ಸಂಪೂರ್ಣ 'ಯಶ್ ರಾಮಾಯಣ': ಸಿನಿಮಾ ನೋಡಿದರೆ ಗೊತ್ತಾಗುವ 10 ಅದ್ಭುತ ವಿಶೇಷತೆಗಳಿವು!

Published : Nov 05, 2026, 08:46 PM IST
Ramayana Movie Review

ಸಾರಾಂಶ

ಯಶ್, ರಣಬೀರ್ ಕಪೂರ್ ಮತ್ತು ಸಾಯಿ ಪಲ್ಲವಿ ನಟನೆಯ ರಾಮಾಯಣ ಸಿನಿಮಾ ನೋಡಬಹುದೇ? ಅದ್ದೂರಿ ವಿಎಫ್‌ಎಕ್ಸ್, 3D ದೃಶ್ಯ ವೈಭವ, ಆಕ್ಷನ್, ಸಂಗೀತ, ತಾರಾಗಣ, ಪ್ಲಸ್ ಮತ್ತು ಮೈನಸ್ ಅಂಶಗಳ ಜತೆಗೆ ಟಿಕೆಟ್..

- ರಾಜ್

ಯಶ್, ರಣಬೀರ್ ಕಪೂರ್, ಸಾಯಿ ಪಲ್ಲವಿ ನಟಿಸಿರುವ ‘ರಾಮಾಯಣ’ ಅಬ್ಬರದ ಪ್ರಚಾರ ಮಾಡಿರುವುದರಿಂದ ಬಹುತೇಕರಲ್ಲಿ ಈ ಸಿನಿಮಾ ನೋಡಬಹುದೇ ಎಂಬ ಪ್ರಶ್ನೆ ಎದ್ದಿದೆ. ಕುಟುಂಬದ ಯಜಮಾನರು ಈ ಸಿನಿಮಾದ ಟಿಕೆಟ್ ದರ ಹೆಚ್ಚಿರುವುದರಿಂದ ಈ ಚಿತ್ರಕ್ಕೆ ಅಷ್ಟು ಖರ್ಚು ಮಾಡುವುದು ಸೂಕ್ತವೇ ಎಂದು ಚಿಂತಿಸುತ್ತಿದ್ದಾರೆ. ಈ ಕಾರಣಕ್ಕೆ ಈ ಸಿನಿಮಾದಲ್ಲಿ ಏನು ವಿಶೇಷವಿದೆ ಎಂಬ ಚಿತ್ರಣ ಇಲ್ಲಿದೆ-

1. ಯಶ್ ನಟನೆಗೆ ಹೆಚ್ಚು ಅಂಕಗಳು

ಈ ಸಿನಿಮಾ ಆರಂಭವಾಗುವುದೇ ಯಶ್ ಅವರ ರಾವಣ ಪಾತ್ರದ ಮೂಲಕ. ಆ ಪಾತ್ರದ ಅಗಾಧತೆಯನ್ನು ತೋರಿಸಲೆಂದೇ ಸಾಕಷ್ಟು ನಿಮಿಷಗಳನ್ನು ಇಡಲಾಗಿದೆ. ಯಶ್ ಈ ಹಂತದಲ್ಲಿಯೇ ಎಲ್ಲರ ಮನಸ್ಸು ಗೆದ್ದು ಬಿಡುತ್ತಾರೆ. ಅವರ ಸ್ಕ್ರೀನ್ ಪ್ರೆಸೆನ್ಸ್, ಗತ್ತು ಗಾಂಭೀರ್ಯ, ಅದ್ದೂರಿ ಕಂಠ ರಾವಣ ಪಾತ್ರವನ್ನು ಎತ್ತರಕ್ಕೇರಿಸಿದೆ. ಒಂದು ಸನ್ನಿವೇಶದಲ್ಲಿ ದಶಾನನನ ಹತ್ತು ರೂಪಗಳು ಕಾಣಿಸಿಕೊಳ್ಳುತ್ತವೆ ಮತ್ತು ಆ ದೃಶ್ಯದಲ್ಲಿ ಯಶ್ ಹತ್ತು ರೀತಿಯಲ್ಲಿ ನಟಿಸಿರುವುದು ಈ ಸಿನಿಮಾದ ಪ್ಲಸ್ ಪಾಯಿಂಟ್. ಆ ಕಾರಣದಿಂದಲೇ ಇದು ಸಂಪೂರ್ಣ ಯಶ್ ರಾಮಾಯಣ.

2. ದೃಶ್ಯ ವೈಭವ

ರಾಮಾಯಣ ಕಾಲಕಾಲಕ್ಕೆ ಜನಪದವಾಗಿ ದಾಟುತ್ತಾ ಬಂದಿದೆ. ಸಾಹಿತ್ಯ ಜಗತ್ತಲ್ಲಿಯೂ ಸಾಕಷ್ಟು ರಾಮಾಯಣ ಆವೃತ್ತಿಗಳಿವೆ. ಈ ಕಾಲದಲ್ಲಿ ಸಿನಿಮಾ ಮೂಲಕ ಹೊಸ ಹೊಸ ರಾಮಾಯಣ ಆವೃತ್ತಿಗಳನ್ನು ನೋಡುವಂತಾಗಿದೆ. ಈ ರಾಮಾಯಣದ ದೃಶ್ಯ ವೈಭವ ಸೊಗಸಾಗಿದೆ. ಉತ್ತಮ ರೀತಿಯ ವಿಎಫ್‌ಎಕ್ಸ್‌ಗಳನ್ನು ಕಾಣಬಹುದು. ರಾಕ್ಷಸರ ಕಾಡು, ಜಟಾಯು ಯುದ್ಧ, ರಾವಣನ ಲೋಕ ಆಕರ್ಷಕವಾಗಿ ಮೂಡಿಬಂದಿದೆ.

3. ಕಥಾ ಲೋಕ

ರಾಮಾಯಣ ಎಲ್ಲರಿಗೂ ಗೊತ್ತಿರುವ ಕತೆ. ಆ ಕತೆಯನ್ನು ಅದ್ದೂರಿಯಾಗಿ ಹೇಳಿರುವುದು ಈ ಚಿತ್ರದ ವಿಶೇಷತೆ. ಆರಂಭವೇ ರಾವಣನ ಪಾತ್ರದಿಂದ ಆಗುತ್ತದೆ. ನಂತರ ಗೊತ್ತಿರುವ ಕತೆ ಎದುರಾಗುತ್ತದೆ. ದೃಶ್ಯ ವೈಭವದಿಂದ ನಮ್ಮ ಮನಸ್ಸಲ್ಲಿರುವ ಕತೆ ಜೀವ ತಳೆಯುತ್ತಾ ಹೋಗುತ್ತದೆ. ಆದರೆ ಇಲ್ಲಿ ದೃಶ್ಯ ಅಗಾಧತೆಯಿಂದ ಭಾವುಕತೆ ಕೊಂಚ ಹಿನ್ನೆಲೆಗೆ ಸರಿದಿದೆ. ಆದರೆ ಒಟ್ಟಾರೆ ನಿರೂಪಣೆಯಲ್ಲಿ ಪುರಾಣದ ಘನತೆ ಕಡಿಮೆಯಾಗದಂತೆ ಎಚ್ಚರ ವಹಿಸಲಾಗಿದೆ.

4. ಅದ್ದೂರಿ ತಾರಾಗಣ

ರಣಬೀರ್ ಕಪೂರ್, ಸಾಯಿ ಪಲ್ಲವಿ, ರವಿ ದುಬೆ ಸೇರಿದಂತೆ ಅದ್ದೂರಿ ತಾರಾಗಣವಿದೆ. ಸಾಯಿ ಪಲ್ಲವಿ ಸೀತೆಯ ಪಾತ್ರಕ್ಕೆ ಅಪ್ಪಟ ಸಾತ್ವಿಕ ಕಳೆ ತುಂಬಿದ್ದಾರೆ. ಯಾವುದೇ ಕೃತಕ ಮೇಕಪ್ ಅಥವಾ ಅಬ್ಬರವಿಲ್ಲದೆ ಕೇವಲ ಮುಗ್ಧತೆ ಮತ್ತು ಕಣ್ಣಿನ ಅಭಿನಯದಿಂದಲೇ ಜಾನಕಿಯ ನೋವು, ಘನತೆಯನ್ನು ದಾಟಿಸಿದ್ದಾರೆ. ಶ್ರೀರಾಮನಾಗಿ ರಣಬೀರ್ ಕಪೂರ್ ಶಾಂತ, ಸಂಯಮದ ನಟನೆ ಮೂಲಕ ಮರ್ಯಾದಾ ಪುರುಷೋತ್ತಮನ ಚಹರೆಯನ್ನು ತೆರೆಯ ಮೇಲೆ ತಂದಿದ್ದಾರೆ. ಲಕ್ಷ್ಮಣನಾಗಿ ರವಿ ದುಬೆ ಸಾಥ್ ನೀಡಿದ್ದು, ಪ್ರತಿಯೊಂದು ಪಾತ್ರಕ್ಕೂ ಸೂಕ್ತ ನಟರ ಆಯ್ಕೆ ನಡೆದಿರುವುದು ಎದ್ದು ಕಾಣುತ್ತದೆ.

5. ರೋಮಾಂಚಕ ಆಕ್ಷನ್ ಸನ್ನಿವೇಶಗಳು

ಹಿಂದಿನ ಪೌರಾಣಿಕ ಚಿತ್ರಗಳಂತೆ ಕೇವಲ ಬಿಲ್ಲು-ಬಾಣಗಳ ಕಂಪ್ಯೂಟರ್ ಗ್ರಾಫಿಕ್ಸ್ ತಂತ್ರಗಳಿಗೆ ಸೀಮಿತವಾಗದೆ, ನೈಜ ಯುದ್ಧ ಸನ್ನಿವೇಶಗಳನ್ನು ಕಟ್ಟಿಕೊಡಲಾಗಿದೆ. ಆರಂಭದಲ್ಲಿ ಬರುವ ಇಂದ್ರ ಮತ್ತು ರಾವಣನ ಕಾಳಗ, ದಂಡಕಾರಣ್ಯದಲ್ಲಿ ನಡೆಯುವ ರಾಕ್ಷಸರ ಸಂಹಾರ ಹಾಗೂ ಅಂತಿಮ ಹಂತದ ಜಟಾಯು-ರಾವಣನ ಆಕಾಶ ಯುದ್ಧ ಅತ್ಯಂತ ರೋಮಾಂಚಕವಾಗಿ ಮೂಡಿಬಂದಿದೆ. ಪ್ರತಿಯೊಂದು ಸಾಹಸ ಸನ್ನಿವೇಶದಲ್ಲೂ ಅಂತಾರಾಷ್ಟ್ರೀಯ ದರ್ಜೆಯ ತಾಂತ್ರಿಕ ಶ್ರಮ ಕಾಣಿಸುತ್ತದೆ.

6. ಸಂಗೀತ ಮತ್ತು ಹಿನ್ನೆಲೆ ಧ್ವನಿ

ಚಿತ್ರದ ಹಿನ್ನೆಲೆ ಸಂಗೀತ ದೃಶ್ಯಗಳ ಗಾಂಭೀರ್ಯವನ್ನು ಇನ್ನಷ್ಟು ಹೆಚ್ಚಿಸಿದೆ. ಭಾರತೀಯ ಶಾಸ್ತ್ರೀಯ ವಾದ್ಯಗಳ ಜತೆಗೆ ಪಾಶ್ಚಿಮಾತ್ಯ ಸಿಂಫೊನಿ ಆರ್ಕೆಸ್ಟ್ರಾವನ್ನು ಬೆರೆಸಿರುವುದು ಚಿತ್ರಮಂದಿರಗಳಲ್ಲಿ ಪ್ರೇಕ್ಷಕರಿಗೆ ರೋಮಾಂಚಕ ಶ್ರವಣಾನುಭವ ನೀಡುತ್ತದೆ.

7. ಕುಟುಂಬ ಸಮೇತ ನೋಡಬಹುದೇ

ಹೊಸ ತಲೆಮಾರಿನ ಮಕ್ಕಳಿಗೆ ರಾಮಾಯಣದ ಕತೆಯನ್ನು ಅವರದೇ ಭಾಷೆಯ ಅತ್ಯಾಧುನಿಕ ದೃಶ್ಯರೂಪದಲ್ಲಿ ಪರಿಚಯಿಸಲು ಇದು ಸೂಕ್ತ ವೇದಿಕೆ. ಯಾವುದೇ ಮುಜುಗರದ ಸನ್ನಿವೇಶಗಳಿಲ್ಲದೆ, ಸಂಸ್ಕೃತಿಯ ಬೇರುಗಳನ್ನು ಪರಿಚಯಿಸುವ ದೃಶ್ಯಕಾವ್ಯ ಇದಾಗಿದೆ. ಹಿರಿಯರಿಂದ ಹಿಡಿದು ಮಕ್ಕಳವರೆಗೆ ಇಡೀ ಕುಟುಂಬ ಒಟ್ಟಾಗಿ ಕೂತು ಆಸ್ವಾದಿಸಬಹುದಾದ ಚಿತ್ರಣ ಇಲ್ಲಿದೆ.

8. ನೆಗೆಟಿವ್ ಅಂಶಗಳಿವೆಯೇ!

ಚಿತ್ರದ ವೇಗ ಕೆಲವೆಡೆ ನಿಧಾನ ಎನಿಸುತ್ತದೆ. ಭಾವುಕ ಸನ್ನಿವೇಶಗಳು ಕಡಿಮೆಯಾಗಿರುವುದರಂದ ಮನಸ್ಸಿಗಿಳಿಯುವುದು ನಿಧಾನವಾಗುತ್ತದೆ. ಹಿಂದಿಯ ಡಬ್ಬಿಂಬ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಜಟಾಯುವಿಗೆ ಅನುಪಮ್ ಖೇರ್ ಧ್ವನಿ ನೀಡಿದ್ದನ್ನು ಬಹುತೇಕರು ಮೆಚ್ಚಿಕೊಂಡಿದ್ದಾರೆ. ಕನ್ನಡಕ್ಕೂ ಉತ್ತಮವಾಗಿ ಡಬ್ ಮಾಡಲಾಗಿದೆ. ವಿಶೇಷವಾಗಿ ಯಶ್ ಧ್ವನಿ ಖುಷಿ ಕೊಡುತ್ತದೆ.

9. ಟಿಕೆಟ್ ದರಕ್ಕೆ ಪೈಸಾ ವಸೂಲ್ ಎನಿಸುತ್ತದೆಯೇ!

ದೊಡ್ಡ ಮೊತ್ತದ ಟಿಕೆಟ್ ದರ ನೀಡಿ ಚಿತ್ರಮಂದಿರಕ್ಕೆ ಹೋಗುವ ಕುಟುಂಬಕ್ಕೆ ಈ ಚಿತ್ರ ಕೇವಲ ನಟನೆಯಿಂದ ಮಾತ್ರವಲ್ಲ, ಅತ್ಯುನ್ನತ 3ಡಿ ಹಾಗೂ ಬಿಗ್-ಸ್ಕ್ರೀನ್ ತಾಂತ್ರಿಕತೆಯಿಂದ ಮೆಚ್ಚಿಸಬಹುದು. ಕತೆ ಕಟ್ಟುವಿಕೆಗಿಂತ ದೃಶ್ಯ ವೈಭವಕ್ಕೆ ಒತ್ತು ನೀಡಲಾಗಿದೆ. ಸಾಮಾನ್ಯ ಪರದೆಗಿಂತ ಉತ್ತಮ ಪರದೆ ಅಥವಾ ಉತ್ತಮ ಸೌಂಡ್ ಸಿಸ್ಟಮ್ ಇರುವ ಚಿತ್ರಮಂದಿರಗಳಲ್ಲಿ ನೋಡಿದರೆ ದುಡ್ಡಿಗೆ ತಕ್ಕ ದೃಶ್ಯಾನುಭವ ಸಿಗಬಹುದು.

10. ಮಹಾಕಾವ್ಯ

ಇದು ಕೇವಲ ಇನ್ನೊಂದು ಪೌರಾಣಿಕ ಚಿತ್ರವಲ್ಲ, ಭಾರತೀಯ ಮಹಾಕಾವ್ಯವೊಂದನ್ನು ಅಂತಾರಾಷ್ಟ್ರೀಯ ತಾಂತ್ರಿಕ ಮಟ್ಟದಲ್ಲಿ ಕಟ್ಟಿಕೊಟ್ಟಿರುವ ಸಾಹಸ. ಕಥೆಯ ಗಾಢತೆಗಿಂತ ದೃಶ್ಯದ ವೈಭವವೇ ಇಲ್ಲಿ ಮುನ್ನೆಲೆಯಲ್ಲಿದ್ದರೂ ಒಂದು ವಿಶಿಷ್ಟ ಪ್ರಯತ್ನವಾಗಿ ಉಳಿಯಲಿರುವ ಮಹತ್ವದ ಸಿನಿಮಾವಿದು.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಬೇಡ ಅಂದ್ರು ಅದೇ ಕ್ಲೈಮ್ಯಾಕ್ಸ್‌ ಇಟ್ರು; 4ಕ್ಕೆ 30 ಕೋಟಿ ಗಳಿಸಿದ ಕನ್ನಡದ ಸಿನಿಮಾ
Sandalwood: ಅಂಡರ್‌ರೇಟೆಡ್ ಕನ್ನಡ ಸಿನಿಮಾಗಳು; ಮಿಸ್ ಮಾಡದೇ ನೋಡಿ ಕಣ್ತುಂಬಿಕೊಳ್ಳಿ