಂಬಿಕೊಂಡಂತೆ ಇರುವ ಅವರ ಕಣ್ಣುಗಳು ಕ್ರೌರ್ಯಕ್ಕಿಂತ ಹೆಚ್ಚಾಗಿ ಕಾಡುತ್ತವೆ. ಆ ಮಟ್ಟಿಗೆ ನವೀನ್ ಪಾತ್ರವನ್ನು ಜೀವಿಸಿದ್ದಾರೆ.
'ಗುರುದೇವ್ ಹೊಯ್ಸಳ'ನಾಗಿ ಘರ್ಜಿಸಿದ ಧನಂಜಯ್, ಡಾಲಿ ಖಡಕ್ ಅಧಿಕಾರಿನಾ? ಇಲ್ಲ ಎನ್ಕೌಂಟರ್ ಸ್ಪೆಷಲಿಸ್ಟ್?
ಅಚ್ಯುತ್ ಕುಮಾರ್, ರಾಜೇಶ್ ನಟರಂಗ, ಅವಿನಾಶ್ ಸೇರಿದಂತೆ ಹೊಸ ಪ್ರತಿಭೆಗಳಾದ ಅನಿರುದ್ಧ ಭಟ್, ಮಯೂರಿ ನಟರಾಜ್ ನಟನೆ ಶ್ಲಾಘನೀಯ. ಅವರಷ್ಟೇ ಅಲ್ಲದೆ ಇಲ್ಲಿನ ಬಹುತೇಕ ಪಾತ್ರಗಳು ಮನದಲ್ಲಿ ಉಳಿಯುವಂತೆ ಮಾಡುವುದು ನಿರ್ದೇಶಕರ ಪ್ರತಿಭೆಗೆ ಸಲ್ಲಬೇಕಾದ ಮೆಚ್ಚುಗೆ. ಅಜನೀಶ್ ಲೋಕನಾಥ್ ಹಿನ್ನೆಲೆ ಸಂಗೀತ ಈ ಚಿತ್ರದ ಶಬ್ದ ನಾಯಕ.
ಗುರುದೇವ್ ಹೊಯ್ಸಳ ಈ ಕಾಲದ ನಿರೂಪಣೆಯಲ್ಲಿ ಕಟ್ಟಿಕೊಟ್ಟಿರುವ ಕುತೂಹಲಭರಿತ ಅಪ್ಪಟ ಕಮರ್ಷಿಯಲ್ ಪೊಲೀಸ್ ಸ್ಟೋರಿ.