America America 2 Review: ಪತ್ನಿ ಮತ್ತು ಮಾಜಿ ಪ್ರಿಯಕರನನ್ನು ಬಿಟ್ಟು ಗಂಡ ಎಲ್ಲಿಗೆ ಹೋದ? ಸಖತ್ ಟ್ವಿಸ್ಟ್

Published : Sep 12, 2026, 03:30 PM IST
America America 2

ಸಾರಾಂಶ

ಅಮೆರಿಕಾ ಅಮೆರಿಕಾ 2 Review: ನಾಗತಿಹಳ್ಳಿ ಚಂದ್ರಶೇಖರ್‌ ನಿರ್ದೇಶನದ ಈ ಸಿನಿಮಾ ನಗಿಸುತ್ತಾ, ಯೋಚಿಸುವಂತೆ ಮಾಡುತ್ತದೆ. ಪ್ರೀತಿ, ದಾಂಪತ್ಯ ಮತ್ತು ಕುಟುಂಬದ ತಾಕಲಾಟಗಳನ್ನು ಪೃಥ್ವಿ ಅಂಬಾರ್‌, ನಿರೂಪ್‌ ಭಂಡಾರಿ ಹಾಗೂ ಶಾನ್ವಿ ಶ್ರೀವಾಸ್ತವ ಪಾತ್ರಗಳ ಮೂಲಕ ಕಟ್ಟಿಕೊಡಲಾಗಿದೆ.

ಆರ್‌. ಕೇಶವಮೂರ್ತಿ

ಪ್ರಮುಖ ದೃಶ್ಯವೊಂದರಲ್ಲಿ ಗಂಡ, ಹೆಂಡತಿ ಮತ್ತು ಆಕೆಯ ಮಾಜಿ ಪ್ರಿಯಕರ ಮೂವರು ಒಟ್ಟಿಗೆ ಕೂತಿದ್ದಾರೆ. ಗಂಡ ಆದವನಿಗೆ ಆ ಇನ್ನೊಬ್ಬ ತನ್ನ ಪತ್ನಿಯ ಹಳೆಯ ಪ್ರಿಯಕರ ಎಂಬುದು ಗೊತ್ತೇ? ಈಗ ಗಂಡನಿಗೆ ಪೋನ್‌ ಕಾಲ್‌ ಬರುತ್ತದೆ. ತನ್ನ ಪತ್ನಿ ಮತ್ತು ಆಕೆಯ ಮಾಜಿ ಪ್ರಿಯಕರನನ್ನು ಅಲ್ಲೇ ಬಿಟ್ಟು ಪೋನ್‌ ಎತ್ತಿಕೊಂಡು ಹೋಗುವ ಮುನ್ನ ಆತ ಇಬ್ಬರಿಗೂ ಏನು ಹೇಳಬಹುದು... ಎಂದು ಪ್ರೇಕ್ಷಕರು ಯೋಚನೆ ಮಾಡುತ್ತಿರುವಾಗಲೇ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್‌ ಸಖತ್‌ ಕ್ರಿಯೇಟಿವ್‌ ಹಾಗೂ ವ್ಯಂಗ್ಯ ಭರಿತವಾದ ಸರ್ಪ್ರೈಸ್‌ ಟ್ವಿಸ್ಟ್‌ ಕೊಡುತ್ತಾರೆ. ಪ್ರೇಕ್ಷಕರು ಜೋರಾಗಿ ನಗುತ್ತಾರೆ. ಆ ನಗು ಮೂಡಿಸುವ ಮೌನದಲ್ಲಿ ಆಲೋಚನೆಗೂ ಮುಂದಾಗುತ್ತಾರೆ. ಯಾಕೆಂದರೆ ಇಂದಿನ ಯುವ ಮನಸ್ಸುಗಳು ಮಾತನಾಡಿಕೊಳ್ಳಬೇಕಾದ ವಿಷಯಗಳೇನು ಎಂಬುದನ್ನು ತಮಾಷೆಯಾಗಿಯೇ ಹೇಳಲಾಗಿದೆ.

ಹೀಗೆ ‘ಅಮೆರಿಕಾ ಅಮೆರಿಕಾ 2’ ಸಿನಿಮಾ ಅಲ್ಲಲ್ಲಿ ನಗಿಸುತ್ತಾ, ಯೋಚಿಸುತ್ತಾ, ಆಲೋಚನೆ ಮಾಡುವಂತೆ ಹೇಳುತ್ತಾ ಸಾಗುತ್ತದೆ. ಮೇಷ್ಟ್ರು ವಿದ್ಯಾರ್ಥಿಗಳನ್ನು ಜೊತೆಗೂಡಿಸಿಕೊಂಡು ಹೋಗುವಂತೆ ಪ್ರೇಕ್ಷಕರನ್ನು ತನ್ನ ಜೊತೆಗೆ ಕರೆದುಕೊಂಡು ಹೋಗುವ ಗುಣವನ್ನು ಹೀಗೆ ನಾಗತಿಹಳ್ಳಿ ಚಂದ್ರಶೇಖರ್‌ ತಮ್ಮ ಚಿತ್ರಕ್ಕೆ ಧಾರೆ ಎರೆದಿದ್ದಾರೆ. ಇಷ್ಟಕ್ಕೂ ಆ ಸೀನ್‌ನಲ್ಲಿ ಗಂಡನ ಪಾತ್ರಧಾರಿ ಹೇಳಿದ್ದೇನು ಎಂಬುದನ್ನು ನೀವು ಸಿನಿಮಾದಲ್ಲೇ ನೋಡಬೇಕು.

ಹಳೆಯದರಿಂದಲೇ ಹೊಸದು ಹುಟ್ಟಿಕೊಳ್ಳುತ್ತವೆ ಎನ್ನುವ ಈ ಸಿನಿಮಾ ಪ್ರೇಕ್ಷಕನಿಗೆ ಭಾವನಾತ್ಮಕ ಅನುಭವ ನೀಡುತ್ತದೆ. ಮೇಲ್ನೊಟಕ್ಕೆ ಹೆಣ್ಣಿನ ಸುತ್ತಾ ಸಾಗುವ ಕತೆಯಾಗಿ ಕಂಡರೂ ಇದು ಕುಟುಂಬದ ಕತೆ. ತಪ್ಪಿತಸ್ಥನ ಸ್ಥಾನದಲ್ಲಿ ನಿಂತಿರುವ ತಂದೆ, ಹೊರ ಜಗತ್ತಿನಲ್ಲಿ ದುಡಿಯಲೇ ಬೇಕಾದ ಅನಿವಾರ್ಯತೆ, ಭಾವನೆಗಳೇ ಇಲ್ಲದ ಆಕೆಯ ಗಂಡ, ಪ್ರತಿಯೊಂದನ್ನು ಕೇರ್‌ ಮಾಡುವ ಗಾಢ ಪ್ರೇಮಿ, ಬಿಡುಗಡೆ ಬಯಸುವ ಹೆಣ್ಣಿನ ತಾಕಲಾಟಗಳು...

ಚಿತ್ರ: ಅಮೆರಿಕಾ ಅಮೆರಿಕಾ 2

ನಿರ್ದೇಶನ: ನಾಗತಿಹಳ್ಳಿ ಚಂದ್ರಶೇಖರ್‌

ತಾರಾಗಣ: ಪೃಥ್ವಿ ಅಂಬಾರ್‌, ನಿರೂಪ್‌ ಭಂಡಾರಿ, ಶಾನ್ವಿ ಶ್ರೀವಾಸ್ತವ, ಮಂಡ್ಯ ರಮೇಶ್‌, ಮಾಲತಿ ಸುಧೀರ್‌, ರೀತು ಸಿಂಗ್‌

ರೇಟಿಂಗ್‌: 3

ಈ ಎಲ್ಲವನ್ನೂ ಮೂರು ಪಾತ್ರಗಳ‍ ಮೂಲಕ ಅಚ್ಚುಕಟ್ಟಾಗಿ ಪ್ರಸ್ತುತ ಪಡಿಸಿದ್ದಾರೆ ನಿರ್ದೇಶಕರು. ಚಿತ್ರದಲ್ಲಿ ಬರುವ ನುಡಿ (ಶಾನ್ವಿ ಶ್ರೀವಾಸ್ತವ), ನಿನಾದ್‌ (ನಿರೂಪ್‌ ಭಂಡಾರಿ), ನೀಲ್‌ (ಪೃಥ್ವಿ ಅಂಬಾರ್‌), ಸಿರಿ (ರೀತು ಸಿಂಗ್‌) ಪಾತ್ರಧಾರಿಗಳು ಯಾರೋ ಹೊರಗಿನವರು ಅನಿಸಲ್ಲ. ಅವು ನಾವೇ ಅನಿಸುವ ಮಟ್ಟಿಗೆ ಪ್ರೇಕ್ಷನಿಗೆ ಪಾತ್ರಗಳು ಸನಿಹವಾಗುತ್ತವೆ. ಶ್ರೀ ಕ್ರೇಜಿಮೈಂಡ್ಸ್‌ ಸಂಕಲನ, ಮನೋ ಮೂರ್ತಿ ಸಂಗೀತ, ಎಸ್‌.ಕೆ.ರಾವ್‌ ಛಾಯಾಗ್ರಾಹಣ ನಿರ್ದೇಶಕರ ಕತೆ ಕಟ್ಟುವಿಗೆಗೆ ಸಂಪೂರ್ಣವಾಗಿ ಶಕ್ತಿ ತುಂಬಿವೆ. ತಂಪಾಗಿ ಕಾಡುವ ಭಾವನೆಗಳ ಸಿನಿಮಾ ನೋಡಬೇಕು ಎನಿಸುವವರಿಗೆ ‘ಅಮೆರಿಕಾ ಅಮೆರಿಕಾ 2’ ಸಿನಿಮಾ ಉತ್ತಮ ಆಯ್ಕೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ರಾಜ್ ಬಿ. ಶೆಟ್ಟಿಗೆ ಕಾಡ್ತಿದೆ ಆ ನಿಗೂಢ ರಹಸ್ಯ.. 'ರಕ್ಕಸಪುರದೊಳ್' ಪೊಲೀಸ್‌ಗೆ ಕಂಡ ಅತೀಂದ್ರಿಯ ತಿರುವು!
IMDbಯಲ್ಲಿ ಟಾಪ್, 260 ಕೋಟಿ ಕಲೆಕ್ಷನ್: ಕನ್ನಡದಲ್ಲೂ ಸ್ಟ್ರೀಮಿಂಗ್ ಆಗ್ತಿದೆ ಸೂರ್ಯರ ಈ ಸಿನಿಮಾ!