ಅಕೇಲಿ: ಯುದ್ಧಭೂಮಿಯಲ್ಲಿ ಸಿಲುಕಿದ ಯುವತಿಯ ಕಥೆ

By Veena Rao  |  First Published Dec 31, 2024, 6:02 PM IST

ಇರಾಕ್‌ನಲ್ಲಿ ಉದ್ಯೋಗ ಅರಸಿ ಹೋದ ಜ್ಯೋತಿ ಐಸಿಸ್ ಉಗ್ರರ ದಾಳಿಗೆ ಸಿಲುಕಿ ನರಕಯಾತನೆ ಅನುಭವಿಸುತ್ತಾಳೆ. ಉಗ್ರರ ಬಂಧನದಿಂದ ತಪ್ಪಿಸಿಕೊಂಡು, ಭಾರತಕ್ಕೆ ಮರಳಲು ಜೀವನ್ಮರಣ ಹೋರಾಟ ನಡೆಸುತ್ತಾಳೆ.


ಪ್ರಣಯ್ ಮೆಶ್ರಾಮ್ ಅವರ ನಿರ್ದೇಶನದ ಅಕೇಲಿ (ಏಕಾಂಗಿ) ಎಂಬ ಚಿತ್ರ ಜಿಯೋ ಸಿನಿಮಾದಲ್ಲಿ ಸ್ಟ್ರೀಂ ಆಗುತ್ತಿದೆ. ನಿರ್ದೇಶಕರು ಹೇಳುವಂತೆ ಇದು ಮಧ್ಯ ಪ್ರಾಚ್ಯ ದೇಶದಲ್ಲಿ ನಡೆದ ಒಂದು ನೈಜಘ ಟನೆಯಿಂದ ಪ್ರೇರಿತರಾಗಿ ಈ ಚಿತ್ರಕಥೆ ಬರೆದರಂತೆ. ನುಸ್ರತ್ ಭರೂಚ ಮುಖ್ಯ ಪಾತ್ರದಲ್ಲಿ ಇರುವ ಈ ಚಿತ್ರ ಇರಾಕ್ ನ ಯುದ್ಧ ಘಟನೆಗಳ ಕಥಾವಸ್ತು ಹೊಂದಿದೆ.

ಜ್ಯೋತಿ ಒಬ್ಬ ಸಾಮಾನ್ಯ ಯುವತಿ. ತಾಯಿ ಮತ್ತು ಸೋದರ ಸೊಸೆಯೊಡನೆ ಇರುವ ಆಕೆ ಏರ್‌ಪೋರ್ಟಿನಲ್ಲಿ ನೌಕರಿ ಮಾಡುತ್ತಿರುತ್ತಾಳೆ. ಅವಳೊಬ್ಬಳ ಸಂಬಳವೇ ಮನೆಗೆ ಆಧಾರ. ಸಾಲಗಳು ಬಹಳಷ್ಟು ಇರುತ್ತದೆ. ಯಾರಿಗೋ ಸಹಾಯ ಮಾಡಲು ಹೋಗಿ ವಿಮಾನ ನಿಲ್ದಾಣದ ತನ್ನ ಕೆಲಸವನ್ನು ಕಳೆದು ಕೊಳ್ಳುತ್ತಾಳೆ. ಈಗ ಅವಳಿಗೆ ಎಲ್ಲಿಯಾದರೂ ಕೆಲಸ ಮಾಡಲೇ ಬೇಕಾದ ಅನಿವಾರ್ಯತೆ. ಹೊರದೇಶಕ್ಕಾದರೂ ಹೋಗಿ ಒಂದೆರಡು ವರ್ಷ ಚೆನ್ನಾಗಿ ಸಂಪಾದಿಸಿ ಬಂದು ಬಿಡ ಬೇಕೆಂದು ಯೋಚಿಸುತ್ತಾಳೆ. ಇರಾಕ್‌ನ ಒಂದು ಗಾರ್ಮೆಂಟ್ ಫ್ಯಾಕ್ಟರಿಯಲ್ಲಿ ಸೂಪರ್‌ವೈಸರ್ ಕೆಲಸ ಖಾಲಿ ಇದೆಯೆಂದು ಅಲ್ಲಿಗೆ ಹೋಗುವುದಾದರೆ ತಾನು ಏರ್ಪಾಡು ಮಾಡುವೆನೆಂದು ನೌಕರಿ ಕೊಡಿಸುವ ದಲ್ಲಾಳಿ ಹೇಳುತ್ತಾನೆ. ಮನೆಯಲ್ಲಿದ್ದ ಅಷ್ಟಿಷ್ಟು ಒಡವೆ ಮಾರಿ, ಟಿಕೆಟ್‌ಗೆ ಹಣ ಹೊಂದಿಸಿ ಇರಾಕ್‌ನ ಮೊಸೂಲ್ ಗೆ ಪ್ರಯಾಣಿಸುತ್ತಾಳೆ. ಇವಳ ತಾಯಿಗೆ ಇವಳು ಯುದ್ಧ ದೇಶವಾದ ಇರಾಕ್ ಗೆ ಹೋಗುವುದು ಇಷ್ಟವಿಲ್ಲದಿದ್ದರೂ ಆ ದಲ್ಲಾಳಿ 'ಇರಾಕ್ ಈಗ ಯುದ್ಧವಿಲ್ಲದೆ ಶಾಂತವಾಗಿದೆ,' ಎಂದು ಹೇಳಿದ ಮಾತನ್ನು ನಂಬಿ ಅರೆ ಮನಸ್ಸಿನಿಂದ ಮಗಳನ್ನು ಕಳಿಸುತ್ತಾಳೆ.

Sikandar Ka Muqaddar: ವಜ್ರಗಳ ಕಳ್ಳತನದ ವಿಷಯದಲ್ಲಿ ಪೊಲೀಸ್ ಅಧಿಕಾರಿಯ ಆರನೇ ಇಂದ್ರಿಯ ಕೆಲಸ ಮಾಡಿದ್ದೇಗೆ?

Tap to resize

Latest Videos

ಇರಾಕ್‌ನ ಮೊಸೂಲ್ ನಗರಕ್ಕೆ ಬಂದಿಳಿದ ಅವಳನ್ನು ಅವಳು ಕೆಲಸ ಮಾಡುವ ಸಂಸ್ಥೆಯ ಮ್ಯಾನೇಜರ್ ರಫೀಕ್ ವಿಮಾನ ನಿಲ್ದಾಣಕ್ಕೆ ಬಂದು ಫ್ಯಾಕ್ಟರಿಗೆ ಕರೆದು ಕೊಂಡು ಹೋಗುತ್ತಾನೆ. ಫ್ಯಾಕ್ಟರಿಗೆ ಹೋಗುವಾಗಲೇ ಒಬ್ಬ ಬಾಲಕಿಗೆ ಬಾಂಬ್ ಫಿಕ್ಸ್ ಮಾಡಿರುವ ದೃಶ್ಯ ಕಂಡು ಬರುತ್ತದೆ. ಇರಾಕ್ ಆ್ಯಂಟಿ ಬಾಂಬ್ ಸ್ಕ್ವಾಡ್ ಆ ಬಾಲಕಿಯನ್ನು ಬಾಂಬಿನಿಂದ ಬಿಡಿಸಲು ವಿಫಲರಾಗುತ್ತಾರೆ. ಜ್ಯೋತಿ ಕಣ್ಣ ಮುಂದೆಯೇ ಆ ಬಾಲಕಿ ಬಾಂಬ್ ಸಿಡಿದು ಸತ್ತು ಹೋಗುತ್ತಾಳೆ. ಜ್ಯೋತಿಗೆ ಆಘಾತವಾಗುತ್ತದೆ. ರಫೀಕ್ ಅವಳಿಗೆ ಸಮಾಧಾನ ಹೇಳುತ್ತಾ, ಕಾರನ್ನು ವೇಗವಾಗಿ ಓಡಿಸಿಕೊಂಡು ಫ್ಯಾಕ್ಟರಿಗೆ ಕರೆ ತರುತ್ತಾನೆ. ಅವಳ ಬಾಸ್ ಒಬ್ಬ ಮಹಿಳೆ. ಇವಳಿಗೆ ಸಮಾಧಾನ ಹೇಳಿ, ಹಾಸ್ಟೆಲ್‌ನಲ್ಲಿ ಇಳಿದುಕೊಳ್ಳಲು ವ್ಯವಸ್ಥೆ ಮಾಡಿ ನಾಳೆಯಿಂದ ಕೆಲಸ ಶುರು ಮಾಡು ಎಂದು ಹೇಳುತ್ತಾಳೆ.

ಜ್ಯೋತಿ ತನ್ನನ್ನು ಕಳಿಸಿದ ದಲ್ಲಾಳಿಗೆ ಫೋನ್ ಮಾಡಿ ತಾನು ಈಗಲೇ ಭಾರತಕ್ಕೆ ವಾಪಸ್ ಬರುವುದಾಗಿ ಹೇಳುತ್ತಾಳೆ. ಆದರೆ ಅವನು ಒಪ್ಪುವುದಿಲ್ಲ. ನಿನ್ನ ಕಾಂಟ್ರಾಕ್ಟ್ ಪ್ರಕಾರ ಎರಡು ವರ್ಷ ಕೆಲಸ ಮಾಡಲೇ ಬೇಕು ಎನ್ನುತ್ತಾನೆ. ವಿಧಿಯಿಲ್ಲದೇ ಜ್ಯೋತಿ ಅಲ್ಲಿನ ಪರಿಸರಕ್ಕೆ ಹೊಂದಿಕೊಳ್ಳಲು ಯತ್ನಿಸುತ್ತಾ ತನ್ನ ಹೊಸ ನೌಕರಿಯಲ್ಲಿ ತೊಡಗಿಸಿಕೊಳ್ಳುತ್ತಾಳೆ. ಅವಳಿಗೆ ಏನು ಬೇಕಿದ್ದರೂ ರಫೀಕ್ ಸಹಾಯ ಮಾಡುತ್ತಾನೆ. ಅವನೂ ನೌಕರಿಗಾಗಿ ಪಾಕಿಸ್ತಾನದಿಂದ ಬಂದವನು. ಇವಳು ಪಂಜಾಬ್ ಮೂಲದವಳು. ಕೆಲವೇ ದಿನಗಳಲ್ಲಿ ಇವರ ಪರಿಚಯ ಗಾಢವಾಗಿ, ಪರಸ್ಪರ ಆಕರ್ಷಿತರಾಗುತ್ತಾರೆ. ಇನ್ನೇನು ಯುದ್ಧ ಭೀತಿಯಿಲ್ಲ. ಎಲ್ಲವೂ ಸಮಾಧಾನ ಸ್ಥಿತಿಗೆ ಮರಳುತ್ತಿದೆ ಎಂದು ನಿರಾಳವಾಗುವಾಗಲೇ ಒಂದು ದಿನ ಟಿವಿಯಲ್ಲಿ ಐಸಿಸ್ ಉಗ್ರರು ಇವಳಿರುವ ಪಟ್ಟಣವನ್ನು ವಶಪಡಿಸಿಕೊಂಡಿರುವ ಆಘಾತಕಾರಿ ಸುದ್ದಿ ಬಿತ್ತರವಾಗುತ್ತದೆ. ಇರಾಕ್ ಸರ್ಕಾರವೂ ತನ್ನ ಅಸಹಾಯಕತೆ ತೋರಿಸುತ್ತದೆ. ಐಸಿಸ್ ಉಗ್ರರ ವಾಹನಗಳು ಇವರ ಫ್ಯಾಕ್ಟರಿ ಕಡೆಗೆ ಬರುವುದನ್ನು ಕೆಲಸಗಾರರು ನೋಡುತ್ತಾರೆ.

ಫ್ರೀಜರ್‌ನಲ್ಲಿ ಸಿಕ್ಕಿಬಿದ್ದ ಮಿಲಿ: ಬದುಕುಳಿಯುವ ಹೋರಾಟದೊಂದಿಗೆ ಪ್ರೀತಿಯ ಪಯಣ

ಜ್ಯೋತಿ ಸಹಿತ ಎಲ್ಲಿ ಕೆಲಸ ಮಾಡುವ ಎಲ್ಲರೂ ಗಾಬರಿಯಾಗುತ್ತಾರೆ. ಅವರಿಗೆಲ್ಲ ನಡುಕ ಶುರುವಾಗುತ್ತದೆ. ಫ್ಯಾಕ್ಟರಿ ಬಾಸ್ ಅವರಿಗೆಲ್ಲ ಬಂದದ್ದು ಎದುರಿಸೋಣ, ಧೈರ್ಯ ಕಳೆದುಕೊಳ್ಳಬೇಡಿ ಎಂದು ಹೇಳುತ್ತಾ ಅವರೆಲ್ಲರನ್ನೂ ಫ್ಯಾಕ್ಟರಿ ಬೇಸ್‌ಮೆಂಟಿನ ಗೋದಾಮಿನಲ್ಲಿ ಬಚ್ಚಿಟ್ಟು ಕೊಳ್ಳಲು ಹೇಳುತ್ತಾರೆ. ತಾವು ಮತ್ತು ರಫೀಕ್ ಹಾಗೂ ಇನ್ನೊಬ್ಬ ಸಹಾಯಕನೊಡನೆ ಅವರನ್ನು ಎದುರಿಸಲು ಸಿದ್ದವಾಗುತ್ತಾರೆ. ಎಲ್ಲರೂ ನಡುಗುತ್ತಾ, ಅಳುತ್ತಾ ಗೋದಾಮಿನಲ್ಲಿ ಅವಿತುಕೊಳ್ಳಲು ಓಡುತ್ತಾರೆ. ಕ್ಷಣದಲ್ಲಿ ಭಯಂಕರ ಪರಿಸ್ಥಿತಿ ಉಂಟಾಗಿ ಬಿಡುತ್ತದೆ. ಐಸಿಸ್ ಉಗ್ರರ ಮೂರು ವಾಹನಗಳು ಬಂದೇ ಬಿಡುತ್ತದೆ.

ಫ್ಯಾಕ್ಟರಿ ಮಾಲಕಿ ಹಾಗೂ ರಫೀಕ್, ಮತ್ತೊಬ್ಬ ಸಹಾಯಕ ಅವರನ್ನು ಮಾತನಾಡಲು ನಿಲ್ಲುತ್ತಾರೆ. ಉಗ್ರರು ಯಾವ ಮಾತಿಗೂ ಅವಕಾಶ ಕೊಡದೆ ಮಾಲಕಿನ್ ಳನ್ನು ಒಂದೇ ಗುಂಡಿಗೆ ಉಡಾಯಿಸಿ ಬಿಡುತ್ತಾರೆ. ಫ್ಯಾಕ್ಟರಿ ಸುತ್ತ ಕವರ್ ಮಾಡಿ ಬೇಸ್‌ಮೆಂಟಿನಲ್ಲಿರುವ ಎಲ್ಲರನ್ನೂ ಹೊರಗೆ ಕರೆಸಿ ಹೆಂಗಸರನ್ನೆಲ್ಲ ತಮ್ಮ ವ್ಯಾನಿಗೆ ಹತ್ತಿಸಿಕೊಂಡು ಗಂಡಸರನ್ನು ಶೂಟ್ ಮಾಡಿ ಕೊಲ್ಲುತ್ತಾರೆ. ಒಂದಿಬ್ಬರನ್ನು ಮಾತ್ರ ಬಿಟ್ಟು ಬಿಡುತ್ತಾರೆ. ಹಾಗೆ ಬಿಡುಗಡೆಯಾದವರಲ್ಲಿ ರಫೀಕ್ ಇರುತ್ತಾನೆ. ಬೇರೆ ಮಾತಿಗೆ ಅವಕಾಶ ಕೊಡದಂತೆ ಹೆಂಗಸರನ್ನೆಲ್ಲ ಹೊತ್ತೊಯ್ಯುತ್ತಾರೆ. ಅವರನ್ನೆಲ್ಲ ಲೈಗಿಕ ಗುಲಾಮರನ್ನಾಗಿ ಮಾಡಿಕೊಳ್ಳುವ ಯೋಜನೆ ಅವರದು. ಜ್ಯೋತಿಯೂ ಅವರೊಂದಿಗೆ ಹೋಗುತ್ತಾಳೆ. ಅಲ್ಲಿ ಅವರ ಕೋಟೆಯಂಥ ಸಂಸ್ಥಾನಕ್ಕೆ ಕರೆದುಕೊಂಡು ಹೋಗಿ ನೆಲಮಾಳಿಗೆಯಲ್ಲಿ ಕೂಡಿ ಹಾಕುತ್ತಾರೆ. ಅಲ್ಲಿರುವ ಗಂಡಸರೆಲ್ಲ ಇವರನ್ನು ನೋಡಿ ಬೇಕಾದವರನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಈ ಹೆಂಗಸರ ರೋದನೆಗೆ, ಕಿರಿಚಾಟ,ಕ್ಕೆ ಪ್ರತಿಭಟನೆಗೆ ಕಿಲುಬು ಕಾಸಿನ ಬೆಲೆಯೂ ಇರುವುದಿಲ್ಲ. ಪ್ರತಿಭಟಿಸಿದರೆ ಮುಖಮೂತಿ ನೋಡದೆ ಹೊಡೆಯುತ್ತಾರೆ. ಹಿಂಸಿಸುತ್ತಾರೆ. ಹೆಣ್ಣು ಎಂದರೆ ಮುಗಿಯಿತು ಮಕ್ಕಳೇ ವಯಸ್ಕರೇ, ಮುದುಕರೇ ಎಂದು ಏನೂ ನೋಡುವುದಿಲ್ಲ. ಅವರ ಲೈಂಗಿಕ ತೃಷೆಗೆ ಬಳಸಿಕೊಳ್ಳುತ್ತಾರೆ.

ಜ್ಯೋತಿಯನ್ನು ಸಹ ಒಬ್ಬ ಎಳೆದುಕೊಂಡು ಕೋಣೆಗೆ ಕರೆದೊಯ್ಯುತ್ತಾನೆ. ಅವಳೆಷ್ಟೇ ಪ್ರತಿಭಟಿಸಿದರೂ ಬಿಡುವುದಿಲ್ಲ. ಅವಳನ್ನು ಸ್ನಾನ ಮಾಡಲು ಹೇಳಿ ತಾನೂ ಸ್ನಾನದ ಕೋಣೆಗೆ ಬಂದು ಅವಳನ್ನು ಹಿಡಿದು ಕೊಳ್ಳುತ್ತಾನೆ. ಈ ತಳ್ಳಾಟದಲ್ಲಿ ಆ ಉಗ್ರ ಕೆಳಗೆ ಬಿದ್ದು ಸ್ನಾನದ ಕೋಣೆ ತೊಟ್ಟಿಗೆ ತಲೆ ಬಡಿದು ರಕ್ತಸ್ರಾವವಾಗಿ ತಕ್ಷಣ ಸತ್ತು ಹೋಗುತ್ತಾನೆ. ಅವನು ಬಿದ್ದಾಗ ಕಿರಿಚುವ ಶಬ್ದ ಕೇಳಿ ಇತರೆ ಉಗ್ರರು ಓಡಿ ಬರುತ್ತಾರೆ. ಜ್ಯೋತಿ ಅವರಿಂದ ತಪ್ಪಿಸಿಕೊಂಡು ಓಡುತ್ತಾಳೆ. ಆದರೆ ಹೋಗುವುದಾದರೂ ಎಲ್ಲಿಗೆ? ಉಗ್ರರು ಅವಳನ್ನು ಹಿಡಿದು ತಮ್ಮ ಕಮಾಂಡರ್ ಅಸಾದನಿಗೆ ಒಪ್ಪಿಸುತ್ತಾರೆ. ಅಸಾದನಿಗೆ ಅಲ್ಲಿ ಒಂದು ಪ್ರತ್ಯೇಕ ಮನೆ ಇರುತ್ತದೆ. ಅಲ್ಲಿ ತಂದು ಅವಳನ್ನು ಕೂಡಿ ಹಾಕುತ್ತಾರೆ. ಅಲ್ಲಿ ಇನ್ನೂ ಇಬ್ಬರು ಎಳೆಯ ಹುಡುಗಿಯರಿರುತ್ತಾರೆ. ಮಹಿರಾ ಮತ್ತು ಅಫ್ರಾ. ಇವರಿಬ್ಬರೂ ಅಸಾದನಿಗೆ ಲೈಂಗಿಕ ತೃಷೆ ತೀರಿಸುವ ಗುಲಾಮರು. ಅವರಿಬ್ಬರೂ ಭಯದಿಂದ ನೋವಿನಿಂದ ಅಳುತ್ತಿರುತ್ತಾರೆ. ಜ್ಯೋತಿ ಅವರನ್ನಪ್ಪಿಕೊಂಡು ತಾನೂ ಅಳುತ್ತಾಳೆ. ಮಾರನೇ ದಿನ ಜ್ಯೋತಿಯನ್ನು ಅಸಾದನ ಶಯ್ಯಾಗಾರಕ್ಕೆ ಕಳಿಸಲಾಗುತ್ತದೆ. ಅಲ್ಲಿ ಅಸಾದ ಅವಳ ಮಾನ ಹರಣ ಮಾಡಿಯೇ ಬಿಡುತ್ತಾನೆ.

ರೈಲಿನಲ್ಲಿ ರಕ್ತಸಿಕ್ತ ಹೋರಾಟ: 'ಕಿಲ್' ಚಿತ್ರ ವಿಮರ್ಶೆ

ಮಾರನೇ ದಿನ ಅವಳಿಗೆ ಎಚ್ಚರವಾದಾಗ ಅಸಾದ ನಿದ್ರಿಸುತ್ತಿರುತ್ತಾನೆ. ಅವಳು ಮೆಲ್ಲಗೆ ಎದ್ದು ಸುತ್ತಲೂ ಕಣ್ಣಾಡಿಸುತ್ತಾಳೆ. ಅವಳಿಗೆ ಒಂದು ಕೈ ಕೋಳ ಮತ್ತು ಲೋಡೆಡ್ ಪಿಸ್ತೂಲು ಕಾಣಿಸುತ್ತದೆ. ಮಲಗಿದ್ದ ಅಸಾದನ ಕೈ ಗಳಿಗೆ ಬೇಡಿ ಹಾಕಿ ಲಾಕ್ ಮಾಡಿಬಿಡುತ್ತಾಳೆ. ಅಷ್ಟರಲ್ಲಿ ಅಸಾದನಿಗೆ ಎಚ್ಚರವಾಗುತ್ತದೆ. ಅಸಾದ ಜೋರಾಗಿ ಕೂಗಿಕೊಳ್ಳುತ್ತಾನೆ. ಬೇರೆ ಉಗ್ರರು ಅಲ್ಲಿ ಬರುತ್ತಾರೆ. ಜ್ಯೋತಿ ಅಸಾದನ ತಲೆಗೆ ಪಿಸ್ತೂಲು ಗುರಿ ಇರಿಸಿ ಆ ಉಗ್ರರನ್ನು ಹೆದರಿಸುತ್ತ, ಅವರನ್ನು ಒಂದು ಕೋಣೆಯಲ್ಲಿ ಕೂಡಿ ಹಾಕಿ ಮಹಿರಾ ಮತ್ತು ಆಫ್ರಾರನ್ನು ಕರೆದುಕೊಂಡು ಹೊರಗೆ ಬಂದು ಒಂದು ಕಾರಿನಲ್ಲಿ ಕುಳಿತು ಕಾರು ವೇಗವಾಗಿ ಚಲಾಯಿಸಿಕೊಂಡು ಗೊತ್ತು ಗುರಿಯಿಲ್ಲದೆ ದೌಡಾಯಿಸುತ್ತಾಳೆ. ತಮ್ಮ ರಕ್ಷಣೆಗಾಗಿ ಅಸಾದನ್ನೂ ಕಾರಿನಲ್ಲಿ ಕುಳ್ಳರಿಸುತ್ತಾಳೆ. ಆದರೆ ಅಸಾದ್ ಸ್ವಲ್ಪ ದೂರ ಕ್ರಮಿಸಿದ ನಂತರ ಕಾರ್ ಡೋರನ್ನು ಒದ್ದು, ಹೊರಗೆ ನೆಗೆದು ತಪ್ಪಿಸಿಕೊಳ್ಳುತ್ತಾನೆ. ಜ್ಯೋತಿ ಇಬ್ಬರು ಹುಡುಗಿಯರ ಜೊತೆ ಕಾರನ್ನು ವೇಗವಾಗಿ ಚಲಾಯಿಸಿಕೊಂಡು ಹೋಗಿ ಬಿಡುತ್ತಾಳೆ. ಅಲ್ಲಿ ಇರಾಕ್‌ನ ಚೆಕ್ ಪೋಸ್ಟಿನಲ್ಲಿ ಇವರ ಕಾರನ್ನು ಹಿಡಿಯುತ್ತಾರೆ. ಜ್ಯೋತಿ ನಡೆದ ವಿಷಯ ಹೇಳಿ ಅವರಿಗೆ ಅಮ್ಮನ್ನು ರಕ್ಷಿಸಲು ಕೇಳಿಕೊಳ್ಳುತ್ತಾಳೆ. ಆ ಚೆಕ್ ಪೋಸ್ಟ್ ಅಧಿಕಾರಿ ರಕ್ಷಿಸುವ ನೆಪದಲ್ಲಿ ಇವರನ್ನು ತನ್ನ ಮನೆಗೆ ಕರೆದು ಒಂದು ರೂಮಿನಲ್ಲಿ ಕೂಡಿಸಿ, ಉಗ್ರರಿಗೆ ಕರೆ ಮಾಡುತ್ತಾನೆ. ಅದನ್ನು ಕೇಳಿಸಿಕೊಂಡ ಜ್ಯೋತಿ ಆ ಇಬ್ಬರು ಹುಡುಗಿಯರನ್ನು ಕರೆದುಕೊಂಡು ಮತ್ತೆ ಕಾರು ಏರಿ ಪಲಾಯನ ಮಾಡುತ್ತಾಳೆ.

ಇನ್ನೊಂದು ಚೆಕ್ ಪೋಸ್ಟ್ ಬಳಿ ಬಂದಾಗ ಅಲ್ಲಿ ಇರಾಕ್ ಸೇನೆಯವರು ಇವರನ್ನು ಯುನೈಟೆಡ್ ನೇಷನ್ಸ್ ನಿರಾಶ್ರಿತ ಶಿಬಿರಕ್ಕೆ ತಲುಪಿಸುತ್ತಾರೆ. ಅಲ್ಲಿ ಮಹಿರಾ ಮತ್ತು ಆಫ್ರಾರ ಚಾಚಾ ಸಿಗುತ್ತಾರೆ. ಮಹಿರಾ ಮತ್ತು ಆಫ್ರಾ ಸಿಕ್ಕಿದ ಸಂತೋಷಕ್ಕೆ ಆ ಚಾಚಾ ಜ್ಯೋತಿಗೆ ಭಾರತ ತಲುಪಲು ಸಹಾಯ ಮಾಡುತ್ತಾನೆ. ಮಸ್ಕಟ್‌ನಿಂದ ಬಾಗ್ದಾದಿಗೆ ಬಂದು ಅಲ್ಲಿಂದ ಭಾರತ ತಲುಪಬೇಕು. ಜ್ಯೋತಿಯ ವಾಪಸ್ ಪ್ರಯಾಣ ಅಷ್ಟು ಸುಲಭವಾಗಿರುವುದಿಲ್ಲ. ಉಗ್ರರು ಅವಳನ್ನು ಎಲ್ಲೆಡೆ ಹುಡುಕುತ್ತಿರುತ್ತಾರೆ. ಚಾಚಾ ಜ್ಯೋತಿಗೆ ಪಾಸ್‌ಪೋರ್ಟ್ ಮತ್ತು ಟಿಕೆಟ್ ಮಾಡಿಸಿಕೊಡುತ್ತಾರೆ.

ವಯಸ್ಸಾದ ಜೀವಕ್ಕೆ ಬೆಲೆ ಇಲ್ಲವೇ?: ಸಿಗ್ನೇಚರ್ ಹೇಳೋ ಕಥೆ ಇದು!

ಭಾರತದ ವಿದೇಶಾಂಗ ಸಚಿವಾಲಯದಲ್ಲಿ ಇರಾಕ್‌ನಲ್ಲಿ ಸಿಕ್ಕಿಕೊಂಡ ನರ್ಸ್‌ಗಳನ್ನು  ಬಿಡಿಸಲು ಕಾರ್ಯಾಚರಣೆ ನಡೆಯುತ್ತಿರುತ್ತದೆ. ಇರಾಕ್‌ನಲ್ಲಿ ಆದ ಘಟನೆಗಳನ್ನು ಟಿವಿಯಲ್ಲಿ ನೋಡಿದ ಜ್ಯೋತಿ ತಾಯಿ ಮತ್ತು ಅವಳ ಸೋದರ ಸೊಸೆ ಮಿಹಿರಾ ಭಯಭಿತರಾಗುತ್ತಾರೆ. ಜ್ಯೋತಿಗೆ ಕೆಲಸ ಕೊಡಿಸಿದ ದಲ್ಲಾಳಿ ಬಳಿ ಬಂದು ಅವನನ್ನು ವಿಚಾರಿಸುತ್ತಾರೆ. ಅವನು ತನಗೇನೂ ಮಾಡಲು ಸಾಧ್ಯವಿಲ್ಲ. ನೀವು ದೆಹಲಿಗೆ ಹೋಗಿ ವಿದೇಶಾಂಗ ವ್ಯವಹಾರಗಳ ಸಚಿವಾಲಯದಲ್ಲಿ ವಿಚಾರಿಸಿ ಎನ್ನುತ್ತಾನೆ. ಅದರಂತೆ ಅವರು ವಿದೇಶಾಂಗ ಸಚಿವಾಲಯಕ್ಕೆ ಬರುತ್ತಾರೆ. ಅಲ್ಲಿಯೂ ಆಶಾದಾಯಕ ಸುದ್ದಿ ಏನೂ ಸಿಗದಿದ್ದರೂ ಅಲ್ಲಿನ ನೌಕರನೊಬ್ಬನಿಗೆ ತಮ್ಮ ಕಷ್ಟ ಹೇಳಿಕೊಂಡು, ಜ್ಯೋತಿಯನ್ನು ಬಿಡಿಸಿಕೊಡಬೇಕೆಂದು ಕೇಳಿಕೊಳ್ಳುತ್ತಾರೆ. ಅವಳ ಫೋಟೋ ಕೂಡ ಕೊಡುತ್ತಾರೆ. ಆ ನೌಕರ ಸಚಿವಾಲಯದಲ್ಲಿ ತಾನು ಪ್ರಯತ್ನ ಮಾಡುವುದಾಗಿ ಹೇಳುತ್ತಾನೆ. 

ಇಲ್ಲಿ ಮಸೂಲ್ ಏರ್ ಪೋರ್ಟಿನಲ್ಲಿ ಜ್ಯೋತಿ ಚೆಕ್ಕಿಂಗ್‌ಗಾಗಿ ನಿಂತಿದ್ದಾಗ ಅಲ್ಲಿ ಅಸಾದ್ ತನ್ನ ಗ್ಯಾಂಗ್‌ನೊಂದಿಗೆ ಜ್ಯೋತಿಯನ್ನು ಹುಡುಕುತ್ತ ಬರುತ್ತಾನೆ. ಆ ಗ್ಯಾಂಗಿನಲ್ಲಿ ರಫೀಕ್ ಕೂಡಾ ಇರುತ್ತಾನೆ. ರಫೀಕನನ್ನು ಬಲವಂತವಾಗಿ ಐಸಿಸ್ ಗುಂಪಿನಲ್ಲಿ ಸೇರಿಸಿಕೊಳ್ಳಲಾಗಿರುತ್ತದೆ. ಅಸಾದ್ ಗುಂಪನ್ನು ನೋಡಿದ ಜ್ಯೋತಿ ಅವರಿಂದ ತಪ್ಪಿಸಿಕೊಳ್ಳಲು ವಿಮಾನ ನಿಲ್ದಾಣದ ತಾರಸಿಯಲ್ಲಿ ಬಚ್ಚಿಟ್ಟು ಕೊಳ್ಳುತ್ತಾಳೆ. ಎಲ್ಲ ಕಡೆ ಹುಡುಕಿ ನಿರಾಶರಾದ ಉಗ್ರರು ಅಲ್ಲಿಂದ ಹೊರಡುತ್ತಾರೆ. ಆಗ ಅವಳನ್ನು ನೋಡಿದ್ದ ರಫೀಕ್ ಅವಳಿಗೆ ಗುಪ್ತವಾಗಿ ಸಹಾಯ ಮಾಡಿ, ಅವಳನ್ನು ಏರ್‌ಕ್ರಾಫ್ಟ್ ಹತ್ತಲು ಸಹಾಯ ಮಾಡುತ್ತಾನೆ. ಮತ್ತು ಒಂದು ಪತ್ರದೊಂದಿಗೆ ಕೊಂಚ ಹಣ ಕೊಟ್ಟು ಅದನ್ನು ತನ್ನ ತಾಯಿಗೆ ತಲುಪಿಸಲು ಹೇಳುತ್ತಾನೆ. ಜ್ಯೋತಿ ವಿಮಾನದಲ್ಲಿ ಹೇಗೋ ನುಸುಳಿಕೊಳ್ಳುತ್ತಾಳೆ. ರಫೀಕನನ್ನು ಶಂಕಿಸಿದ ಅಸಾದ್ ಅವನನ್ನು ಶೂಟ್ ಮಾಡುತ್ತಾನೆ. ಉಗ್ರರು ವಿಮಾನದಲ್ಲೂ ಜ್ಯೋತಿಯನ್ನು ಹುಡುಕುತ್ತಾರೆ. ಆದರೆ ಲಗೇಜ್ ಇಡುವ ಕ್ಯಾಬಿನ್‌ನಲ್ಲಿ ವಿಮಾನದ ಕೆಳಗಡೆ ಅವಿತುಕೊಂಡಿರುವ ಜ್ಯೋತಿ ಉಗ್ರರ ಕಣ್ಣಿಗೆ ಕಾಣುವುದಿಲ್ಲ. ವಿಮಾನ ಬಾಗ್ದಾದಿಗೆ ಹಾರುತ್ತದೆ. ಬಾಗ್ದಾದ್ ವಿಮಾನ ನಿಲ್ದಾಣದಲ್ಲಿ ಜ್ಯೋತಿ ಜ್ಞಾನ ತಪ್ಪಿ ಬಿದ್ದು ಬಿಡುತ್ತಾಳೆ. ಅಲ್ಲಿನ ಸಿಬ್ಬಂದಿ ಅವಳನ್ನು ಹಾಸ್ಪಿಟಲ್‌ಗೆ ಕರೆದೋಯ್ದು ಆರೈಕೆ ಮಾಡುತ್ತಾರೆ. ಅಲ್ಲಿ ಎಲ್ಲವನ್ನೂ ಹೇಳಿದ ಜ್ಯೋತಿ, ಅಲ್ಲಿನ ಭಾರತದ ರಾಯಭಾರಿ ಕಚೇರಿಯ ಸಹಾಯದಿಂದ ಭಾರತ ತಲುಪುತ್ತಾಳೆ.

ಮನೋರಥಂಗಳ್: ಅಪ್ಪಟ ದೇಸಿ ಸೊಗಡಿನ ದೃಶ್ಯಕಾವ್ಯ

ಉಗ್ರರ ಬಂದೀಖಾನೆಯಿಂದ ತಪ್ಪಿಸಿಕೊಂಡ ಜ್ಯೋತಿಯ ಪಯಣ ಅವಳು ಭಾರತ ತಲುಪುವವರೆಗೆ ಅತ್ಯಂತ ರೋಚಕವಾಗಿದೆ. ಉಗ್ರರಿಂದ ತಪ್ಪಿಸಿಕೊಳ್ಳಲು ಉಗ್ರ ಹೋರಾಟ ಮಾಡುವ ಜ್ಯೋತಿ ಕೊನೆಗೂ ಸಫಲಳಾಗುತ್ತಾಳೆ. ಜ್ಯೋತಿಯ ಪಾತ್ರದಲ್ಲಿ ನುಸ್ರತ್ ಬಹಳ ಚೆನ್ನಾಗಿ ಅಭಿನಯಿಸಿದ್ದಾರೆ. ಪಾತ್ರಕ್ಕೆ ತಕ್ಕ ನ್ಯಾಯ ಒದಗಿಸಿದ್ದಾರೆ. ಇಡೀ ಚಿತ್ರವನ್ನು ನುಸ್ರತ್ ಆವರಿಸಿಕೊಂಡಿದ್ದಾರೆ. ಯಾವುದೇ ಅಸಭ್ಯ ದೃಶ್ಯಗಳಿಲ್ಲದೆ ಎಲ್ಲರೂ ನೋಡಬಹುದಾದ ಚಿತ್ರ ಅಕೇಲಿ.

 

click me!