ಮಗುವಿಗೆ ಆಟಿಸಂ ಇದೆ ಅಂದಾಗ ನಿರೀಕ್ಷಿತ ಆಘಾತ. ಮಗುವಿನ ವರ್ತನೆಯಿಂದ ಬೇಸತ್ತು ಮಗುವಿನ ತಂದೆ, ಆತನ ಕುಟುಂಬ, ಸಮಾಜ, ಶಾಲೆ ಎಲ್ಲವೂ ಕೈ ಬಿಟ್ಟಾಗ, ಅವರೆಲ್ಲರನ್ನೂ ಬಿಟ್ಟು ಮಗುವಿಗಾಗಿ ನಿಲ್ಲುವವಳು ತಾಯಿ.
ಪ್ರಿಯಾ ಕೆರ್ವಾಶೆ
ಆಟಿಸಂ ಮಕ್ಕಳ ಜಗತ್ತನ್ನು ಮಾನವೀಯ ದೃಷ್ಟಿಯಲ್ಲಿ ಕಟ್ಟಿಕೊಡುವ ಸಿನಿಮಾ ‘ವರ್ಣಪಟಲ’ (Varnapatala). ಈ ಸಿನಿಮಾದಲ್ಲಿ ಆಟಿಸಂ ಸಮಸ್ಯೆಯ ಒಂದು ಮಗುವಿನ ಕತೆ ಇದೆ. ಪ್ರತೀ ಆಟಿಸಂ (Autism) ಮಗುವಿನಲ್ಲಿ ಒಂದೊಂದು ಬಗೆಯ ಅಸಹಜತೆ ಇರುವ ಹಾಗೆ ಒಂದೊಂದು ಬಗೆಯ ಪ್ರತಿಭೆಯೂ ಇರುತ್ತದೆ. ಆದರೆ ನಾವು ಅದರ ಕೊರತೆಯನ್ನು ನೋಡುವಷ್ಟುತೀವ್ರವಾಗಿ ಪ್ರತಿಭೆಯತ್ತ ಗಮನ ಕೊಡೋದಿಲ್ಲ. ಇಂಥಾ ಮಕ್ಕಳನ್ನು ಇನ್ನೊಂದು ಮಗ್ಗಲಿಂದ ನೋಡಿದರೆ ಅವರ ಬದುಕು ಹೇಗೆ ಬೆಳಗಬಹುದು ಅನ್ನುವ ಜೊತೆಗೆ ಹಾಗೆ ನೋಡುವುದು ಎಷ್ಟುದೊಡ್ಡ ಸವಾಲು ಅನ್ನೋದನ್ನು ವರ್ಣಪಟಲ ಚಿತ್ರವತ್ತಾಗಿ ಕಟ್ಟಿಕೊಡುತ್ತದೆ.
ಮೈಕಲ್ ಹಾಗೂ ನಿತ್ಯಾ ದಂಪತಿಯ ಮಗಳು ಮೈನಾ. ಈ ಮಗುವಿನ ಅಸಹಜ ನಡವಳಿಕೆ, ಕಲಿಕೆಯ ಸಮಸ್ಯೆ, ಉಳಿದ ಮಕ್ಕಳಿಗಿಂತ ಭಿನ್ನವಾದ ಸ್ವಭಾವದ ಕುರಿತು ವೈದ್ಯರನ್ನು ಸಂಪರ್ಕಿಸುವ ದಂಪತಿಗೆ ಮಗುವಿಗೆ ಆಟಿಸಂ ಇದೆ ಅಂದಾಗ ನಿರೀಕ್ಷಿತ ಆಘಾತ. ಮಗುವಿನ ವರ್ತನೆಯಿಂದ ಬೇಸತ್ತು ಮಗುವಿನ ತಂದೆ, ಆತನ ಕುಟುಂಬ, ಸಮಾಜ, ಶಾಲೆ ಎಲ್ಲವೂ ಕೈ ಬಿಟ್ಟಾಗ, ಅವರೆಲ್ಲರನ್ನೂ ಬಿಟ್ಟು ಮಗುವಿಗಾಗಿ ನಿಲ್ಲುವವಳು ತಾಯಿ. ಮಾತೇ ಆಡದ ಮಗುವಿನ ಬೆನ್ನಿಗೆ ನಿಂತ ಅವಳದ್ದು ಮತ್ತೊಂದು ಕತೆ. ಯಾರ ಬೆಂಬಲವೂ ಇಲ್ಲದೇ ಇಂಥಾ ಮಗುವನ್ನು ಪೋಷಿಸಬೇಕಾದ ಸವಾಲು ಒಂದೆಡೆ.
ಚಿತ್ರ: ವರ್ಣಪಟಲ
ತಾರಾಗಣ: ಜ್ಯೋತಿ ರೈ, ಸುಹಾಸಿನಿ, ಬೇಬಿ ಅಂಶಿಕಾ ಶೆಟ್ಟಿ, ಬೇಬಿ ಧನಿಕಾ ಹೆಗ್ಡೆ, ಅನೂಪ್ ಸಾಗರ್
ನಿರ್ದೇಶನ: ಚೇತನ್ ಮುಂಡಾಡಿ
ರೇಟಿಂಗ್: 4
ಕೆಲಸದ ಜಾಗದಲ್ಲೂ ಲೈಂಗಿಕ ಕಿರುಕುಳ, ಅಕ್ಕಪಕ್ಕದವರಿಂದ ಕೆಟ್ಟಮಾತು, ಅಮ್ಮನ ಅಸಹಾಯಕತೆ ಇನ್ನೊಂದೆಡೆ. ಇವೆಲ್ಲವನ್ನೂ ಆಕೆ ನಿಭಾಯಿಸುವ ಬಗೆಯನ್ನು ಚಿತ್ರ ರಿಯಲಿಸ್ಟಿಕ್ ಆಗಿ ತೋರಿಸುತ್ತದೆ. ಜೊತೆಗೆ ನಿತ್ಯಾ ಪಾತ್ರದಲ್ಲಿ ಜ್ಯೋತಿ ರೈ ಅದ್ಭುತ ಅಭಿನಯ ಮೆರೆದಿದ್ದಾರೆ. ಆಟಿಸಂ ಮಗುವಿನಿಂದಲೇ ಮುಖ್ಯ ಪಾತ್ರ ಮಾಡಿಸಿ ಇಡೀ ಚಿತ್ರವನ್ನು ಸಹಜವಾಗಿ ಕಟ್ಟಿಕೊಟ್ಟಿರುವುದು ನಿರ್ದೇಶಕ ಚೇತನ್ ಮುಂಡಾಡಿ ಅವರ ಪ್ರತಿಭೆಗೆ ಸಾಕ್ಷಿಯಂತಿದೆ.
Varnapatala Autism movie : ಆಟಿಸಂ ಮಗುವಿನ ಕತೆ ಹೊಂದಿರುವ ಚಿತ್ರ ವರ್ಣಪಟಲ
ಸುಹಾಸಿನಿ, ಮಗುವಿಗೆ ಸಂಗೀತ ಪಾಠ ಹೇಳುವ ಶಿಕ್ಷಕ, ಬೇರೆ ಮಕ್ಕಳು ಪಾತ್ರಕ್ಕೆ ಜೀವ ತುಂಬಿದ್ದಾರೆ. ಕೊನೆಯಲ್ಲಿ ನಿತ್ಯಾ ಮಾತು ಭಾಷಣದ ಸ್ವರೂಪ ತಾಳುವುದು ಮಿತಿಯಂತೆ ಕಂಡರೂ ಇಂಥಾ ಮಕ್ಕಳ ಬದುಕಿನ ದೃಷ್ಟಿಯಿಂದ ನೋಡಿದಾಗ ಅಗತ್ಯ ಅನಿಸುತ್ತದೆ. ಕೆಲವೊಂದು ಕಡೆ ಸಣ್ಣಪುಟ್ಟಲೋಪಗಳು, ಹೊಸ ಸಾಧ್ಯತೆಗಳನ್ನು ತರಬಹುದಿತ್ತು ಅಂತ ಕಂಡರೂ ಸಿನಿಮಾವನ್ನು ಇಡಿಯಾಗಿ ಗಮನಿಸಿದಾಗ ಅವು ಮುಖ್ಯ ಅಂತ ಅನಿಸೋದಿಲ್ಲ. ಸಂಗೀತವನ್ನು ಪರಿಣಾಮಕಾರಿಯಾಗಿ ಬಳಸಲಾಗಿದೆ. ನಾದ ಅವರ ಹಾಡು ಸೇರಿದಂತೆ ಎಲ್ಲಾ ಹಾಡುಗಳೂ ಸೊಗಸಾಗಿವೆ. ಆಟಿಸಂ ಮಕ್ಕಳ ಬಗ್ಗೆ ಆಶಾವಾದ ಮೂಡಿಸುವಲ್ಲಿ ಈ ಚಿತ್ರ ಯಶಸ್ವಿಯಾಗಿದೆ ಎಂದೇ ಹೇಳಬಹುದು.
ಆಟಿಸಂಗೆ ತುತ್ತಾಗಿರುವ ಮಕ್ಕಳ ಕತೆಯನ್ನು ಈ ಚಿತ್ರದಲ್ಲಿ ನೋಡಬಹುದಾಗಿದೆ. ಶ್ರೀ ಸಾಯಿ ಗಣೇಶ್ ಪ್ರೊಡಕ್ಷನ್ಸ್ ಬ್ಯಾನರ್‌ನಲ್ಲಿ ಕವಿತಾ ಸಂತೋಷ್ ಹಾಗೂ ಲಂಡನ್ ಮೂಲದ ಮಕ್ಕಳ ತಜ್ಞೆ ಆಗಿರುವ ಸರಸ್ವತಿ ಹೊಸದುರ್ಗ ಅವರು ಈ ಚಿತ್ರವನ್ನು ನಿರ್ಮಿಸಿದ್ದಾರೆ. ಹರ್ಷವರ್ಧನ್ ರಾಜ್ ಸಂಗೀತ, ಗಣೇಶ್ ಹೆಗಡೆ ಅವರ ಛಾಯಾಗ್ರಹಣ ಚಿತ್ರಕ್ಕಿದೆ. ಜ್ಯೋತಿ ರೈ ಚಿತ್ರದ ಮುಖ್ಯ ಪಾತ್ರಧಾರಿ. ಬಾಲ ಕಲಾವಿದರಾಗಿ ಅಂಶಿಕಾ ಶೆಟ್ಟಿ, ಧನಿಕಾ ಹೆಗ್ಡೆ ಮುಂತಾದವರು ನಟಿಸಿದ್ದಾರೆ. ಬಹುಭಾಷಾ ತಾರೆ ಸುಹಾಸಿನಿ ವೈದ್ಯೆಯಾಗಿ ನಟಿಸಿದ್ದಾರೆ. ಇವರ ಪಾತ್ರವೂ ಹೈಲೈಟ್ ಎಂಬುದು ಚಿತ್ರದ ವಿಶೇಷ.