
ರಾಜೇಶ್ ಶೆಟ್ಟಿ
ಸಿನಿಮಾ ತಯಾರಿಕೆಯ ತಂತ್ರಗಳನ್ನು ಶಾಲೆಯಲ್ಲಿ ಶಾಸ್ತ್ರಬದ್ಧವಾಗಿ ಕಲಿತು ಬಂದಿರುವ ಯುವ ಸಿನಿಮಾ ವ್ಯಾಮೋಹಿಗಳ ತಂಡ ರೂಪಿಸಿರುವ ಸಿನಿಮಾ ಇದು. ಈ ಸಿನಿಮಾದ ಮೇಕಿಂಗ್‌ನಲ್ಲಿ ಶ್ರದ್ಧೆ, ಸಿನಿಮಾ ಪ್ರೀತಿ, ಹೊಸತನದ ತುಡಿತ ಕಾಣಿಸುತ್ತದೆ. ನಾಲ್ಕೈದು ಹುಡುಗರು ಸೇರಿಕೊಂಡು ತುಂಬಾ ಆಸೆಯಿಂದ ಈ ಸಿನಿಮಾ ಮಾಡಿರುವುದು ಸಿನಿಮಾದ ದೃಶ್ಯಗಳಲ್ಲಿ ಅರ್ಥ ಮಾಡಿಕೊಳ್ಳಬಹುದು.
ನಿರ್ದೇಶನ: ಪ್ರೇರಣಾ ಅಗರ್‌ವಾಲ್
ತಾರಾಗಣ: ಕಾವ್ಯ ಶೆಟ್ಟಿ, ದೀಪಮ್ ಕೊಹ್ಲಿ, ಶಿವಾನಿ ಆರ್ ಬಲ್ಲಾ, ಹನುಮಂತೇಗೌಡ, ಡ್ಯಾನಿಷ್ ಸೇಠ್, ಭವಾನಿ ಪ್ರಕಾಶ್, ಕಾಳಿ ಪ್ರಸಾದ್, ಸಿದ್ದಾಥ್‌ರ್ ಮಾಧ್ಯಮಿಕ, ಭರತ್
ರೇಟಿಂಗ್ -3
ಮಕ್ಕಳನ್ನು ಕಿಡ್ನಾಪ್ ಮಾಡಿ ಕೆಟ್ಟಕೆಲಸಗಳಿಗೆ ದೂಡಿ ಮುಗ್ಧ ಮನಸ್ಸು ನೋಯಿಸುವ ಕತೆ ಎಂದು ಮೇಲ್ನೋಟಕ್ಕೆ ಅನ್ನಿಸಿದರೂ ಈ ಸಿನಿಮಾದ ಅಂತರಾಳದಲ್ಲಿ ಮನುಷ್ಯನ ಪಾಪಪ್ರಜ್ಞೆ ಮತ್ತು ಕರ್ಮ ಸಿದ್ಧಾಂತ ಗೋಚರಿಸುತ್ತದೆ. ಇಷ್ಟವಿಲ್ಲದೆ ಕೆಟ್ಟಕೆಲಸ ಮಾಡಬೇಕಾದ ಒಬ್ಬ ವ್ಯಕ್ತಿಯ ಆಂತರ್ಯವನ್ನು ಸಾಧ್ಯವಾದಷ್ಟುಮಟ್ಟಿಗೆ ಪ್ರೇಕ್ಷಕರಿಗೆ ದಾಟಿಸಲು ಯತ್ನಿಸಿರುವುದು ದೀಪಮ್ ಕೊಹ್ಲಿ. ಈ ಯುವ ನಟನ ಆತಂಕಗಳು, ಕೋಪ, ಬೇಸರ ಎಲ್ಲವೂ ಅವರ ಮುಖಭಾವದಲ್ಲಿ ದಾಟುತ್ತದೆ. ತಾನು ಮಾಡಿದ ಕರ್ಮಕ್ಕೆ ತಕ್ಕ ಪ್ರತಿಫಲ ಸಿಕ್ಕೇ ಸಿಗುತ್ತದೆ ಎಂಬುದನ್ನು ಅತ್ಯಂತ ಸ್ಪಷ್ಟವಾಗಿ ನಿರ್ದೇಶಕರು ಹೇಳಿದ್ದಾರೆ.
ನಿರ್ದೇಶಕಿಗೆ ತಾನು ಹೇಳಬೇಕಾದ ಕತೆ ಏನು ಮತ್ತು ಅದನ್ನು ಹೇಗೆ ಹೇಳಬೇಕು ಎಂದು ತಿಳಿದಿದೆ. ಅವರು ಅತ್ಯಂತ ಜೀವನಕ್ಕೆ ಆಗುವ ರೀತಿಯಲ್ಲಿ ಸಿನಿಮಾ ತೋರಿಸಿದ್ದಾರೆ. ಎಲ್ಲೂ ಯಾವುದನ್ನೂ ವೈಭವೀಕರಿಸಲು ಹೋಗಿಲ್ಲ. ಇಲ್ಲಿ ಎಲ್ಲವೂ ನಾವು ನೋಡಿರಬಹುದಾದ ವ್ಯಕ್ತಿಗಳು, ನಾವು ಅಡ್ಡಾಡಿರಬಹುದಾದ ಜಾಗಗಳು. ಡಾನ್‌ಗಳು ಕೂಡ ಸಾಮಾನ್ಯರಂತೆಯೇ ಇರುತ್ತಾರೆ.
ಮಕ್ಕಳ ಕಿಡ್ನಾಪ್ ಕತೆ ಇಟ್ಟುಕೊಂಡು ವಿಸ್ತಾರವಾದ ಹೊಳಹುಗಳನ್ನು ಕಟ್ಟಿಕೊಡುವುದು ಯುವ ನಿರ್ದೇಶಕಿ ಪ್ರೇರಣಾರ ಹೆಚ್ಚುಗಾರಿಕೆ. ಅವರಿಗೆ ಸೂಕ್ತವಾಗಿ ಸಾಥ್ ಕೊಟ್ಟಿರುವುದು ಛಾಯಾಗ್ರಾಹಕ ಸಮೀರ್ ದೇಶಪಾಂಡೆ, ಸಂಗೀತ ನಿರ್ದೇಶಕ ಜೀತ್ ಸಿಂಗ್. ನಟನೆಯಲ್ಲಿ ಅಚ್ಚರಿ ಹುಟ್ಟಿಸುವುದು ಕಾಳಿ ಪ್ರಸಾದ್, ಕಿಶೋರಿ, ಭವಾನಿ ಪ್ರಕಾಶ್. ಕತೆಯನ್ನು ಕಟ್ಟಿಕೊಟ್ಟಿರುವ ರೀತಿ ವಿಶೇಷವಾಗಿದೆ ಮತ್ತು ಈ ಕಥಾಜಗತ್ತನ್ನು ಪ್ರತಿಯೊಬ್ಬರು ನಟರೂ ಶ್ರೀಮಂತಗೊಳಿಸಿರುವುದೇ ಈ ಸಿನಿಮಾದ ಗೆಲುವು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.