
ಆರ್ ಕೇಶವಮೂರ್ತಿ
ಯಶ್ (Yash) ನಟನೆಯ ‘ಕೆಜಿಎಫ್ 2’ (KGF Chapter 2) ಸಿನಿಮಾ ಹೇಗಿದೆ, ಚಿತ್ರದಲ್ಲಿ ಏನಲ್ಲ ಇದೆ ಎಂದು ಕೇಳಿದರೆ ಒಂದು ಸಾಲಿನಲ್ಲಿ ಹೇಳುವುದು ಕಷ್ಟ. ಇಲ್ಲಿ ಎಲ್ಲವೂ ಇದೆ. ದೃಶ್ಯ ವೈಭವ, ಮೊನಚು ಮಾತಿನ ಹವಾ, ತಾಂತ್ರಿಕತೆಯ ಮೆರಗು, ನಿರೂಪಣೆಯ ಜಾಣ್ಮೆ, ಪಾತ್ರಧಾರಿಗಳ ಅದ್ಭುತ ಸಂಯೋಜನೆ... ಹೀಗೆ ಸಮಸ್ತವನ್ನು ಅಚ್ಚುಕಟ್ಟಾಗಿ ತುಂಬಿಸಿ ಪ್ರೇಕ್ಷಕರ ಮುಂದಿಟ್ಟಿದ್ದಾರೆ ನಿರ್ದೇಶಕ ಪ್ರಶಾಂತ್ ನೀಲ್ (Prashanth Neel). ಚಾಪ್ಟರ್ 1 ಕತೆಯಲ್ಲಿ ರಾಕಿಭಾಯ್ ದುನಿಯಾ ಕೇಳಿದ್ದ. ಚಾಪ್ಟರ್ 2ನಲ್ಲಿ ಅಂದುಕೊಂಡಂತೆ ದುನಿಯಾ ತನ್ನ ಕೈಗೆ ತೆಗೆದುಕೊಂಡು ರಾಜನಾಗಿದ್ದಾರೆ. ಹಾಗಾದರೆ ರಾಜ ಒಳ್ಳೆಯವನಾ, ಕೆಟ್ಟವನಾ ಎಂಬುದನ್ನು ನೀವು ತೆರೆ ಮೇಲೆ ನೋಡಬೇಕು.
ಒಬ್ಬ ಮಗ ತನ್ನ ತಾಯಿಗೆ ಕೊಟ್ಟ ಮಾತು ಈಡೇರಿಸಲು ಸಾಯಿಸಕ್ಕೂ ರೆಡಿ, ಸಾಯಕ್ಕೂ ಸೈ. ಎಂಥ ಕ್ರೈಮ್ ಬೇಕಾದರೂ ನೀರು ಕುಡಿದಷ್ಟೆ ಸಲೀಸಾಗಿ ಮಾಡಿ ಬಿಡುತ್ತಾನೆ. ಜಗತ್ತು ಕಂಡ ಅತೀ ದೊಡ್ಡ ಕ್ರೀಮಿನಲ್ ಆಗುತ್ತಾನೆ ಎಂಬಲ್ಲಿಗೆ ರಾಕಿ ಪಾತ್ರ ಬೆಳೆದು ನಿಂತಿದೆ. ಚಿತ್ರದಲ್ಲಿ ಹೀಗೊಂದು ದೃಶ್ಯ ಬರುತ್ತದೆ. ‘ನೀವು ಯಾವ ಕಂಪನಿಗೆ ಸಿಇಓ’ ಎಂದು ಕೇಳುವ ಮಾತಿಗೆ ‘ಇಂಡಿಯಾ’, ‘ನಾನು ಟೆರಿಟರಿ ಹಾಕಿಕೊಂಡು ಬದುಕೋನಲ್ಲ, ಇಡೀ ಜಗತ್ತೇ ನನ್ನ ಟೆರಿಟರಿ’ ಎನ್ನುತ್ತಾನೆ ರಾಕಿಬಾಯ್. ಇದು ಸಿನಿಮಾದ ಸಂಭಾಷಣೆ ಮಾತ್ರವಲ್ಲ, ನಿರ್ದೇಶಕ ಪ್ರಶಾಂತ್ ನೀಲ್ ಹಾಗೂ ಯಶ್ ಅವರ ಸಿನಿಮಾ ವಿಷನ್ ಕೂಡ.
Varnapatala Film Review: ವರ್ಣಪಟಲ, ಇದು ಭಿನ್ನ ಜಗತ್ತು
‘ಕೆಜಿಎಫ್ 2’ ಅಂತಹ ವಿಷನ್‌ನ ಭಾಗವಾಗಿಯೇ ಬಂದಿದೆ. ‘ಕೆಜಿಎಫ್’ ಎನ್ನುವ ಸಿನಿಮಾ ಹೆಸರು ಹುಟ್ಟುವ ಮುನ್ನವೇ ಅದೇ ಹೆಸರಿನ ನಗರ, ಕನ್ನಡ ನಾಡಿನ ಚಿನ್ನದ ಬೀಡು ಎಂದು ಗ್ಲೋಬಲ್ ದಾಖಲೆಗಳಲ್ಲಿ ದಾಖಲಾಗಿದೆ. ಇಂಥ ಐತಿಹಾಸಿಕ ಚಿನ್ನದೂರಿನಲ್ಲಿ ಅಮ್ಮ-ಮಗನ ಕತೆಯ ಮೂಲಕ ಒಂದು ದೊಡ್ಡ ಸಾಮ್ರಾಜ್ಯವನ್ನು ಸೃಷ್ಟಿಸಿ, ಅದಕ್ಕೊಬ್ಬ ಖಳನಾಯಕ, ಅಲ್ಲೊಬ್ಬ ಹೀರೋ, ರಕ್ತ- ಬೆವರು ಸುರಿಸುತ್ತಿರುವ ಜನರ ಬದುಕುಗಳನ್ನು ತೆರೆದಿಟ್ಟಿರುವುದು ನಿರ್ದೇಶಕನ ಪ್ರತಿಭೆಯ ತಾಕತ್ತು. ಯಾಕೆಂದರೆ ನೈಜ ಊರಿನಲ್ಲಿ ಕಾಲ್ಪನಿಕ ಕತೆ ಎಂದು ಹೇಳಿ ಸಿನಿಮಾ ಮಾಡುವುದು ಅಷ್ಟುಸುಲಭವಲ್ಲ.
ಚಿತ್ರ: ಕೆಜಿಎಫ್ 2
ತಾರಾಗಣ: ಯಶ್, ಶ್ರೀನಿಧಿ ಶೆಟ್ಟಿ, ಸಂಜಯ್ ದತ್, ಪ್ರಕಾಶ್ ರೈ, ಟಿ ಎಸ್ ನಾಗಾಭರಣ, ಮಾಳವಿಕ, ಅಚ್ಯುತ್ ಕುಮಾರ್, ರವೀನಾ ಟಂಡನ್, ರಾವ್ ರಮೇಶ್
ನಿರ್ದೇಶನ: ಪ್ರಶಾಂತ್ ನೀಲ್
ರೇಟಿಂಗ್: 4
‘ಕೆಜಿಎಫ್ 1’ ಕತೆ ಹೇಳಿದ ಹಿರಿಯ ಪತ್ರಕರ್ತ ಆನಂದ್ ಇಂಗಳಗಿ ಪಾತ್ರ ಆನಾರೋಗ್ಯದಿಂದ ಆಸ್ಪತ್ರೆ ಸೇರಿದ್ದರಿಂದ ‘ಕೆಜಿಎಫ್ 2’ ಕತೆಯನ್ನು ಅವರ ಮಗ ವಿಜಯೇಂದ್ರ ಇಂಗಳಗಿ ನಿರೂಪಣೆ ಮಾಡುತ್ತಾರೆ. ಹೀಗೆ ಅನಂತ್‌ನಾಗ್ ಪಾತ್ರ ಮರೆಯಾಗಿ, ಪ್ರಕಾಶ್ ರೈ ಪಾತ್ರ ಹುಟ್ಟಿಕೊಳ್ಳುತ್ತದೆ. ಇದರ ಹಿಂದೆ ಅಡಗಿರುವ ನಿರ್ದೇಶಕನ ಜಾಣ್ಮೆ ಮೆಚ್ಚುಗೆ ಆಗುತ್ತದೆ. ಚಿನ್ನದ ಸಾಮ್ರಾಜ್ಯಕ್ಕೆ ಅಂಟಿದ ನೆತ್ತರಿನ ಪುಟಗಳು ಪ್ರಕಾಶ್ ರೈ ಅವರ ಸ್ವಚ್ಛವಾದ ಧ್ವನಿಯಲ್ಲಿ ದೃಶ್ಯಗಳಾಗಿ ತೆರೆದುಕೊಳ್ಳುತ್ತವೆ. ಪ್ರಶಾಂತ್ ನೀಲ್ ಅವರ ವಿಷನ್‌ಗೆ ನಟ ಯಶ್ ಅವರ ಶ್ರಮ ಮತ್ತು ರಾಕಿಭಾಯ್ ಪಾತ್ರಕ್ಕೆ ತಮ್ಮನ್ನು ಅರ್ಪಿಸಿಕೊಂಡ ರೀತಿ ಅಮೋಘ.
ಛಾಯಾಗ್ರಾಹಕ ಭುವನ್ ಗೌಡ, ರವಿ ಬಸ್ರೂರು ಅವರ ಹಿನ್ನೆಲೆ ಸಂಗೀತ, ಕಲಾ ನಿರ್ದೇಶಕ ಶಿವಕುಮಾರ್ ಹಾಗೂ ಸಾಹಸ ನಿರ್ದೇಶಕ ಅನ್ಬರಿವು ಅವರ ತಂಡದ ಬೆಂಬಲ ಚಿನ್ನದಂತಹ ಸಿನಿಮಾ ಹುಟ್ಟಿಗೆ ಕಾರಣವಾಗಿದೆ. ಬಾಂಬೆಯಿಂದ ಗರುಡನನ್ನು ಹೊಡೆಯಲು ಕೆಜಿಎಫ್‌ಗೆ ಬರುವ ರಾಕಿಭಾಯ್, ಇಲ್ಲಿ ನರಾಚಿಯ ತಣ್ಣನೆಯ ಕ್ರೌರ್ಯವನ್ನು ಕಣ್ಣಾರೆ ಕಾಣುತ್ತಾನೆ. ಕೊನೆಗೂ ಗರುಡನ ತಲೆ ತೆಗೆದ ಮೇಲೆ ಅಲ್ಲಿವರೆಗೂ ಸುಪಾರಿ ಕಿಲ್ಲರ್ ಆಗಿದ್ದವ ಈಗ ಅದೇ ನರಾಚಿಗೆ ರಾಜನಾಗುವ ಸೂಚನೆ ಮೊದಲ ಭಾಗದಲ್ಲೇ ಸಿಕ್ಕಿತ್ತು.
Home Minister Film Review: ಸಣ್ಣ ಕುಟುಂಬದ ಕಥೆ ವ್ಯಥೆ
ಈಗ ಎರಡನೇ ಭಾಗದಲ್ಲಿ ಜನ ರಾಕಿಭಾಯ್‌ನನ್ನು ದೇವರಂತೆ ಪೂಜಿಸುತ್ತಾರೆ. ಚಿನ್ನದ ಸಾಮ್ರಾಜ್ಯಕ್ಕಂಟಿದ ರಕ್ತದ ಚರಿತ್ರೆಯ ಮೇಲೆ ಸಿಂಹಾಸನ ಹಾಕಿ ಕೂತ ರಾಕಿಭಾಯ್‌ನನ್ನು ಮುಗಿಸಲು ಅಧೀರ ಬರುತ್ತಾನೆ. ಇವರಿಬ್ಬರ ಕಾಳಗ ಕೆಜಿಎಫ್‌ನಿಂದ ಶುರುವಾಗಿ ಡೆಲ್ಲಿ ತಲುಪುತ್ತದೆ. ಮುಂದೇನು ಎಂಬುದು ವಿಜಯೇಂದ್ರ ಇಂಗಳಗಿ ಹೇಳುತ್ತಾರೆ. ಹೀರೋ ರೇಂಜಿಗೆ ಬಿಜಿಎಂ ಎಫೆಕ್ಟ್ನಲ್ಲಿ ಚಿತ್ರದ ಪ್ರತಿಯೊಂದು ಪಾತ್ರವೂ ಮಾತನಾಡುವುದು, ಗನ್ನುಗಳನ್ನು ಮಕ್ಕಳಾಟದಂತೆ ಬಳಸುವ ದೃಶ್ಯಗಳಿಗೆ ಕತ್ತರಿ ಹಾಕಿ, ಅಧೀರನ ಪಾತ್ರಕ್ಕೆ ಮತ್ತಷ್ಟು ಜಾಗ ಕೊಡಬೇಕಿತ್ತು ಅನಿಸುತ್ತದೆ. ಚಿತ್ರದ ಕೊನೆಗೆ ಕೆಜಿಎಫ್ ಮೂರನೇ ಅಧ್ಯಾಯ ಬರಬಹುದು ಎಂಬ ಸಣ್ಣ ಸೂಚನೆಯೂ ಇದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.