ಒಂದು ಕಾಡು, ದೊಡ್ಡ ಬಂಗಲೆ, ಒಂದು ಅಥವಾ ಎರಡು ಆತ್ಮಗಳು, ಸಿನಿಮಾ ಪೂರ್ತಿ ಹಿಂಬಾಲಿಸುವ ಕಪ್ಪು ನೆರಳು, ಮೂರು ಅಥವಾ ನಾಲ್ಕು ಪಾತ್ರಧಾರಿಗಳು... ಇಷ್ಟಿದ್ದರೆ ಕನ್ನಡದಲ್ಲಿ ಯಾವುದೇ ಕಷ್ಟವಿಲ್ಲದೆ ಹಾರರ್ ಸಿನಿಮಾ ಮಾಡಬಹುದು! ಇದಕ್ಕೆ ಅತ್ಯುತ್ತಮ ಉದಾಹರಣೆ ‘ಸ್ಕೇರಿ ಫಾರೆಸ್ಟ್’.
ಆರ್. ಕೇಶವಮೂರ್ತಿ
ಭಯ ಮತ್ತು ಕುತೂಹಲವೇ ಹಾರರ್ ಚಿತ್ರಗಳ ಮೂಲ ಬಂಡವಾಳ ಎನಿಸಿದರೂ ಹಿನ್ನೆಲೆ ಸಂಗೀತಗಾರನಿಗೂ ಹೆಚ್ಚು ಸ್ಕೋಪ್ ಇರುತ್ತದೆ. ಇಲ್ಲೂ ಕೂಡ ತೆರೆ ಮೇಲೆ ಕಾಣಿಸಿಕೊಂಡವರಿಗಿಂತ ತೆರೆ ಹಿಂದೆ ಕೆಲಸ ಮಾಡಿದವರ ಶ್ರಮವೇ ಹೆಚ್ಚು ಕಾಣುತ್ತದೆ. ಹಾಡು, ಸಂಗೀತ, ರೀರೆಕಾರ್ಡಿಂಗ್... ಈ ಮೂರು ಚಿತ್ರದ ಹೈಲೈಟ್ಸ್ ಎನ್ನಬಹುದು.
ತಾರಾಗಣ: ಜಯಪ್ರಭು, ಜೀತ್ ರಾಯ್ದತ್, ಯಶ್ ಪಾಲ…ಶರ್ಮ, ಟೀನಾ ಪೊನ್ನಪ್ಪ, ಆಮ್ ರೀನ್, ಕಲ್ಪನಾ, ಬೇಬಿ ಪೂಜಾ
ನಿರ್ದೇಶನ: ಸಂಜಯ್ ಅಭೀರ್
ನಿರ್ಮಾಣ: ಜಯಪ್ರಭು ಆರ್ ಲಿಂಗಾಯತ್
ಸಂಗೀತ: ಆದಿ, ಎಲ… ಕೆ ಲಕ್ಷ್ಮೀಕಾಂತ್
ಛಾಯಾಗ್ರಾಹಣ: ನರೇನ್ ಗೇಡಿಯಾ
ಇಬ್ಬರು ಹುಡುಗರು. ಮೂವರು ಹುಡುಗಿಯರು ಜತೆಯಾಗಿ ಗಿಡ ಮತ್ತು ಮರಗಳ ಮೇಲಿನ ಅಧ್ಯಯನಕ್ಕಾಗಿ ಕಾಡಿಗೆ ಹೋಗುತ್ತಾರೆ. ವಿಶೇಷವಾದ ಔಷಧಿ ಗುಣವುಳ್ಳ ಗಿಡ-ಮರಗಳನ್ನು ಪತ್ತೆ ಹಚ್ಚಿ ಅವುಗಳ ಮೇಲೆ ಪ್ರಯೋಗ ಮಾಡುವುದು ಇವರ ಉದ್ದೇಶ. ಹೀಗೆ ಕಾಡಿಗೆ ಹೋದವರ ಪೈಕಿ ಹುಡುಗಿಯೊಬ್ಬಳಿಗೆ ಮಧ್ಯ ವಯಸ್ಕ ವ್ಯಕ್ತಿ ಪರಿಚಯವಾಗುತ್ತಾನೆ. ಆತ ತನಗೆ ಕಾಡಿನಲ್ಲಿ ದೊಡ್ಡ ಬಂಗಲೆ ಇದೆಯೆಂದು, ಆ ಕಾಡಿನಲ್ಲಿ ಹಲವಾರು ಮೆಡಿಸನ್ ಪ್ಲಾಂಟ್‌ಗಳಿವೆಯೆಂದು ಹೇಳಿ ತನ್ನ ಬಂಗಲೆಯ ಬೀಗದ ಕೀ ಕೊಟ್ಟು ಅದನ್ನು ಬಳಸಿಕೊಳ್ಳುವಂತೆ ಹೇಳುತ್ತಾನೆ. ಕಾಡು ಮತ್ತು ಬಂಗಲೆಯನ್ನು ನಂಬಿಕೆ ಅಲ್ಲಿಗೆ ಈ ತಂಡ ಹೋಗುತ್ತದೆ. ಬಂಗಲೆಯ ಕೀ ಪಡೆದ ಹುಡುಗಿ ಯಾರು, ಆಕೆ ಎಲ್ಲಿ ಹೋದಳು, ಕೊಲೆಯಾದಳಾ, ಆಕೆ ಆತ್ಮನಾ, ಆ ಮಧ್ಯ ವಯಸ್ಕ ಯಾರು ಇತ್ಯಾದಿ ಪ್ರಶ್ನೆಗಳ ಸುತ್ತ ಸಿನಿಮಾ ಸಾಗುತ್ತದೆ.
ಆ ಕಾಡು ಮತ್ತು ಬಂಗಲೆಯಲ್ಲಿ ಆತ್ಮಗಳು ಯಾಕಿವೆ ಎಂಬುದನ್ನು ತಿಳಿಯಬೇಕು ಎಂದರು ನೀವು ‘ಸ್ಕೇರಿ ಫಾರೆಸ್ಟ್’ ಸಿನಿಮಾ ನೋಡಬೇಕು. ಚಿತ್ರದ ಹೆಸರಿಗೆ ತಕ್ಕಂತೆ ಭಯ ಪಡಿಸುವುದಿಲ್ಲ. ನೋಡುಗರಿಗೆ ಯಾವುದೇ ರೀತಿಯ ತೊಂದರೆ ಕೊಡದಂತೆ ನಿರ್ದೇಶಕರು, ತಮ್ಮ ಪಾಡಿಗೆ ತಾವು ಕತೆ ನಿರೂಪಿಸುತ್ತಾ ಹೋಗುತ್ತಾರೆ. ಹೀಗಾಗಿ ಪ್ರೇಕ್ಷಕರು ಹಾಯಾಗಿ ತೆರೆ ಮುಂದೆ ಕೂರಬಹುದು! ಹಾಗೆ ಚಿತ್ರದ ಪ್ರತಿಯೊಂದು ಪಾತ್ರವೂ ತಮ್ಮ ಪಾಡಿಗೆ ತಾವು ನಿರ್ದೇಶಕರು ಹೇಳಿದಂತೆ ತೆರೆ ಮೇಲೆ ಬಂದು ಹೋಗುತ್ತಾರೆ.
ಹಾರರ್ ಸ್ಟೋರಿ ಸ್ಕೇರಿ ಫಾರೆಸ್ಟ್; ಜಯಪ್ರಭು ಸಿನಿಮಾ ಫೆ.26ರಂದು ಬಿಡುಗಡೆ!
ಸಂಗೀತ ನಿರ್ದೇಶಕರಾದ ಆದಿ, ಎಲ…ಕೆ ಲಕ್ಷ್ಮೀಕಾಂತ್ ಅವರು ಹಾಡುಗಳು ಬಂದ ಕೂಡಲೇ ಎಚ್ಚರಗೊಳ್ಳುತ್ತಾರೆ. ಜತೆಗೆ ಪ್ರೇಕ್ಷಕರನ್ನೂ ಎಚ್ಚರಿಸುತ್ತಾರೆ. ಲಕ್ಷ್ಮೀಕಾಂತ್ ಅವರ ಹಿನ್ನೆಲೆ ಸಂಗೀತ ಹಾಗೂ ನರೇನ್ ಗೇಡಿಯಾ ಛಾಯಾಗ್ರಾಹಣ ತಾಂತ್ರಿಕತೆಯಲ್ಲಿ ಹೆಚ್ಚು ಸ್ಕೋರ್ ಮಾಡುತ್ತವೆ. ಪಾತ್ರಧಾರಿಗಳ ಪೈಕಿ ಯಶ್‌ಪಾಲ್ ಶರ್ಮಾ ಹಾಗೂ ಬಂಗಲೆಯಲ್ಲಿ ಕೆಲಸ ಮಾಡುವ ಪಾತ್ರಧಾರಿ ಮಂಗಲ್ ನೋಡುಗರ ನೆನಪಿನಲ್ಲಿ ಉಳಿಯುತ್ತಾರೆ.