
ಆದಾಯಕ್ಕಿಂತ ಖರ್ಚು ಜಾಸ್ತಿಯಾಗಿ, ಕಿಸೆಗಿಂತ ಆಸೆ ದೊಡ್ಡದಾದರೆ ಮನುಷ್ಯ ಎಂಥೆಂಥಾ ಪ್ರಮಾದಗಳನ್ನು ಎದುರಿಸಬೇಕಾಗುತ್ತದೆ ಎಂಬುದೇ ಈ ಚಿತ್ರದ ಕಥಾಹಂದರ. ಸುಲಭವಾಗಿ ಸಿರಿವಂತರಾಗುವ ದುರಾಸೆಗೆ ಬಿದ್ದು ಸಾಲದ ಸುಳಿಯಲ್ಲಿ ಸಿಲುಕುವ ಯುವಕರ ಪರದಾಟವನ್ನು ಹಾಸ್ಯ ಧಾಟಿಯಲ್ಲಿ ಕಟ್ಟಿಕೊಡುವ ಯತ್ನ ಈ ಸಿನಿಮಾ.
ಹಳ್ಳಿಯ ಗೂಡು ಬಿಟ್ಟು ರಾಜಧಾನಿಗೆ ವಲಸೆ ಬರುವ ಮೂವರು ಹಳ್ಳಿ ಪ್ರತಿಭೆಗಳ ಸುತ್ತ ಇಡೀ ಚಿತ್ರ ಗಿರಕಿ ಹೊಡೆಯುತ್ತದೆ. ಕಣ್ಣು ತುಂಬಾ ಕೋಟಿ ಕೋಟಿ ಹಣದ ಕನಸು ಹೊತ್ತು ಬರುವ ಈ ಯುವಕರು, ವಾಸ್ತವದ ನೆಲೆಗಟ್ಟಿನಲ್ಲಿ ಕೈಸುಟ್ಟುಕೊಂಡು, ಸಾಲದ ಬೆಟ್ಟ ಹೊತ್ತು ದಿಕ್ಕೆಟ್ಟು ನಿಲ್ಲುವ ಸನ್ನಿವೇಶಗಳೇ ಈ ಸಿನಿಮಾ ಜೀವಾಳ. ಆರಂಭದಲ್ಲಿ ಸಾಲಗಾರರನ್ನೆಲ್ಲ ಒಗ್ಗೂಡಿಸಿ ಸಂಘಟಿಸುವ ಸಾರಾಂಶದೊಂದಿಗೆ ಸಾಗುವ ಚಿತ್ರಕಥೆ, ದ್ವಿತೀಯಾರ್ಧ ತಲುಪುವಷ್ಟರಲ್ಲಿ ಮೂಲ ಗುರಿ ತಪ್ಪುತ್ತದೆ. ಆದರೆ ಪಾತ್ರಧಾರಿಗಳ ಹಳ್ಳಿಗಾಡಿನ ಸಂಭಾಷಣೆ, ಮ್ಯಾನರಿಸಂ ಮತ್ತು ಎಡವಟ್ಟು ವರ್ತನೆಗಳು ನಗೆ ಮೂಡಿಸುತ್ತವೆ.
ಚಿತ್ರ: ಸಾಲಗಾರರ ಸಹಕಾರ ಸಂಘ
ನಿರ್ದೇಶನ: ವಿಕ್ರಂ ಧನಂಜಯ
ತಾರಾಗಣ: ಲೋಕೇಶ್, ಕೆಂಪೇಗೌಡ, ಪ್ರವೀಣ್, ಜಾಲಿ ಜ್ಯಾಕ್, ರಕ್ಷಿತಾ, ಸೌಮ್ಯಾ
ತರ್ಕಬದ್ಧತೆ ಅಥವಾ ಗಟ್ಟಿಯಾದ ಕಥೆಯ ಜಾಡನ್ನು ಅರಸುವವರಿಗೆ ಈ ಸಿನಿಮಾ ಹಾದಿ ತಪ್ಪಿಸಬಹುದು. ಆದರೆ ಸ್ವಲ್ಪ ನಗುವುದಕ್ಕೆ ಇದರಲ್ಲಿ ಸಾಮಗ್ರಿಗಳಿವೆ. ನಡುವೆ ಬರುವ ಅನಿರೀಕ್ಷಿತ ತಿರುವುಗಳು ಕುತೂಹಲ ಕಾಯ್ದುಕೊಳ್ಳಲು ನೆರವಾಗುತ್ತವೆ. ‘ಆಸೆ ಪಡಬೇಕು, ಆದರೆ ದುರಾಸೆ ಪಟ್ಟರೆ ಉಳಿಗಾಲವಿಲ್ಲ’ ಎಂಬ ಸಂದೇಶವನ್ನು ರವಾನಿಸಲಾಗಿದೆ. ಕೆಂಪೇಗೌಡ, ಲೋಕೇಶ್ ಮತ್ತು ಪ್ರವೀಣ್‌ಕುಮಾರ್ ಅವರ ಪಾತ್ರಗಳು ನಗಿಸುತ್ತವೆ. ಜಾಲಿ ಜಾಕ್, ಪೂಜಾ, ಹಿರಿಯ ಕಲಾವಿದ ಹೊನ್ನವಳ್ಳಿ ಕೃಷ್ಣ ಹಾಗೂ ಲಕ್ಷ್ಮೀ ಸಿದ್ದಯ್ಯ ಪೋಷಕ ಪಾತ್ರಗಳಲ್ಲಿ ಚಿತ್ರಕ್ಕೆ ಸಾಥ್ ನೀಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.