
ಕೇಶವ
ಇದು ಕ್ಯಾಮೆರಾ ಕಣ್ಣಿನ ಕತೆ ಎಂದು ಶುರುವಾಗಿ, ಮುಂದೆ ಆತ್ಮದ ಕಾಲುವೆಯೊಳಗೆ ಬೀಳುತ್ತದೆ. ಅಲ್ಲಿಂದ ಎದ್ದು ಮತ್ತೆ ಕ್ಯಾಮೆರಾ ಜತೆಯಾಗುತ್ತದೆ ಎಂದು ನಿರೀಕ್ಷೆ ಮಾಡುತ್ತಿರುವಾಗಲೇ ದೇವಸ್ಥಾನ, ದೇವರ ವಿಗ್ರಹ ಎಂದು ಮತ್ತೊಂದು ಕತೆ ತೆರೆದುಕೊಳ್ಳುತ್ತದೆ.
ಹೀಗೆ ಎಲ್ಲೋ ಶುರುವಾಗಿ, ಮತ್ತೆ ಎಲ್ಲಿಗೋ ಬಂದು ಇನ್ನೆಲ್ಲೋ ಮುಕ್ತಾಯ ಆಗುವ ಚಿತ್ರದ ಹೆಸರು ‘ಭಾವಚಿತ್ರ’. ಭಾವನೆಗಳು ಕಡಿಮೆ, ಪ್ರಯಾಣ ತುಸು ಹೆಚ್ಚಾಗಿರುವ ಚಿತ್ರವಿದು. ನಟನೆ ಕಳಪೆ, ಹಿನ್ನೆಲೆ ಸಂಗೀತ ಆಟಕ್ಕುಂಟು ಲೆಕ್ಕಕ್ಕಿಲ್ಲ. ನಿರೂಪಣೆ ಹೆಸರಿನಲ್ಲಿ ಅನಗತ್ಯವಾಗಿ ಎಳೆಯುವ ಕತೆ, ಸವಕಲು ಮೇಕಿಂಗ್‌ನಿಂದ ಕೂಡಿರುವ ಈ ಚಿತ್ರದಲ್ಲಿ ಒಂದಿಷ್ಟು ತಿರುವುಗಳೂ ಇವೆ. ಅದು ರಂಗನಾಥ ಸ್ವಾಮಿ ಸ್ಥಾಪನೆಯಾಗಿರುವ ಹಿನ್ನೆಲೆ ಏನು ಎಂಬುದು.
ತಾರಾಗಣ: ಚಕ್ರವರ್ತಿ, ಗಾನವಿ , ಅವಿನಾಶ್, ಕೀರ್ತಿ ಸುಂದರಮ್, ಪೂಜಾ, ಗಿರೀಸ್ ಬಿಜ್ಜಾಳ್.
ನಿರ್ದೇಶನ: ಗಿರೀಶ್ ಕುಮಾರ್ ಬಿ
ರೇಟಿಂಗ್: ***
ಜತೆಗೆ ಒಂದು ಹಳ್ಳಿ, ಆ ಹಳ್ಳಿಯಲ್ಲಿರುವ ಸ್ನೇಹಿತರು, ದರೋಡೆ ಗ್ಯಾಂಗ್, ಒಬ್ಬನ ಸಾವು, ದರೋಡೆ ಗ್ಯಾಂಗ್‌ನ ಪಾತ್ರ ಏನು ಇತ್ಯಾದಿ ಅಂಶಗಳ ನೆರಳಿನಲ್ಲಿ ಇಡೀ ಸಿನಿಮಾ ಸಾಗುತ್ತದೆ. ಕತೆ ಇಷ್ಟೆ. ಜೀವನದ ಜಂಜಾಟಕ್ಕೆ ಬೇಸತ್ತ ಹುಡುಗನೊಬ್ಬ ಬೈಕ್ ಹತ್ತಿ ಹೊರಡುತ್ತಾನೆ. ಕೈಯಲ್ಲೊಂದು ಕ್ಯಾಮೆರಾ. ತನಗೆ ಕಂಡಿದ್ದೆಲ್ಲವನ್ನು ಫೋಟೋ ತೆಗೆಯುತ್ತ ಹೋದವನ ಕ್ಯಾಮೆರಾದಲ್ಲಿ ಒಬ್ಬ ವ್ಯಕ್ತಿ ಸೆರೆಯಾಗುತ್ತಾನೆ.
ಆದರೆ, ಆತ ನೇರವಾಗಿ ಕಾಣುತ್ತಿಲ್ಲ. ಈ ವಿಸ್ಮಯದ ಬೆನ್ನತ್ತಿ ಹೋಗುವ ನಾಯಕನಿಗೆ ತನ್ನ ಕ್ಯಾಮೆರಾದಲ್ಲಿ ಕಾಣುತ್ತಿರುವ ವ್ಯಕ್ತಿ ಸಾವು ಕಂಡಿರುತ್ತಾನೆ. ಸತ್ತ ಆ ವ್ಯಕ್ತಿಗೂ, ಕ್ಯಾಮೆರಾ ದೊಂದಿಗೆ ಟೂರ್ ಬಂದ ಈ ನಾಯಕನಿಗೂ ಏನು ಎಂಬುದೇ ಚಿತ್ರದ ಕತೆ. ಹಾರರ್, ಥ್ರಿಲ್ಲರ್, ಸೈನ್‌ಸ್... ಹೀಗೆ ಯಾವ ಜಾನರ್‌ನಲ್ಲಿ ಬೇಕಾದರೂ ಕಲ್ಪಿಸಿಕೊಂಡು ಚಿತ್ರವನ್ನು ನೋಡಿಕೊಳ್ಳಬಹುದು. ಚಿತ್ರದಲ್ಲಿ ಒಂದು ಹಾಡು ಹಾಗೂ ವಿಗ್ರಹ ಕಳ್ಳತನದ ಕತೆ ಕುತೂಹಲಕಾರಿಯಾಗಿದೆ. ಉಳಿದಂತೆ ಹೇಳಿಕೊಳ್ಳುವಂತಹ ಅಥವಾ ಚಿತ್ರದ ಹೆಸರಿಗೆ ತಕ್ಕಂತೆ ಕತೆ ಮತ್ತು ನಿರೂಪಣೆಯನ್ನು ಇಲ್ಲಿ ನಿರೀಕ್ಷೆ ಮಾಡಲಾಗದು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.