
ಹುಡುಗಿಯರಿಗೆ ಯಾಮಾರಿಸೋದು ಸುಲಭ ಅಂದುಕೊಂಡ ಹುಡುಗರಿಗೆ ಸಣ್ಣ ಎಚ್ಚರಿಕೆಯಂತಿದೆ ಈ ಚಿತ್ರ. ಒಂದು ಸೆನ್ಸೇಶನ್ ನ್ಯೂಸ್‌ಗಾಗಿ ಕಣ್ಣಲ್ಲಿ ಎಣ್ಣೆ ಬಿಟ್ಕೊಂಡು ಕಾಯೋ ಜಮಾನ ಇದು. ಅಂಥದ್ರಲ್ಲಿ ರಾತ್ರಿ ಕಳೆದು ಬೆಳಗಾಗೋದ್ರೊಳಗೆ ಯುವಕನೊಬ್ಬನ ಮರ್ಮಾಂಗ ಕಳೆದುಹೋಗಿದೆ ಅಂತ ಗೊತ್ತಾದ್ರೆ ಮಾಧ್ಯಮಗಳು, ಸೋಷಿಯಲ್ ಮೀಡಿಯಾಗಳು, ಜನರು ಇದನ್ನು ಹೇಗೆ ಟ್ರೀಟ್ ಮಾಡಬಹುದು ಅನ್ನೋ ಕಲ್ಪನೆಗೂ ಈ ಸಿನಿಮಾದಲ್ಲಿ ರೆಕ್ಕೆ ಪುಕ್ಕ ಬಂದಿದೆ.
ಹೆಣ್ಮಕ್ಕಳ ಪರವಾಗಿ ಒಂದು ಗಂಟೆಯ ಕತೆ ಸಿನಿಮಾ ಮಾಡಿದ್ದೇನೆ : ರಾಘವ ದ್ವಾರ್ಕಿ
ಉಳಿದಂತೆ ಅಪಾರ ಜೀವನೋತ್ಸಾಹದ ಮೆಡಿಕಲ್ ಸ್ಟೂಡೆಂಟ್ ಒಬ್ಬಳನ್ನು ಪಟಾಯಿಸೋ ಶ್ರೀಮಂತ ಹುಡುಗ ಅವಳನ್ನು ತನಗೆ ಬೇಕಾದಂತೆ ಬಳಸಿಕೊಂಡು ಯಾಮಾರಿಸಲು ಪ್ರಯತ್ನ ಪಡುತ್ತಾನೆ. ಆದರೆ ಆ ಜಾಣ ಹುಡುಗಿ ಅವನಿಗೆ ಮಾತ್ರವಲ್ಲ, ಇಂಥಾ ಹುಡುಗರಿಗೆಲ್ಲ ಹೇಗೆ ಎಚ್ಚರಿಕೆಯ ಸಂದೇಶ ರವಾನಿಸುತ್ತಾಳೆ ಅನ್ನೋದನ್ನು ಈ ಸಿನಿಮಾದಲ್ಲಿ ನೋಡಬಹುದು.
ಡಬ್ಬಲ್ ಮೀನಿಂಗ್ ಮಾತುಗಳು ಹೇರಳವಾಗಿವೆ. ಅವನ್ನು ಹಾಸ್ಯ ಅಂತ ಪರಿಗಣಿಸೋದು ಬಿಡೋದು ನಿಮಗೆ ಬಿಟ್ಟದ್ದು. ಪ್ರಕಾಶ್ ತುಮಿನಾಡ್ ಟೈಮಿಂಗ್‌ಗೆ ನಗು ಬರಬಹುದು, ನಕ್ಕು ಹಗುರಾಗಿ. ಕೊನೆಯ ಹತ್ತು ನಿಮಿಷದಲ್ಲಿ ನಿರ್ದೇಶಕರು ಏನನ್ನು ಹೇಳಬೇಕೋ ಅದನ್ನು ಹೇಳಿದ್ದಾರೆ. ಒಂದೂಕಾಲು ಗಂಟೆ ನಾನ್‌ವೆಜ್ ಜೋಕ್‌ಗೆ ನಗು ಬರದೇ ತಲೆ ಕೆರೆದುಕೊಳ್ಳುತ್ತಾ, ಇದ್ರಲ್ಲಿ ಕತೆ ಎಲ್ಲಿದೆ ಗುರೂ ಅಂತ ಗೋಳಾಡುವವರಿಗೆ ಲಾಸ್ಟ್ 10 ನಿಮಿಷದಲ್ಲಿ ನಿರ್ದೇಶಕರು ಕೆನ್ನೆಗೆ ಬಾರಿಸುವಷ್ಟುತೀವ್ರತೆಯಲ್ಲಿ ಕಥೆ ಹೇಳಿದ್ದಾರೆ.
ಪೋಸ್ಟರ್, ಟ್ರೇಲರ್ ಮೂಲಕ ವೈರಲ್ ಆಗುತ್ತಿದೆ 'ಒಂದು ಗಂಟೆಯ ಕಥೆ'!
ಹತ್ತು ನಿಮಿಷದ ಕಥೆಯನ್ನು ಇಷ್ಟೊಂದು ಸುತ್ತಿ ಬಳಸಿ ಹೇಳ್ಬೇಕಾ ಅಂತ ಕೇಳೋ ಹಾಗಿಲ್ಲ. ಬದಲಿಗೆ ಸ್ಟ್ರಾಂಗ್ ಡೋಸ್‌ಅನ್ನು ಏಕಾಏಕಿ ಕೊಟ್ಟರೆ ತಡೆದುಕೊಳ್ಳೋ ಶಕ್ತಿ ಇದ್ಯಾ ಅಂತ ಎದೆ ಮುಟ್ಕೊಂಡು ನಿಮಗೆ ನೀವೇ ಕೇಳ್ಕೊಳ್ಳಿ. ಅಲ್ಲಲ್ಲಿ ಸೂರ್ಯಕಾಂತ್ ಅವರ ಕ್ಯಾಮರ ವರ್ಕ್ನ ಶ್ರಮ ಕಾಣುತ್ತದೆ. ಪಾಪ್‌ಕಾರ್ನ್ ತಿಂದು ಮುಗಿಸೋದ್ರೊಳಗೆ ಸಿನಿಮಾ ಮುಗಿಯುತ್ತೆ ಅನ್ನೋದು ಮತ್ತೊಂದು ಸಮಾಧಾನ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.