ಪ್ರವೀರ್ ಶೆಟ್ಟಿ, ಅವಿನಾಶ್, ಲಾಸ್ಯ, ಪವಿತ್ರಾ ಲೋಕೇಶ್, ಅಚ್ಯುತ್ ಕುಮಾರ್ ನಟನೆಯ ಸೈರನ್ ಸಿನಿಮಾದ ವಿಮರ್ಶೆ
ಚಿತ್ರ: ಸೈರನ್
ತಾರಾಗಣ: ಪ್ರವೀರ್ ಶೆಟ್ಟಿ, ಅವಿನಾಶ್, ಲಾಸ್ಯ, ಪವಿತ್ರಾ ಲೋಕೇಶ್, ಅಚ್ಯುತ್ ಕುಮಾರ್
ನಿರ್ದೇಶನ: ರಾಜ ವೆಂಕಯ್ಯ
ಆರ್ ಕೇಶವಮೂರ್ತಿ,
ಒಂದು ಕೊಲೆ, ಆ ಕೊಲೆಯ ತನಿಖೆಗೆ ಇಳಿದಾಗ ಮತ್ತೊಂದು ಕೊಲೆ ಆಚೆಗೆ ಬರುತ್ತದೆ. ಈ ಎರಡೂ ಪ್ರಕರಣಗಳ ಜಾಡು ಹಿಡಿದು ಸಾಗಿದಾಗ ಸಿನಿಮಾ, ಬ್ಯಾಂಕ್ ಸ್ಕ್ಯಾಮ್ ಕಡೆ ಮುಖ ಮಾಡುತ್ತದೆ. ಮುಂದಕ್ಕೆ ಏನಾಗುತ್ತದೆ ಎನ್ನುವ ಕುತೂಹಲ ಇದ್ದರೆ ನೀವು ‘ಸೈರನ್’ ಸಿನಿಮಾ ನೋಡಬೇಕು. ಕ್ರೈಂ ಮತ್ತು ತನಿಖೆಯ ನೆರಳಿನಲ್ಲಿ ಮೂಡಿ ಬಂದಿರುವ ಈ ಚಿತ್ರವನ್ನು ರಾಜ ವೆಂಕಯ್ಯ ಹೊಸ ನಾಯಕ ನಟ ಪ್ರವೀರ್ ಶೆಟ್ಟಿ ಪ್ರತಿಭೆಗೆ ತಕ್ಕಂತೆ ರೂಪಿಸಿದ್ದಾರೆ.
ಬ್ಯಾಂಕ್ ಉದ್ಯೋಗಿ ಆಗಿರುವ ಶ್ವೇತಾ ಮನೆಗೆ ಬಂದಿಲ್ಲ. ಆತಂಕಗೊಂಡ ಶ್ವೇತಾ ತಾಯಿ ಮತ್ತು ಆಕೆ ತಂಗಿ ಪೊಲೀಸ್ ಸ್ಟೇಷನ್‌ಗೆ ಹೋಗುತ್ತಾರೆ. ದೂರು ದಾಖಲಿಸಿಕೊಂಡ ಪೊಲೀಸರಿಗೆ ಸಾಮೂಹಿಕ ಅತ್ಯಾಚಾರಕ್ಕೆ ಗುರಿಯಾಗಿ, ಸುಟ್ಟ ರೀತಿಯಲ್ಲಿ ದೇಹವೊಂದು ಪೊಲೀಸರಿಗೆ ಸಿಗುತ್ತದೆ. ಅದು ಶ್ವೇತಾಳದ್ದೇ ಎಂಬುದು ಗೊತ್ತಾಗುತ್ತದೆ. ಶ್ವೇತಾ ಪ್ರಕರಣದ ತನಿಖೆಗೆ ಒಬ್ಬ ಖಡಕ್ ಪೊಲೀಸ್ ಅಧಿಕಾರಿಯನ್ನು ನೇಮಿಸುತ್ತಾರೆ. ಆ ವಿಶೇಷ ಪೊಲೀಸ್ ಅಧಿಕಾರಿಯೇ ಚಿತ್ರದ ನಾಯಕ. ಚಿತ್ರದ ನಾಯಕ ಸಮರ್ಥ್ ತನ್ನ ತಂಡದೊಂದಿಗೆ ತನಿಖೆಗೆ ಇಳಿದಾಗ ನೆಲದಲ್ಲಿ ಹೂತು ಹಾಕಿದ್ದ ಎರಡು ಬೈಕ್‌ಗಳು ಪತ್ತೆ ಆಗುತ್ತವೆ. ಎನ್ಆರ್‌ಐ ಒಬ್ಬನ ಕೊಲೆ ಆಗಿರುತ್ತದೆ. ಈ ಎರಡು ಕೊಲೆಯ ನಡುವಿನ ನಂಟು ಏನೆಂದು ಪತ್ತೆ ಮಾಡುವ ಹೊತ್ತಿಗೆ ಸಿನಿಮಾ ಮುಗಿಯುತ್ತದೆ.
Jersey Number 10 Review: ಪ್ರೇಮತ್ಯಾಗ ದುಃಖದಾಯಕ, ಆಟದ ಕತೆ ಸ್ಫೂರ್ತಿದಾಯಕ
ವಿಶೇಷ ಪೊಲೀಸ್ ಅಧಿಕಾರಿ ಅಂದರೆ ಏನು, ತನಿಖೆಯ ತಂಡ ಮಹೇಂದ್ರ ಜೀಪ್‌ನಲ್ಲಿ ಓಡಾಡಿಕೊಂಡಿರುವುದು, ಕೊಲೆಗಾರರು ಯಾರೆಂದು ಪ್ರೇಕ್ಷಕರಿಗೂ ಗೊತ್ತಾದ ಮೇಲೂ ಸಿನಿಮಾ ಮುಂದುವರಿಯುವುದು, ಪೇಲವ ದೃಶ್ಯಗಳ ಸಂಯೋಜನೆಯಿಂದ ಕೂಡಿದ ಚಿತ್ರಕಥೆ.... ಇತ್ಯಾದಿಗಳ ಕಾರಣಕ್ಕೆ ‘ಸೈರನ್’ ಅಷ್ಟಾಗಿ ಸದ್ದು ಮಾಡಲ್ಲ ಎಂದರೆ ಇದು ನಿರ್ದೇಶಕನಿಗೆ ಸಂಬಂಧಿಸಿದ ವಿಚಾರ.
ಕಲಾವಿದರ ನಟನೆ ಬಗ್ಗೆ ಹೇಳುವುದಾರೆ ಮೊದಲ ಚಿತ್ರದಲ್ಲೇ ಪ್ರವೀರ್ ಶೆಟ್ಟಿ, ಭರವಸೆಯ ನಟನಾಗುವ ಪ್ರಯತ್ನ ಮಾಡಿದ್ದಾರೆ. ಅಚ್ಯುತ್ ಕುಮಾರ್, ಅವಿನಾಶ್ ಪಾತ್ರಗಳು ಕತೆಯ ಮುಖ್ಯ ಪಿಲ್ಲರ್. ತಾಂತ್ರಿಕವಾಗಿ ಸಂಗೀತ, ಕ್ಯಾಮೆರಾ, ಹಿನ್ನೆಲೆ ಸಂಗೀತವು ನಿರ್ದೇಶಕನ ಶ್ರಮಕ್ಕೆ ತಕ್ಕಂತೆ ತಾಳ ಹಾಕಿವೆ.