
ಪ್ರಿಯಾ ಕೆರ್ವಾಶೆ
ಸಿನಿಮಾ ಹೆಸರೇನೋ ವಿದ್ಯಾಪತಿ, ಆದರೆ ಇಲ್ಲಿ ‘ವಿದ್ಯಾ’ ನೆಪ ಮಾತ್ರ, ಇಡೀ ಸಿನಿಮಾದಲ್ಲಿ ವಿಜೃಂಭಿಸುವುದು ಪತಿಯ ಆಟಾಟೋಪ. ಆತ ಮಾಡುವ ಕಾಮಿಡಿ, ಎಮೋಶನ್, ಫೈಟ್‌ಗಳನ್ನು ಕಣ್ತುಂಬಿಸಿಕೊಳ್ಳುವ ಸೌಭಾಗ್ಯ ಪ್ರೇಕ್ಷಕ ಮಹಾಪ್ರಭುವಿನದ್ದು. ವಿದ್ಯಾ ಸೂಪರ್‌ಸ್ಟಾರ್. ಅವಳ ಎಂಟ್ರಿ ಸೀನ್, ಆ ಭಾಗದ ಸಂಭಾಷಣೆ ಭಲೇ ಮಜವಾಗಿದೆ. ಯಾವಾಗ ಹಳೇ ನಿರ್ದೇಶಕರೊಬ್ಬರು ನಿರ್ಮಾಪಕರ ಜೊತೆ ಕಾರಿನ ಬ್ಯಾಕ್ ಸೀಟಲ್ಲಿ ಕೂತು ಮಂದ್ರಸ್ಥಾಯಿಯಲ್ಲಿ ಡೈಲಾಗ್ ಹೊಡೆಯಲು ಶುರು ಹಚ್ಕೊಳ್ತಾರೋ ಆಗ ಟಾಪ್ ಸ್ಪೀಡ್‌ನಲ್ಲಿದ್ದ ಸ್ಟೋರಿ ಮಾಮೂಲಿ ರೇಂಜ್‌ಗೆ ಹೊರಳಿಕೊಳ್ಳುತ್ತೆ.
ಇಲ್ಲಿಂದ ಕೊನೇತನಕ ಸಿದ್ದು ಎಂಬ ವಿದ್ಯಾಳ ಪತಿಯ ಬಹುಕೃತ ವೇಷ. ಮೊದಲ ಭಾಗದಲ್ಲಿ ಈತನದು ಉತ್ತರ ಕುಮಾರನ ಪೌರುಷ. ಇಂಥಾ ಉತ್ತರ ಕುಮಾರನೊಳಗೂ ಒಬ್ಬ ಅರ್ಜುನನಿದ್ದಾನೆ ಎಂದು ಮನದಟ್ಟು ಮಾಡಿಸೋದು ಪರಿಸ್ಥಿತಿ. ಆತ ವಿಷಾದಯೋಗದಲ್ಲಿದ್ದಾಗ ಶ್ರೀಕೃಷ್ಣನಂಥಾ ಚತುರನೊಬ್ಬನ ಮಾರ್ಗದರ್ಶನವೂ ಸಿಗುತ್ತದೆ. ಹೆಚ್ಚೇನೂ ಸತಾಯಿಸದೇ ನಿರ್ದೇಶಕರು ಕಥೆಯನ್ನು ಕೊನೆಯ ಭಾಗಕ್ಕೆ ತಂದು ನಿಲ್ಲಿಸುತ್ತಾರೆ. ಸಿನಿಮಾವನ್ನು ಎರಡು ಗಂಟೆ ಹಿಗ್ಗಿಸಲು ಅವರು ಪಟ್ಟ ಪಾಡು ಅಲ್ಲಲ್ಲಿ ಕಾಣಿಸಿಕೊಳ್ಳುತ್ತದೆ.
ವಿದ್ಯಾಪತಿ
ತಾರಾಗಣ: ನಾಗಭೂಷಣ, ಧನಂಜಯ, ಶ್ರೀವತ್ಸ ಶ್ಯಾಮ್, ಗರುಡ ರಾಮ್, ಮಲೈಕಾ ವಸುಪಾಲ್
ನಿರ್ದೇಶನ: ಹಸೀನ್ ಖಾನ್- ಇಶಾಮ್ ಖಾನ್
ರೇಟಿಂಗ್ : 3
ಆದರೂ ಕತೆಯಲ್ಲಿ, ನಿರೂಪಣೆಯಲ್ಲಿ ಹೊಸತನಕ್ಕೆ ಪ್ರಯತ್ನಿಸಿದ್ದಾರೆ. ಸಿನಿಮಾದುದ್ದಕ್ಕೂ ಸಿದ್ದು ಪಾತ್ರಕ್ಕೆ ಜೀವ ತುಂಬಲು ನಾಗಭೂಷಣ ಶ್ರಮಪಟ್ಟಿದ್ದಾರೆ. ಮೊದಲ ಭಾಗದಲ್ಲಿ ಅವರ ಶ್ರಮವೇ ಎದ್ದು ಕಾಣಿಸಿದರೆ, ಎರಡನೇ ಭಾಗದ ಅವರ ಸಹಜ ನಟನೆ ಹೆಚ್ಚು ಆಪ್ತ. ಮಲೈಕಾ ಮೊದಲೊಮ್ಮೆ ಕೊನೆಗೊಮ್ಮೆ ಮಧ್ಯೆ ಒಂದು ಹಾಡಿನಲ್ಲಿ ಮಿಂಚಿನಂತೆ ಕಾಣಿಸಿಕೊಳ್ಳುತ್ತಾರೆ. ಮನರಂಜನೆಗೆ ಮೋಸವಿಲ್ಲ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.