ಸಿನಿಮಾ ತೆರೆ ಮೂಡಿದ ಆರಂಭದಲ್ಲೇ ಇಂಥದ್ದೇ ಕತೆ, ಮುಂದೆ ಹೀಗೆ ಸಾಗುತ್ತದೆ ಎನ್ನುವ ಊಹೆಗೆ ದಕ್ಕುವ ಚಿತ್ರಗಳೇ ಬಹು ಪಾಲು. ಆದರೆ, ಮುಂದೆ ಏನಾಗುತ್ತದೆ ಎನ್ನುವ ಗುಟ್ಟು ಬಿಟ್ಟುಕೊಡದೆ ಹಲವು ತಿರುವುಗಳಲ್ಲಿ ಸಾಗಿ ಕೊನೆಯಲ್ಲಿ ಮತ್ತೆಲ್ಲೋ ಹೋಗಿ ಮುಕ್ತಾಯವಾಗುವುದು ‘ನವರತ್ನ’ ಚಿತ್ರದ ತಿರುಳು.
ಅರ್. ಕೇಶವಮೂರ್ತಿ
ಇಲ್ಲಿರುವ ಶೀರ್ಷಿಕೆ ಒಂದು ಕತೆ ಹೇಳುತ್ತದೆ, ಸಿನಿಮಾ ಪೋಸ್ಟರ್ ಮತ್ತೊಂದು ಕತೆ ಹೇಳುತ್ತದೆ. ಆದರೆ, ಸಿನಿಮಾ ನೋಡಿದರೆ ಅಲ್ಲಿ ಇನ್ನೊಂದು ಮಾಫಿಯಾ ಸೇರಿಕೊಂಡು ಆಕಸ್ಮಿಕವಾಗಿ ಪ್ರೇಕ್ಷಕನಿಗೆ ಎದುರಾಗುತ್ತದೆ. ಇತಿಹಾಸ, ಮಾಫಿಯಾ ಮತ್ತು ಚರಿತ್ರೆಯ ನಂಬಿಕೆ ಈ ಮೂರು ಅಂಶಗಳನ್ನು ಒಳಗೊಂಡ ಹೊಸ ಜಾನರ್ ಚಿತ್ರವನ್ನು ನೋಡಿದ ಅನುಭವ ಪ್ರೇಕ್ಷಕನದ್ದು.
ಚಿತ್ರ ವಿಮರ್ಶೆ: ತುಂಡ್ ಹೈಕ್ಳ ಸಾವಾಸ
ಪ್ರತಾಪ್ ರಾಜ್ ಅವರು ಕತೆ, ಚಿತ್ರಕತೆ ಹಾಗೂ ಸಂಭಾಷಣೆ ಬರೆದು ನಿರ್ದೇಶನ ಮಾಡುವ ಜತೆಗೆ ತಾವೇ ನಾಯಕನಾಗಿ ನಟಿಸಿದ್ದಾರೆ. ಅದ್ದೂರಿ ಮೇಕಿಂಗ್ ಇಲ್ಲದೆ, ಕಡಿಮೆ ಪಾತ್ರಗಳ ನೆರಳಿನಲ್ಲಿ ತಮ್ಮ ಕನಸು ರೂಪಿಸಿ ಜಾರಿ ಮಾಡಿದ್ದಾರೆ. ಇವರಿಗೆ ಹೆಚ್ಚು ಬೆನ್ನೆಲುಬಾಗಿ ನಿಲ್ಲುವುದು ಚಿತ್ರದ ಹಾಡುಗಳು ಹಾಗೂ ಮೋಕ್ಷ ಕುಶಾಲ್ ಹಾಗೂ ಅಮಿತ್ ಪಾತ್ರ. ಕುತೂಹಲ ಈ ಚಿತ್ರದ ಪ್ಲಸ್ ಪಾಯಿಂಟ್. ಈ ಚಿತ್ರಕ್ಕೆ ಹಿನ್ನೆಲೆಯಾಗಿ ಒಂದು ಫ್ಲ್ಯಾಷ್ ಬ್ಯಾಕ್ ಕತೆ ಬರುತ್ತದೆ.
ಅದು ಸಾಮ್ರಾಜ್ಯ ವಿಸ್ತರಣೆಯಲ್ಲಿ ಕಂಡ ಸೋಲು-ಗೆಲುವು, ಅವಮಾನ ಮತ್ತು ದ್ವೇಷದ ಕತೆ.
ಆ ಕತೆ ಯಲ್ಲಿ ಬರುವ ಒಂದು ಮುಖ್ಯವಾದ ತಿರುವು ಮುಂದುವರೆದ ಭಾಗವಾಗಿ ತೆರೆ ಮೇಲೆ ಮೂಡುತ್ತದೆ. ನಿರ್ದೇಶಕರು ಹೇಳುವ ಈ ಐತಿಹಾಸಿಕ ಫ್ಲ್ಯಾಷ್ ಬ್ಯಾಕ್ ಆಸಕ್ತಿದಾಯಕವಾಗಿದೆ. ಅದೊಂದು ಕಾಡು. ಅಲ್ಲಿಗೆ ಪೋಟೋಗ್ರಫಿಗಾಗಿ ಹೋಗುವವರು ಯಾರೂ ಮತ್ತೆ ವಾಪಸ್ಸು ಬರಲ್ಲ. ಆ ಕಾಡಿಗೆ ಹೋದವರ ಮಿಸ್ಸಿಂಗ್ ಮಿಸ್ಟ್ರಿ ಪೊಲೀಸ್ ಇಲಾಖೆಗೆ ದೊಡ್ಡ ಸಮಸ್ಯೆ ಆಗುತ್ತದೆ. ಚಿತ್ರದ ನಾಯಕ, ಅವನ ಗೆಳೆಯ ಹಾಗೂ ನಾಯಕಿ ಅದೇ ಕಾಡಿಗೆ ಹೋಗುತ್ತಾರೆ. ನಾಯಕಿಗೆ ಫೋಟೋಗ್ರಫಿ ಮಾಡುವ ಆಸೆ, ನಾಯಕನಿಗೆ ಆ ಕಾಡು ದಾಟಿ ಬೆಂಗಳೂರಿಗೆ ಹೋಗಬೇಕು ಎನ್ನುವ ಗುರಿ.
ಆದರೆ, ನಾಯಕಿ ಕಾಡು ಬಿಟ್ಟು ಬರಲ್ಲ. ಆ ಕಾಡಿನಲ್ಲಿ ಆಕೆ ಏನನ್ನೋ ಹುಡುಕು ತ್ತಿರುವ ಗುಮಾನಿ ನಾಯಕನದ್ದು. ಆಕೆ ಹೇಳುವ ಪಕ್ಷಿ, ರತ್ನಗಳಿಂದ ಕೂಡಿದ ಚಿನ್ನದ ಸರ, ಅದೇ ಕಾಡಿನಲ್ಲಿ ಗುಟ್ಟಾಗಿ ನಡೆಯುತ್ತಿರುವ ಮಾಫಿಯಾ, ಸರಣಿ ಕೊಲೆಗಳು, ನಾಯಕ ಯಾರು, ನಾಯಕಿ ಯಾರು ಎನ್ನುವ ಕುತೂಹಲಕಾರಿ ಅಂಶಗಳು ವಿರಾಮದ ನಂತರ ಬಿಡುಗಡೆಗೊಳ್ಳುತ್ತವೆ. ಇಡೀ ಚಿತ್ರದಲ್ಲಿ ಮೂರು- ನಾಲ್ಕು ನೆರಳುಗಳಿವೆ. ಅದೇ ಚಿತ್ರವನ್ನು ಮುಂದುವರೆಸುತ್ತವೆ. ಅದ್ಭುತ ಮೇಕಿಂಗ್, ದೃಶ್ಯ ವೈಭವ, ತಾಂತ್ರಿಕತೆಯ ಅದ್ದೂರಿತನ ಎಂಬಿತ್ಯಾದಿ ಲೆಕ್ಕಾಚಾರಗಳ ಆಚೆಗೆ ನಿಲ್ಲುವ ಈ ಚಿತ್ರಕ್ಕೆ ಕತೆಯೇ ಆಧಾರ.
ಮೋಕ್ಷ ಕುಶಾಲ್ ಅವರು ತೆರೆ ಮೇಲೆ ಚೆನ್ನಾಗಿ ಕಾಣಿಸುತ್ತಾರೆ. ಭರವಸೆಯ ನಟಿ ಎನಿಸಿಕೊಂಡಿದ್ದಾರೆ. ಪ್ರತಾಪ್ ರಾಜ್, ಮೊದಲ ಪ್ರಯತ್ನದಲ್ಲೇ ಎಲ್ಲ ವಿಭಾಗಗಳಲ್ಲೂ ತಮ್ಮ ಪ್ರತಿಭೆ ತೋರುವ ಶ್ರಮ ಹಾಕಿದ್ದಾರೆ. ಅಮಿತ್ ನಗಿಸುತ್ತಾರೆ.