Window seat film review: ಆಘಾತಕರ, ಆಹ್ಲಾದಕರ ಸೈಕಾಲಜಿಕಲ್‌ ಥ್ರಿಲ್ಲರ್‌

By Kannadaprabha NewsFirst Published Jul 2, 2022, 9:55 AM IST
Highlights

ಶೀತಲ್‌ ಶೆಟ್ಟಿನಿರ್ದೇಶನದ ‘ವಿಂಡೋ ಸೀಟ್‌’ ಚಿತ್ರ ಇಂದು ತೆರೆ ಕಾಣಲಿದೆ. ನಿರೂಪ್‌ ಭಂಡಾರಿ, ಸಂಜನಾ ಆನಂದ್‌, ಅಮೃತಾ ಅಯ್ಯಂಗಾರ್‌ ನಟನೆಯ ಈ ಚಿತ್ರವನ್ನು ಶಾಲಿನಿ ಮಂಜುನಾಥ್‌ ನಿರ್ಮಾಣ ಮಾಡಿದ್ದಾರೆ. 

ರಾಜೇಶ್‌ ಶೆಟ್ಟಿ

ಪ್ರತಿಯೊಬ್ಬರಲ್ಲೂ ಒಂದು ಹುಡುಕಾಟ ಇದ್ದೇ ಇರುತ್ತದೆ. ಒಂದೋ ಬಾಹ್ಯ ಹುಡುಕಾಟ ಅಥವಾ ಅಂತರಂಗದ ಹುಡುಕಾಟ. ಮುಂಬೈಯಿಂದ ಬಂದು ತಾಳಗುಪ್ಪದಂತ ಹಸಿರು ತುಂಬಿದ ಊರಿನಲ್ಲಿ ವಾಸಿಸುತ್ತಾ, ದಿನಾ ರೈಲಿನಲ್ಲಿ ಓಡಾಡುತ್ತಾ ತನ್ನಿಷ್ಟದ ಜೀವದ ಹುಡುಕಾಟದಲ್ಲಿರುತ್ತಾನೆ ಹೀರೋ. ಮಳೆ ನೀರು, ನೀಲಿ ರೈಲು, ಹನಿ ಉಳಿದಿರುವ ಎಲೆಗಳು, ಪಾಚಿ ಗಟ್ಟಿರುವ ಬಾವಿ, ಕೆಸರು ತುಂಬಿರುವ ರಸ್ತೆಗಳು ಎಲ್ಲವನ್ನೂ ಮನಸಾರೆ ಅನುಭವಿಸುತ್ತಾ ಜೀವಿಸುವ ಅವನ ಜೀವನದ ಹುಡುಕಾಟದ ಅರ್ಥ ತಿಳಿದಾಗ ಈ ಸಿನಿಮಾ ಬೇರೊಂದು ಹಳಿಗೆ ಹೊರಳುತ್ತದೆ. ಅದೇ ಈ ಸಿನಿಮಾದ ಬೆರಗು.

ನಿರ್ದೇಶನ: ಶೀತಲ್‌ ಶೆಟ್ಟಿ

ತಾರಾಗಣ: ನಿರೂಪ್‌ ಭಂಡಾರಿ, ಸಂಜನಾ ಆನಂದ್‌, ಅಮೃತಾ ಅಯ್ಯಂಗಾರ್‌, ಲೇಖಾ ನಾಯ್ಡು

ರೇಟಿಂಗ್‌- 3

ರೊಮ್ಯಾಂಟಿಕ್‌ ಫೀಲ್‌ನಲ್ಲಿ ಶುರುವಾಗುವ ಸಿನಿಮಾ ಅರ್ಧ ಮುಗಿದಾಗ ಥ್ರಿಲ್ಲರ್‌ ಜೋನರ್‌ಗೆ ತಿರುಗುತ್ತದೆ. ಅಲ್ಲಿಂದಾಚೆಗೆ ಮತ್ತೊಂದು ಮಗ್ಗುಲಿಗೆ ಜಿಗಿದು ಕೊನೆಗೊಂದು ಅಚ್ಚರಿ ಮತ್ತು ಯೋಚನೆ ಉಳಿಸಿ ಮುಗಿಯುತ್ತದೆ. ಅಷ್ಟರ ಮಟ್ಟಿಗೆ ಈ ಸಿನಿಮಾ ಒಂದು ಆಹ್ಲಾದಕರ, ಆಘಾತಕರ ಅಚ್ಚರಿ. ಒಂದು ವಿಶಿಷ್ಟಕತೆಯನ್ನು ಬರೆದು, ಅದನ್ನು ಅಷ್ಟೇ ಸಮರ್ಥವಾಗಿ ತೆರೆಗೆ ತಂದಿದ್ದಾರೆ ಶೀತಲ್‌ ಶೆಟ್ಟಿ. ಕನ್ನಡ ಚಿತ್ರರಂಗಕ್ಕೆ ಒಬ್ಬ ಸಮರ್ಥ ನಿರ್ದೇಶಕಿಯ ಆಗಮನವಾಗಿದೆ ಅನ್ನುವುದಕ್ಕೆ ಈ ಸಿನಿಮಾನೇ ಸಾಕ್ಷಿ.

BAIRAGI FILM REVIEW: ಶಿವಣ್ಣ ಅಬ್ಬರ, ಬೈರಾಗಿ ಭಯಂಕರ

ಇಲ್ಲೊಂದು ಮುಗ್ಧ ಪ್ರೇಮಕತೆ ಇದೆ. ಕಿಟಕಿಯಾಚೆ ಕಾಣುವ ಬೆಳದಿಂಗಳ ಬಾಲೆಯಂಥ ಹುಡುಗಿ ಇದ್ದಾಳೆ. ಅವಳ ಕುರಿತು ಅಸೂಯೆ ಪಡುವ ಗೆಳತಿ ಇದ್ದಾಳೆ. ದುಃಖ ಮರೆಯುವುದಕ್ಕೆ ಹಾಡಿದೆ. ನಿಗೂಢತೆಗೆ ಒಬ್ಬ ಮೇಷ್ಟು್ರ ಇದ್ದಾರೆ. ಎಲ್ಲಕ್ಕಿಂತ ಹೆಚ್ಚಾಗಿ ಒಂದು ಮಂತ್ರಮುಗ್ಧಗೊಳಿಸುವ ಕತೆ ಇದೆ. ಅದನ್ನು ಹೇಳುವುದಕ್ಕೆ ಸಮರ್ಥವಾದ ಕಲಾವಿದರು ಇಲ್ಲಿ ಸೇರಿಕೊಂಡಿದ್ದಾರೆ. ಒಂದೊಳ್ಳೆಯ ಕತೆ ಇದ್ದರೆ ಎಲ್ಲವೂ ತನ್ನಿಂತಾನೇ ಅದರದರ ಜಾಗದಲ್ಲೇ ಕೂರುತ್ತದೆ ಅನ್ನುವುದಕ್ಕೆ ಈ ಸಿನಿಮಾ ಒಂದು ಉದಾಹರಣೆ.

ನಿರೂಪ್‌ ಭಂಡಾರಿ, ಅಮೃತಾ ಅಯ್ಯಂಗಾರ್‌, ಸಂಜನಾ ಆನಂದ್‌ ಎಲ್ಲರೂ ಈ ಸಿನಿಮಾದ ಭಾಗವೇ ಆಗಿ ಹೋಗಿದ್ದಾರೆ. ಆ ಪಾತ್ರದಲ್ಲಿ ಬೇರೆಯವರನ್ನು ಯೋಚಿಸುವುದಕ್ಕೆ ಯಾರೂ ಅವಕಾಶವೇ ಕೊಟ್ಟಿಲ್ಲ. ಈ ಸಿನಿಮಾದ ಬಹುದೊಡ್ಡ ಅಚ್ಚರಿ ಎಂದರೆ ಲೇಖಾ ನಾಯ್ಡು. ಪೊಲೀಸ್‌ ಇನ್‌ಸ್ಪೆಕ್ಟರ್‌ ಪಾತ್ರವನ್ನು ಅವರು ಎಷ್ಟುಆವಾಹಿಸಿಕೊಂಡಿದ್ದಾರೆ ಎಂದರೆ ಅವರ ಮುಖಭಾವದ ಗೆರೆಗಳು ಕೂಡ ನೆನಪಲ್ಲಿ ಉಳಿಯುತ್ತವೆ. ರವಿಶಂಕರ್‌ ಈ ಸಿನಿಮಾದ ಹಿತಕರ ನಗು.

Thurthu Nirgamana Film Review: ತಮಾಷೆ ಚೌಕಟ್ಟಿನಲ್ಲಿರುವ ವಿಚಾರಪೂರ್ಣ ಸಿನಿಮಾ

ಅಲ್ಲಲ್ಲಿ ಸಣ್ಣಪುಟ್ಟಅನವಶ್ಯ ಅಂಶಗಳನ್ನು ಹೊರತುಪಡಿಸಿದರೆ ಈ ಸಿನಿಮಾ ಒಂದು ಪ್ಲೆಸೆಂಟ್‌ ಸಪ್ರೈರ್‍ಸ್‌. ಮನುಷ್ಯನಲ್ಲಿ ಬಾಹ್ಯ ಜಗತ್ತಿಗೆ ಕಾಣಿಸುವುದು ಸ್ವಲ್ಪ. ಅಂತರಾಳದಲ್ಲಿ ಅಡಗಿಕೊಂಡಿರುವುದು ಅವನಿಗೂ ತಿಳಿದಿರುವುದಿಲ್ಲ. ಅದರ ಹುಡುಕಾಟ ಶುರು ಮಾಡಿದಾಗ ಏನೇನು ಸಿಗುವುದೋ ಅದೆಲ್ಲವೂ ಮುಂದಿನ ದಾರಿಗೆ ಬೆಳಕು ಅಥವಾ ಕತ್ತಲು. ಈ ಅಂಶವನ್ನು ಸಮರ್ಥವಾಗಿ ಕಾಣಿಸುವ ನಿರ್ದೇಶಕಿ ಮೆಚ್ಚುಗೆಗೆ ಅರ್ಹರು.

click me!