
ಪ್ರಿಯಾ ಕೆರ್ವಾಶೆ
ಸೈಕಾಲಜಿಯಲ್ಲೊಂದು ಥಿಯರಿ ಇದೆ. ಶಾಕಿಂಗ್ ಘಟನೆ ಸಂಭವಿಸಿದಾಗ, ಆ ಘಟನೆಯಷ್ಟೇ ನೆನಪಲ್ಲುಳಿದು, ಹಿಂದೇನಾಯ್ತು ಅನ್ನೋದು ನೆನಪಿಗೆ ಬರಲ್ಲ ಅಂತ. ಪ್ರೇಮ್ (Prem) ನಿರ್ದೇಶನದ ‘ಏಕ್ ಲವ್ ಯಾ’ (Ek Love Ya) ಕೊನೆಯಲ್ಲಿ ಕೊಡುವ ಶಾಕ್ ಹೀಗೇ ಇದೆ. ಚಿತ್ರದ ಹಿಂದಿನ ಮಿತಿಗಳನ್ನೆಲ್ಲ ಮರೆತು ಕೊನೆಯನ್ನೇ ಯೋಚಿಸುತ್ತಾ ಮೌನವಾಗಿ ಹೊರ ಬರುತ್ತೇವೆ. ಈ ರೊಮ್ಯಾಂಟಿಕ್ ಥ್ರಿಲ್ಲರ್‌ನ ಮೊದಲ ಭಾಗ ಅಮರ್ ಎಂಬ ಹೈಸ್ಕೂಲ್ ಕಂ ಕಾಲೇಜು ಹುಡುಗನ ಹುಚ್ಚು ಪ್ರೇಮದ ಮೇಲೆ ನಡೆಯುತ್ತೆ. ಬಹುಶಃ ಪ್ರೇಮ್ ತಮ್ಮ ಎಲ್ಲಾ ಗಮನವನ್ನೂ ಸೆಕೆಂಡ್ ಹಾಫ್ ಮೇಲೇ ಕೇಂದ್ರೀಕರಿಸಿರುವ ಕಾರಣಕ್ಕೋ ಏನೋ ಮೊದಲ ಭಾಗದಲ್ಲಿ ಜಾಳು ಹೆಚ್ಚು.
ಹುಡುಗಿ ಹಿಂದೆ ಬೀಳುವ, ಅವಳನ್ನು ಇಂಪ್ರೆಸ್ ಮಾಡುವುದಕ್ಕೇ ಇದ್ದಬದ್ದ ಸಮಯವನ್ನೆಲ್ಲ ಮೀಸಲಿಟ್ಟಿದ್ದಾರೆ. ಈ ಭಾಗದಲ್ಲಿ ಹೆಚ್ಚು ಕಮಾಲ್ ಮಾಡೋದು ರಚಿತಾ ರಾಮ್ (Rachita Ram) ಪಾತ್ರ. ಇದೊಂಥರ ಆಟಕ್ಕುಂಟು ಲೆಕ್ಕಕ್ಕಿಲ್ಲ ಅನ್ನೋ ಥರದ ಪಾತ್ರವಾದರೂ, ಇಂಥಾ ಪಾತ್ರಕ್ಕೂ ಜೀವ ತುಂಬುವ ಮೂಲಕ ತಾನೆಂಥಾ ಪ್ರತಿಭಾವಂತೆ ಅನ್ನೋದನ್ನು ರಚಿತಾ ತೋರಿಸಿದ್ದಾರೆ. ಇದು ಪ್ರೇಮ್ ಚಿತ್ರವೇ ಅನ್ನೋದನ್ನು ಕನ್‌ಫರ್ಮ್ ಮಾಡೋದು ಇಂಟರ್‌ವಲ್ ನಂತರದ ಭಾಗ. ತಾನು ಪ್ರೀತಿಸಿದ ಹುಡುಗಿಯನ್ನೇ ರೇಪ್ ಮಾಡಿ, ಸಾಯಿಸುವ ಪ್ರಯತ್ನ ಮಾಡುವ ಆರೋಪ ನಾಯಕನ ಮೇಲೆ ಬರುತ್ತದೆ.
ಚಿತ್ರ: ಏಕ್ ಲವ್ ಯಾ
ತಾರಾಗಣ: ರಾಣಾ, ರಚಿತಾ ರಾಮ್, ರೀಷ್ಮಾ ನಾಣಯ್ಯ, ಚರಣ್ ರಾಜ್, ಯಶ್ ಶೆಟ್ಟಿ, ಸುಧಿ, ಶಶಿ ಕುಮಾರ್, ಸುಚೇಂದ್ರ ಪ್ರಸಾದ್
ನಿರ್ದೇಶನ: ಪ್ರೇಮ್
ರೇಟಿಂಗ್: 4
ಮುಂದಿನದು ಹಗ್ಗದ ಮೇಲಿನ ನಡಿಗೆ. ಕ್ಷಣಕ್ಷಣಕ್ಕೂ ರೋಚಕ ತಿರುವು ಪಡೆಯುತ್ತಾ ಕ್ಲೈಮ್ಯಾಕ್ಸ್‌ನಲ್ಲಿ ಸತ್ಯ ದರ್ಶನ. ಸತ್ಯ ಅಂದುಕೊಂಡದ್ದರೊಳಗೆ ಎಂತೆಂಥಾ ಸುಳ್ಳುಗಳಿರುತ್ತವೆ, ಆ ಸುಳ್ಳುಗಳ ಕಂಬಂಧ ಬಾಹುಗಳು ಎಲ್ಲೆಲ್ಲಿ ವ್ಯಾಪಿಸಿರುತ್ತವೆ ಎಂಬುದರ ಪರಿಣಾಮಕಾರಿ ಪ್ರಸ್ತುತಿ. ಅರ್ಜುನ್ ಜನ್ಯಾ (Arjun Janya) ಮೋಹಕ ಹಾಡುಗಳು, ಮಹೇನ್ ಸಿಂಹ (Mahen Simha) ಅದ್ಭುತ ಸಿನಿಮಾಟೋಗ್ರಫಿ ಕತೆಗೆ ಬಣ್ಣ ತುಂಬಿವೆ. ಒಂದಾನೊಂದು ಕಾಲದಿಂದ ಇಲ್ಲಿಯವರೆಗೂ ಚಿತ್ರಗಳಲ್ಲಿ ಹೆಣ್ಣಿನ ಶೀಲವನ್ನು ವೈಭವೀಕರಿಸುವ ಪ್ರಯತ್ನ ನಡೆಯುತ್ತಲೇ ಇದೆ. ಪ್ರೇಮ್ ಈ ತಗಡು ಫಾಮ್ರ್ಯಾಟ್ ಮುರಿಯೋ ಒಳ್ಳೆಯ ಕೆಲಸ ಮಾಡಿದ್ದಾರೆ. ಈ ಸಿನಿಮಾದಲ್ಲೊಂದು ಮಜಾ ಸನ್ನಿವೇಶವಿದೆ.
ಪ್ರೇಮ್ ಲೇಬಲ್ ತೆಗೆದು 'ಏಕ್ ಲವ್ ಯಾ' ನೋಡಿ: Jogi Prem
ಮಗನ ವಿಚಾರಕ್ಕೆ ಸಿಕ್ಕಾಪಟ್ಟೆ ತಲೆ ಕೆಡಿಸಿಕೊಂಡು ಲಕ್ವಾ ಹೊಡೆಸಿಕೊಂಡ ತಂದೆ ಮುಂದಿನ ಸೀನ್‌ನಲ್ಲೇ ಸಂಪೂರ್ಣ ಹುಷಾರಾಗಿ ಮೊದಲಿನಂತಾಗಿ ಬಿಡ್ತಾರೆ. ಈ ವೈದ್ಯಕೀಯ ಅಚ್ಚರಿಯನ್ನು ಪ್ರೇಕ್ಷಕ ನಿಬ್ಬೆರಗಾಗಿ ನೋಡುತ್ತಾನೆ. ಫಸ್ಟ್ ಹಾಫ್‌ನಲ್ಲಿ ಇಂಥಾ ಕೆಲವು ಅದ್ಭುತಗಳನ್ನು ತೋರಿಸಿ ಬೆಚ್ಚಿ ಬೀಳಿಸುತ್ತಾರೆ ಪ್ರೇಮ್. ರಾಣಾ (Raanna) ಅವರದು ಗಮನ ಸೆಳೆಯುವ ನಟನೆ. ರೀಷ್ಮಾ (Rishma) ಎಂಬ ಚುರುಕಿನ ಹುಡುಗಿ ಭರವಸೆ ಮೂಡಿಸುತ್ತಾರೆ. ಚರಣ್ ರಾಜ್ ಪಾತ್ರ ಮನಸ್ಸಲ್ಲುಳಿಯುತ್ತೆ. ಕಾಕ್ರೋಚ್ ಸುಧಿ, ಯಶ್ ಶೆಟ್ಟಿ ಮೊದಲಾದವರದು ಸಹಜ ಅಭಿನಯ. ಶಶಿ ಕುಮಾರ್, ಸುಚೇಂದ್ರ ಪ್ರಸಾದ್ ಪಾತ್ರಕ್ಕೆ ನ್ಯಾಯ ಸಲ್ಲಿಸಿದ್ದಾರೆ. ತಾಯಿ ಸೆಂಟಿಮೆಂಟ್ ಅನ್ನು ಅದ್ಭುತವಾಗಿ ತೆರೆ ಮೇಲೆ ತರುತ್ತಿದ್ದ ಪ್ರೇಮ್ ಈ ಚಿತ್ರದ ಮೂಲಕ ಉತ್ತಮ ರೊಮ್ಯಾಂಟಿಕ್ ಚಿತ್ರವನ್ನೂ ಮಾಡಬಲ್ಲೆ ಅಂತ ತೋರಿಸಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.