ಸ್ಯಾಂಡಲ್‌ವುಡ್ ಯುವರಾಜ ನಟನೆಯ ರೈಡರ್ ಸಿನಿಮಾ ಹೇಗಿದೆ? ಸಿನಿ ರಸಿಕರ ನಿರೀಕ್ಷೆ ತಲುಪಿದ್ಯಾ? ಇಲ್ಲಿದೆ ನೋಡಿ ವಿಮರ್ಶೆ....
ಪ್ರಿಯಾ ಕೆರ್ವಾಶೆ
ಲೈಫಲ್ಲಿ ಕೆಲವೊಂದು ಸಂಗತಿ ಕಣ್ಣಮುಂದೆಯೇ ಇದ್ದರೂ ನಾವು ಅದಕ್ಕಾಗಿ ಊರೆಲ್ಲ ಹುಡುಕಾಡ್ತೀವಿ. ಒಂದು ಟರ್ನಿಂಗ್ ಪಾಯಿಂಟ್‌ನಲ್ಲಿ ನಾವು ಹುಡುಕುತ್ತಿದ್ದದ್ದು ಇದಕ್ಕೋಸ್ಕರವೇ ಅಂತ ಜ್ಞಾನೋದಯ ಆಗುತ್ತೆ. ಅಧ್ಯಾತ್ಮದಲ್ಲಿ ಇದು ದೇವರ ಹುಡುಕಾಟ. ಯೌವನದಲ್ಲಿ ಪ್ರೀತಿಯೇ ದೇವರು. ರೈಡಿಂಗ್ ಇಂಥದ್ದೊಂದು ಪ್ರೀತಿಯ ಕತೆ. ಇಲ್ಲಿ ಬಾಲ್ಯದ ಎಳೆ ಕತೆಗೆ ಬೇರಿನಂತಿದೆ. ಯೌವನದಲ್ಲಿ ಈ ಪ್ರೀತಿ ಚಿಗುರಿ ಹೆಮ್ಮರವಾಗುವ ಬಗೆಯನ್ನು ಆಗ್ರ್ಯಾನಿಕ್ ಆಗಿ ನಿರೂಪಿಸುವ ಪ್ರಯತ್ನವನ್ನು ನಿರ್ದೇಶಕ ವಿಜಯ ಕುಮಾರ್ ಕೊಂಡ ಮಾಡಿದ್ದಾರೆ. ಪಾತ್ರಗಳ ವೈಭವೀಕರಣ ಕಡಿಮೆ. ಹೀಗಾಗಿ ಕಂಟೆಂಟ್‌ಗೆ ನ್ಯಾಯ ಸಿಕ್ಕಿ ನೀಟ್ ಫಿನಿಷಿಂಗ್ ಕಾಣುತ್ತೆ. ನಿಖಿಲ್ ಪಾತ್ರದ ಹೆಸರು ಕಿಟ್ಟಿಮತ್ತು ಸೂರ್ಯ. ನಾಯಕಿ ಕಾಶ್ಮೀರಾ ಅವರದ್ದು ಚಿನ್ನು ಮತ್ತು ಸೌಮ್ಯಾ ಪಾತ್ರ. ಹೆಸರು ಎರಡಿದ್ದರೂ ಪಾತ್ರ ಒಂದೇ. ಚಿನ್ನು ಮತ್ತು ಕಿಟ್ಟಿಗೆ ಅನಾಥಾಶ್ರಮದಲ್ಲಿ ಕಳೆದ ಬಾಲ್ಯ, ಬದುಕಿನ ಕನಸು, ಯೌವನದ ಒಂದು ಹಂತದಲ್ಲಿ ಬದುಕಿಗೆ ಟರ್ನಿಂಗ್ ನೀಡುತ್ತೆ. ಆಮೇಲೆ ನಾಯಕ, ನಾಯಕಿಯನ್ನು ಕಂಗೆಡಿಸುವ, ಬೇಯಿಸುವ ಪ್ರೀತಿಯ ರೋಲರ್ ಕೋಸ್ಟರ್. ಮುಂದೆ ಟರ್ನಿಂಗ್ ಮೇಲೆ ಟರ್ನಿಂಗ್ ಇರುವ ಅಪಘಾತ ವಲಯ. ಕೊನೆಗೆ ಈ ಜರ್ನಿ ಹೋಗಿ ನಿಲ್ಲುವುದು ಎಲ್ಲಿಗೆ ಅನ್ನುವುದನ್ನು ತಿಳಿಯಲು ರೈಡಿಂಗ್ ಸಿನಿಮಾವನ್ನು ನೋಡಬೇಕು.
Nikhil Kumar About Rider: ರೈಡರ್ ಸಿನಿಮಾದ ಈ ಹಾಡು ನಿಖಿಲ್ ಪತ್ನಿ ರೇವತಿಗೂ ಫೇವರೇಟ್undefined
ತಾರಾಗಣ : ನಿಖಿಲ್ ಕುಮಾರಸ್ವಾಮಿ, ಕಾಶ್ಮೀರ ಪರದೇಸಿ, ಚಿಕ್ಕಣ್ಣ, ಗರುಡ ರಾಮ್, ರಾಜೇಶ್ ನಟರಂಗ, ಅಚ್ಯುತ, ಶಿವರಾಜ್ ಕೆ ಆರ್ ಪೇಟೆ, ಶೋಭರಾಜ್
ನಿರ್ದೇಶನ: ವಿಜಯ ಕುಮಾರ್ ಕೊಂಡ
ರೇಟಿಂಗ್: 4
ನಿಖಿಲ್ ಡ್ಯಾನ್ಸ್, ಫೈಟ್‌ಗಳ ಜೊತೆಗೆ ಆ್ಯಕ್ಟಿಂಗ್‌ನಲ್ಲೂ ಮಿಂಚಿದ್ದಾರೆ. ಗಾಢ ವಿಷಾದವನ್ನು ಕಣ್ಣುಗಳಲ್ಲೇ ದಾಟಿಸುವ ಕಾಶ್ಮೀರಾ ಅವರದು ಸಹಜ, ಗಮನ ಸೆಳೆಯುವ ಅಭಿನಯ. ಚಿಕ್ಕಣ್ಣ, ಶಿವರಾಜ್ ಕೆ ಆರ್ ಪೇಟೆ ಅವರ ಹಾಸ್ಯ ರುಚಿಗೆ ತಕ್ಕಷ್ಟಿದೆ. ಎಮೋಶನ್ ಗುಪ್ತಗಾಮಿನಿಯಾಗಿ ಹರಿಯುತ್ತದೆ. ನಡುವೆ ರೌಡಿಸಂನ ಖಾರವೂ ಸೇರಿಕೊಂಡಿದೆ. ಗರುಡ ರಾಮ್ ಕೆಲವೇ ಸೀನ್‌ಗಳಲ್ಲಿ ಕಾಣಿಸಿಕೊಂಡರೂ ಅವರ ಗಡುಸು ದನಿ ಸಿನಿಮಾ ಮುಗಿದ ಮೇಲೂ ಕಿವಿಯಲ್ಲಿರುತ್ತೆ. ಹಾಡು, ಫೈಟ್‌ಗಳಲ್ಲಿ ಸಿನಿಮಾಟೋಗ್ರಾಫರ್ ಶ್ರೀಶ ಕುಡುವಳ್ಳಿ ಕೈಚಳಕ ಎದ್ದು ಕಾಣುತ್ತದೆ. ಮನರಂಜನೆ, ಸೆಂಟಿಮೆಂಟು, ನಿಷ್ಕಲ್ಮಶ ಪ್ರೀತಿ, ಹಾಸ್ಯ ಎಲ್ಲವೂ ಹದವಾಗಿ ಬೆರೆತು ಚಿತ್ರವನ್ನು ನೋಡೆಬಲ್ ಆಗಿಸಿದೆ. ಚಿತ್ರದ ಕೊನೆ ಕೊಂಚ ಹಳತರಂತೆ, ಅಂದುಕೊಂಡಂತೆ ಇದ್ದರೂ ಅದೊಂದು ಕೊರತೆಯಾಗಿ ಕಾಣುವುದಿಲ್ಲ. ಎರಡೂವರೆ ಗಂಟೆಗಳ ಈ ಜರ್ನಿ ಒಳ್ಳೆಯ ಅನುಭವ ಕಟ್ಟಿಕೊಡುತ್ತೆ ಎನ್ನಲಡ್ಡಿಯಿಲ್ಲ.