Sikandar Ka Muqaddar: ವಜ್ರಗಳ ಕಳ್ಳತನದ ವಿಷಯದಲ್ಲಿ ಪೊಲೀಸ್ ಅಧಿಕಾರಿಯ ಆರನೇ ಇಂದ್ರಿಯ ಕೆಲಸ ಮಾಡಿದ್ದೇಗೆ?

By Suvarna News  |  First Published Dec 26, 2024, 4:10 PM IST

ಬಹು ಬೆಲೆಬಾಳುವ ವಜ್ರಗಳ ಕಳ್ಳತನದ ಸುತ್ತ ಸುತ್ತುತ್ತಿರುವ ಕಥೆ. ತನಿಖಾಧಿಕಾರಿ ಜಸ್ವೀಂದರ್ ಸಿಂಗ್ ರಹಸ್ಯ ಬೇಧಿಸುವುದರ ಜೊತೆಗೆ ಸಿಕಂದರ್, ಕಾಮಿನಿ ಮತ್ತು ಮಂಗಳ ದೇಸಾಯಿ ಜೀವನದಲ್ಲಿ ಏರುಪೇರುಗಳು ಉಂಟಾಗುತ್ತವೆ.


- ವೀಣಾ ರಾವ್, ಕನ್ನಡಪ್ರಭ

ಸಿಕಂದರ್ ಕಾ ಮುಕ್ಕದ್ದರ್:
ರೋಚಕ ಕತೆ ಸಸ್ಪೆನ್ಸ್ ಥ್ರಿಲ್ಲರ್ ಗೆ ಹೆಸರಾದ ನಿರ್ದೇಶಕ ನೀರಜ್ ಪಾಂಡೆ. ಅವರ ಮತ್ತೊಂದು ಸಿನಿಮಾ ಸಿಕಂದರ್ ಕಾ ಮುಖ್ಖದ್ದರ್ ನೆಟ್ ಫ್ಲಿಕ್ಸ್ ನಲ್ಲಿ ಓಡುತ್ತಿದೆ. ಮುಖ್ಯ ಪಾತ್ರದಲ್ಲಿ ತಮನ್ನಾ ಭಾಟಿಯಾ, ಜಿಮ್ಮಿ ಶ್ರೆಗಿಲ್, ಅವಿನಾಶ್ ತಿವಾರಿ, ದಿವ್ಯ ದತ್ತಾ ಇದ್ದಾರೆ.

Tap to resize

Latest Videos

undefined

ಕಾಮಿನಿ ಸಿಂಗ್ (ತಮನ್ನಾ ಭಾಟಿಯಾ) ಮುಂಬೈನ ಒಂದು ಪ್ರಸಿದ್ದ ಆಭರಣಗಳ ಮಳಿಗೆಯಲ್ಲಿ ನೌಕರಿ ಮಾಡುತ್ತಿರುತ್ತಾಳೆ. ಒಮ್ಮೆ ಆ ಮಳಿಗೆಯವರು ತಮ್ಮ ಆಭರಣಗಳ ಎಕ್ಸಿಬಿಷನ್ ಏರ್ಪಡಿಸಿರುತ್ತಾರೆ. ಕಾಮಿನಿ ಮತ್ತು ಆ ಸಂಸ್ಥೆಯ ಹಿರಿಯ ನೌಕರ ಮಂಗಲ್ ದೇಸಾಯಿ ನೇತೃತ್ವ ವಹಿಸಿರುತ್ತಾರೆ. ಪ್ರದರ್ಶನ ನಡೆಯುವ ಆ ಹಾಲ್ ನಲ್ಲಿ ಬಾಂಬ್ ಇಟ್ಟಿದ್ದಾರೆ ಎಂಬ ಸುದ್ದಿ ಸಿಗುತ್ತದೆ. ಪೊಲೀಸನವರು ಬಂದು ಮಳಿಗೆಯ ಎಲ್ಲಾ ಜನರನ್ನೂ ಸೇಫ್ ಜಾಗಕ್ಕೆ ಕಳಿಸುತ್ತಾರೆ. ಗುಂಡಿನ ಚಕಮಕಿಗಳಾಗುತ್ತದೆ. ಕೆಲವು ಜನರು ಗಾಯಗೊಳ್ಳುತ್ತಾರೆ. ಆಂಬುಲೆನ್ಸ್ ಬಂದು ಗಾಯಗೊಂಡ ಜನರನ್ನು ಹೊತ್ತು ಆಸ್ಪತ್ರೆಗೆ ಸಾಗುತ್ತದೆ. ಮತ್ತೆ ಪೊಲೀಸಿನವರು ಎಲ್ಲರನ್ನೂ ಮಳಿಗೆಯೊಳಗೆ ಕಳುಹಿಸುತ್ತಾರೆ. 

ಈ ಗಡಿಬಿಡಿಯಲ್ಲಿ ಎಕ್ಸಿಬಿಷನ್‌ನಲ್ಲಿದ್ದ ನಾಲ್ಕು ಬಹು ಬೆಲೆಬಾಳುವ ವಜ್ರಗಳು ಕಳುವಾಗುತ್ತದೆ. ಆ ವಜ್ರಗಳ ಬೆಲೆ ಸುಮಾರು 50-60 ಕೋಟಿ ರೂಗಳು. ಪ್ರದರ್ಶನದಲ್ಲಿ ಸಿಕಂದರ್ ಶರ್ಮಾ (ಅವಿನಾಶ್ ತಿವಾರಿ) ಎಂಬ ಕಂಪ್ಯೂಟರ್ ಆಪರೇಟರ್ ಸಹ ಇರುತ್ತಾನೆ. ಕಾಮಿನಿ ಮತ್ತು ಮಂಗಲ್ ದೇಸಾಯಿ ತಮ್ಮ ಮಳಿಗೆಯದ್ದೇ ಆ ಕಾಣೆಯಾದ ವಜ್ರಗಳು ಎಂದು ಹೇಳಿ ಗಾಬರಿಯಾಗುತ್ತಾರೆ. ಎಲ್ಲರೂ ಅಲ್ಲಿಯೇ ಇದ್ದಾರೆ ಯಾರೂ ಹೊರಗೆ ಹೋಗಿಲ್ಲದಿರುವಾಗ ಆ ವಜ್ರಗಳು ಹೇಗೆ ಕಾಣೆಯಾದವು? ಪೊಲೀಸರಿಗೆ ಸವಾಲಾಗುತ್ತದೆ. ಈ ಸವಾಲನ್ನು ಬೇಧಿಸಲು ಜಸ್ವೀಂದರ್ ಸಿಂಗ್ ಎಂಬ ತನಿಖಾಧಿಕಾರಿ ನೇಮಕವಾಗುತ್ತಾನೆ. ಅವನು ಬಹಳ ದಕ್ಷ ಮತ್ತು ಬುದ್ಧಿವಂತ ಅವನಿಗೆ ಸವಾಲುವಂಥ ಕೇಸುಗಳೆ ಇಲ್ಲ ಎಲ್ಲವನ್ನು ಬಗೆಹರಿಸುತ್ತಾನೆ, ಅವನ ಆರನೇ ಇಂದ್ರಿಯ ಸದಾ ಜಾಗೃತವಾಗಿರುತ್ತದೆ ಅದರ ಪ್ರಕಾರ ಅವನು ಊಹಿಸಿದ್ದೆಲ್ಲ ನಿಜವಾಗುತ್ತದೆ ಎಂಬೆಲ್ಲ ಕತೆಗಳು ಜಸ್ವಿಂದರ್ ಸಿಂಗ್ ನ ಸುತ್ತ ಇರುತ್ತದೆ.

ಜಸ್ವಿಂದರ್ ಬರುತ್ತಾನೆ, ಎಲ್ಲರನ್ನೂ ಪರೀಕ್ಷಿಸಲಾಗುತ್ತದೆ, ಬಾಂಬ್ ಸುದ್ದಿ ಬರುವ ಮುನ್ನ ಯಾರು ಯಾರು ಎಲ್ಲಿದ್ದರೋ ಹಾಗೆ ಇರಿಸಿ ಪರಿಶೀಲಿಸುತ್ತಾರೆ. ಏನು ಮಾಡಿದರೂ ವಜ್ರಗಳ ಕಳ್ಳ ಸಿಗುವುದಿಲ್ಲ. ಕಂಪ್ಯೂಟರ್ ಆಪರೇಟರ್ ಸಿಕಂದರ್ ಶರ್ಮಾ ಹೊರಗೆ ಹೊರಡುವ ಗಡಿಬಿಡಿಯಲ್ಲಿ ಇರುತ್ತಾನೆ. ಅವನ ಮೇಲೆ ಜಸ್ವಿಂದರ್ ಗೆ ಸಂಶಯ ಬರುತ್ತದೆ, ಜೊತೆಗೆ ಕಳುವಾಗಿರುವ ವಜ್ರಗಳ ಮಳಿಗೆಯಿಂದ ಬಂದ ಕಾಮಿನಿ ಹಾಗೂ ಮಂಗಳ ದೇಸಾಯಿಯವರ ನಡವಳಿಕೆ ಸಹ ಸಂಶಯ ತರಿಸುತ್ತದೆ. ಜಸ್ವಿಂದರ್ ಅವರು ಮೂವರನ್ನೂ ಬಗೆಬಗೆಯಾಗಿ ಪ್ರಶ್ನಿಸುತ್ತಾನೆ. ಸೂಕ್ತ ಉತ್ತರ ಬರದ ಕಾರಣ ಆ ಮೂವರನ್ನೂ ಬಂಧಿಸಿ ಠಾಣೆಗೆ ಕರೆತರುತ್ತಾನೆ. ಇದರಲ್ಲಿ ಸಿಕಂದರ್ ಗೆ ವೃದ್ಧ ತಾಯಿಯ ವಿನಾ ಬೇರಾರು ಇರುವುದಿಲ್ಲ. ಅವಳಿಗೆ ಆರೋಗ್ಯ ಸರಿಯಿರುವುದಿಲ್ಲ. ಕಾಮಿನಿ ಒಂದು ಮಗುವಿರುವ ತಾಯಿ. ಸಿಂಗಲ್ ಮದರ್. ಮಂಗಲ್ ದೇಸಾಯಿ ಸಂಸಾರಸ್ಥ ವಯೋವೃದ್ಧ.

ಠಾಣೆಯಲ್ಲಿ ಕಾಮಿನಿ ಹಾಗೂ ಮಂಗಲ ದೇಸಾಯಿ ಗಿಂತ ಸಿಕಂದರ್ ಗೆ ಹೆಚ್ಚು ಹಿಂಸೆ ಕೊಡಲಾಗುತ್ತದೆ. ಕಾಮಿನಿಗೂ ಹೊಡೆಯದೆ ಹಿಂಸೆ ನೀಡುತ್ತಾರೆ. ಯಾರೊಬ್ಬರೂ ತಾವು ಕಳ್ಳತನ ಮಾಡಿದ್ದೇವೆ ಎಂದು ಒಪ್ಪುವುದಿಲ್ಲ. ಇಲ್ಲ ಎಂದೇ ಸಾಧಿಸುತ್ತಾರೆ. ಕಾಮಿನಿ ನನಗೊಂದು ಎಳೆಮಗುವಿದೆ ನನ್ನನ್ನು ಬಿಟ್ಟುಬಿಡಿ ನಾನು ಕದ್ದಿಲ್ಲ ಎಂದು ಅಂಗಲಾಚುತ್ತಾಳೆ. ಮಂಗಳ ದೇಸಾಯಿ ಸಹ ತಾನೂ ಕದ್ದಿಲ್ಲವೆಂದು ಕೈಜೋಡಿಸಿ ಕಣ್ಣಿರಿಟ್ಟು ಬೇಡಿಕೊಳ್ಳುತ್ತಾನೆ. ಸಿಕಂದರ್ ತನ್ನನ್ನು ಹೊಡೆಯುತ್ತಿರುವ ಜಸ್ವಿಂದರ್ ಗೆ 'ನಾನು ನಿರ್ದೋಷಿ ಎಂದು ನಿಮಗೆ ತಿಳಿದಾಗ ನನ್ನ ಮುಖ ನೋಡಿ ಕ್ಷಮಿಸು ಎಂದು ಹೇಳಲೂ ನೀನು ಅರ್ಹತೆ ಕಳೆದುಕೊಂಡಿರುತ್ತೀಯ' ಎಂದು ಹೇಳುತ್ತಾನೆ. ಮೂರೂ ಜನರನ್ನೂ ನ್ಯಾಯಾಲಯಕ್ಕೆ ಹಾಜರು ಪಡಿಸುತ್ತಾರೆ. ಮೂರೂ ಜನಕ್ಕೂ ಒಬ್ಬರೇ ಲಾಯರ್, ಮೂವರ ಜಾಮೀನಿಗಾಗಿ ವಾದ ಮಾಡುತ್ತಾರೆ. ಆದರೆ ಆದಿನ ಜಾಮೀನು ಸಿಗುವುದಿಲ್ಲ. ಒಂದು ವಾರದ ನಂತರ ಜಾಮೀನು ಸಿಗುತ್ತದೆ. ಈ ಒಂದು ವಾರದಲ್ಲಿ ಈ ಮೂವರೂ ಪೊಲೀಸರ ಪ್ರಶ್ನೋತ್ತರದಿಂದ ಬಹಳ ಬಸವಳಿಯುತ್ತಾರೆ. ಜಾಮೀನು ಸಿಕ್ಕನಂತರ ಸಿಕಂದರ್ ತನ್ನ ಮನೆಗೆ ಹೋಗುತ್ತಾನೆ. ಅವನಿಗೆ ಎಲ್ಲಿಯೂ ಕೆಲಸ ಸಿಗುವುದಿಲ್ಲ. ಮತ್ತು ಅವನ ಹಳೆ ಬಾಕಿ ವಸೂಲಾಗುವುದಿಲ್ಲ. ಬರಿಗೈ ಆಗಿರುತ್ತಾನೆ. ಅವನಿಗೆ ಕಾಮಿನಿ ಸಹಾಯವಾಗಿ ನಿಲ್ಲುತ್ತಾಳೆ. ಕ್ರಮೇಣ ಅವರಿಬ್ಬರೂ ಹತ್ತಿರವಾಗುತ್ತಾರೆ. ಈ ಮಧ್ಯೆ ಸಿಕಂದರನ ತಾಯಿ ಮರಣಿಸುತ್ತಾಳೆ. ಸಿಕಂದರ್ ಮನೆ ಬಿಟ್ಟು ಹೊರಬರಬೇಕಾಗುತ್ತದೆ. ಇಂಥ ಸಂದಿಗ್ಧ ಪರಿಸ್ಥಿಯಲ್ಲಿ ಕಾಮಿನಿ ಮತ್ತು ಸಿಕಂದರ್ ಮದುವೆಯಾಗಲು ನಿರ್ಧರಿಸಿ ರಿಜಿಸ್ಟರ್ ಮದುವೆಯಾಗುತ್ತಾರೆ. ಕಾಮಿನಿಯ ತಂಗಿ ಹಾಗು ಮಗುವಿನೊಡನೆ ಸಿಕಂದರ್ ಕೂಡ ಆ ಪರಿವಾರದಲ್ಲಿ ಒಬ್ಬನಾಗುತ್ತಾನೆ.

ಈ ಮಧ್ಯೆ ಜಸ್ವಿಂದರ್ ಸಾಕ್ಷಿಗಳನ್ನು ಕಲೆಹಾಕಲು ಆಗದೆ ಕೇಸ್ ಮುಂದೆ ಮುಂದೆ ಹೋಗುತ್ತಿರುತ್ತದೆ. ಇವರ ಜಾಮೀನೂ ಕೂಡಾ ಮುಂದುವರೆಯುತ್ತಿರುತ್ತದೆ. ಜೀವನೋಪಾಯಕ್ಕೆ ಏನಾದರೂ ಮಾಡಬೇಕೆಂದುಕೊಂಡಾಗ ಸಿಕಂರ‍್ನ ಸ್ನೇಹಿತನೊಬ್ಬ ಆಗ್ರಾದಲ್ಲಿ ಒಂದು ಗ್ಲಾಸ್ ಫ್ಯಾಕ್ಟರಿಯಲ್ಲಿ ಕೆಲಸ ಕೊಡಿಸುತ್ತಾನೆ. ಕ್ವಾಟ್ರಸ್ ಸಹಾ ಸಿಗುತ್ತದೆ. ಕಾಮಿನಿ ಸಿಕಂದರ್ ಅಲ್ಲಿಗೆ ಹೋಗಿ ಸಂಸಾರ ಹೂಡುತ್ತಾರೆ. ಒಂದು ವಿಧವಾಗಿ ಜೀವನದಲ್ಲಿ ಸೆಟಲ್ ಆದಂತೆ ಆಗುತ್ತದೆ. ಆದರೆ ಕೇಸಿನಿಂದ ಇನ್ನೂ ಬಿಡುಗಡೆ ಆಗಿರುವುದಿಲ್ಲ. ಇತ್ತ ಸಾಕ್ಷಿ ಕೂಡಿಸಲು ಆಗದಿದ್ದರೂ ಜಸ್ವಿಂದರ್ ನ ಒಂದು ಕಣ್ಣು ಕಾಮಿನಿ ಸಿಕಂದರ್‌ನನ್ನು ಹಿಂಬಾಲಿಸುತ್ತಲೇ ಇರುತ್ತದೆ. ಮುಂಬೈನಲ್ಲಿ  ಇವರು ಕಾಣದಾದಾಗ ಅವರ ವಿರುದ್ಧ ವಾರಂಟ್ ಇಶ್ಯೂ ಮಾಡಿಸುತ್ತಾನೆ. ಮಂಗಲ್ ದೇಸಾಯಿ ಸಿಕಂದರ ಗೆ ಪೋನ್ ಮಾಡಿ ತಿಳಿಸುತ್ತಾನೆ. ಸಿಕಂದರ್ ಒಬ್ಬನೇ ಕೋರ್ಟ್ಗೆ ಹಾಜರಾಗುತ್ತಾನೆ. ಆದಿನ ಜಸ್ವಿಂದರ್ ಕೋರ್ಟ್ ಗೆ ಗೈರುಹಾಜರಾಗಿರುತ್ತಾನೆ. ನ್ಯಾಯಾಧೀಶರು ತನಿಖಾಧಿಕಾರಿ ಸಾಕ್ಷಿಗಳನ್ನು ಸೇರಿಸಲು ವಿಫಲವಾಗಿರುವುದರಿಂದ ಇವರ ಕೇಸನ್ನು ವಜಾ ಮಾಡಿ ಮೂವರನ್ನೂ ಬಿಡುಗಡೆ ಮಾಡುತ್ತಾರೆ.

ಸಿಕಂದರ್ ಖುಷಿಯಿಂದ ಆಗ್ರಾಗೆ ಮರಳುತ್ತಾನೆ. ಮನೆಗೆ ಬಂದಾಗ ಕಾಮಿನಿ ಅಸ್ವಸ್ಥಳಾಗಿರುತ್ತಾಳೆ. ತಾವು ಬಿಡುಗಡೆಯಾದ ಸುದ್ದಿ ತಿಳಿಸಿ ಅವಳನ್ನು ಆಸ್ಪತ್ರೆಗೆ ಸೇರಿಸಿ ಮನೆಗೆ ಮರಳಿದಾಗ ಮನೆಯ ಮಾಲಿಕ ಇವರನ್ನು ಕಳ್ಳರೆಂದು ಜರಿದು ಬಾಕಿಹಣ ಕೊಟ್ಟು ಕಾಮಿನಿಯ ತಂಗಿಯನ್ನೂ ಮಗುವನ್ನೂ ಸಿಕಂದರ್ ನನ್ನು ಹೊರಹಾಕುತ್ತಾನೆ. ಕೆಲಸ ಮನೆ ಎರಡನ್ನೂ ಕಳೆದುಕೊಂಡ ಸಿಖಂದರ್ ದಿಕ್ಕು ತಪ್ಪಿದವನಂತೆ ಆಗುತ್ತಾನೆ. ಆತ್ಮಹತ್ಯೆಗೂ ಪ್ರಯತ್ನಿಸುತ್ತಾನೆ. ಆದರೆ ಕಾಮಿನಿಯ ನೆನಪು ಅವನನ್ನು ಜೀವಂತವಾಗಿಡುತ್ತದೆ. ಮತ್ತೆ ಸಿಕಂದರ್‌ನ ಸ್ನೇಹಿತ ದುಬೈಯಲ್ಲಿ ಕೆಲಸ ಕೊಡಿಸುತ್ತಾನೆ. ಕಾಮಿನಿ ಮಗ ಹಾಗೂ ತಂಗಿಯೊಡನೆ ಇಲ್ಲಿಯೇ ಉಳಿದು, ಸಿಕಂದರ್ ದುಬೈಗೆ ಹಾರುತ್ತಾನೆ. 14 ವರ್ಷ ಅಲ್ಲಿ ಕೆಲಸ ಮಾಡಿ ಹಣ ಸಂಪಾದಿಸಿ ಮರಳುತ್ತಾನೆ. ಕಾಮಿನಿ ಮಗು ತಂಗಿಯೊಡನೆ ಸಿಕಂದರನಿಗೆ ಕಾಯುತ್ತ ಅವನ ಸಂಪಾದನೆಯಲ್ಲಿ ಸುಖವಾಗಿ ಜೀವನ ನಡೆಸುತ್ತಿರುತ್ತಾಳೆ. 

ಇದನ್ನೂ ಓದಿ: ಕೆಟ್ಟ ಸಂದೇಶ ಸಾರುವ ಬಹಳ ಒಳ್ಳೇ ಮೂವಿ ಲಕ್ಕಿ ಭಾಸ್ಕರ್

ಇಲ್ಲಿ ಜಸ್ವಿಂದರ್ ನ ಆರನೇ ಇಂದ್ರಿಯದ ಸೂಚನೆ ಕೈಕೊಟ್ಟು ಸಿಕಂದರ್ ನಿರ್ದೋಷಿ ಎಂದು ಸಾಬೀತಾಗಿದ್ದರಿಂದ ಜಸ್ವಿಂದರ ಗೆ ತಪ್ಪಿತಸ್ಥಭಾವನೆ ಕಾಡುತ್ತದೆ. ಅವನು ಕುಡಿತಕ್ಕೆ ದಾಸನಾಗುತ್ತಾನೆ. ಹೆಂಡತಿ ವಿಚ್ಛೇದನೆ ಕೊಡುತ್ತಾಳೆ. ಜಸ್ವಿಂದರ್ ಕೆಲಸ ಕಳೆದುಕೊಳ್ಳುತ್ತಾನೆ. ಯಾರ ಮುಖಾಂತರವೋ ಅವನಿಗೆ ಸಿಕಂದರನ ಫೋನ್ ನಂಬರ್ ಸಿಗುತ್ತದೆ. ಅವನಿಗೆ ಫೋನ್ ಮಾಡಿದ ಜಸ್ವಿಂದರ್ 'ಸಿಕಂದರ್ ನೀನು ನಿರ್ದೋಷಿ ನಿನ್ನನ್ನು ಬಂಧಿಸಿ ನಾನಾ ಹಿಂಸೆ ಕೊಟ್ಟು ನಾನು ತಪ್ಪು ಮಾಡಿದೆ ನನ್ನನ್ನು ಕ್ಷಮಿಸು' ಎನ್ನುತ್ತಾನೆ. ಇದನ್ನು ಕೇಳಿದ ಸಿಕಂದರ್ ಭಾವೋದ್ವೇಗದಿಂದ ಅಳುತ್ತಾನೆ. ಜಸ್ವಿಂದರ್ ಸಿಕಂದರ್ ನನ್ನು ಭೇಟಿ ಮಾಡುವ ಇಚ್ಛೆ ವ್ಯಕ್ತಪಡಿಸುತ್ತಾನೆ. ಅದರಂತೆ ಸಿಕಂದರ್ ದುಬೈಯಿಂದ ಮರಳಿದ ಕೂಡಲೇ ಕಾಮಿನಿಯನ್ನೂ ನೋಡದೆ ಜಸ್ವಿಂದರ್ ನನ್ನು ಭೇಟಿಮಾಡುತ್ತಾನೆ. ಇಬ್ಬರೂ ಒಂದು ರೆಸ್ಟೋರೆಂಟಿನಲ್ಲಿ ಕುಳಿತು ಮಾತನಾಡುತ್ತಾರೆ. ಕಳೆದು ಹೋದದ್ದನ್ನೆಲ್ಲ ಮೆಲುಕು ಹಾಕುತ್ತಾರೆ. ಮಾತಿನ ಮಧ್ಯೆ ಜಸ್ವಿಂದರ್ ಸಿಕಂದರ್ ಗೆ 'ದುಬೈನಲ್ಲಿ ಇದ್ದಳಲ್ಲ ನಿನ್ನ ಪ್ರೇಯಸಿ ಅವಳನ್ನೇನು ಮಾಡಿದೆ?' ಎನ್ನುತ್ತಾನೆ. ಸಿಕಂದರ್‌ಗೆ ಷಾಕ್ ಆಗುತ್ತದೆ. ಇನ್ನೇನು ಎಲ್ಲ ಮಾತನಾಡಿ ಹೊರಡುವಾಗ ಜಸ್ವಿಂದರ್ ಸಿಕಂದರ್ ಗೆ 'ಒಂದು ಅಂತಿಮ ಸತ್ಯ ಹೇಳುತ್ತೇನೆ, ಕೇಳಿ ಹೋಗು' ಎನ್ನುತ್ತಾನೆ. 'ಕಾಮಿನಿಯನ್ನು ನಿನ್ನ ಮೇಲೆ ಕಣ್ಣಿಡಲು ನಾನೇ ನಿನ್ನ ಜೊತೆ ಮದುವೆಯಾಗೆಂದು ಹೇಳಿದೆ' ಎಂದು ಹೇಳುತ್ತಾನೆ. ಸಿಕಂದರನಿಗೆ ಮತ್ತೂ ಷಾಕ್. ಹಾಗಾದರೆ ಕಾಮಿನಿಗೆ ನನ್ನ ಮೇಲೆ ಪ್ರೀತಿಯಿಲ್ಲ ಜಸ್ವಿಂದರನ ಜೊತೆ ಷಾಮೀಲಾಗಿ ನನ್ನನ್ನು ಮದುವೆಯಾಗಿದ್ದಾಳೆ ಎನಿಸಿ ಕಾಮಿನಿಯ ಮೇಲಿದ್ದ ಪ್ರೀತಿಯೆಲ್ಲ ಸೋರಿಹೋಗುತ್ತದೆ.

ಜಸ್ವಿಂದರ್ ನಿಂದ ಬೀಳ್ಕೊಂಡು ಕಾಮಿನಿಯ ಬಳಿ ಬರುವ ಸಿಕಂದರ್ ಭಗ್ನಹೃದಯಿಯಾಗಿ ಕಾಮಿನಿಗೆ ಜಸ್ವಿಂದರ್ ಹೇಳಿದ ವಿಷಯವನ್ನು ತಿಳಿಸಿ ಅವಳೋಂದಿಗೆ ಇನ್ನು ಸಂಸಾರ ಅಸಾಧ್ಯ ಎನ್ನುತ್ತಾನೆ. ಕಾಮಿನಿ ಎಷ್ಟು ಕೇಳಿಕೊಂಡರೂ ಓಗೊಡದೆ 'ಈ ಮನೆ ನಿನ್ನ ಹೆಸರಿಗೇ ಮಾಡುತ್ತೇನೆ ನಿನ್ನ ಅಗತ್ಯಕ್ಕೆ ಹಣವನ್ನೂ ಕೊಡುತ್ತೇನೆ' ಎಂದು ಹೇಳಿ ಅವಳಿಗೆ ವಿದಾಯ ಹೇಳಿ ಹೊರಬರುತ್ತಾನೆ.

ಇದನ್ನೂ ಓದಿ: ಫ್ರೀಜರ್‌ನಲ್ಲಿ ಸಿಕ್ಕಿಬಿದ್ದ ಮಿಲಿ: ಬದುಕುಳಿಯುವ ಹೋರಾಟದೊಂದಿಗೆ ಪ್ರೀತಿಯ ಪಯಣ

ಅಲ್ಲಿಂದ ಒಬ್ಬನೇ ಮುಂಬೈನಿಂದ ದೂರವಿರುವ ಒಂದು ಪ್ರದೇಶಕ್ಕೆ ಬರುತ್ತಾನೆ. ಅಲ್ಲಿ ಒಂದು ನರ್ಸರಿ ಇರುತ್ತದೆ. ಅಲ್ಲಿನ ಒಡತಿ ಸಿಕಂದರ್ ನ ಬಾಲ್ಯ ಸ್ನೇಹಿತೆ ಪ್ರಿಯಾ. ಪ್ರಿಯಾ ಅವನಿಗೆ ಒಂದು ಬೋನ್ಸಾಯ್ ಗಿಡವನ್ನು ಕುಂಡದ ಸಮೇತ ಕೊಟ್ಟು ಶುಭ ಹಾರೈಸುತ್ತಾಳೆ. ಆ ಕುಂಡವನ್ನು ತೆಗೆದುಕೊಂಡು ಸಿಕಂದರ್ ಬರುವಾಗ ದಾರಿಯಲ್ಲಿ ಒಂದು ನಿರ್ಜನ ಪ್ರದೇಶದಲ್ಲಿ ಜಸ್ವಿಂದರ್ ಸಿಕಂದರನನ್ನು ಅಡ್ಡಗಟ್ಟುತ್ತಾನೆ. ಸಿಕಂದರ್ ಭಯಭೀತನಾಗುತ್ತಾನೆ.

ಇಲ್ಲಿ ಸಿಕಂದರ್ ಆ ನರ್ಸರಿಗೆ ಏಕೆ ಬಂದ? ಪ್ರಿಯಾ ಕೊಟ್ಟ ಬೋನ್ಸಾಯ್ ಗಿಡದ ರಹಸ್ಯ ಏನು? ಜಸ್ವಿಂದರ್ ಸಿಕಂದರನನ್ನು ಯಾಕೆ ಅಡ್ಡಗಟ್ಟಿದ? ಜಸ್ವಿಂದರ್ ಆರನೇ ಇಂದ್ರಿಯದ ಸೂಚನೆ ನಿಜವೇ? ದುಬೈನಲ್ಲಿ ಸಿಕಂದರನ ಪ್ರೇಯಸಿ ಯಾರು? ಅವಳಿಗೆ ಸಿಕಂದರ್ ಏನು ಹೇಳಿ ಬಂದಿದ್ದಾನೆ? ಇಷ್ಟಕ್ಕೂ ಈ ಕಥೆಯ ಕೇಂದ್ರಬಿಂದುವಾಗಿರುವ ಆ ನಾಲ್ಕು ವಜ್ರಗಳು ಎಲ್ಲಿ ಹೋದವು? ಅವನ್ನು ಕದ್ದವರು ಯಾರು? ಕಾಮಿನಿಯ ಪ್ರೀತಿ ಸುಳ್ಳೋ ಅಥವಾ ಸಿಕಂದರ್ ನ ಪ್ರೀತಿ ತೋರಿಕೆಯದೋ? ಇವನ್ನೆಲ್ಲ ತಿಳಿಯಬೇಕಾದರೆ ಸಿಕಂದರ್ ಕಾ ಮುಕ್ಕದ್ದರ್ ಸಿನಿಮಾ ನೋಡಿ.

ನೀರಜ್ ಪಾಂಡೆಯ ನಿರ್ದೇಶನದ ಕೈಚಳಕ ನೀವೂ ಎಂಜಾಯ್ ಮಾಡಿ. ಕೊನೆಯವರೆಗೂ ಸಸ್ಪೆನ್ಸ್ ಕಾಪಿಡುವುದರಲ್ಲಿ ನಿರ್ದೇಶಕ ಯಶಸ್ವಿಯಾಗಿದ್ದಾರೆ. ಜಿಮ್ಮಿ ಶ್ರೆಗಿಲ್, ತಮನ್ನಾ ಭಾಟಿಯಾ ಹಾಗೂ ಅವಿನಾಶ್ ತಿವಾರಿ ತಮ್ಮ ಅನುಪಮವಾದ ಅಭಿನಯದಿಂದ ಗಮನ ಸೆಳೆಯುತ್ತಾರೆ.

click me!