Kannada Film Review: 83

By Kannadaprabha News  |  First Published Dec 25, 2021, 9:08 AM IST

ರಣವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ ಅಭಿನಯಿಸಿರುವ  83 ಸಿನಿಮಾ ಎಲ್ಲೆಡೆ ಅದ್ಧೂರಿ ಪ್ರದರ್ಶನ ಕಾಣುತ್ತಿದೆ. ಚಿತ್ರದ ವಿಶೇಷ ಪ್ರೀಮಿಯರ್ 22ರಂದು ನಡೆಯಿತ್ತು. ಕನ್ನಡದಿಂದ ಪ್ರಿಯಾ ಮಣಿ ಮತ್ತು ಪತಿ, ನಟಿ ಶುಭ್ರ ಅಯ್ಯಪ್ಪ ಸೇರಿದಂತೆ ಹಲವು ಭಾಗಿಯಾಗಿದ್ದು, ಸಿನಿಮಾ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದ್ದರು. 


ಜೋಗಿ

ಭಾರತಕ್ಕೆ ಸ್ವಾತಂತ್ರ್ಯ ಬಂದು 35 ವರ್ಷ ಆಯ್ತು. ಆದರೆ ಇನ್ನೂ ಗೌರವ ಬರಲಿಲ್ಲ.

Tap to resize

Latest Videos

ಹಾಗಂತ ಭಾರತದ ಅಡ್ಮಿನಿಸ್ಪ್ರೇಟರ್‌ ಮಾನ್‌ ಸಿಂಗ್‌ ಕ್ರಿಕೆಟ್‌ ಮೈದಾನದಲ್ಲಿ ನಿಂತುಕೊಂಡು ಕಪಿಲ್‌ದೇವ್‌ಗೆ ಹೇಳುವ ಹೊತ್ತಿಗಾಗಲೇ, ಭಾರತೀಯ ಕ್ರಿಕೆಟ್‌ ತಂಡ ಅಂಡರ್‌ಡಾಗ್‌ಗಳೆಂದು ತೀರ್ಮಾನ ಆಗಿರುತ್ತದೆ. ಭಾರತೀಯ ಕ್ರಿಕೆಟ್‌ ತಂಡದ ಕುರಿತು, ಬೇರೆ ದೇಶಗಳ ಮಾತು ಹಾಗಿರಲಿ, ಸ್ವತಃ ಭಾರತೀಯರಿಗೆ ಕೂಡ ಯಾವ ನಂಬಿಕೆಯೂ ಇರುವುದಿಲ್ಲ. ಎರಡು ಬಾರಿ ವಲ್‌ರ್‍್ಡ ಕಪ್‌ ಗೆದ್ದು ಮೆರೆಯುತ್ತಿರುವ ವೆಸ್ಟ್‌ ಇಂಡೀಸ್‌ನವರ ರಣವೇಗದ ಬೌಲಿಂಗಿಗೆ ಕ್ರಿಕೆಟ್‌ ಕಲಿಗಳೇ ನಡುಗುತ್ತಿರುವ ಹೊತ್ತಲ್ಲಿ, ಭಾರತೀಯ ಕ್ರಿಕೆಟ್‌ ತಂಡ ಕಪಿಲ್‌ ದೇವ್‌ ಎಂಬ ಹರಿಯಾಣದ ಇಂಗ್ಲಿಷ್‌ ಗೊತ್ತಿಲ್ಲದ ಕ್ಯಾಪ್ಟನ್‌ ತನ್ನಷ್ಟೇ ಬೇಜವಾಬ್ದಾರಿಯ ತಂಡವೊಂದನ್ನು ಕಟ್ಟಿಕೊಂಡು ವಲ್‌ರ್‍್ಡ ಕಪ್‌ ಗೆಲ್ಲಲು ಹೊರಡುವ ಕತೆಯನ್ನು ಕಬೀರ್‌ಖಾನ್‌ ಕ್ರಿಕೆಟ್‌ ಆಟದ ಎಲ್ಲ ಸೆಂಟಿಮೆಂಟುಗಳನ್ನೂ ರೋಚಕತೆಯನ್ನೂ ಅಬ್ಬರವನ್ನೂ ವಿಷಾದವನ್ನೂ ಬೆರೆಸಿ ಹೇಳಿರುವ ಕತೆಯೇ 83.

ಸಿನಿಮಾ ಮಾಡುವುದಕ್ಕೆ ಬೇಕಿದ್ದ ಎಲ್ಲ ಅಂಶಗಳೂ ಕಪಿಲ್ಸ್‌ ಡೆವಿಲ್ಸ್‌ ಎಂದು ನಂತರ ಕರೆಸಿಕೊಂಡ ತಂಡ ಹೊಂದಿತ್ತು ಅನ್ನುವುದು ಚಿತ್ರ ನೋಡುತ್ತಾ ಹೋದಾಗ ಗೊತ್ತಾಗುತ್ತದೆ. ಆಗ ಭಾರತೀಯ ಕ್ರಿಕೆಟ್‌ ಬೋರ್ಡ್‌ ಶ್ರೀಮಂತವಾಗಿರಲಿಲ್ಲ. ಕ್ರಿಕೆಟ್‌ ಆಟಗಾರರೂ ಬಡವರೇ ಆಗಿದ್ದರು. ಕ್ರಿಕೆಟ್‌ ಆಟಕ್ಕೆ ಈಗಿರುವ ಮರ್ಯಾದೆಯೂ ಇರಲಿಲ್ಲ. ಕ್ರಿಕೆಟ್‌ ಆಟಗಾರನ ಸಂಬಳ ಕಡಿಮೆ ಎಂದು ನಿಶ್ಚಿತಾರ್ಥ ಮುರಿಯುವ ಸಂಗತಿಯಾಗಲೀ, ದಿನಕ್ಕೆ 15 ಪೌಂಡ್‌ ಭತ್ಯೆ ಪಡೆಯುವ ಕ್ರಿಕೆಟ್‌ ಆಟಗಾರರಾಗಲೀ, ಭಾರತಕ್ಕೆ ಮರಳುವ ದಿನಾಂಕ ಮುಂದಕ್ಕೆ ಹಾಕಿದರೆ ಬಾಕಿ ಮೊತ್ತ ಕಟ್ಟುವುದಕ್ಕೇನು ಮಾಡಬೇಕು ಎಂದು ಚಿಂತಿಸುವ ಮ್ಯಾನೇಜರ್‌ ಆಗಲೀ ನಮಗೆ ಗೊತ್ತೇ ಇಲ್ಲದ ಕತೆಗಳು. ಅವನ್ನೆಲ್ಲ ಇಟ್ಟುಕೊಂಡು ಕಬೀರ್‌ ಖಾನ್‌ ಎರಡೂವರೆ ಗಂಟೆಗಳ ಕತೆಯನ್ನು ಸೊಗಸಾಗಿಯೇ ಕಟ್ಟುತ್ತಾ ಹೋಗಿದ್ದಾರೆ.

83 Movie Premiere: ಪ್ಲಂಗಿಂಗ್‌ ನೆಕ್‌ ಗೌನ್‌ನಲ್ಲಿ ರಾಣಿಯಂತೆ ಕಂಗೊಳಿಸಿದ ದೀಪಿಕಾ!

ಇಡೀ ಕತೆಯಲ್ಲಿ ಕ್ರಿಕೆಟ್‌ ಪ್ರಿಯರಲ್ಲದೇ ಇರುವವರಿಗೆ ಏನಿದೆ ಎಂಬ ಪ್ರಶ್ನೆಗೆ ಇಲ್ಲಿ ಉತ್ತರ ಇಲ್ಲ. ದೇಶಭಕ್ತಿ, ಬ‚ಡತನದ ನಡುವೆಯೂ ಎದ್ದು ಕಾಣುವ ಆತ್ಮವಿಶ್ವಾಸ, ಗೆದ್ದು ಬಾ ಎಂಬ ಹಾರೈಕೆ, ಗೆಲ್ಲಬೇಕು ಎಂಬ ಛಲ, ಇಂಗ್ಲಿಷಿನ ಎದುರು ಮುಕ್ಕಾಗದ ಗರ್ವ, ಆಟಕ್ಕಿಳಿಯುವ ಹೊತ್ತಿಗೆ ಈ ಲೋಕ ಮರೆಯಬೇಕು ಎಂಬ ಸಂಗತಿಗಳನ್ನೆಲ್ಲ ಈ ಸಿನಿಮಾ ಎಲ್ಲ ರೋಚಕತೆ ಮತ್ತು ಭಾವುಕತೆಯ ಜತೆಗೆ ನಮ್ಮ ಮುಂದಿಡುತ್ತದೆ.

83 ಒಂದು ಕಾಲದ ನೆನಪುಗಳ ಮರುಕಳಿಕೆ. 1983 ವಲ್‌ರ್‍್ಡ ಕಪ್‌ ನೋಡಿದವರಿಗೆ ಇದು ದೇಜಾವೂ ಅನುಭವ. ನೋಡದೇ ಇರುವವರಿಗೆ ಹೊಸ ಲೋಕ. ಕಪಿಲ್‌ ದೇವ್‌ ಮೌನ ಮತ್ತು ಛಲ, ವೆಂಗ್‌ಸರ್ಕಾರ್‌ ಉಡಾಫೆ, ಮದನ್‌ಲಾಲ್‌ ಜೋಷ್‌, ಯಶ್‌ಪಾಲ್‌ ಶರ್ಮ ಬಿರುಸು, ಸಂದೀಪ್‌ ಪಾಟೀಲ್‌ ಎಚ್ಚರ, ಮೋಹಿಂದರ್‌ ಅಮರ್‌ನಾಥ್‌ ಆತಂಕ, ಕೃಷ್ಣಮಾಚಾರಿ ಶ್ರೀಕಾಂತ್‌ ಅಬ್ಬರ, ಕೀರ್ಮಾನಿ ತುಂಟತನ, ಬಲ್ವಿಂದರ್‌ ಸಂಧು ವಿಷಾದ, ರೋಜರ್‌ ಬಿನ್ನಿ ಸಂಭಾವಿತ ನಡೆ ಮತ್ತು ಕೀರ್ತಿ ಅಜಾದ್‌ ಮಗುಳ್ನಗೆಯ ಜತೆ ಈ ಚಿತ್ರ ನಮ್ಮನ್ನು ಸೂರೆಗೊಳ್ಳುತ್ತಾ ಹೋಗುತ್ತದೆ.

Locked In Kiss: ಕಪಿಲ್‌ ದೇವ್‌ಗೆ ರಣವೀರ್‌ ಸಿಹಿಮುತ್ತು..! Awkward ಎಂದ ಜನ

ನಿರ್ದೇಶನ: ಕಬೀರ್‌ ಖಾನ್‌

ತಾರಾಗಣ: ರಣವೀರ್‌ ಸಿಂಗ್‌, ಪಂಕಜ್‌ ತ್ರಿಪಾಠಿ, ದೀಪಿಕಾ ಪಡುಕೋಣೆ, ಬೋಮನ್‌ ಇರಾನಿ

83 ಹೊಳೆಯಿಸಿದ ಎರಡು ಸಂಗತಿಗಳೆಂದರೆ ರೋಮಿ ಬಾಟಿಯಾ ಅಷ್ಟುಚೆನ್ನಾಗಿ ಇಂಗ್ಲಿಷ್‌ ಮಾತಾಡಬಲ್ಲರು ಎಂಬುದು 83ರ ಕ್ರಿಕೆಟ್‌ ಪ್ರಿಯರಿಗೆ ಗೊತ್ತೇ ಇರಲಿಲ್ಲ. ಇಂಗ್ಲೆಂಡಿನ ಭಾರತೀಯ ಪತ್ರಕರ್ತರಿಗೂ ಭಾರತದ ಟೀಮ್‌ ಮೇಲೆ ಗೌರವ ಇಲ್ಲ ಎಂದು ತಿಳಿದಿರಲಿಲ್ಲ ಮತ್ತು ಥರ್ಡ್‌ ಅಂಪೈರ್‌ಗಳೇ ಇಲ್ಲದ ಕಾಲದಲ್ಲಿ ವಿವಾದಾತೀತ ಅಂಪೈರಿಂಗ್‌ ಮಾಡಿದ ಡಿಕ್ಕಿ ಬರ್ಡ್‌ ನಿರ್ಲಿಪ್ತತೆಯನ್ನು ಕಣ್ತುಂಬಿಕೊಂಡಿರಲಿಲ್ಲ ಹಾಗೂ ಆ ಕಾಲದ ಕಾಮೆಂಟೇಟರ್‌ಗಳ ಮನಸ್ಸು ಹೇಗಿರುತ್ತದೆ ಅನ್ನುವುದನ್ನು ನೋಡಿರಲಿಲ್ಲ. ಅದನ್ನೆಲ್ಲ ಈ 83 ಕಣ್ಮುಂದೆ ತೆರೆದಿಟ್ಟಿದೆ.

ಜಿಂಬಾಬ್ವೆಯ ವಿರುದ್ಧ ಆಡುತ್ತಾ ವಿಶ್ವದಾಖಲೆಯನ್ನು ಕಪಿಲ್‌ದೇವ್‌ ಮುರಿದಾಗ ಜನಸ್ತೋಮ ಎದ್ದು ನಿಂತು ಚಪ್ಪಾಳೆ ಹೊಡೆಯುತ್ತದೆ. ಫೋರ್‌ ಮತ್ತು ಸಿಕ್ಸ್‌ ಹೊಡೆದಾಗ ಸುಮ್ಮನಿದ್ದ ಜನ, ಒಂದು ರನ್‌ಗೆ ಯಾಕೆ ಎದ್ದು ನಿಂತು ಚಪ್ಪಾಳೆ ಹೊಡೆಯುತ್ತಾರೆ ಎಂದು ಗೊತ್ತಾಗದೇ ಕಪಿಲ್‌ ಅಂಪೈರ್‌ ಬಳಿ ಕೇಳುವ ದೃಶ್ಯ ಚಿತ್ರದ ಹೈಲೈಟ್‌ಗಳಲ್ಲಿ ಒಂದು.

83 ಹಲವರಿಗೆ ನೆನಪು, ಹಲವರಿಗೆ ಕನಸು, ಅನೇಕರಿಗೆ ಚರಿತ್ರೆ, ಚಿತ್ರಪ್ರೇಮಿಗಳಿಗೆ ವರ್ತಮಾನ. ರಣವೀರ್‌ಸಿಂಗ್‌ ಸೇರಿದಂತೆ ಎಲ್ಲ ಪಾತ್ರಗಳನ್ನೂ ನಮ್ಮ ಮೆಚ್ಚಿನ ಕ್ರಿಕೆಟ್‌ ಸ್ಟಾರುಗಳಂತೆ ರೂಪಾಂತರ ಮಾಡಿದ ಮೇಕಪ್‌ ಕಲಾವಿದರಿಗೆ ಮತ್ತು ಕನ್ನಡ ಅವತರಣಿಕೆಗೆ ಡಬ್ಬಿಂಗ್‌ ಮಾಡಿದ ಕನ್ನಡದ ಸಮರ್ಥ ಡಬ್ಬಿಂಗ್‌ ಕಲಾವಿದರಿಗೆ ವಿಶೇಷ ಅಕ್ಕರೆ.

click me!