
ಆರ್.ಬಿ.
ಒತ್ತಡದಿಂದ ಉಂಟಾಗುವ ಆರೋಗ್ಯ ಸಮಸ್ಯೆ, ಸಾಲಶೂಲಗಳಿಂದ ಉಂಟಾಗುವ ಆರ್ಥಿಕ ಸಮಸ್ಯೆ, ಇವೆಲ್ಲದರಿಂದ ಉಂಟಾಗುವ ಜೀವನ ಸಮಸ್ಯೆ ಈ ಎಲ್ಲವನ್ನೂ ಸೂಕ್ಷ್ಮವಾಗಿ ಹೇಳುತ್ತಲೇ ಇದು ನಿಮ್ದೆ ಕಥೆ ಎಂದು ಸಾರುವ ಸಿನಿಮಾ ಇದು. ನಾಯಕ ಲೈಫ್ ಇನ್ಶೂರೆನ್ಸ್ ಏಜೆಂಟು. ಮದುವೆಯಾಗಿ ಪತ್ನಿ ಜೊತೆ ಸಂಸಾರ ಸಾಗಿಸುತ್ತಿರುತ್ತಾನೆ.
ಮಧ್ಯಮ ವರ್ಗದ ಜೀವನ. ಬದುಕು ಸಾಗುತ್ತಿರುವಾಗ ಅವನಿಗೊಂದು ಲೈಂಗಿಕ ಸಮಸ್ಯೆ ಕಾಡಿ ಅದರಿಂದ ಪಾರಾಗಲು ವೈದ್ಯರಲ್ಲಿಗೆ ಹೋಗುವಲ್ಲಿಗೆ ಕತೆ ತೀವ್ರತೆ ಪಡೆದುಕೊಳ್ಳುತ್ತದೆ. ಅಲ್ಲಿಂದ ಮುಂದೆ ತಿರುವು ಮುರುವಿನ ಪ್ರಯಾಣ. ಅಲ್ಲೊಂದು ಟ್ವಿಸ್ಟು, ಜೊತೆಗೊಂದು ಪಾಠ. ಅದೊಂದು ಸಮಸ್ಯೆ ಮುಗಿಯಿತು ಎನ್ನುವಲ್ಲಿಗೆ ಮತ್ತೊಂದು ಸವಾಲು, ದೊಡ್ಡ ಬಡ್ಡಿಯ ಕಡಿಮೆ ಸಾಲ ಜೀವ ಹಿಂಡತೊಡಗುತ್ತದೆ. ಅಲ್ಲಿಗೆ ಮತ್ತೊಂದು ಟ್ವಿಸ್ಟು. ಹೀಗೆ ಮಧ್ಯಮ ವರ್ಗದ ಜೀವನದಲ್ಲಿ ಎದುರಾಗುವ ಸಂಕೀರ್ಣತೆಗಳನ್ನು ಕಾಣಿಸುವ ನಿರ್ದೇಶಕರ ಉದ್ದೇಶ ಈ ಸಿನಿಮಾದ ಉದ್ದಕ್ಕೂ ಕಾಣಿಸುತ್ತದೆ.
ಅಷ್ಟರ ಮಟ್ಟಿಗೆ ಮಧ್ಯಮ ವರ್ಗದ ಕತೆಯನ್ನು ನಿರ್ದೇಶಕರು ಸಶಕ್ತವಾಗಿ ದಾಟಿಸಿದ್ದಾರೆ. ಹಾಗೆ ನೋಡಿದರೆ ಮೊದಲಾರ್ಧದಲ್ಲಿ ಒಂದು ಹಾದಿಯಾದರೆ, ದ್ವಿತೀಯಾರ್ಧದಲ್ಲಿ ಮತ್ತೊಂದು ಮಾರ್ಗ ತೆರೆದುಕೊಳ್ಳುತ್ತದೆ. ವಿಶೇಷವಾಗಿ ಅಭಿಲಾಷ್ ದಳಪತಿ ಉತ್ತಮವಾಗಿ ನಟಿಸಿದ್ದಾರೆ. ರಾಶಿಕಾ ಶೆಟ್ಟಿ, ಸಿಹಿ ಕಹಿ ಚಂದ್ರು ಪಾತ್ರವೇ ಆಗಿ ಮಿಂಚಿದ್ದಾರೆ. ಈ ಕತೆ ತಾಂತ್ರಿಕವಾಗಿ ಹೆಚ್ಚು ನೈಪುಣ್ಯತೆಯನ್ನು ಕೇಳುತ್ತದೆ ಅನ್ನುವುದರ ಹೊರತಾಗಿ ಒಳ್ಳೆಯ ಉದ್ದೇಶ ಹೊಂದಿದೆ.
ಚಿತ್ರ: ನಿಮ್ದೆ ಕಥೆ
ನಿರ್ದೇಶನ: ರಾಘವೇಂದ್ರ ರಾಜ್
ತಾರಾಗಣ: ಅಭಿಲಾಷ್ ದಳಪತಿ, ರಾಶಿಕಾ ಶೆಟ್ಟಿ, ಸಿಹಿಕಹಿ ಚಂದ್ರು, ಮನೋಹರ ಗೌಡ
ಹಾಸ್ಯಮಯವಾಗಿ ಸಾಗುವ ಸಸ್ಪೆನ್ಸ್ ಸಿನಿಮಾ ನಿಮ್ದೆ ಕಥೆ: ಹಾಸ್ಯಮಯವಾಗಿ ಮತ್ತು ಎಮೋಷನಲ್ ಆಗಿ ಸಾಗುವ ಸಸ್ಪೆನ್ಸ್ ಸಿನಿಮಾ ಎಂದು ಚಿತ್ರತಂಡ ಹೇಳಿದೆ. ಈಗಾಗಲೇ ಸಿನಿಮಾದ ಟೀಸರ್, ಹಾಡುಗಳ ಜನ ಮೆಚ್ಚುಗೆ ಗಳಿಸಿವೆ. ರಾಘವೇಂದ್ರ ನಿರ್ದೇಶಿಸಿರುವ ಈ ಚಿತ್ರದಲ್ಲಿ ಸಿಹಿ ಕಹಿ ಚಂದ್ರು, ಮನೋಹರ್ ಗೌಡ, ಕೆ.ವಿ. ಮಂಜಯ್ಯ, ಜ್ಯೋತಿ ಮರೂರ್ ನಟಿಸಿದ್ದಾರೆ. ಶ್ರೀನಿವಾಸ ರೆಡ್ಡಿ ಮತ್ತು ಅರವಿಂದ್ ಯು.ಎಸ್ ನಿರ್ಮಿಸಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.